Evening Digest: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ

Harshith AS | news18-kannada
Updated:November 24, 2019, 6:09 PM IST
Evening Digest: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ
Evening Digest
  • Share this:
1. ನಿಗೂಢ ಬೆಳವಣಿಗೆಗಳು: ಅಜಿತ್ ಪವಾರ್​ಗೆ ಎನ್​ಸಿಪಿ ಶಾಸಕರ ಬೆಂಬಲ ಪತ್ರ ಸಿಕ್ಕಿದ್ದು ಹೇಗೆ? ಶರದ್ ಪವಾರ್ ನಂಬಿಕಸ್ಥ ಶಿವಾಜಿರಾವ್ ಪಾತ್ರ ಏನು?

ಮಹಾರಾಷ್ಟ್ರದಲ್ಲಿ ನಿನ್ನೆಯ ದಿಢೀರ್ ಬೆಳವಣಿಗೆಯಲ್ಲಿ ಎನ್​ಸಿಪಿ ಬಂಡಾಯಗಾರ ಅಜಿತ್ ಪವಾರ್ ಅವರು ಬಿಜೆಪಿ ಜೊತೆ ಕೈಜೋಡಿಸಿ ಸರ್ಕಾರ ರಚನೆಗೆ ಕಾರಣವಾಗಿದ್ದರು. ತಮ್ಮ ಪಕ್ಷದ ಎಲ್ಲಾ ಶಾಸಕರ ಸಹಿ ಇರುವ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದರು. ಹೀಗಾಗಿಯೇ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ರಾಷ್ಟ್ರಪತಿ ಆಳ್ವಿಕೆ ಹಿಂಪಡೆದು ಬಿಜೆಪಿಯನ್ನು ಸರ್ಕಾರ ರಚನೆಗೆ ಆಹ್ವಾನಿಸಿದರು. ದೇವೇಂದ್ರ ಫಡ್ನವಿಸ್ ಮತ್ತೊಮ್ಮೆ ಸಿಎಂ ಆದರೆ, ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮೊನ್ನೆ ರಾತ್ರಿಯವರೆಗೂ ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆಗೆ ರೂಪುರೇಖೆ ಹಾಕುತ್ತಲೇ ಇದ್ದ ಶಿವಸೇನಾ, ಎನ್​ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಬೆಳ್ಳಂಬೆಳಗ್ಗೆಯೇ ಮರ್ಮಾಘಾತವಾಯಿತು.

2. ಎನ್​​ಸಿಪಿ ಶಾಸಕ ಕಾಣೆ; ಮಹಾರಾಷ್ಟ್ರ ಪೊಲೀಸ್​​​ ಠಾಣೆಯಲ್ಲಿ ದೂರು ದಾಖಲು

ಮಹಾರಾಷ್ಟ್ರದ ನ್ಯಾಷನಲಿಸ್ಟ್​ ಕಾಂಗ್ರೆಸ್​​ ಪಕ್ಷದ ಶಾಸಕ ಕಾಣೆಯಾಗಿದ್ದಾರೆ ಎಂದು ಪೊಲೀಸ್​ ದೂರು ದಾಖಲಾಗಿದೆ. ಇಲ್ಲಿನ ದಿಢೀರ್​​ ರಾಜಕೀಯ ಬೆಳವಣಿಗೆ ಮಧ್ಯೆ ಅಜಿತ್​​​​ ಪವಾರ್​​ ನೇತೃತ್ವದ ಹಲವು ಎನ್​​ಸಿಪಿ ಶಾಸಕರು ಬಿಜೆಪಿಗೆ ಬೆಂಬಲ ನೀಡಿದರು. ನಿನ್ನೆ ಶನಿವಾರ ಬೆಳಗ್ಗೆ ರಾಜಭವನದಲ್ಲಿ ರಾಜ್ಯಪಾಲರ ಸಮ್ಮುಖದಲ್ಲಿ ದೇವೇಂದ್ರ ಫಡ್ನವೀಸ್​​​ ಎರಡನೇ ಬಾರಿ ಸಿಎಂ ಆಗಿ ಪ್ರಮಾನ ವಚನ ಸ್ವೀಕರಿಸಿದರು. ಅಜಿತ್​​ ಪವಾರ್​​​​​​​ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ತೆಗೆದುಕೊಂಡರು. ಈ ವೇಳೆ ಪ್ರಮಾನ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಹಾಜರಿದ್ದ ಎನ್​​ಸಿಪಿ ಶಾಸಕರು ದಿಢೀರ್​​ ಕಾಣೆಯಾಗಿದ್ದಾರೆ ಎಂಬ ದೂರು ಶಹಪುರ ಪೊಲೀಸ್​​ ಠಾಣೆಯಲ್ಲಿ ದಾಖಲಾಗಿದೆ

