Evening Digest: ಈ ದಿನದ ಟಾಪ್​ 10 ಸುದ್ದಿಗಳು ಇಲ್ಲಿವೆ

Latha CG | news18-kannada
Updated:September 22, 2019, 5:28 PM IST
Evening Digest: ಈ ದಿನದ ಟಾಪ್​ 10 ಸುದ್ದಿಗಳು ಇಲ್ಲಿವೆ
ಸಾಂರ್ಭಿಕ ಚಿತ್ರ
  • Share this:
1.ಗಗನಕ್ಕೇರಿದ ತರಕಾರಿ ಬೆಲೆ; ಈರುಳ್ಳಿ ರೇಟ್ ಕೇಳಿದರೆ ದಂಗಾಗ್ತೀರ!

ಸಸ್ಯಾಹಾರವೇ ಇರಲಿ ಮಾಂಸಾಹಾರವೇ ಇರಲಿ ಈರುಳ್ಳಿ ಇದ್ದರೆ ಮಾತ್ರ ಅಡುಗೆ ಪರಿಪೂರ್ಣವಾಗುತ್ತದೆ. ಆದರೆ, ದಿನದಿಂದ ದಿನಕ್ಕೆ ಈರುಳ್ಳಿ ಬೆಲೆ ಏರುತ್ತಲೇ ಇದೆ. ಕಳೆದ ವಾರ 50 ರೂ ಇದ್ದ ಈರುಳ್ಳಿ ಬೆಲೆ ಈಗ 80ಕ್ಕೆ ಏರುವ ಸಾಧ್ಯತೆಯಿದೆ. ಈರುಳ್ಳಿ ಬೆಲೆ ಹೆಚ್ಚಾಗಿ, ಮಂಡಿಗಳಲ್ಲಿ ಸಂಗ್ರಹ ಕಡಿಮೆಯಾಗುತ್ತಿರುವುದರಿಂದ ಕೇಂದ್ರ ಸರ್ಕಾರ ತರಕಾರಿ ಮಂಡಿಗಳಲ್ಲಿ ಈರುಳ್ಳಿ ಸಂಗ್ರಹವನ್ನು ಹೆಚ್ಚಿಸಲು ಚಿಂತನೆ ನಡೆಸಿದೆ.

ಕಳೆದ ವಾರ ಈರುಳ್ಳಿ ಪ್ರತಿ ಕೆ.ಜಿ.ಗೆ ದೆಹಲಿಯಲ್ಲಿ 57 ರೂ., ಮುಂಬೈನಲ್ಲಿ 56 ರೂ, ಕೊಲ್ಕತ್ತಾದಲ್ಲಿ 48 ರೂ, ಚೆನ್ನೈನಲ್ಲಿ 34 ರೂ, ಗುರುಗ್ರಾಮದಲ್ಲಿ 60 ರೂ.ನಂತೆ ಮಾರಾಟವಾಗುತ್ತಿತ್ತು. ವ್ಯಾಪಾರ ವಹಿವಾಟಿನ ಅಂಕಿ-ಅಂಶದ ಪ್ರಕಾರ ಈ ವಾರ 70ರಿಂದ 80 ರೂ.ನಂತೆ ಮಾರಾಟವಾಗುತ್ತಿದೆ.

2. ಪಟಾಕಿ ಕಾರ್ಖಾನೆಯಲ್ಲಿ ಸ್ಪೋಟ: ಆರು ಮಂದಿ ಸಾವು, ಹಲವರಿಗೆ ತೀವ್ರ ಗಾಯ

ಉತ್ತರ ಪ್ರದೇಶದ ಇಟಾ ಜಿಲ್ಲೆಯ ಸಣ್ಣ ಪಟಾಕಿ ಕಾರ್ಖಾನೆಯಲ್ಲಿ ಶನಿವಾರ ಭಾರೀ ಸ್ಫೋಟ ಸಂಭವಿಸಿದ್ದು, ಪರಿಣಾಮ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಪೋಟದ ತೀವ್ರತೆಗೆ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವರು ಗಾಯಗೊಂಡಿದ್ದಾರೆ.
ಮಿರಾಚಿ ಪಟ್ಟಣದ ಮೊಹಲ್ಲಾ ಕ್ರಾಟ್‌ನಲ್ಲಿರುವ  ಸಣ್ಣ ಕಟ್ಟಡದಲ್ಲಿ ಪಟಾಕಿ ತಯಾರಿಸಲಾಗುತ್ತಿತ್ತು. ಈ ವೇಳೆ ಆಹಾರ ಬೇಯಿಸುವಾಗ ಬೆಂಕಿಯ ಕಿಡಿಯೊಂದು ಪಟಾಕಿ ರಾಶಿಗೆ ತಾಗಿರುವುದೇ ಈ ಅನಾಹುತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ.

3.ಅಮೆರಿಕಕ್ಕೆ ಆಗಮಿಸಿದ ಪ್ರಧಾನಿಗೆ ಭವ್ಯ ಸ್ವಾಗತ: ಹೊಸ ಇತಿಹಾಸ ಬರೆಯಲಿದೆ ಮೋದಿ-ಟ್ರಂಪ್ ಭೇಟಿಬಹುನಿರೀಕ್ಷಿತ 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಭಾಗವಹಿಸಲು ಅಮೆರಿಕಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ  ಅವರಿಗೆ ಅನಿವಾಸಿ ಭಾರತೀಯರಿಂದ ಭವ್ಯ ಸ್ವಾಗತ ದೊರೆಯಿತು. ಈ ಕಾರ್ಯಕ್ರಮ ಇಂದು (ಸೆ.22) ಹೂಸ್ಟನ್​ನಲ್ಲಿ ನಡೆಯಲಿದ್ದು, ಈ ಸಮಾವೇಶದಲ್ಲಿ 50 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ. ಶನಿವಾರ ತಡರಾತ್ರಿ ನಗರಕ್ಕೆ ಆಗಮಿಸಿದ ಪ್ರಧಾನಿಯ ಸ್ವಾಗತಕ್ಕೆ ಅಪಾರ ಸಂಖ್ಯೆಯಲ್ಲಿ ಬೆಂಬಲಿಗರು ಸೇರಿದ್ದರು. ಭಾರತ ಮತ್ತು ಅಮೆರಿಕ ಧ್ವಜಗಳನ್ನು ಹಿಡಿದು, ಭಾರತೀಯ ಪ್ರಧಾನಿಯನ್ನು ಸ್ವಾಗತಿಸಲಾಯಿತು. ಹೂಸ್ಟನ್‌ನ ವಿಸ್ತಾರವಾದ ಎನ್‌ಆರ್‌ಜಿ ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಭಾನುವಾರ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮವನ್ನು ಪೋಪ್‌ನ ಹೊರತಾಗಿ ಯುಎಸ್‌ಗೆ ಭೇಟಿ ನೀಡುವ ಚುನಾಯಿತ ವಿದೇಶಿ ನಾಯಕನಿಗೆ ಇದುವರೆಗಿನ ಅತಿದೊಡ್ಡ ಕೂಟ ಎಂದು ಬಣ್ಣಿಸಲಾಗಿದೆ.

4. ಅನರ್ಹ ಶಾಸಕರ ರಕ್ಷಣೆಗೆ ಬಿಎಸ್​ವೈ ದೆಹಲಿಗೆ ಹೋಗಿದ್ದಾರೆ; ಟ್ವಿಟರ್​ನಲ್ಲಿ ಕುಮಾರಸ್ವಾಮಿ ಕಿಡಿ

ಸಿಎಂ ಬಿ.ಎಸ್.​​ ಯಡಿಯೂರಪ್ಪ ನೆರೆ ಸಂತ್ರಸ್ತರಿಗೆ ಕೇಂದ್ರದಿಂದ ಪರಿಹಾರ ಕೇಳುತ್ತಿಲ್ಲ ಎಂದು ವಿಪಕ್ಷಗಳು ವಾಗ್ದಾಳಿ ನಡೆಸುತ್ತಿವೆ. ಇಂದು ಸಿಎಂ ಬಿಎಸ್​ವೈ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಲು ನವದೆಹಲಿಗೆ ತೆರಳಿದ್ದಾರೆ. ಮಾಜಿ ಸಿಎಂ ಕುಮಾಸ್ವಾಮಿ ಅನರ್ಹ ಶಾಸಕರ ಭವಿಷ್ಯ ಕಾಪಾಡಲು ಅಮಿತ್​ ಶಾ ಭೇಟಿಗೆ ತೆರಳಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. "ಆಪರೇಷನ್ ಕಮಲದ ಸಂತ್ರಸ್ತರ ರಕ್ಷಣೆಗಾಗಿ ದೆಹಲಿಗೆ ಹೋಗಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ನೆರೆ ಸಂತ್ರಸ್ತರ ಪರಿಹಾರ ಧನ ಸಹಾಯ ಕೋರಲು ದೆಹಲಿಗೆ ತೆರಳಿದ್ದೇನೆ ಎಂದಿರುವುದು ಒಂದು 'ರಾಜಕೀಯ ನಾಟಕ'. ಅಮಿತ್ ಶಾರ ಪ್ರಭಾವ ಬಳಸಿ ಪ್ರಜಾಪ್ರಭುತ್ವ ವಿರೋಧಿ ಆಪರೇಷನ್ ಕಮಲದ ಸಂತ್ರಸ್ತ ಅನರ್ಹರನ್ನು ಬಚಾವ್ ಮಾಡಿಸಲಷ್ಟೇ ಬಿಎಸ್​ವೈ ದೆಹಲಿಗೆ ಹೋಗಿದ್ದಾರೆ." ಎಂದು ಟ್ವಿಟರ್​ನಲ್ಲಿ ಕಿಡಿಕಾರಿದ್ದಾರೆ.

5. ಎದುರಾಳಿ ಯಾರೇ ಆಗಲಿ ಯೋಚನೆ ಮಾಡಲ್ಲ, ಸ್ಪರ್ಧೆಗೆ ಸಿದ್ಧ; ರಮೇಶ್​ ಜಾರಕಿಹೊಳಿ ವಿರುದ್ಧ ತೊಡೆತಟ್ಟಿದ​ ಲಖನ್​ ಜಾರಕಿಹೊಳಿ

ರಮೇಶ್ ಜಾರಕಿಹೊಳಿ​ ಬಿಜೆಪಿ ಸೇರುವ ನಿರ್ಧಾರ ಮಾಡಿದ್ದಾರೆ. ಎದುರಾಳಿ ಯಾರೇ ಆಗಲಿ ಈ ಬಗ್ಗೆ ಯೋಚನೆ ಮಾಡಲ್ಲ. ಕಾಂಗ್ರೆಸ್ ಅಭ್ಯರ್ಥಿ ನಾನೇ ಸ್ಪರ್ಧೆಗೆ ಸಿದ್ಧ ಎಂದು ಕೈ ನಾಯಕ ಲಖನ್​ ಜಾರಕಿಹೊಳಿ ರಮೇಶ್​ ಜಾರಕಿಹೊಳಿ ವಿರುದ್ಧ ತೊಡೆ ತಟ್ಟಿದ್ದಾರೆ.
ಉಪಚುನಾವಣೆ ವಿಚಾರವಾಗಿ ಗೋಕಾಕ್​ನಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರ ಆರಂಭಿಸಿದ್ದೇನೆ. ಎದುರಾಳಿ ಯಾರೇ ಆಗಲಿ ಈ ಬಗ್ಗೆ ಯೋಚನೆ ಮಾಡಲ್ಲ. ಕಾಂಗ್ರೆಸ್ ಅಭ್ಯರ್ಥಿಯಾಗಿ ನಾನೇ ಸ್ಪರ್ಧಿಸುತ್ತೇನೆ ಎಂದರು.

6. ಮಾಜಿ ಸಿಎಂ ಮಗ ರಾಕೇಶ್ ಸಿದ್ದರಾಮಯ್ಯ ಸಾವಿಗೆ ಭೈರತಿ ಸುರೇಶ್​​ ನೇರ ಕಾರಣ; ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ ಎಂಟಿಬಿ ನಾಗರಾಜ್!

ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ಯಾವ ನಾಯಕನಿಗೂ ನನ್ನ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ. ಇನ್ನೂ ಭೈರತಿ ಸುರೇಶ್​ ರಾಜಕೀಯದಲ್ಲಿ ನನ್ನ ಎದುರು ಬಚ್ಚ. ಸಿದ್ದರಾಮಯ್ಯ ಅವರ ಮಗ ರಾಕೇಶ್ ಸಿದ್ದರಾಮಯ್ಯ ಅವರ ಸಾವಿಗೆ ಆತನೆ ನೇರ ಕಾರಣ ಎಂದು ಹೇಳುವ ಮೂಲಕ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ. ಸಿದ್ದರಾಮಯ್ಯ ಮಗ ರಾಕೇಶ್ ಸಿದ್ದರಾಮಯ್ಯ ಸಾವನ್ನಪ್ಪಲು ಬೈರತಿ ಸುರೇಶ್ ನೇರ ಕಾರಣ . ರಾಕೇಶ್ ಸಿದ್ದರಾಮಯ್ಯನನ್ನು ಹಾಳು ಮಾಡಿದ್ದೇ ಭೈರತಿ ಸುರೇಶ್. ಇನ್ನೂ ನೂರು ವರ್ಷ ಬದುಕಿ ಬಾಳಬೇಕಿದ್ದ ವ್ಯಕ್ತಿಗೆ ಕುಡಿಯುವುದನ್ನು ಕಲಿಸಿ ಸಾಯಿಸಿದ್ದು ನನಗೆ ಗೊತ್ತಿದೆ” ಎಂದು ಹೇಳುವ ಮೂಲಕ ಮತ್ತೊಂದು ವಿವಾದಕ್ಕೆ ಅಂಕಿತ ಹಾಕಿದ್ದಾರೆ.

7. ನಾಯಕ ಸ್ಥಾನ ಕೊಟ್ರೆ ತಗೊಳ್ಳಿ, ಮತ್ತೆ ನೀವೇ ಸಿಎಂ ಆಗಿ; ಸಿದ್ದರಾಮಯ್ಯಗೆ ದೊರೆಸ್ವಾಮಿ ಸಲಹೆ

ಸಿದ್ದರಾಮಯ್ಯ ಮತ್ತೆ ನೀವೇ ಮುಖ್ಯಮಂತ್ರಿ ಆಗಿ. ಬಿಜೆಪಿಯವರಿಗೆ ಮುಸ್ಲಿಮರು, ಕ್ರಿಶ್ಚಿಯನ್ನರು ಬೇಡ. ನಿಮಗೆ ಬಿಜೆಯವರು ಬೇಡ. ದೇಶದಲ್ಲಿ ನಾಯಕರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ನೀವೇ ನಾಯಕರಾಗಬೇಕು. ಉಪಚುನಾವಣೆಯಲ್ಲಿ  14 ಸ್ಥಾನ ಗೆಲ್ಲಬೇಕು, ಗೆಲ್ತೀರಾ? ನಾಯಕ ಸ್ಥಾನ ಕೊಟ್ಟರೆ ತೆಗೆದುಕೊಳ್ಳಿ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್​.ದೊರೆಸ್ವಾಮಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಸಲಹೆ ನೀಡಿದ್ದಾರೆ. 'ಸಿದ್ದರಾಮಯ್ಯ ಆಡಳಿತ ಅಂತರಂಗ ಬಹಿರಂಗ ವರ್ತಮಾನ ಇತಿಹಾಸ' ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ದೊರೆಸ್ವಾಮಿ ಮಾತನಾಡಿದರು. ರಾಜ್ಯದಲ್ಲಿ ಬದಲಾವಣೆ ತರಬೇಕಿದೆ. ಆದರೆ ಈಗ ನೆರೆ ಇದೆ. ಬಿಜೆಪಿ ಈ ಬಗ್ಗೆ ಗಮನ ಹರಿಸಲೇ ಇಲ್ಲ. ಮೋದಿಯವರು ಬಾಯೇ ಬಿಡಲಿಲ್ಲ. ಪ್ರಧಾನಿಯಾಗಿ ಕರ್ನಾಟಕವನ್ನು ಯಾಕೆ ನಿರ್ಲಕ್ಷ್ಯ ಮಾಡಿದ್ದೀರಾ ಅಂತಾ ಅಂತ ಮೋದಿಯವರನ್ನು ಕೇಳಬೇಕು ಎಂದು ಕಿಡಿಕಾರಿದರು.

8. ನಾನು ಮಾರಿಕೊಂಡವನಲ್ಲ, ಜೆಡಿಎಸ್​ಗೆ ವಿಷ ಇಟ್ಟಿದ್ದು ಯಾರೆಂದು ಜನತೆಗೆ ಗೊತ್ತಿದೆ; ಮಾಜಿ ಶಾಸಕ ಹೆಚ್. ವಿಶ್ವನಾಥ್

ಒಂದೆಡೆ ಕಾಂಗ್ರೆಸ್​-ಜೆಡಿಎಸ್​ ಅತೃಪ್ತ ಶಾಸಕರು ರಾಜೀನಾಮೆ ನೀಡಿದ್ದ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ಘೋಷಣೆಯಾದೆ. ಇನ್ನೊಂದೆಡೆ ಅನರ್ಹ ಶಾಸಕರ ಅರ್ಜಿ ವಿಚಾರಣೆ ಇನ್ನೂ ಸುಪ್ರೀಂಕೋರ್ಟ್​ನಲ್ಲಿ ಇತ್ಯರ್ಥವಾಗಿಲ್ಲ. ರಾಜ್ಯದಲ್ಲಿ ಈಗಾಗಲೇ ನೀತಿಸಂಹಿತೆ ಜಾರಿಯಾಗಿದ್ದು, ಉಪ ಚುನಾವಣೆಗೆ ಇನ್ನು ಕೇವಲ 1 ತಿಂಗಳಿರುವ ಹಿನ್ನೆಲೆಯಲ್ಲಿ ಇಂದು ಮಾಜಿ ಶಾಸಕ ಹೆಚ್. ವಿಶ್ವನಾಥ್​ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಉಪಚುನಾವಣೆ ಬಗ್ಗೆ ಯಾರೂ ಆತಂಕ ಪಡಬೇಡಿ. ಸುಪ್ರೀಂಕೋರ್ಟ್​ನಲ್ಲಿ ನಮಗೆ ನ್ಯಾಯ ಸಿಗುವ ಭರವಸೆ ಇದೆ. ನಾವು ರಾಜೀನಾಮೆ ಕೊಟ್ಟಿದ್ದು ಅಧಿಕಾರಕ್ಕಾಗಿ ಅಲ್ಲ. ರಾಕ್ಷಸ ರಾಜಕಾರಣಕ್ಕೆ ಬೇಸತ್ತು ನಾವು ರಾಜೀನಾಮೆ ನೀಡಿದ್ದೆವು. ಮಾಜಿ ಸಿಎಂ ಸಿದ್ದರಾಮಯ್ಯ ನಮ್ಮನ್ನು ದುಡ್ಡಿಗಾಗಿ ಮಾರಿಕೊಂಡಿರಿ ಎಂದು ಹೀಯಾಳಿಸುತ್ತಿದ್ದಾರೆ. ಅವರ ಹೇಳಿಕೆಯನ್ನು ವಾಪಾಸ್​ ತೆಗೆದುಕೊಳ್ಳಬೇಕು. ಎಂಟಿಬಿ ನಾಗರಾಜ್​ ಕಾಂಗ್ರೆಸ್​ ಪಕ್ಷದಲ್ಲಿ ಹೇಗಿದ್ದರು ಎಂಬುದು ಸಿದ್ದರಾಮಯ್ಯನವರಿಗೂ ಗೊತ್ತಿದೆ ಎಂದು ಹೇಳಿದ್ದಾರೆ.

9. ರಾಕೇಶ್​ ಸಾವಿಗೆ ನಾನೇಕೆ ಕಾರಣವಾಗಲಿ, ಎಂಟಿಬಿ ಹತಾಶೆಯಿಂದ ಹೇಳ್ತಿದ್ದಾರೆ; ಭೈರತಿ ಸುರೇಶ್​

ಮಾಜಿ ಸಿಎಂ ಸಿದ್ದರಾಮಯ್ಯನವರ ಮಗ ರಾಕೇಶ್​ ಸಾವಿಗೆ ಭೈರತಿ ಸುರೇಶ್ ನೇರ​ ಕಾರಣ ಎಂಬ ಅನರ್ಹ ಶಾಸಕ ಎಂಟಿಬಿ ನಾಗರಾಜ್​ ಆರೋಪಕ್ಕೆ ಭೈರತಿ ಸುರೇಶ್​ ತಿರುಗೇಟು ನೀಡಿದ್ದಾರೆ. "ನಾನೇ ಕುಡಿಯಲ್ಲ, ರಾಕೇಶ್​​ಗ್ಯಾಕೆ ಕುಡಿಸಲಿ? ರಾಕೇಶ್ ನನ್ನ ತಮ್ಮ. ಅವನ ಸಾವಿಗೆ ನಾನೇಕೆ ಕಾರಣವಾಗಲಿ? ಎಂಟಿಬಿ ಹತಾಶೆಯಿಂದ ಆರೋಪ‌ ಮಾಡುತ್ತಿದ್ದಾರೆ. ರಾಕೇಶ್ ಸಾವಿನ ಬಗ್ಗೆ ರಾಜಕೀಯ ಮಾಡಬಾರದು" ಎಂದು ಕಿಡಿಕಾರಿದ್ದಾರೆ.

10.ಚಿನ್ನಸ್ವಾಮಿಯಲ್ಲಿ ಹೈವೋಲ್ಟೇಜ್ ಪಂದ್ಯ 

ಮೊಹಾಲಿಯಲ್ಲಿ ನಡೆದ ಎರಡನೇ ಟಿ-20 ಪಂದ್ಯ ಗೆದ್ದು ಬೀಗಿರುವ ಭಾರತ ಅಂತಿಮ ಕದನಕ್ಕೆ ಸಜ್ಜಾಗಿದೆ. ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೂರನೇ ಟಿ-20 ಫೈಟ್ ನಡೆಯಲಿದ್ದು, ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ. ಕೊಹ್ಲಿ ಪಡೆ ಗೆದ್ದು ಸರಣಿ ವಶ ಪಡಿಸಿಕೊಳ್ಳುವತ್ತ ಚಿತ್ತ ನೆಟ್ಟಿದ್ದರೆ, ಇತ್ತ ಆಫ್ರಿಕಾನ್ನರು ಕನಿಷ್ಠ ಜಯ ಸಾಧಿಸಿ ಸರಣಿ ಸಮಬಲ ಮಾಡಿಕೊಳ್ಳುವ ಲೆಕ್ಕಾಚಾರ ಹಾಕಿಕೊಂಡಿದೆ.
First published: September 22, 2019, 5:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading