Evening Digest: ಈ ದಿನದ ಟಾಪ್​ 10 ಸುದ್ದಿಗಳು ಇಲ್ಲಿವೆ

Latha CG | news18-kannada
Updated:November 22, 2019, 6:40 PM IST
Evening Digest: ಈ ದಿನದ ಟಾಪ್​ 10 ಸುದ್ದಿಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ
  • Share this:
1. ಕಲಬುರ್ಗಿ ವಿಮಾನ ನಿಲ್ದಾಣ ಉದ್ಘಾಟಿಸಿದ ಸಿಎಂ ಬಿಎಸ್​​ ಯಡಿಯೂರಪ್ಪ

ಸಿಎಂ ಬಿ.ಎಸ್​.ಯಡಿಯೂರಪ್ಪ ಇಂದು ಕಲಬುರ್ಗಿ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಿದರು. ಇದರೊಂದಿಗೆ ಕಲ್ಯಾಣ ಕರ್ನಾಟಕದ ಬಹುವರ್ಷದ ಕನಸು ನನಸಾಗಿದೆ. ಕಲಬುರ್ಗಿ ವಿಮಾನ ನಿಲ್ದಾಣ ಕರ್ನಾಟಕದ 6ನೇ ವಿಮಾನ ನಿಲ್ದಾಣವಾಗಿದೆ. ಇದು ರಾಜ್ಯದ ಅತೀ ಉದ್ದದ ರನ್ ವೇ ಆಗಿದೆ.  ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಿಎಂ ಬಿಎಸ್​ವೈ ಜೊತೆಗೆ ಗೃಹ ಸಚಿವ ಬಸವರಾಜ್​ ಬೊಮ್ಮಾಯಿ, ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ, ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ ರಾವ್, ಸಂಸದ ಉಮೇಶ್ ಜಾಧವ್ ಮತ್ತಿತರರು ಮತ್ತಿತರರು ಭಾಗಿಯಾಗಿದ್ದರು.

2. ಬೆಂಗಳೂರಿನಲ್ಲಿ ಬಾಂಗ್ಲಾ ಉಗ್ರರ ಕರಿನೆರಳು; ನಗರದ ಪಿಜಿಯಲ್ಲಿ ವಾಸವಿದ್ದ ಅನ್ಸರುಲ್ಲಾ ಟೀಮ್ ಸದಸ್ಯರು; ಎನ್ಐಎ ತನಿಖೆ

ಕರ್ನಾಟಕದಲ್ಲಿ ಉಗ್ರಗಾಮಿಗಳ ಜಾಲ ಬೇರೂರಿರುವ ಬಗ್ಗೆ ಗುಪ್ತಚರ ಸಂಸ್ಥೆಗಳು ಮತ್ತು ಪೊಲೀಸರು ಆಗಾಗ ಎಚ್ಚರಿಸುತ್ತಲೇ ಇವೆ. ಬೆಂಗಳೂರಿನಲ್ಲಿ ಬಾಂಗ್ಲಾದೇಶದ ಜಮಾತ್ ಉಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರಗಾಮಿಗಳು ಬಾಂಗ್ಲಾ ವಲಸಿಗರ ವೇಷದಲ್ಲಿ ವ್ಯಾಪಿಸುತ್ತಿದ್ದಾರೆಂದು ಎನ್​ಐಎ ತಿಳಿಸಿತ್ತು. ಈಗ ಮತ್ತೊಂದು ಬಾಂಗ್ಲಾ ಉಗ್ರ ಸಂಘಟನೆಯು ನಗರದಲ್ಲಿ ಬೇರು ಬಿಡಲು ಯತ್ನಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಮೇಘಾಲಯದಲ್ಲಿ ಬಂಧಿತನಾಗಿರುವ ಬಾಂಗ್ಲಾ ಉಗ್ರ ಫರ್ಹಾನ್​ಗೆ ಬೆಂಗಳೂರಿನ ನಂಟು ಇರುವುದು ತಿಳಿದುಬಂದಿದೆ.

3. ಐತಿಹಾಸಿಕ ಸಾಧನೆ: ಜೈಪುರದ 21 ವರ್ಷದ ಮಯಾಂಕ್ ಭಾರತದ ಅತ್ಯಂತ ಕಿರಿಯ ನ್ಯಾಯಾಧೀಶ

ರಾಜಸ್ಥಾನ ಮೂಲದ ಯುವಕನೋರ್ವ ನ್ಯಾಯಾಂಗ ಸೇವಾ ಪರೀಕ್ಷೆ ಪಾಸ್​ ಮಾಡಿದ್ದಾರೆ. ಇಲ್ಲಿನ ಜೈಪುರ ಮಾನಸರೋವರದ 21 ವರ್ಷದ ಮಯಾಂಕ್ ಪ್ರತಾಪ್ ಸಿಂಗ್ ಎಂಬುವರು ರಾಜಸ್ಥಾನ ನ್ಯಾಯಾಂಗ ಸೇವಾ ಪರೀಕ್ಷೆಯಲ್ಲಿ ಪಾಸಾಗಿದ್ದು, ದೇಶದ ಅತೀ ಕಿರಿಯ ನ್ಯಾಯಾಧೀಶರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ದೇಶದ ನ್ಯಾಯಾಂಗ ವ್ಯವಸ್ಥೆ ಮೇಲೆ ಮೊದಲಿನಿಂದಲೂ ತುಂಬಾ ಗೌರವ ಇತ್ತು. ಸಮಾಜದಲ್ಲಿ ನ್ಯಾಯಧೀಶರ ಮಹತ್ವದ ಪಾತ್ರ ನೋಡಿದ ಬಳಿಕ ನನಗೂ ಜಡ್ಜ್​​ ಆಗಬೇಕೆಂಬ ಆಸೆ ಹುಟ್ಟಿತು. ಹಾಗಾಗಿಯೇ 2014ರಲ್ಲಿ ರಾಜಸ್ಥಾನದ ವಿವಿಯಲ್ಲಿ ಐದು ವರ್ಷದ ಎಲ್​​ಎಲ್​​ಬಿ ಕೋರ್ಸ್​ಗೆ ಸೇರಿದೆ. ಈ ವರ್ಷಕ್ಕೆ ನನ್ನ ಕೋರ್ಸ್​​ ಮುಗಿಯಿತು ಎಂದು ಎಎನ್​ಐ ಸುದ್ದಿಸಂಸ್ಥೆಗೆ ಮಯಾಂಕ್​​​ ಪ್ರತಾಪ್​​ ಸಿಂಗ್​​ ಪ್ರತಿಕ್ರಿಯಿಸಿದ್ದಾರೆ.

4.ಅಫ್ಘಾನಿಸ್ತಾನದೊಂದಿಗೆ ಭಾರತದ ಬಾಂಧವ್ಯಕ್ಕೆ ಅಮೆರಿಕ ಮೆಚ್ಚುಗೆ; ಸೇನೆ ಹಿಂಪಡೆಯಲು ಟ್ರಂಪ್ ಚಿಂತನೆಅಫ್ಘಾನಿಸ್ತಾನದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಭಾರತದ ನಡೆಗೆ ಅಮೆರಿಕ ಸಂತಸ ವ್ಯಕ್ತಪಡಿಸಿದೆ. ಅಫ್ಘಾನಿಸ್ತಾನದಲ್ಲಿರುವ ಉಗ್ರ ಸಂಘಟನೆಗಳನ್ನು ಮಟ್ಟ ಹಾಕಲು ಅಮೆರಿಕ ತನ್ನ ಸೇನೆಯನ್ನು ಅಫ್ಘಾನಿಸ್ತಾನದಲ್ಲಿ ಇಟ್ಟಿತ್ತು. ಇದೀಗ ಅಫ್ಘಾನ್​ನಲ್ಲಿ ಉಗ್ರರ ಚಟುವಟಿಕೆಗಳು ತಕ್ಕಮಟ್ಟಿಗೆ ಹತೋಟಿಗೆ ಬಂದಿರುವುದರಿಂದ ತನ್ನ ಸೇನೆಯನ್ನು ವಾಪಾಸ್ ಪಡೆಯುವುದಾಗಿ ಅಮೆರಿಕ ಹೇಳಿದೆ. ಈ ಬಗ್ಗೆ ಅಮೆರಿಕದ ಭಾರತೀಯ ರಾಯಭಾರಿ ಹರ್ಷವರ್ಧನ್ ಶ್ರಿಂಗ್ಲ ಮಾಹಿತಿ ನೀಡಿದ್ದು, ಅಫ್ಘಾನ್​ ಜೊತೆಗೆ ಭಾರತ ಉತ್ತಮ ಸಂಪರ್ಕ ಹೊಂದಿರುವುದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಸ್ವಾಗತಿಸಿದ್ದಾರೆ. 2001ರಿಂದಲೂ ಅಫ್ಘಾನಿಸ್ತಾನದ ಅಭಿವೃದ್ಧಿ ಮತ್ತು ಮರುಸ್ಥಾಪನೆ ವಿಷಯದಲ್ಲಿ ಭಾರತ ಬಹಳ ಸಕ್ರಿಯವಾಗಿ ತನ್ನ ಸಹಾಯಹಸ್ತ ಚಾಚಿದೆ ಎಂದಿದ್ದಾರೆ.

5.ಕ್ಯಾನ್ಸರ್​​​​​ ಖಾಯಿಲೆಗೆ ಸಂಜೀವಿನಿ ಕಂಡು ಹಿಡಿದ ಕನ್ನಡಿಗ; ಅಂತರಾಷ್ಟ್ರೀಯ ಅನುಮೋದನೆ

ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಷ್ಟ್ರೇಶನ್ (ಎಫ್​​ಡಿಎ) ಸಂಸ್ಥೆಯೂ ಬೆಂಗಳೂರು ಮೂಲದ ವಿಜ್ಞಾನಿಯೋರ್ವ ಅಭಿವೃದ್ಧಿಪಡಿಸಿದ ಕ್ಯಾನ್ಸರ್ ನಿಯಂತ್ರಣ ಸಾಧನ(ಸೈಟೊಟ್ರಾನ್ ಡಿವೈಎಸ್​​) ಅನುಮೋದಿಸಿದೆ. ಈ ಮೂಲಕ ಯುಎಸ್​​ ಎಫ್​​​ಡಿಎ ಸಂಸ್ಥೆ, ಕ್ಯಾನ್ಸರ್​​ ಚಿಕಿತ್ಸೆ ಸಂಬಂಧ ವೈದ್ಯಕೀಯ ಆವಿಷ್ಕಾರ ಮಾಡಿದ ಕನ್ನಡಿಗರ ಪ್ರತಿಭೆ ಗುರುತಿಸಿದೆ. ಅಲ್ಲದೇ ಈ ಹೊಸ ಆವಿಷ್ಕಾರವೂ ಅದ್ಭುತ ಸಾಧನೆ ಎಂದು ಹೇಳಿದೆ.
ಸೈಟೊಟ್ರಾನ್ ಸಾಧನವೂ ದೇಹದ ಅಂಗಾಂಶಗಳ ಅನಿಯಂತ್ರಿತ ಬೆಳವಣಿಗೆ ತಡೆಯುತ್ತದೆ. ಈ ಕ್ಯಾನ್ಸರ್​​ ಕೋಶಗಳು ಹರಡದಂತೆ ನಿಯಂತ್ರಿಸುತ್ತದೆ. ಇದರ ಜತೆಗೆ ಕ್ಯಾನ್ಸರ್ ಪ್ರೋಟೀನ್‌ಗಳ ನಿಯಂತ್ರಿಸಿ ಕೊಬ್ಬಿನ ಜೀವಕೋಶಗಳಾಗಿ ಬದಲಾಯಿಸುತ್ತದೆ.

6. ಬಿಜೆಪಿಯಲ್ಲಿ ಸದಾನಂದ ಗೌಡರು ತಿರಸ್ಕೃತಗೊಂಡ ಗೊಬ್ಬರ ಇದ್ದಂತೆ; ಸಿದ್ದರಾಮಯ್ಯ ತಿರುಗೇಟು

ರಾಜ್ಯದ ಬಿಜೆಪಿ ನಾಯಕರೆಲ್ಲರೂ ನನ್ನ ಮೇಲೆಯೇ ಮುಗಿ ಬೀಳುತ್ತಿರುವುದು ನೋಡಿದ್ರೆ ನನ್ನನ್ನು ಅತಿ ಹೆಚ್ಚು ಟೀಕಿಸಿದವರಿಗೆ ಏನೋ ಬಹುಮಾನ ಕೊಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್​​ ಶಾ ಭರವಸೆ ನೀಡಿದ ಹಾಗಿದೆ. ನಾನು ಏಕಾಂಗಿಯಾಗಿದ್ರೆ ಇವರಿಗ್ಯಾಕೆ ನನ್ನ ಬಗ್ಗೆ ಭಯ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ ಅವರು ಏಕಾಂಗಿಯಾಗಿದ್ದಾರೆ ಎಂಬ ಸದಾನಂದ ಗೌಡರ ಹೇಳಿಕೆಗೆ ಟ್ವಿಟ್ಟರ್​ನಲ್ಲಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

7. ಒಕ್ಕಲಿಗರಷ್ಟೇ ಅಲ್ಲ, ಎಲ್ಲ ಸಮುದಾಯದವರಿಂದಲೂ ನನಗೆ ಮತ: ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ

ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಮತ್ತು ಜನರ ಮೇಲೆ ತಾನು ಬೆದರಿಕೆ ಹಾಕುತ್ತಿದ್ದೇನೆಂಬ ಆರೋಪವನ್ನು ಬಿಜೆಪಿ ಅಭ್ಯರ್ಥಿ ಕೆ. ಗೋಪಾಲಯ್ಯ ಬಲವಾಗಿ ನಿರಾಕರಿಸಿದ್ದಾರೆ. ನಾನು ಯಾರಿಗೂ ತೊಂದರೆ ಮಾಡಿಲ್ಲ. ಯಾರಿಗೂ ಧಮಕಿ ಹಾಕಿಲ್ಲ. ಧಮಕಿ ಹಾಕಿದ್ದನ್ನು ನಿರೂಪಿಸಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಈ ಕ್ಷೇತ್ರದ ಅನರ್ಹ ಶಾಸಕರಾದ ಅವರು ಸವಾಲು ಹಾಕಿದ್ದಾರೆ. ನಾನು ಯಾರಿಗಾದರೂ ಬೆದರಿಕೆ ಹಾಕಿದ್ದಕ್ಕೆ ಒಂದು ಸಣ್ಣ ನಿದರ್ಶನ ತೋರಿಸಿದರೆ ರಾಜಕಾರಣದಿಂದ ನಿವೃತ್ತನಾಗುತ್ತೇನೆ. ಇದೆಲ್ಲಾ ಕುಮಾರಣ್ಣಗೆ ಗೊತ್ತು. ಚುನಾವಣೆ ಇರುವುದರಿಂದ ಈ ರೀತಿ ಮಾತನಾಡುತ್ತಿದ್ದಾರೆ. ಅವರದ್ದೇ ಸರ್ಕಾರ ಇದ್ದಾಗ ಕ್ಷೇತ್ರಕ್ಕೆ ಏನು ಅನುದಾನ ಕೊಟ್ಟಿದ್ಧಾರೆ ಎಂಬುದು ಜನರಿಗೆ ಗೊತ್ತು ಎಂದು ಗೋಪಾಲಯ್ಯ ಟೀಕೆ ಮಾಡಿದ್ದಾರೆ.

8. ಜನರಿಗೆ ಕಾಂಗ್ರೆಸ್-ಜೆಡಿಎಸ್ ಒಳಒಪ್ಪಂದ ಗೊತ್ತಿದೆ, ಹೀಗಾಗಿ 15 ಕ್ಷೇತ್ರಗಳಲ್ಲೂ ನಾವೇ ಗೆಲ್ಲುತ್ತೇವೆ; ಆರ್.ಅಶೋಕ್ ಭವಿಷ್ಯ

ಉಪ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿವೆ. ಜೆಡಿಎಸ್ 15 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕಿಲ್ಲ. ಜೆಡಿಎಸ್ ಸೋಲುವ ಭಯದಲ್ಲಿ ಗೂಂಡಾಗಿರಿ ಮಾಡುತ್ತಿದೆ. ಕೆಲವು ಕಡೆಗಳಲ್ಲಿ ಜೆಡಿಎಸ್​ನಿಂದ ಗೂಂಡಾಗಿರಿ ನಡೆಯುತ್ತಿದೆ. ಇದೆಲ್ಲಾ ನೋಡಿದ್ರೆ  ಜೆಡಿಎಸ್ ಪ್ರಾದೇಶಿಕ ಪಕ್ಷನಾ ಅಥವಾ ರಾಷ್ಟ್ರೀಯ ಪಕ್ಷನಾ ಗೊತ್ತಾಗುತ್ತಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಜೆಡಿಎಸ್ ವಿರುದ್ಧ ಗಂಭೀರ ಆರೋಪ ಮಾಡಿದರು. ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಅಶೋಕ್, ಜೆಡಿಎಸ್ ಕಾಂಗ್ರೆಸ್ ಜೊತೆ ಇದೆಯೋ ಅಥವಾ ಸ್ವತಂತ್ರ ವಾಗಿ ಇದೆಯೋ ಗೊತ್ತಿಲ್ಲ. ಜೆಡಿಎಸ್ ನಡೆ ನಿಜಕ್ಕೂ ಕೂಡ ಗೊಂದಲದಲ್ಲಿದೆ, ಆ ಪಕ್ಷ ಅತಂತ್ರ ಪರಿಸ್ಥಿತಿಯಲ್ಲಿದೆ. ಹೀಗಾಗಿ ಪಕ್ಷವನ್ನೇ ವಿಸರ್ಜಿಸಿದರೆ ಒಳ್ಳೆಯದು ಎಂದು ಹೇಳಿದರು.

9. India vs Bangladesh: ಬಾಂಗ್ಲಾ ಉತ್ತಮ ಬೌಲಿಂಗ್: ಭಾರತದ ಎರಡು ವಿಕೆಟ್ ಪತನ

ಕೋಲ್ಕೊತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಭಾರತ-ಬಾಂಗ್ಲಾದೇಶ ಡೇ ನೈಟ್ ಟೆಸ್ಟ್ ಮೊದಲ ಇನಿಂಗ್ಸ್​ನಲ್ಲಿ ಬಾಂಗ್ಲಾ 106 ರನ್​ಗೆ ಸರ್ವಪತನ ಕಂಡಿದೆ. ಟೀಂ ಇಂಡಿಯಾ ವೇಗಿಗಳ  ಮಾರಕ ದಾಳಿಗೆ ತತ್ತರಿಸಿರುವ ಬಾಂಗ್ಲಾ ಬ್ಯಾಟ್ಸ್​ಮನ್​ಗಳು ಮೊದಲ ಇನಿಂಗ್ಸ್​ನಲ್ಲಿ ಕೇವಲ 30.3 ಓವರ್‌ಗಳನ್ನು ಎದುರಿಸಲು ಮಾತ್ರ ಶಕ್ತರಾದರು. ಬಳಿಕ ಇನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ ಹಾಗೂ ಮಯಾಂಕ್ ಅಗರ್​ವಾಲ್ ಟೀಂ ಇಂಡಿಯಾಗೆ ಭರ್ಜರಿ ಆರಂಭ ಒದಗಿಸುವ ಸೂಚನೆ ನೀಡಿದ್ದರು. ಆದರೆ ತಂಡದ ಮೊತ್ತ  26 ಆಗಿದ್ದ ವೇಳೆ ಪಿಂಕ್ ಬಾಲ್​ನಲ್ಲಿ ಶಾಕ್ ನೀಡುವಲ್ಲಿ ಬಾಂಗ್ಲಾ ಬೌಲರುಗಳು ಯಶಸ್ವಿಯಾದರು. ಅಲ್ ಅಮೀನ್ ಎಸೆದ ಚೆಂಡನ್ನು ಸರಿಯಾಗಿ ಗುರುತಿಸುವಲ್ಲಿ ಎಡವಿದ ಯುವ ಆಟಗಾರ ಮಯಾಂಕ್ (14) ಕ್ಯಾಚ್ ನೀಡಿ ಹೊರ ನಡೆದರು.

10.ಹುಣಸೂರು ಚುನಾವಣಾ ಪ್ರಚಾರಕ್ಕೆ ಜಿ.ಟಿ.ದೇವೇಗೌಡರನ್ನು ನಾನು ಕರೆತರುತ್ತೇನೆ; ಪ್ರಜ್ವಲ್ ರೇವಣ್ಣ 

ಎಲ್ಲಾ ಸಮಾಜದ ನಾಯಕರು, ಮುಖಂಡರನ್ನು ಭೇಟಿ ಮಾಡುತ್ತೇನೆ‌. ಅಸಮಾಧಾನಗೊಂಡಿರುವವರ ಮನವೊಲಿಸುತ್ತೇನೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು. ಹುಣಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಜ್ವಲ್, ಚುನಾವಣೆಗೆ ಎಲ್ಲಾ ರೀತಿಯ ಕಾರ್ಯತಂತ್ರ ಮಾಡಲಾಗುವುದು. ನಾಳೆಯಿಂದ ಅಧಿಕೃತ ಪ್ರಚಾರ ಮಾಡುತ್ತೇನೆ. ಹುಣಸೂರಿಗೆ ನಾನೇ ಉಸ್ತುವಾರಿ. ಇಲ್ಲಿ ಜಾಸ್ತಿ ಸಮಯ ಇದ್ದು, ಪಕ್ಷದ ಅಭ್ಯರ್ಥಿ ಸೋಮಶೇಖರ್ ಪರ ಪ್ರಚಾರ ಮಾಡುತ್ತೇನೆ. ಜೊತೆಗೆ ಕೆ.ಆರ್ ಪೇಟೆ ಯಶವಂತಪುರಕ್ಕೂ ಹೋಗುತ್ತೇನೆ. ಹೈಕಮಾಂಡ್ ಸೂಚಿಸಿದ ಕಡೆ ಹೋಗುತ್ತೇನೆ ಎಂದು ಹೇಳಿದರು.
First published:November 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