Evening Digest: ಈ ದಿನ ನೀವು ಓದಲೇಬೇಕಾದ 10 ಪ್ರಮುಖ ಸುದ್ದಿಗಳು

ದಿನನಿತ್ಯ ಹಲವಾರು ಜಾಗತಿಕ, ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಅನೇಕ ವಿದ್ಯಮಾನಗಳು ಜರುಗುತ್ತವೆ. ಪ್ರಸ್ತುತ ಘಟನೆಗಳು, ವಿದ್ಯಮಾನಗಳು, ಚರ್ಚೆಗಳ ಕುರಿತಾದ ಪ್ರಮುಖ ಸುದ್ದಿಗಳು ಇಲ್ಲಿವೆ.

Latha CG | news18
Updated:May 15, 2019, 6:07 PM IST
Evening Digest: ಈ ದಿನ ನೀವು ಓದಲೇಬೇಕಾದ 10 ಪ್ರಮುಖ ಸುದ್ದಿಗಳು
ಸುದ್ದಿ ಸಂಬಂಧಿತ ಚಿತ್ರ
  • News18
  • Last Updated: May 15, 2019, 6:07 PM IST
  • Share this:
1. ಬರ ನಿರ್ವಹಣೆ ಸಂಬಂಧ ಸಿಎಂ ಸಭೆ

ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿದ್ದು, ಕುಡಿಯುವ ನೀರಿಗೂ ಜನರು ಕಷ್ಟಪಡುವಂತೆ ಆಗಿದೆ. ಬರ ನಿರ್ವಹಣೆ ಮಾಡುವಲ್ಲಿ ಯಾವುದೇ ಅಧಿಕಾರಿಗಳು ವಿಫಲರಾಗಬಾರದು ಎಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ  ಸಿಎಂ ಕುಮಾರಸ್ವಾಮಿ ಖಡಕ್​ ಸೂಚನೆ ನೀಡಿದ್ದಾರೆ. ಕಳೆದು ಒಂದು ತಿಂಗಳಿನಿಂದ ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಯಾವುದೇ ಕ್ರಮಕ್ಕೆ ಸಿಎಂ ಮುಂದಾಗಿರಲಿಲ್ಲ. ಇದಾದ ಬಳಿಕ ರೆಸಾರ್ಟ್​ ಮೊರೆ ಹೋಗಿದ್ದ ಸಿಎಂ ಕುಮಾರಸ್ವಾಮಿ ಬರ ನಿರ್ವಹಣೆ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂಬ ಟೀಕೆಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ರಾಜ್ಯದ ಜಿಲ್ಲಾಧಿಕಾರಿಗಳೊಂದಿಗೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಸಭೆ ನಡೆಸಿದರು.

2. ಅಖಾಡಕ್ಕೆ ಧುಮುಕಿದ ಸೋನಿಯಾ ಗಾಂಧಿ

ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷೆ ಹಾಗೂ ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಕೊನೆಗೂ ರಾಷ್ಟ್ರ ರಾಜಕಾರಣದ ಅಖಾಡಕ್ಕೆ ಧುಮುಕಿದ್ದು, ಲೋಕಸಭೆ ಫಲಿತಾಂಶಕ್ಕೆ ಮುನ್ನವೇ ಸರ್ಕಾರ ರಚನೆಗೆ ಬೇಕಾದ ಮಹಾಮೈತ್ರಿಗೆ ಕಸರತ್ತು ಆರಂಭಿಸಿದ್ದಾರೆ. ಇದರ ಭಾಗವಾಗಿ ಎಲ್ಲಾ ಮಿತ್ರ ಪಕ್ಷಗಳಿಗೆ ಪತ್ರ ಬರೆಯುವ ಮೂಲಕ ಸಹಕಾರ ಕೋರಿದ್ದು, ರಾಷ್ಟ್ರ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