3. ನ.23 ಮಹಾರಾಷ್ಟ್ರ ಇತಿಹಾಸದಲ್ಲೇ ಕರಾಳ ದಿನ; ಶಿವಸೇನೆ ಮುಖ್ಯ ವಕ್ತಾರ ಸಂಜಯ್​ ರಾವತ್​

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತಕ್ಕೆ ಬೇಕಾದ ಶಾಸಕರಿಗಿಂತಲೂ ಹೆಚ್ಚಿನ ಮಂದಿ ಶಿವಸೇನಾ-ಎನ್‌ಸಿಪಿ-ಕಾಂಗ್ರೆಸ್ ಪಕ್ಷದ ಬಳಿಯಿದ್ದಾರೆ. ಸರ್ಕಾರ ರಚನೆಗೆ ಮೂರು ಪಕ್ಷಗಳಿಂದ 165 ಶಾಸಕರ ಬೆಂಬಲವಿದೆ ಎಂದು ಶಿವಸೇನೆ ಮುಖ್ಯ ವಕ್ತಾರ ಸಂಜಯ್ ರಾವತ್ ಹೇಳಿದ್ದಾರೆ.

ಭಾನುವಾರ(ಇಂದು) ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲ ಭಗತ್​ ಸಿಂಗ್​ ಕೊಶ್ಯಾರಿ ನಿರ್ಧಾರವನ್ನು ಖಂಡಿಸಿದರು. ನಕಲಿ ದಾಖಲೆಗಳ ಆಧಾರದ ಮೇಲೆ ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್​ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.4. ಮಹಾರಾಷ್ಟ್ರ ಅಂತಿಮ ತೀರ್ಪು ನಾಳೆಗೆ ಮುಂದೂಡಿದ ಸುಪ್ರೀಂ: ರಾಷ್ಟ್ರಪತಿ ಆದೇಶ ಹಿಂಪಡೆದ ಪ್ರತಿ ಸಲ್ಲಿಸುವಂತೆ ಸೂಚನೆ

ಶೀಘ್ರ ಬಹುಮತ ಸಾಬೀತಿಗೆ ಆದೇಶಿಸಿ ಎಂದು ಶಿವಸೇನೆ ಮತ್ತು ಕಾಂಗ್ರೆಸ್​-ಎನ್​​ಸಿಪಿ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದವು. ದಿಢೀರ್​​​ ರಾಷ್ಟ್ರಪತಿ ಆಡಳಿತ ತೆರವುಗೊಳಿಸಿ ಬಿಜೆಪಿ ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟ ಮಹಾರಾಷ್ಟ್ರ ರಾಜ್ಯಪಾಲರ ನಡೆ ಪ್ರಶ್ನಿಸಿ ಮೂರು ಪಕ್ಷಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ ಕೈಗೆತ್ತಿಕೊಂಡಿತ್ತು. ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ವಕೀಲರ ವಾದ-ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್​ ಅಂತಿಮ ತೀರ್ಪು ನಾಳೆಗೆ ಮುಂದೂಡಿದೆ. ಅಲ್ಲದೇ ರಾಜ್ಯಾಪಲರು ದೇವೇಂದ್ರ ಫಡ್ನವೀಸ್​​​​ಗೆ ಸಿಎಂ ಆಗುವುದಕ್ಕೆ ಅವಕಾಶ ಮಾಡಿಕೊಟ್ಟ ನಿರ್ಧಾರ ಪರಿಶೀಲಿಸಲಿದೆ. ಹಾಗೆಯೇ ಈ ಸಂಬಂಧ ದೇವೇಂದ್ರ ಫಡ್ನವೀಸ್​ ಹಾಗೂ ಎನ್​​ಸಿಪಿ ಅಜಿತ್​ ಪವಾರ್​​ ಪ್ರತಿಕ್ರಿಯೆ ನೀಡಬೇಕೆಂದು ಸುಪ್ರೀಂಕೋರ್ಟ್​ ಸೂಚಿಸಿದೆ. ರಾಷ್ಟ್ರಪತಿ ಆದೇಶ ಹಿಂಪಡೆದ ಪ್ರತಿ ಸೇರಿದಂತೆ ಸಿಎಂ ಪ್ರಮಾಣ ವಚನ ಸಹಿತ ದಾಖಲೆಗಳನ್ನು ಸಲ್ಲಿಸುವಂತೆ ಸುಪ್ರೀಂಕೋರ್ಟ್​  ಗವರ್ನರ್​​ಗೆ ಆದೇಶಿಸಿದೆ. ಇದರಿಂದ ಸಿಎಂ ದೇವೇಂದ್ರ ಫಡ್ನವೀಸ್​​​ ನೇತೃತ್ವದ ಬಿಜೆಪಿ ತಾತ್ಕಲಿಕ ರಿಲೀಫ್​​ ಸಿಕ್ಕಂತಾಗಿದೆ.

5. ಎಂಟಿಬಿ ದೊಡ್ಡ ಮನುಷ್ಯ ಇರಬಹುದು, ಆದರೆ ಇನ್ನೂ ಸಣ್ಣತನ ಹೋಗಿಲ್ಲ; ಸಿದ್ದರಾಮಯ್ಯ ವಾಗ್ದಾಳಿ

ಮಾಜಿ ಸಿಎಂ ಸಿದ್ದರಾಮಯ್ಯ ಹೊಸಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಪದ್ಮಾವತಿ ಸುರೇಶ್​ ಪರ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.  ಈ ವೇಳೆ ಮಾತನಾಡಿದ ಅವರು, ಹೊಸಕೋಟೆ ಉಪಚುನಾವಣೆಯನ್ನು​ ಯಾರೂ ಬಯಸಿರಲಿಲ್ಲ. ಅನಾವಶ್ಯಕವಾಗಿ ಚುನಾವಣೆ ಬಂದಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಓಡಿಹೋಗಲು ಆಗಲ್ಲ. ಹಾಗಾಗಿ ಕಾಂಗ್ರೆಸ್​​ನಿಂದ ಪದ್ಮಾವತಿ ಸ್ಪರ್ಧಿಸಿದ್ದಾರೆ.  2018ರಲ್ಲಿ ಎಂಟಿಬಿ ನಾಗರಾಜ್​ಗೆ ಆಶೀರ್ವಾದಿಸಿದ್ದೀರಿ. ಆದರೆ ಎಂಟಿಬಿ ಮತದಾರರಿಗೆ ಮತ್ತು ಟಿಕೆಟ್ ನೀಡಿದ ಪಕ್ಷಕ್ಕೆ ದ್ರೋಹ ಬಗೆದರು. ಈಗ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ.  ಮತದಾರರು ಪ್ರಶ್ನೆ ಮಾಡಬೇಕು ಎಂದು ಹೇಳಿದರು.

6. ಮೈತ್ರಿ ಉರುಳಲು ಸಿದ್ದರಾಮಯ್ಯ ನೇರ ಕಾರಣ, ಅವರಿಗೆ ಸರ್ಕಾರ ನಡೆಸುವ ಯೋಗ್ಯತೆ ಇಲ್ಲ; ಬಿಜೆಪಿ ನಾಯಕ ಪುಟ್ಟಸ್ವಾಮಿ ಕಿಡಿ

ಮೈತ್ರಿ ಸರ್ಕಾರ ಉರುಳಲು ಮಾಜಿ ಸಿಎಂ ಸಿದ್ದರಾಮಯ್ಯ ನೇರ ಕಾರಣ . ಸಿಎಂ ಆಗಲಿಲ್ಲ ಎಂಬ ಅತೃಪ್ತರು ಅವರು. ಹೀಗಾಗಿ ಕಾಂಗ್ರೆಸ್, ಜೆಡಿಎಸ್ ಶಾಸಕರು ಬಿಜೆಪಿಗೆ ಬಂದಿದ್ದಾರೆ ಎಂದು ಬಿಜೆಪಿ ನಾಯಕ ಬಿ.ಜೆ. ಪುಟ್ಟಸ್ವಾಮಿ ಟೀಕಿಸಿದ್ದಾರೆ.

ಯಶವಂತಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್​.ಟಿ.ಸೋಮಶೇಖರ್​ ಪರ ಮತ ಪ್ರಚಾರದಲ್ಲಿ ಭಾಗಿಯಾಗಿರುವ ಪುಟ್ಟಸ್ವಾಮಿ, ಕಾಂಗ್ರೆಸ್​​ ನಾಯಕ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅಹಿಂದಕ್ಕಾಗಿ ಸಿದ್ದರಾಮಯ್ಯ ಏನೂ ಮಾಡಲಿಲ್ಲ ಎಂದು ಪುಟ್ಟಸ್ವಾಮಿ ಕಿಡಿಕಾರಿದರು.

7. ಬಿಜೆಪಿಯವರು ನೈಟ್ ಕ್ಲಬ್, ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರಿಂದ ಹಣ ಪಡೆದು ಅನರ್ಹರಿಗೆ ಕೊಟ್ಟಿದ್ದಾರೆ; ಎಚ್​​ಡಿಕೆ ಹೊಸ ಬಾಂಬ್​​

ಮೈತ್ರಿ ಸರ್ಕಾರ ಬೀಳಿಸಲು ಬಿಜೆಪಿಯವರು ಅನರ್ಹ ಶಾಸಕರಿಗೆ ಕೊಟ್ಯಂತರ ರೂ ಕೊಟ್ಟಿದ್ದಾರೆ. ನೈಟ್ ಕ್ಲಬ್ ಮತ್ತು ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುವವರಿಂದ ಹಣ ಪಡೆದು ಆ ಹಣವನ್ನೇ ಅನರ್ಹ ಶಾಸಕರಿಗೆ ಕೊಟ್ಟಿದ್ದಾರೆ. ನಾನು ಸಿಎಂ ಆಗಿದ್ದ ಸಂದರ್ಭದಲ್ಲಿ ನೈಟ್ ಕ್ಲಬ್ ಮತ್ತು ಕ್ರಿಕೆಟ್ ಬೆಟ್ಟಿಂಗ್ ದಂಧೆ ನಿಲ್ಲಿಸಲು ಕ್ರಮ ಕೈಗೊಂಡಿದ್ದೆ. ಈಗ ಅದನ್ನು ಪುನರ್ ಪ್ರಾರಂಭಿಸಲು ದಂಧೆಕೋರರಿಗೆ ಸಹಾಯ ಮಾಡುವುದಾಗಿ ಬಿಜೆಪಿಯವರು ವಾಗ್ದಾನ ಮಾಡಿ ಹಣ ವಸೂಲಿ ಮಾಡಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೊಸ ಬಾಂಬ್​ ಸಿಡಿಸಿದ್ದಾರೆ.

8. ಸಿದ್ದರಾಮಯ್ಯರನ್ನು ಹೊಗಳಿದರೆ ನನಗೇನು ಲಾಭ?; ವಸ್ತು ಸ್ಥಿತಿ ಹೇಳುವುದು ನನ್ನ ಗುಣ; ಹೆಚ್.ವಿಶ್ವನಾಥ್​

ಸಿದ್ದರಾಮಯ್ಯ ಏಕಾಂಗಿಯಲ್ಲ. ಯಾವ ಜನನಾಯಕನು ಏಕಾಂಗಿಯಾಗುವುದಿಲ್ಲ. ಆದರೆ ಅವರ ತಂಡ ಕುಸಿಯುತ್ತಿದೆ. ಇದು ಡಿ.ದೇವರಾಜ ಅರಸು ಅಂತವರಿಗೂ ಆಗಿತ್ತು ಎಂದು ಹುಣಸೂರಿನ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್​ ಹೇಳಿದ್ದಾರೆ.

ಎಚ್.ವಿಶ್ವನಾಥ್​ ಮತ್ತೆ ಮಾಜಿ ಸಿಎಂ ಸಿದ್ದರಾಯ್ಯ ಪರ ಮೃದು ಧೋರಣೆ ತೋರಿದ್ಧಾರೆ.  ಸಿದ್ದರಾಮಯ್ಯ ಬಗ್ಗೆ ನಾನೇನು ಸುಳ್ಳು ಹೇಳಿದ್ದೀನಾ? ಸಿದ್ದರಾಮಯ್ಯರನ್ನು ಹೊಗಳಿದರೆ ನನಗೇನು ಲಾಭವಾಗುತ್ತೆ. ಯಾವುದನ್ನ ಹೇಗೆ ಸ್ವೀಕಾರ ಮಾಡಬೇಕು ಎನ್ನುವ ಸಾಮಾನ್ಯ ಪ್ರಜ್ಞೆಯೂ ಕಾಂಗ್ರೆಸ್‌ನವರಿಗೆ ಇಲ್ಲ‌. ವಸ್ತುಸ್ಥಿತಿ ಹೇಳುವುದು ನನ್ನ ಗುಣ. ಇದರಿಂದ ನನಗೆ ಯಾವ ರಾಜಕೀಯ ಲಾಭವೂ ಇಲ್ಲ ಎಂದು ಸಮರ್ಥನೆ ಮಾಡಿಕೊಂಡರು.

9. IND vs BAN: ಮೂರನೇ ದಿನಕ್ಕೆ ಅಂತ್ಯಕಂಡ ಡೇ ನೈಟ್ ಟೆಸ್ಟ್​; ಐತಿಹಾಸಿಕ ಪಂದ್ಯದಲ್ಲಿ ಗೆದ್ದು ಬೀಗಿದ ಭಾರತ

ಕೋಲ್ಕತ್ತಾ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಐತಿಹಾಸಿಕ ಎರಡನೇ ಡೇ ನೈಟ್ ಟೆಸ್ಟ್​ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್​ ಹಾಗೂ 46 ರನ್​ಗಳ ಗೆಲುವು ತನ್ನದಾಗಿಸಿದೆ. ಈ ಮೂಲಕ ಟೀಂ ಇಂಡಿಯಾ ಸತತ ನಾಲ್ಕನೇ ಟೆಸ್ಟ್‌ ಪಂದ್ಯವನ್ನು ಇನಿಂಗ್ಸ್‌ ಅಂತರದಲ್ಲಿ ಗೆದ್ದು ಹೊಸ ವಿಶ್ವ ದಾಖಲೆ ನಿರ್ಮಿಸಿದೆ.

10. ಧ್ರುವ ಸರ್ಜಾ ಅಭಿಮಾನಿಗಳಿಗೆ ಸಿಹಿ ಸುದ್ದಿ; ಮದುವೆ ದಿನವೇ ‘ಪೊಗರು‘ ರಿಲೀಸ್ ಡೇಟ್ ಅನೌನ್ಸ್

ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಇಂದು ಬಾಲ್ಯದ ಗೆಳತಿ ಪ್ರೇರಣಾ ಶಂಕರ್​ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಭಿಮಾನಿಗಳಿಗಂತೂ ನೆಚ್ಚಿನ ಪೊಗರು ನಟ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದು ಭಾರೀ ಸಂತಸ ಮೂಡಿದೆ. ಇತ್ತ ಪೊಗರು ನಿರ್ದೇಶಕ ನಂದ ಕಿಶೋರ್​ ಅವರು ಧ್ರುವ ಮತ್ತು ಪ್ರೇರಣಾ ಶಂಕರ್​ ವಿವಾಹದ ಶುಭ ಸಂದರ್ಭದಂದು ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ.

ನಟ ಧ್ರುವ ಸರ್ಜಾ ಅವರು ಪೊಗರು ಚಿತ್ರದಲ್ಲಿ ನಟಿಸುತ್ತಿರುವು ಎಲ್ಲಾರಿಗೂ ಗೊತ್ತಿರುವ ವಿಚಾರ. ಕಳೆದ ಅಕ್ಟೋಬರ್​ ತಿಂಗಳಿನಲ್ಲಿ ಪೊಗರು ಚಿತ್ರದ ಡೈಲಾಗ್​ ಟ್ರೈಲರ್​ ಅನ್ನು ಬಿಡುಗಡೆ ಮಾಡಿದ್ದರು. ಇದೀಗ ಪೊಗರು ನಿರ್ದೇಶಕ ನಂದ ಕಿಶೋರ್​ ಚಿತ್ರದ ಬಿಡುಗಡೆ ದಿನಾಂಕವನ್ನು ಅನೌನ್ಸ್​ ಮಾಡಿದ್ದಾರೆ. ಡಿಸೆಂಬರ್​ನಲ್ಲಿ ಚಿತ್ರದ ಆಡಿಯೋ ಬಿಡುಗಡೆ ಮಾಡಲಿದ್ದು, ಮುಂದಿನ ವರ್ಷ ಸಂಕ್ರಾಂತಿ ಹಬ್ಬಕ್ಕೆ (ಜ.14) ಸಿನಿಮಾ ರಿಲೀಸ್​ ಮಾಡುವುದಾಗಿ ಹೇಳಿದ್ದಾರೆ.
First published: November 24, 2019, 6:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading