ಶತಮಾನದ ಚಂದ್ರಗ್ರಹಣಕ್ಕೆ ಕ್ಷಣಗಣನೆ... ಏನಿದು ಬ್ಲಡ್​ ಮೂನ್​?

news18
Updated:July 25, 2018, 5:16 PM IST
ಶತಮಾನದ ಚಂದ್ರಗ್ರಹಣಕ್ಕೆ ಕ್ಷಣಗಣನೆ... ಏನಿದು ಬ್ಲಡ್​ ಮೂನ್​?
news18
Updated: July 25, 2018, 5:16 PM IST
ರಾಜಶೇಖರ್​ ಬಂಡೆ, ನ್ಯೂಸ್​ 18 ಕನ್ನಡ

ಬೆಂಗಳೂರು (ಜು. 25):  ವಿಶಾಲ ಜಗತ್ತು ಕಂಡಷ್ಟೂ ಬೆರಗು ಮತ್ತು ಅಚ್ಚರಿಗಳ ಮಹಾ ಕಣಜ. ಅಲ್ಲಿ ಸೂರ್ಯನಿದ್ದಾನೆ, ಚಂದ್ರನಿದ್ದಾನೆ, ಸೂರ್ಯ ಚಂದ್ರರಿಗಿಂತಲೂ ಸಾವಿರಾರು ಹೆಚ್ಚುಗಾತ್ರದ ಗ್ರಹಗಳಿವೆ. ಗ್ಯಾಲಕ್ಸಿಗಳಿವೆ. ಭೂಮಿಯ ಪಾಲಿಗೆ ಚಂದ್ರ (ಉಪಗ್ರಹ) ಹಾಗೂ ಸೂರ್ಯ (ನಕ್ಷತ್ರ) ಗಳೇ ಜೀವಾಳ. ಈ ಸೂರ್ಯ ಚಂದ್ರ ಮತ್ತು ಭೂಮಿಯ ನಡುವಿನ ನೆರಳಿನಾಟವೇ ಗ್ರಹಣ. ಜುಲೈ 27 ನೇ ರಂದು ಇಂಥ ಮಹಾ ಗ್ರಹಣವೊಂದಕ್ಕೆ ಜಗತ್ತು ಸಾಕ್ಷಿಯಾಗಲಿದೆ. ಜುಲೈ 27 ರಂದು ಜಗತ್ತಿನ ಬೇರೆ ಬೇರೆ ದೇಶಗಳನ್ನೂ ಸೇರಿದಂತೆ ಭಾರತದಲ್ಲಿಯೂ ಕೂಡ ಚಂದ್ರಗ್ರಹಣ ಕಾಣಿಸಿಕೊಳ್ಳಲಿದೆ. ಈ ಚಂದ್ರಗ್ರಹಣಕ್ಕೆ ಈಗಾಗ್ಲೇ ಕೌಂಟ್ ಡೌನ್ ಶುರುವಾಗಿದೆ.

ಚಂದ್ರಗ್ರಹಣ ಸಂಭವಿಸೋದು ಹೇಗೆ?

ತಮ್ಮ ತಮ್ಮ ಕಕ್ಷೆಗಳಲ್ಲಿ ತಿರುಗುತ್ತಿರುವ ಭೂಮಿ ಸೂರ್ಯ ಮತ್ತು ಚಂದ್ರರದ್ದು ಶಿಸ್ತುಬದ್ಧ ಚಲನೆ. ಕಕ್ಷೆಗಳಲ್ಲಿ ಸುತ್ತುವರಿಯುವ ಭೂಮಿ ಸೂರ್ಯ ಮತ್ತು ಚಂದ್ರ ಕಕ್ಷೆಯ ಒಂದೇ ಭಾಗದಲ್ಲಿ ಎದುರು ಬದುರಾದಾಗ ನೆರಳು ಬೆಳಕಿನಾಟ ಸಂಭವಿಸುತ್ತದೆ. ಭೂಮಿ ಮತ್ತು ಸೂರ್ಯರ ನಡುವೆ ಚಂದ್ರ ಬಂದಾಗ ಸೂರ್ಯ ಗ್ರಹಣ… ಚಂದ್ರ ಮತ್ತು ಸೂರ್ಯರ ನಡುವೆ ಭೂಮಿ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ.

ಏನಿದು ಬ್ಲಡ್ ಮೂನ್ ?

ಸೂರ್ಯ ಮತ್ತು ಚಂದ್ರರ ನಡುವೆ ಭೂಮಿ ಬಂದಾಗ ಸೂರ್ಯನ ಬೆಳಕು ಭೂಮಿಯ ಒಂದು ಭಾಗಕ್ಕೆ ಬಿದ್ದು ಮತ್ತೊಂದು ಭಾಗದ ನೆರಳು ಚಂದ್ರನ ಮೇಲೆ ಬೀಳುತ್ತದೆ. ಆಗ ಚಂದ್ರನ ಬೆಳಕು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಗ್ರಹಣದ ವೇಳೆ ಚಂದ್ರ ಕೆಂಪಾಗಿ ಕಾಣಲು ವಾತಾವರಣ ಹದಗೆಟ್ಟಿರುವುದೂ ಕೂಡ ಕಾರಣವಂತೆ. ಹೀಗೆ ಕೆಂಪು ಬಣ್ಣಕ್ಕೆ ತಿರುಗುವ ಚಂದ್ರನನ್ನೇ ರಕ್ತ ಚಂದ್ರ ಅಥವಾ ಬ್ಲಡ್ ಮೂನ್ ಎನ್ನಲಾಗುತ್ತೆ.

ಜುಲೈ 27 ರ ಬ್ಲಡ್ ಮೂನ್ ಶತಮಾನದ ಬ್ಲಡ್ ಮೂನ್ ಯಾಕೆ?
Loading...

ಜುಲೈ 27ರಂದು ಸಂಭವಿಸಲಿರುವ ಬ್ಲಡ್ ಮೂನ್ 2018ನೇ ವರ್ಷದಲ್ಲಿ ಎರಡನೇ ಬಾರಿಗೆ ಕಾಣಿಸಿಕೊಳ್ಳುತ್ತಿರುವ ಬ್ಲಡ್ ಮೂನ್ . 2018ರ ಜನವರಿ 31 ನೇ ತಾರೀಖು ಕೂಡ ಚಂದ್ರಗ್ರಹಣ ಭಾರತವೂ ಸೇರಿದಂತೆ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಕಾಣಿಸಿಕೊಂಡಿತ್ತು. ಆದರೆ ಜುಲೈ 27 ರಂದು ಕಾಣಸಿಕೊಳ್ಳುವ ಬ್ಲಡ್ ಮೂನ್ ಬರೋಬ್ಬರಿ 103 ನಿಮಿಷಗಳ ಕಾಲ ಸುದೀರ್ಘವಾಗಿ ಕಾಣಿಸಿಕೊಳ್ಳಲಿದ್ದು ಶತಮಾನದಲ್ಲಿ ಒಂದು ಬಾರಿ ಮಾತ್ರ ಇಂಥ ಸನ್ನಿವೇಶ ಸಾಧ್ಯ ಅನ್ನುತ್ತಾರೆ ವಿಜ್ಞಾನಿಗಳು. ಹೀಗಾಗಿಯೇ ಜುಲೈ 27 ರ ಬ್ಲಡ್ ಮೂನ್ನ ಶತಮಾನದ ಬ್ಲಡ್ ಮೂನ್ ಎಂದೇ ಗುರುತಿಸಲಾಗಿದೆ.

ಎಷ್ಟು ಗಂಟೆಗೆ ಕಾಣಿಸಿಕೊಳ್ಳಲಿದೆ ಬ್ಲಡ್ ಮೂನ್ ?

ಜುಲೈ 27 ರ ರಾತ್ರಿ 11:44 ಕ್ಕೆ ಪ್ರಾರಂಭವಾಗೋ ಚಂದ್ರಗ್ರಹಣ ಭಾರತದಲ್ಲಿ ಕಾಣಿಸಿಕೊಳ್ಳೋದು 11:54ರಿಂದ, 11:54 ರಿಂದ ದರ್ಶನ ಕೊಡುವ ಚಂದ್ರಗ್ರಹಣ ಜುಲೈ 28 ರ ಬೆಳಗ್ಗೆ 01:00 ಗಂಟೆ ಹೊತ್ತಿಗೆ ಸಂಪೂರ್ಣ ಗ್ರಹಣದ ಹಂತವನ್ನ ತಲುಪಿರುತ್ತೆ, ಆಗ ರಕ್ತ ಬಣ್ಣಕ್ಕೆ ತಿರುಗುವ ಚಂದ್ರ ಬೆಳಗ್ಗೆ 02:43 ರವರೆಗೂ ರಕ್ತ ಬಣ್ಣದಲ್ಲಿಯೇ ಕಾಣಿಸಿಕೊಳ್ಳಲಿದ್ದಾನೆ, ಆನಂತರ 03:49 ರವರೆಗೆ ಪಾರ್ಶ್ವ ಚಂದ್ರಗ್ರಹಣ ಸಂಭವಿಸಲಿದ್ದು ಬೆಳಗ್ಗೆ 04:58 ರ ಹೊತ್ತಿಗೆ ಚಂದ್ರಗ್ರಹಣ ಮುಕ್ತಾಯಗೊಳ್ಳಲಿದೆ.

ಬ್ಲಡ್ ಮೂನ್ ಜೊತೆಗೆ ಕೈಜೋಡಿಸಲಿದೆ ರೆಡ್ ಪ್ಲಾನೆಟ್

ಜುಲೈ 27 ರಂದು ಕೇವಲ ಬ್ಲಡ್ ಮೂನ್ ಅಷ್ಟೇ ಕಾಣಿಸಿಕೊಳ್ಳುವುದಿಲ್ಲ. ಬದಲಿಗೆ ಭೂಮಿಯಿಂದ ಸುಮಾರು 546 ಲಕ್ಷ ಕಿಲೋಮೀಟರ್ ದೂರದಲ್ಲಿರುವ ಮಂಗಳ ಗ್ರಹವೂ ಕೂಡ ಬರಿಗಣ್ಣಿಗೆ ಕಾಣಿಸಲಿದ್ದಾನಂತೆ. ಬ್ಲಡ್ ಮೂನ್ ಪಕ್ಕದಲ್ಲಿಯೇ ಕಾಣಸಿಕೊಳ್ಳಲಿರುವ ಮಂಗಳ ಗ್ರಹ ಸುಮಾರು 357 ಲಕ್ಷ ಕಿಲೋಮೀಟರ್ ಅಂತರದಲ್ಲಿ ಗೋಚರಿಸಲಿದ್ದಾನಂತೆ. 27 ರ ಶುಕ್ರವಾರ ರಾತ್ರಿ ಹೆಚ್ಚು ಪ್ರಕಾಶಮಾನವಾಗಿ ಕಾಣಿಸಿಕೊಳ್ಳುವ ಮಂಗಳ ಗ್ರಹ ಬರಿಗಣ್ಣಿಗೆ ಕೂಡ ಕಾಣಸಿಗಲಿದೆ.

ಬ್ಲಡ್ ಮೂನ್ ಬಗ್ಗೆ ಅಮೆರಿಕಾದ ಪಾದ್ರಿಗಳ ವಾದವೇನು?

ಅಮೆರಿಕನ್ ಪಾದ್ರಿ ಪಾಲ್ ಬೆಗ್ಲೀ(paul Begley) ಪ್ರಕಾರ ಜುಲೈ 27 ರ ಬ್ಲಡ್ ಮೂನ್ ಜಗತ್ತಿನ ವಿನಾಶಕ್ಕೆ ಮುನ್ನುಡಿಯಂತೆ. ಬೈಬಲ್ ನ ಬುಕ್ ಆಫ್ ಜೊಯೆಲ್ ಅಧ್ಯಾಯ 2:31 ಮತ್ತು ರೆವೆಲಿಷನ್ ಅಧ್ಯಾಯ 6:12 ಮತ್ತು ಬುಕ್ ಆಫ್ ಆಕ್ಟ್ ನಲ್ಲಿ “ಸೂರ್ಯ ಕಪ್ಪಗಾದಾಗ. ಚಂದ್ರನ ಬಣ್ಣ ರಕ್ತದ ಬಣ್ಣಕ್ಕೆ ತಿರುಗಿದಾಗ, ಜಗತ್ತು ತಲ್ಲಣಿಸುತ್ತದೆ, ಆಗ ಸೂರ್ಯನ ಪುತ್ರ(ಜೀಸಸ್) ಮತ್ತೆ ಅವತಾರವೆತ್ತಿ ಬರುತ್ತಾನೆ” ಅನ್ನುವ ಉಲ್ಲೇಖವನ್ನಿಟ್ಟುಕೊಂಡು ಪಾದ್ರಿ ಬೆಗ್ಲೀ ಯೂಟ್ಯೂಬ್ ನಲ್ಲಿ ಗ್ರಹಣದ ದಿನ ವಿನಾಶವಾಗುತ್ತದೆ, ನಂತರ ಜೀಸಸ್ ಪುನರ್ಜನ್ಮವಾಗುತ್ತದೆ ಎನ್ನುವ ಸಂದೇಶದ ವೀಡಿಯೋಗಳನ್ನ ಅಪ್ಲೋಡ್ ಮಾಡಿದ್ದಾನೆ. ಈ ಹಿಂದೆ 2018 ಜನವರಿ 31 ರಂದು ಸಂಭವಿಸಿದ ಬ್ಲಡ್ ಮೂನ್ ಬಗ್ಗೆಯೂ ಪಾಲ್ ಬೆಗ್ಲೀ ಇದೇ ಹೇಳಿಕೆ ಕೊಟ್ಟಿದ್ದನ್ನ ಇಲ್ಲಿ ಸ್ಮರಿಸಬಹುದು.

ವಿಜ್ಞಾನಿಗಳು ಹೇಳೋದೇನು?

ಪಾದ್ರಿಗಳು ಮತ್ತು ಕಾನ್ಸ್ ಪಿರಸಿ ಥಿಯರಿಸ್ಟ್ ಗಳ ವಾದವನ್ನ ನಾನ್ಸೆನ್ಸ್ ಎಂದಷ್ಟೇ ಕರೆದಿರುವ ವಿಜ್ಞಾನಿಗಳು ಚಂದ್ರಗ್ರಹಣದಿಂದ ಅಂಥ ಯಾವುದೇ ಅಪಾಯ ಎದುರಾಗುವುದಿಲ್ಲ ಎಂದಿದ್ದಾರೆ. ಚಂದ್ರ ಮತ್ತು ಸೂರ್ಯ ಗ್ರಹಣಗಳು ಖಗೋಳದಲ್ಲಿ ನಡೆಯುವ ಅತ್ಯದ್ಭುತ ವಿದ್ಯಮಾನಗಳು, ಅದರಿಂದ ಭೂಮಿಯ ಮೇಲೆ ಯಾವ ಮಹಾ ಅನಾಹುತಗಳೂ ಘಟಿಸುವುದಿಲ್ಲ ಎಂದಿದ್ದಾರೆ. ಆದರೆ ಚಂದ್ರಗ್ರಹಣ ಉಂಟಾದಾಗ ಚಂದ್ರ ಮತ್ತು ಭೂಮಿಯ ಗುರುತ್ವಾಕರ್ಷಣ ಬಲದ ಪರಿಣಾಮದಿಂದಾಗಿ ಸಮುದ್ರದ ಅಲೆಗಳು ಹೆಚ್ಚಾಗುವ ಸಾಧ್ಯತೆಗಳಿವೆ, ಅದರಿಂದಲೂ ಅನಾಹುತಗಳು ಸಂಭವಿಸುವುದು ಸುಳ್ಳು ಎನ್ನುವುದು ಪಾದ್ರಿಗಳ ವಾದವನ್ನ ಅಲ್ಲಗಳೆದಿರುವ ವಿಜ್ಞಾನಿಗಳ ಅಭಿಪ್ರಾಯ.
First published:July 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...