3. ಮುಂಗಾರು ಮಾರುತಗಳ ಆಗಮನ

ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಇಂದು ರಾತ್ರಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಮಳೆಯು ನಾಳೆಯವರೆಗೂ ಮುಂದುವರೆಯಲಿದೆ ಎನ್ನಲಾಗಿದೆ. ಮೇ 22ರಂದು ಮುಂಗಾರು ಮಾರುತಗಳು ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳನ್ನು ಪ್ರವೇಶಿಸಲಿವೆ. ಈ ಮೂಲಕ ದಕ್ಷಿಣ ಭಾರತವನ್ನು ಪ್ರವೇಶಿಸಲಿರುವ ಮಾರುತಗಳು ಜೂನ್‌ 4ಕ್ಕೆ ಕೇರಳ ಪ್ರವೇಶವಾಗಲಿದೆ. ಮುಂಗಾರು ಮಾರುತ ನಿಧಾನಗತಿಯ ಚಲನೆಯಿಂದಾಗಿ 3-4 ದಿನ ತಡವಾಗಿ ರಾಜ್ಯಕ್ಕೆ ಆಗಮಿಸಲಿದೆ ಎಂದು ಸ್ಕೈಮೆಟ್​ ಹವಾಮಾನ ತಜ್ಞರು ತಿಳಿಸಿದ್ದಾರೆ.

4. ಬಿಜೆಪಿ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ತಿರುಗೇಟುರಾಜ್ಯದಲ್ಲಿ ಆಪರೇಷನ್ ಕಮಲ ಯಶಸ್ವಿಯಾಗಲ್ಲ. ಕಾಂಗ್ರೆಸ್​, ಜೆಡಿಎಸ್​ ಮೈತ್ರಿ ಸರ್ಕಾರ ಪತನವಾಗಲ್ಲ. ಎಷ್ಟೇ ತಿಪ್ಪರಲಾಗ ಹೊಡೆದರೂ ಬಿಜೆಪಿ ಅಧಿಕಾರಕ್ಕೆ ಬರಲ್ಲ‌. ಕಾಂಗ್ರೆಸ್ ಕೂಡ ಆಪರೇಷನ್ ಮಾಡುತ್ತಿದೆ. ನಮ್ಮೊಂದಿಗೂ ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಹಿರಿಯ ಕಾಂಗ್ರೆಸ್​​ ನಾಯಕ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ.

5. ಪ್ರಜ್ವಲ್​ಗೆ ಎದುರಾದ ವಿಘ್ನ; ಅಫಿಡವಿಟ್​ನಲ್ಲಿನ ಸುಳ್ಳು ಮಾಹಿತಿ ನೀಡಿದ ಆರೋಪ

ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಗೆಲುವಿನ ವಿಶ್ವಾಸದಲ್ಲಿರುವ ಪ್ರಜ್ವಲ್​ ರೇವಣ್ಣಗೆ ಕಂಟಕ ಎದುರಾಗಿದೆ. ನಾಮಪತ್ರ ಸಲ್ಲಿಕೆ ವೇಳೆ ಮಾಡಿರುವ ಎಡವಟ್ಟಿನಿಂದಾಗಿ ಅವರು, ಈ ಬಾರಿ ಗೆದ್ದರೂ ಸಂಭ್ರಮಾಚರಣೆ ಮಾಡುವುದು ಕಷ್ಟ ಎಂಬಂತಹ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಮೊದಲ ಬಾರಿ ಚುನಾವಣೆ ಎದುರಿಸುತ್ತಿರುವ ಪ್ರಜ್ವಲ್​ ರೇವಣ್ಣ, ಅಫಿಡವಿಟ್ ಸಲ್ಲಿಸುವಾಗ​ ತಪ್ಪು ಮಾಹಿತಿ ನೀಡಿರೋದು ಚುನಾವಣಾ ಆಯೋಗದ ತನಿಖೆಯಲ್ಲಿ ಬಯಲಾಗಿದೆ. ನಾಮಪತ್ರ ಸಲ್ಲಿಕೆ ವೇಳೆ ಅಫಿಡವಿಟ್​ನಲ್ಲಿ ಚೆನ್ನಾಂಬಿಕಾ ಕನ್ವೆನ್ಷನ್ ಹಾಲ್ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ. ಅಲ್ಲದೇ ತಾತ ಹೆಚ್​.ಡಿ ದೇವೇಗೌಡ ಸಾಲ ನೀಡಿದ ಬಗ್ಗೆಯೂ ಉಲ್ಲೇಖಿಸಿಲ್ಲ.

6.  ಮೋದಿಗೆ ತಿರುಗೇಟು ನೀಡಿದ ರಾಹುಲ್​ ಗಾಂಧಿ

ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಕುಟುಂಬವನ್ನು ಟೀಕಿಸುತ್ತಿದ್ದಾರೆ​. ಹಾಗೆಂದ ಮಾತ್ರಕ್ಕೆ ನಾವು ಅವರ ಕುಟುಂಬವನ್ನು ಟಾರ್ಗೆಟ್​​ ಮಾಡಬೇಕಿಲ್ಲ. ಯಾರನ್ನೇ ಆಗಲೀ ಪ್ರೀತಿಯಿಂದ ಗೆಲ್ಲಬೇಕೆ ಹೊರತು ದ್ವೇಷದಿಂದಲ್ಲ. ಹಾಗಾಗಿ ನಾನು ಬೇಕಾದರೆ ಸಾಯುತ್ತೇನೆ. ಆದರೆ, ಯಾವುದೇ ಕಾರಣಕ್ಕೂ ಪ್ರಧಾನಿ ಕುಟುಂಬವನ್ನ ಟೀಕಿಸುವುದಿಲ್ಲ ಎನ್ನುವ ಮೂಲಕ ಕಾಂಗ್ರೆಸ್​​ ಅಧ್ಯಕ್ಷ ರಾಹುಲ್​​ ಗಾಂಧಿಯವರು ನರೇಂದ್ರ ಮೋದಿಯವರಿಗೆ ತಪರಾಕಿ ಬಾರಿಸಿದ್ದಾರೆ.

 7. ಪ.ಬಂಗಾಳದಲ್ಲಿ ನಡೆದ ಹಿಂಸಾಚಾರಕ್ಕೆ ದೀದಿಯೇ ಕಾರಣ; ಅಮಿತ್ ಶಾ

ಕೋಲ್ಕತ್ತಾದಲ್ಲಿ ನೆನ್ನೆ ಸಂಜೆ ಅಮಿತ್ ಶಾ ರೋಡ್ ಶೋ ವೇಳೆ ಸಂಭವಿಸಿದ ಗಲಭೆಗೆ ಬಿಜೆಪಿಯೇ ಕಾರಣ ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದರು. ಈ ಆರೋಪ ಸಂಬಂಧ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮಿತ್ ಶಾ, ಈ ಘಟನೆಗೆ ಮಮತಾ ಬ್ಯಾನರ್ಜಿ ಅವರೇ ಕಾರಣ. ಅವರು ನೀಡಿದ ಪ್ರಚೋದನೆಯಿಂದಲೇ ಟಿಎಂಸಿ ಕಾರ್ಯಕರ್ತರು ಹಿಂಸಾಚಾರ ನಡೆಸಿದರು. ನನ್ನ ಮೇಲೆ ದಾಳಿಗೆ ಮುಂದಾದರು. ಸದ್ಯ ನಾನು ಸುರಕ್ಷಿತನಾಗಿದ್ದೇನೆ ಎಂದು ಪ್ರತ್ಯಾರೋಪ ಮಾಡಿದರು.

8.  ದೀದಿ ವಿರುದ್ಧ  ಪ್ರಧಾನಿ ಮೋದಿ ವಾಗ್ದಾಳಿ  

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೋಲ್ಕತದಲ್ಲಿ ನೆನ್ನೆ ನಡೆಸಿದ ರೋಡ್​ ಶೋ ವೇಳೆ ನಡೆದ ಹಿಂಸಾಚಾರ ಘಟನೆ ಸಂಬಂಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಪ್ರಧಾನಿ ಮೋದಿ ಅವರು ತೀವ್ರ ವಾಗ್ದಾಳಿ ನಡೆಸಿದರು. ಹಿಂಸಾಚಾರ ಘಟನೆ ಸಂಬಂಧ ಪಶ್ಚಿಮ ಬಂಗಾಳ ಸರ್ಕಾರವನ್ನು ತೀವ್ರವಾಗಿ ಟೀಕಿಸಿದರು. ಈ ಚುನಾವಣೆಯಲ್ಲಿ ಪಶ್ಚಿಮಬಂಗಾಳದಲ್ಲಿ ಪ್ರತಿ ಹಂತದ ಮತದಾನದ ವೇಳೆ ಹಿಂಸಾಚಾರ ನಡೆದಿರುವ ಬಗ್ಗೆ ವರದಿಗಳು ಬಂದಿವೆ. ಈ ರಾಜ್ಯಕ್ಕಿಂತ ಜಮ್ಮು-ಕಾಶ್ಮೀರದಲ್ಲಿ ಮತದಾನ ಹೆಚ್ಚು ಶಾಂತಿಯುತವಾಗಿ ನಡೆದಿದೆ ಎಂದು ಟೀಕಿಸಿದರು.

9. ಕೇಂದ್ರದಲ್ಲಿ ಕಾಂಗ್ರೆಸ್​​ ನೇತೃತ್ವದಲ್ಲಿ ಸರ್ಕಾರಕ್ಕೆ ಸಿದ್ಧ ಎಂದ ಕೆಸಿಆರ್

​​ ​ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಬಾಕಿ ಇರುವಾಗಲೇ ದೇಶದಲ್ಲಿ ಅತಂತ್ರ ಫಲಿತಾಂಶ ಉಂಟಾಗಲಿದೆ ಎಂಬ ಮುನ್ಸೂಚನೆ ಸಿಕ್ಕಿದಂತಿದೆ. ಹಾಗಾಗಿಯೇ ಕಾಂಗ್ರೆಸ್​​ ವರಿಷ್ಠೆ ಸೋನಿಯಾ ಗಾಂಧಿಯವರು, ಬಿಜೆಪಿ ವಿರೋಧಿ ರಂಗ ರಚನೆಗೆ ಮುಂದಾಗಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್​​ ಮತ್ತು ಬಿಜೆಪಿಯೇತರ ತೃತೀಯ ರಂಗ ಕಟ್ಟಲು ಸಕ್ರಿಯ ಓಡಾಟ ನಡೆಸುತ್ತಿದ್ದ ಸಿಎಂ ಕೆ. ಚಂದ್ರಶೇಖರ್​​ ರಾವ್​ ಅವರು ಕೂಡ, ರಾಹುಲ್​​ ಪಡೆ ಜತೆ ಮೈತ್ರಿಯಾಗುವುದಕ್ಕೆ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ಪ್ರಧಾನಿ ಮಂತ್ರಿ ಹುದ್ದೆ ಮಾತ್ರ ಕಾಂಗ್ರೆಸ್​​ನವರಿಗೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.

 10. ತೆಲಂಗಾಣದ ತಾಂಡೂರದಲ್ಲಿ ಬಿಎಸ್​ವೈ ರಣಕಹಳೆ

ಎರಡು ವಿಧಾನಸಭಾ ಕ್ಷೇತ್ರಗಳ ಉಚುನಾವಣೆಯ ಬಿಸಿಯಲ್ಲಿರುವ ಬಿಜೆಪಿ ಮುಖಂಡರು ಇವತ್ತು ತೆಲಂಗಾಣ ರಾಜ್ಯದ ತಾಂಡೂರ ಗ್ರಾಮಕ್ಕೆ ಭೇಟಿ ನೀಡಿ ಚುನಾವಣಾ ಪ್ರಚಾರ ಮಾಡಿದರು. ಉಪಚುನಾವಣೆ ಇರುವುದು ಚಿಂಚೋಳಿಯಲ್ಲಾದರೂ ಬಿಎಸ್​ವೈ ತೆಲಂಗಾಣದಲ್ಲಿ ಪ್ರಚಾರ ಮಾಡಲು ಕಾರಣವಿದೆ. ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ತಾಂಡೂರದಲ್ಲಿ 3 ಸಾವಿರಕ್ಕೂ ಹೆಚ್ಚು ವೀರಶೈವ ಸಮುದಾಯದವರಿದ್ದಾರೆ. ಇವರು ಚಿಂಚೋಳಿಯಿಂದ 20-30 ಕಿಮೀ ದೂರದಲ್ಲಿರುವ ತಾಂಡೋರಕ್ಕೆ ಉದ್ಯೋಗ ಅರಸಿಕೊಂಡು ಹೋಗಿ ನೆಲಸಿರುವವರು. ಆದರೆ, ಇವರ ಮತ ಹಕ್ಕು ಚಿಂಚೋಳಿಯಲ್ಲೇ ಇದೆ. ಈ ಹಿನ್ನೆಲೆಯಲ್ಲಿ ಬಿ.ಎಸ್. ಯಡಿಯೂರಪ್ಪ, ಅರವಿಂದ್ ಲಿಂಬಾವಳಿ, ಉಮೇಶ್ ಜಾಧವ್ ಮೊದಲಾದ ಬಿಜೆಪಿ ನಾಯಕರು ಇವತ್ತು ತಾಂಡೂರಕ್ಕೆ ಹೋಗಿ ಚುನಾವಣಾ ಪ್ರಚಾರ ನಡೆಸಿದರು.

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ
First published:May 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading