Evening Digest: ಈ ದಿನದ ಟಾಪ್​ 10 ಸುದ್ದಿಗಳು ಇಲ್ಲಿವೆ

Latha CG | news18
Updated:August 15, 2019, 5:39 PM IST
Evening Digest: ಈ ದಿನದ ಟಾಪ್​ 10 ಸುದ್ದಿಗಳು ಇಲ್ಲಿವೆ
ಸಾಂರ್ಭಿಕ ಚಿತ್ರ
  • News18
  • Last Updated: August 15, 2019, 5:39 PM IST
  • Share this:
1.ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಪ್ರತಿಯೊಬ್ಬರಿಗೂ ನನ್ನ ಸಲಾಂ; ಕೆಂಪುಕೋಟೆಯಲ್ಲಿ ಮೋದಿ ಭಾಷಣ

73ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ್ದಾರೆ. ಈ ವೇಳೆ ದೇಶ ಉದ್ದೇಶಿಸಿ ಅವರು ಮಾತನಾಡಿದ್ದು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಪ್ರತಿಯೊಬ್ಬರಿಗೂ ನನ್ನ ಸಲಾಂ ಎಂದಿದ್ದಾರೆ. “ದೇಶದ ಜನರಿಗೆ ಸ್ವಾತಂತ್ರೋತ್ಸವದ ದಿನದ ಹಾಗೂ ರಕ್ಷಾಬಂಧನ ಶುಭಾಶಯ. ಕನಸನ್ನು ಸಾಕಾರ ಮಾಡುವವರಿಗೆ ಶುಭಾಶಯ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಪ್ರತಿಯೊಬ್ಬರಿಗೂ ನನ್ನ ಸಲಾಂ . ಬಲಿದಾನ ಮಾಡಿದವರಿಗೆ, ತ್ಯಾಗಿಗಳಿಗೆ, ತಪಸ್ವಿಗಳಿಗೆ ನನ್ನ ನಮನ. ಈ ದೇಶದ ಉನ್ನತಿಗಾಗಿ ಹಿಂದೆ ಹಲವರ ತ್ಯಾಗ, ಬಲಿದಾನಗಳಿವೆ.ಇಂದು ನಾವು ಸ್ವಾತಂತ್ರದ ಪವಿತ್ರ ದಿನವನ್ನು ಆಚರಿಸುತ್ತೇದ್ದೇವೆ. ಇಂದು ಭಯೋತ್ಪಾದನೆಯ ಸಂಪೂರ್ಣ ನಿರ್ಮೂಲನೆ ಪಣ ತೊಡಬೇಕಿದೆ,” ಎಂದು ಮೋದಿ ಹೇಳಿದರು.

2. ಅಪಾಯದ ಅಂಚಿನಲ್ಲಿ ಒಕ್ಕೂಟ ವ್ಯವಸ್ಥೆ; ಸ್ವಂತ ಧ್ವಜ, ಸಂವಿಧಾನ ಮತ್ತು ಸ್ವಾತಂತ್ರ್ಯ ಕೇಂದ್ರದೆದುರು ಬೇಡಿಕೆ ಮುಂದಿಟ್ಟ ನಾಗಾಲ್ಯಾಂಡ್!

ಇಡೀ ಭಾರತ ಇಂದು ವಿಜೃಂಭನೆಯಿಂದ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆ. ಆದರೆ, ಇದೇ ಸಂದರ್ಭದಲ್ಲಿ  ಭಾರತದ ಒಕ್ಕೂಟ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿರುವ ನಾಗಾಲ್ಯಾಂಡ್, ತಮಗೆ ಪ್ರತ್ಯೇಕ ದ್ವಜ, ಸಂವಿಧಾನ ಹಾಗೂ ಸಾರ್ವಭೌಮ ನಾಗಾಲ್ಯಾಂಡ್ ಬೇಕು ಎಂಬ ಆಗ್ರಹವನ್ನು ಕೇಂದ್ರ ಸರ್ಕಾರದ ಮುಂದಿಡುವ ಮೂಲಕ ಒಕ್ಕೂಟ ವ್ಯವಸ್ಥೆಯಲ್ಲಿ ಬಿರುಕು ಮೂಡಿರುವ ಸೂಚನೆ ನೀಡಿದೆ. ಸಾರ್ವಭೌಮ ನಾಗಾಲ್ಯಾಂಡ್ ಬೇಡಿಕೆ ಎಂಬುದು ಈ ರಾಜ್ಯದ ವ್ಯಾಪ್ತಿಯಲ್ಲಿರುವ ನೆರೆಯ ರಾಜ್ಯಗಳಲ್ಲಿ ವಾಸವಾಗಿರುವ ನಾಗಾ ಜನಾಂಗ ಇರುವ ಪ್ರದೇಶಗಳನ್ನು ಒಳಗೊಂಡಿದೆ ಎಂದು ಅವರು ಈ ಮೂಲಕ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ ಪಕ್ಷದ ಅಧ್ಯಕ್ಷ ಕ್ಯೂ ಟುಕ್ಕು ಕೇಂದ್ರ ಸರ್ಕಾರದ ಎದುರು ತಮ್ಮ ಆಗ್ರಹವನ್ನು ಮುಂದಿಟ್ಟಿದ್ದಾರೆ.

3. ದೆಹಲಿ ಮಹಿಳೆಯರಿಗೆ ರಕ್ಷಾ ಬಂಧನಕ್ಕೆ ಬಂಪರ್​ ಉಡುಗೊರೆ ನೀಡಿದ ಸಿಎಂ ಕೇಜ್ರಿವಾಲ್; ಅ.29ರಿಂದ ಸಾರಿಗೆ ಸಂಚಾರ ಉಚಿತ

ದೆಹಲಿ ಸಾರಿಗೆ ನಿಗಮ (ಡಿಟಿಸಿ) ಮತ್ತು ಕ್ಲಸ್ಟರ್​ ಬಸ್​ಗಳಲ್ಲಿ ದೆಹಲಿಯ ಮಹಿಳೆಯರು ಅಕ್ಟೋಬರ್​ 29ರಿಂದ ಉಚಿತವಾಗಿ ಪ್ರಯಾಣ ಮಾಡಬಹುದು ಎಂದು ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಘೋಷಣೆ ಮಾಡುವ ಮೂಲಕ ಸ್ವಾತಂತ್ರ್ಯೋತ್ಸವಕ್ಕೆ ಮಹಿಳೆಯರಿಗೆ ಬಂಪರ್​ ಗಿಫ್ಟ್​ ನೀಡಿದ್ದಾರೆ. ಛತ್ರಸಲ್​ ಮೈದಾನದಲ್ಲಿ 73 ಸ್ವಾತಂತ್ರ್ಯೋತ್ಸವದಲ್ಲಿ ಭಾಷಣ ಮಾಡಿದ ಕೇಜ್ರಿವಾಲ್​, ರಕ್ಷಾ ಬಂಧನ ದಿನದಿಂದು ನಮ್ಮ ಸಹೋದರಿಯರಿಗೆ ದೆಹಲಿಯ ಸಾರಿಗೆಯಲ್ಲಿ ಟಿಕೆಟ್​ರಹಿತವಾಗಿ ಓಡಾಡುವ ಉಡುಗೊರೆಯನ್ನು ನೀಡಿದ್ದೇವೆ. ಅಕ್ಟೋಬರ್​ 29ರಿಂದ ದೆಹಲಿಯ ಎಲ್ಲ ಮಹಿಳೆಯರು ಸಾರಿಗೆಯಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಘೋಷಿಸಿದರು.

4. 73ನೇ ಸ್ವಾತಂತ್ರ್ಯೋತ್ಸವ: ಸಿಎಂ ಬಿ.ಎಸ್​. ಯಡಿಯೂರಪ್ಪ ಭಾಷಣದ ಪ್ರಮುಖಾಂಶಗಳು
Loading...

ಇಡೀ ದೇಶ  73ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿದೆ. ಎಲ್ಲೆಡೆ ಧ್ವಜಾರೋಹಣ ಮಾಡಲಾಗಿದೆ. ಸಿಎಂ ಬಿ.ಎಸ್​.ಯಡಿಯೂರಪ್ಪ ಇಂದು ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ಮಾಡಿದರು. ಬಳಿಕ ಮಾತನಾಡಿದ ಅವರು, ನಾಡ ಬಾಂಧವರೇ ನಿಮಗೆಲ್ಲ 73 ನೇ ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು. ಗಾಂಧೀಜಿಯವರ 150ನೇ ವರ್ಷಾಚರಣೆ ವೇಳೆ ಧ್ವಜಾರೋಹಣ ಮಾಡುತ್ತಿರುವುದು ಧನ್ಯತಾ ಭಾವ ಮೂಡಿಸಿದೆ. ಸ್ವಾತಂತ್ರ್ಯಕ್ಕೆ ಅನೇಕರು ಬಲಿದಾನ ಮಾಡಿದ್ದಾರೆ. ಅವರ ತ್ಯಾಗ ಬಲಿದಾನದಿಂದ ನಾವು ಇಲ್ಲಿ ನಿಂತಿದ್ದೇವೆ ಎಂದು ಹೇಳಿದರು.

5.ಪೊಲೀಸರ ಗಣನೀಯ ಸೇವೆಗೆ ರಾಷ್ಟ್ರಪತಿ ಪದಕ ಗೌರವ; ರಾಜ್ಯದ 39 ಪೊಲೀಸರು ಪ್ರಶಸ್ತಿಗೆ ಭಾಜನ

73ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಕರ್ನಾಟಕದ 39 ಪೊಲೀಸರಿಗೆ ಇಂದು ರಾಷ್ಟ್ರಪತಿ ಪದಕ ನೀಡಿ ಗೌರವಿಸಲಾಯಿತು. ಪೊಲೀಸ್​ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಪೊಲೀಸರ ಗಣನೀಯ ಸೇವೆಯನ್ನು ಪರಿಗಣಿಸಿ ಪದಕ ನೀಡಲಾಯಿತು.
ಪೊಲೀಸ್​ ಮಹಾನಿರ್ದೇಶಕಿ ನೀಲಮಣಿ ರಾಜು ರಾಜ್ಯದ 39 ಪೊಲೀಸರಿಗೆ ರಾಷ್ಟ್ರಪತಿ ಪದಕ ಪ್ರದಾನ ಮಾಡಿ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದರು. ಇನ್ನು, ಪದಕ ಪ್ರದಾನ ಸಮಾರಂಭದಲ್ಲಿ ಡಿಜಿ, ನಗರ‌ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಐಪಿಎಸ್ ಅಧಿಕಾರಿ ಔರಾದ್ಕರ್, ಅಲೋಕ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

6. ಯಾರ ಕಾಲದಲ್ಲಿ ಏನೆಲ್ಲ ಆಗಿದೆ ಅಂತ ನನಗೂ ಗೊತ್ತಿದೆ; ಫೋನ್​ ಕದ್ದಾಲಿಕೆ ಆರೋಪಕ್ಕೆ ದೇವೇಗೌಡ ತಿರುಗೇಟು

ಬಿಜೆಪಿಯವರ ಮತ್ತು ಅತೃಪ್ತ ಶಾಸಕರ ಫೋನ್ ಕದ್ದಾಲಿಕೆ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಮತ್ತು ಸಮ್ಮಿಶ್ರ ಸರ್ಕಾರದ ನಾಯಕರ ವಿರುದ್ಧ ಆರೋಪ ಮಾಡಿದ್ದರು. ಇದಕ್ಕೆ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಆಕ್ರೋಶ ಹೊರಹಾಕಿದ್ದಾರೆ. ಬಿಜೆಪಿ ಅವರಿಗೆ ಮಾನ ಮರ್ಯಾದೆ ಇದೆಯಾ? ಫೋನ್ ಕದ್ದಾಲಿಕೆ ವಿಚಾರ ನಾನು ತುಂಬಾ ಮಾತಾಡಬಲ್ಲೆ. ನನಗೆ ಎಲ್ಲಾ ಗೊತ್ತಿದೆ. ಯಾವ ಮುಖ್ಯಮಂತ್ರಿ ಕಾಲದಲ್ಲಿ ಏನಾಗಿದೆ, ಯಾವ್ ರಾಜ್ಯದಲ್ಲಿ ಫೋನ್ ಕದ್ದಾಲಿಕೆ ಆಗಿದೆ ನನಗೆ ಎಲ್ಲಾ ಗೊತ್ತಿದೆ. ಕೇಂದ್ರದಲ್ಲಿ ಏನು ನಡೀತಿದೆ  ಎಂಬುದು ಕೂಡ ನನಗೆ ಗೊತ್ತಿದೆ. ಆ ಬಗ್ಗೆ ಈ ಚರ್ಚೆ ಬೇಕಾಗಿಲ್ಲ ಎಂದು ಸರ್ಕಾರವನ್ನು ಉಳಿಸಿಕೊಳ್ಳಲು ಹೆಚ್​.ಡಿ  ಕುಮಾರಸ್ವಾಮಿ ಕದ್ದಾಲಿಕೆ ಮಾಡಿದ್ದಾರೆ ಅನ್ನೋ ಬಿಜೆಪಿ ಆರೋಪ ವಿಚಾರವಾಗಿ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

7. 10 ಕೋಟಿ ದೇಣಿಗೆ ನೀಡಿದ ಸಂಸ್ಥೆ ಹೆಸರು ನೆರೆಪೀಡಿತ ಗ್ರಾಮಕ್ಕೆ ನಾಮಕರಣ; ರಾಜ್ಯವನ್ನು ಮಾರಾಟಕ್ಕೆ ಇಡಬೇಡಿ ಎಂದ ಜೆಡಿಎಸ್​

ನೆರೆಪೀಡಿತ ಗ್ರಾಮಗಳ ಪುನಶ್ಚೇತನಕ್ಕಾಗಿ 10 ಕೋಟಿಗಿಂತ ಅಧಿಕ ದೇಣಿಗೆ ನೀಡುವ ಸಂಸ್ಥೆಗಳ ಹೆಸರನ್ನು ಆ ಗ್ರಾಮಗಳಿಗೆ ಇಡುವುದಾಗಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಹೇಳಿಕೆದ್ದಾರೆ. ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಜೆಡಿಎಸ್​ ಇದೊಂದು ತುಘಲಕ್​ ನಿರ್ಧಾರ. ಬಿಜೆಪಿ ಸರ್ಕಾರವನ್ನು ರಾಜ್ಯವನ್ನು ಮಾರಾಟಕ್ಕಿಟ್ಟಿದೆ ಎಂದು ಟೀಕಿಸಿದೆ. ನಿನ್ನೆ ವಿಧಾನಸೌಧದಲ್ಲಿ ಸಿಎಂ ಬಿ.ಎಸ್​.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಉದ್ಯಮಿಗಳೊಂದಿಗೆ ನಡೆದ ಸಭೆಯಲ್ಲಿ ಪ್ರವಾಹದಿಂದಾಗಿ ರಾಜ್ಯದಲ್ಲಿ ತೀವ್ರ ಸಂಕಷ್ಟ ತಲೆದೋರಿದೆ. ಸಾವಿರಾರು ಹಳ್ಳಿಗಳು ನೆರೆಯಿಂದ ಮುಳುಗಡೆಯಾಗಿವೆ. ಸಾವಿರಾರು ಕೋಟಿ ನಷ್ಟ ಸಂಭವಿಸಿದೆ. ಪುನಃ ಈ ಗ್ರಾಮಗಳ ಪುನಶ್ಚೇತನಕ್ಕೆ ಭಾರೀ ಹಣದ ಅವಶ್ಯಕತೆ ಇದೆ. ಹೀಗಾಗಿ ಉದ್ಯಮಿಗಳು ನೆರೆ ಪರಿಹಾರಕ್ಕೆ 10 ಕೋಟಿಗಿಂತ ಅಧಿಕ ದೇಣಿಗೆ ನೀಡಿದರೆ ಅವರ ಕಂಪನಿಯ ಹೆಸರನ್ನು ಆ ಗ್ರಾಮಗಳಿಗೆ ನಾಮಕರಣ ಮಾಡುವುದಾಗಿ ತಿಳಿಸಿದ್ದರು.

8.ಫೋನ್ ಕದ್ದಾಲಿಕೆ ಪ್ರಕರಣ; ಕೊನೆಗೂ ಮೌನ ಮುರಿದ ಸಿದ್ದರಾಮಯ್ಯ; ತನಿಖೆಯಾಗಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಆಗ್ರಹ!

ಕಳೆದ ಕೆಲ ದಿನಗಳಿಂದ ಫೋನ್ ಕದ್ದಾಲಿಕೆ ವಿಚಾರ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಮೈತ್ರಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅತೃಪ್ತ ಶಾಸಕರು ಸೇರಿದಂತೆ ಮೂರೂ ಪಕ್ಷದ ಪ್ರಮುಖ ನಾಯಕರು ಹಾಗೂ ಅಧಿಕಾರಿಗಳ ಪೋನ್ ಟ್ಯಾಪಿಂಗ್ ಮಾಡಿದ್ದರು ಎಂಬ ಆರೋಪ ಇದೀಗ ರಾಜ್ಯದಲ್ಲಿ ದೊಡ್ಡ ಮಟ್ಟದ ರಾಜಕೀಯ ಆಕ್ರೋಶಕ್ಕೆ ತುತ್ತಾಗಿದೆ. ಈವರೆಗೆ ಈ ಕುರಿತು ರಾಜ್ಯದ ಎಲ್ಲಾ ಪ್ರಮುಖ ನಾಯಕರು ಪ್ರತಿಕ್ರಿಯೆ ನೀಡಿದ್ದರು, ಮಾಜಿ ಮುಖ್ಯಮಂತ್ರಿ ಹಾಗೂ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಮಾತ್ರ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ಇಂದು ಟ್ವೀಟ್ ಮೂಲಕ ಈ ಕುರಿತ ವಿಚಾರ ಪ್ರಸ್ತಾಪಿಸಿರುವ ಸಿದ್ದರಾಮಯ್ಯ, “ಫೋನ್ ಕದ್ದಾಲಿಕೆ ಎಂಬುದು ಗಂಭೀರ ಆರೋಪ. ಹೀಗಾಗಿ ಈ ಕುರಿತು ಸೂಕ್ತ ತನಿಖೆಯಾಗಲಿ, ತಪ್ಪು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುಬೇಕು” ಎಂದು ಆಗ್ರಹಿಸಿದ್ದಾರೆ.

9. ಕಾಫಿನಾಡಲ್ಲಿ ನೆರೆಯ ಅವಾಂತರ; ಒಟ್ಟು 240 ಕೋಟಿ ನಷ್ಟ, 9 ಬಲಿ, 1631 ನಿರಾಶ್ರಿತರು

ಚಿಕ್ಕಮಗಳೂರಿನಲ್ಲಿ ಪ್ರವಾಹದಿಂದ ಆಗಿರುವ ಅನಾಹುತಗಳ ಬಗ್ಗೆ ಜಿಲ್ಲಾಧಿಕಾರಿ ಗೌತಮ್ ಬಗಾದಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ಧಾರೆ.  ಜಿಲ್ಲೆಯಲ್ಲಿ ಆಗಸ್ಟ್​ ತಿಂಗಳಲ್ಲಿ ಬೀಳಬೇಕಾದ ವಾಡಿಕೆ ಮಳೆ 199 ಮಿ.ಮೀ.  14 ದಿನಗಳಲ್ಲಿ ಬಿದ್ದ ಮಳೆ 631 ಮಿಮೀ. ಮಲೆನಾಡಿನಲ್ಲಿ ಮಳೆಗೆ ಒಟ್ಟು 9 ಮಂದಿ ಬಲಿಯಾಗಿದ್ದಾರೆ. 7 ಜನಕ್ಕೆ ತಲಾ 5 ಲಕ್ಷ ಪರಿಹಾರ ನೀಡಲಾಗಿದೆ. ಓರ್ವನ ಮೃತದೇಹ ಇನ್ನೂ ಪತ್ತೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.  ಜಿಲ್ಲಾದ್ಯಂತ 26 ನಿರಾಶ್ರಿತ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಪ್ರವಾಹದಿಂದ 1631 ಜನ ನಿರಾಶ್ರಿತರಾಗಿದ್ದಾರೆ. ಮಳೆಯಿಂದಾಗಿ ಒಟ್ಟು 1454 ಮನೆಗಳಿಗೆ ಹಾನಿಯಾಗಿದೆ. ಅವುಗಳಲ್ಲಿ 319 ಮನೆಗಳು ಸಂಪೂರ್ಣ ಹಾಳಾಗಿದ್ದರೆ,  820 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಮೂಡಿಗೆರೆ ತಾಲೂಕು ಒಂದರಲ್ಲೇ 917 ಮನೆಗೆ ಹಾನಿಯಾಗಿದೆ ಎಂದು ಅನಾಹುತಗಳ ಬಗ್ಗೆ ತಿಳಿಸಿದರು.

10.ಬಾಲಿವುಡ್​ ಹಿರಿಯ ನಟಿ ವಿದ್ಯಾ ಸಿನ್ಹಾ ಇನ್ನಿಲ್ಲ...

ಹಲವು ದಿನಗಳಿಂದ ಶ್ವಾಸಕೋಸ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟಿ ವಿದ್ಯಾ ಸಿನ್ಹಾ ಇಂದು ಕೊನೆಯುಸಿರೆಳೆದಿದ್ದಾರೆ.
ಶ್ವಾಸಕೋಸ ತೊಂದರೆಯಿಂದ ಬಳಲುತ್ತಿದ್ದ ವಿದ್ಯಾ ಸಿನ್ಹಾ ಅವರು ಮುಂಬೈನ ಕ್ರಿಟಿಕೇರ್​ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ಜುಲೈ 10ರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಿನ್ಹಾ ಅವರಿಗೆ 71 ವರ್ಷ ವಯಸ್ಸಾಗಿತ್ತು. ಇಂದು ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ದುರಾದೃಷ್ಟವಶಾತ್​ ಚಿಕಿತ್ಸೆ ಫಲಿಸದೇ ಇಂದು ಇಹಲೋಕ ತ್ಯಜಿಸಿದ್ದಾರೆ.
First published:August 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...