Evening Digest: ಈ ದಿನದ ಟಾಪ್​ 10 ಸುದ್ದಿಗಳು ಇಲ್ಲಿವೆ

Latha CG | news18-kannada
Updated:November 21, 2019, 6:29 PM IST
Evening Digest: ಈ ದಿನದ ಟಾಪ್​ 10 ಸುದ್ದಿಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ
  • Share this:
1.ಚುನಾವಣಾ ಬಾಂಡ್​ಗಳ ಎಲ್ಲಾ ವಿವರ ಬಹಿರಂಗಗೊಳಿಸಿ: ಸಂಸತ್​ನಲ್ಲಿ ಸರ್ಕಾರಕ್ಕೆ ಕಾಂಗ್ರೆಸ್ ಆಗ್ರಹ

ಸಂಸತ್​ನ ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಸದನಗಳಲ್ಲಿ ಇಂದು ಕೇಂದ್ರದ ಎಲೆಕ್ಟೋರಲ್ ಬಾಂಡ್ ಯೋಜನೆಯೆ ಹೆಚ್ಚು ಸದ್ದು ಮಾಡಿತು. ಚುನಾವಣಾ ಬಾಂಡ್ ಹೆಸರಲ್ಲಿ ಕೇಂದ್ರ ಸರ್ಕಾರ ಲಂಚ ಯೋಜನೆ ರೂಪಿಸಿದೆ ಎಂದು ಆರೋಪಿಸಿರುವ ವಿಪಕ್ಷ ಕಾಂಗ್ರೆಸ್, ಎಲೆಕ್ಟೋರಲ್ ಬಾಂಡ್ ಯೋಜನೆಯ ಎಲ್ಲಾ ವಿವರಗಳನ್ನು ಬಹಿರಂಗಪಡಿಸಿ ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿತು. ಚುನಾವಣಾ ಬಾಂಡ್ ಯೋಜನೆ ವಿರೋಧಿಸಿ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಕಾಂಗ್ರೆಸ್ ಸಂಸದರು ತೀವ್ರ ಪ್ರತಿಭಟನೆ ನಡೆಸಿದರು.

2.ಸಿಖ್ಖರು ಮತ್ತು ಕಾಶ್ಮೀರಿಗಳ ಮೇಲೆ ಬೇಹುಗಾರಿಕೆ: ಭಾರತೀಯ ದಂಪತಿಗಳ ವಿಚಾರಣೆ

ಜರ್ಮನಿಯ ಸಿಖ್ ಮತ್ತು ಕಾಶ್ಮೀರಿ ಸಮುದಾಯಗಳ ಮೇಲೆ ಬೇಹುಗಾರಿಕೆ ನಡೆಸಿದ ಆರೋಪ ಹೊತ್ತಿರುವ ಭಾರತೀಯ ದಂಪತಿಗಳನ್ನು ಗುರುವಾರ ವಿಚಾರಣೆಗೆ ಒಳಪಡಿಸಲಾಗಿದೆ. ಈ ದಂಪತಿಗಳಿಗೆ 10 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸುವ ಸಂಬಂಧ ಫ್ರಾಂಕ್‌ಫರ್ಟ್‌ನ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗಿದೆ. ಮಾರ್ಚ್​ನಲ್ಲಿ ಭಾರತೀಯ ಮೂಲದ ಇಬ್ಬರು ಶಂಕಿತರನ್ನು ಬಂಧಿಸಲಾಗಿತ್ತು. ಬಂಧಿತರರನ್ನು ಮನಮೋಹನ್ ಎಸ್(50) ಮತ್ತು ಅವರ ಪತ್ನಿ ಕನ್ವಾಲ್ ಜಿತ್​ ಕೆ(51) ಎಂದು ಗುರುತಿಸಲಾಗಿದ್ದು, ಜರ್ಮನ್​ನ ಗೌಪತ್ಯೆ ನಿಯಮಗಳ ಅನುಸಾರ ಬಂಧಿತರ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ.

3.ಲಂಕಾದಲ್ಲಿ ತಮಿಳಿಗ ಮುತ್ತಯ್ಯ ಮುರಳೀಧರನ್ ರಾಜ್ಯಪಾಲರಾಗಲು ತಮಿಳಿಗರಿಂದಲೇ ವಿರೋಧ; ಪೇಚಿಗೆ ಸಿಲುಕಿದ ಸ್ಪಿನ್ ಮಾಂತ್ರಿಕ

ಗೋಟಾಬಯ ರಾಜಪಕ್ಸ ನೂತನ ಲಂಕಾ ಅಧ್ಯಕ್ಷರಾದ ಬೆನ್ನಲ್ಲೇ ಲಂಕಾ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಅವರನ್ನು ಶ್ರೀಲಂಕಾದ ಉತ್ತರ ಪ್ರಾಂತ್ಯಕ್ಕೆ ರಾಜ್ಯಪಾಲರನ್ನಾಗಿ ಮಾಡಲು ಮುಂದಾಗಿದ್ದಾರೆ. ಆದರೆ, ತಮಿಳಿಗರಾಗಿರುವ ಮುತ್ತಯ್ಯಗೆ ರಾಜ್ಯಪಾಲರಾಗಲು ಲಂಕನ್ ತಮಿಳರೇ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕ್ರಿಕೆಟ್ ವೃತ್ತಿಯಲ್ಲಿ ಘಟಾನುಘಟಿ ಬ್ಯಾಟುಗಾರರಿಗೆ ಮಣ್ಣುಮುಕ್ಕಿಸಿ, ವಿಕೆಟ್​ಗಳನ್ನು ತರಗೆಲೆಗಳಂತೆ ಉದುರಿಸಿ ವಿಶ್ವದಾಖಲೆಗಳ ಮೇಲೆ ದಾಖಲೆಗಳನ್ನು ಬರೆದಿರುವ ಮುರಳೀಧರನ್, ರಾಜಕೀಯ ವೃತ್ತಿಯಲ್ಲಿ ಪೇಚಿಗೆ ಸಿಕ್ಕು ತಲೆಕೆರೆದುಕೊಳ್ಳುವಂಥ ಸಂದರ್ಭ ಬಂದಿದೆ. ಸ್ವಂತ ಸಮುದಾಯದ ಜನರೇ ಮುರಳೀಧರನ್ ವಿರುದ್ಧ ತಿರುಗಿಬೀಳಲು ಪ್ರಬಲ ಕಾರಣಗಳಿವೆ. ಮುತ್ತಯ್ಯ ಮುರಳೀಧರನ್ ಭಾರತದಿಂದ ಲಂಕಾಗೆ ವಲಸೆ ಹೋದ ತಮಿಳು ಕುಟುಂಬಕ್ಕೆ ಸೇರಿದವರು. ಅಲ್ಲಿಯ ತಮಿಳರ ವಿರೋಧಕ್ಕೆ ಕಾರಣ ಇದಲ್ಲ. ಮುರಳೀಧರನ್ ತಮಿಳಿಗರಾಗಿದ್ದರೂ ರಾಜಪಕ್ಸ ಕುಟುಂಬಕ್ಕೆ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿದ್ದು ತಮಿಳಿಗರ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ.

4. ಬ್ರಿಟಿಷ್ ಪೆಟ್ರೋಲಿಯಂ ಹಿಂದಿಕ್ಕಿ ವಿಶ್ವದ 6ನೇ ಅತಿದೊಡ್ಡ ಆಯಿಲ್ ಕಂಪನಿ ಪಟ್ಟಕ್ಕೇರಿದ ರಿಲಯನ್ಸ್​ ಇಂಡಸ್ಟ್ರೀಸ್ಇಂಧನ, ಟೆಲಿಕಾಂ, ರೀಟೇಲ್ ಹೀಗೆ ನಾನಾ ಉದ್ಯಮ ಕ್ಷೇತ್ರಗಳಲ್ಲಿ ಈಗಾಗಲೇ ಹಲವು ದಾಖಲೆಗಳನ್ನು ನಿರ್ಮಿಸಿರುವ ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್ ಬ್ರಿಟಿಷ್ ಮಲ್ಟಿನ್ಯಾಷನಲ್ ಆಯಿಲ್ ಮತ್ತು ಗ್ಯಾಸ್​ ಕಂಪನಿಯಾಗಿರುವ ಬಿಪಿ  (ಬ್ರಿಟಿಷ್ ಪೆಟ್ರೋಲಿಯಂ) ಅನ್ನು ಹಿಂದಿಕ್ಕುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.
ಇಂಧನ ಕಂಪನಿಗಳಲ್ಲಿ ಎಕ್ಸಾನ್​ ಮೊಬಿಲ್, ಶೆಲ್, ಶೆವ್ರಾನ್ ಕಾರ್ಪ್, ಟೋಟಲ್, ಪೆಟ್ರೋಚಿನಾ ನಂತರದ ಸ್ಥಾನದಲ್ಲಿದ್ದ ಬ್ರಿಟಿಷ್ ಪೆಟ್ರೋಲಿಯಂ ಕಂಪನಿಯನ್ನು ಹಿಂದಿಕ್ಕುವ ಮೂಲಕ ರಿಲಯನ್ಸ್​ ಇಂಡಸ್ಟ್ರೀಸ್​ 6ನೇ ಸ್ಥಾನಕ್ಕೆ ಏರಿದೆ. ಈ ಮೂಲಕ ಆರ್​ಐಎಲ್​ ಮತ್ತೊಂದು ಸಾಧನೆ ಮಾಡಿದೆ. ಈಗಾಗಲೇ 10 ಲಕ್ಷ ಕೋಟಿ ಮಾರ್ಕೆಟ್ ವ್ಯಾಲ್ಯೂ ಹೊಂದುವತ್ತ ದಾಪುಗಾಲು ಹಾಕುತ್ತಿರುವ ರಿಲಯನ್ಸ್​ ಇಂಡಸ್ಟ್ರೀಸ್​ ಜಗತ್ತಿನ 6ನೇ ಅತಿದೊಡ್ಡ ಇಂಧನ ಸಂಸ್ಥೆಯಾಗಿರುವ ಬಿಪಿ ಪಿಎಲ್​ಸಿಯನ್ನು ಹಿಂದೆ ಹಾಕಿ ಮುನ್ನಡೆ ಸಾಧಿಸಿದೆ.

5. ರಕ್ಷಣಾ ಸಚಿವಾಲಯದ ಸಂಸದೀಯ ಸಮಿತಿಗೆ ಮಲೆಗಾಂವ್​ ಸ್ಪೋಟದ ಆರೋಪಿ, ಸಂಸದೆ ಪ್ರಗ್ಯಾ ಸಿಂಗ್​​ ನೇಮಕ

ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ನೇತೃತ್ವದ ಸಂಸದೀಯ ಸಮಾಲೋಚನ ಸಮಿತಿಗೆ ಬಿಜೆಪಿ ಸಂಸದೆ ಹಾಗೂ ಮಲೆಗಾಂವ್​ ಸ್ಪೋಟದ ಆರೋಪಿ ಪ್ರಗ್ಯಾ ಸಿಂಗ್​ ಠಾಕೂರ್​ ಅವರನ್ನು ನೇಮಕ ಮಾಡಲಾಗಿದೆ. 21 ಜನರ ಸಂಸದರ ಈ ಸಮಿತಿಯ ನೇತೃತ್ವವನ್ನು ಕೇಂದ್ರ ರಕ್ಷಣಾ ಸಚಿವರು ವಹಿಸಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶ ಮಾಜಿ ಸಿಎಂ ಕಾಂಗ್ರೆಸ್​ ಹಿರಿಯ ನಾಯಕ ದಿಗ್ವಿಜಯ್​ ಸಿಂಗ್​ ಅವರನ್ನು ಸೋಲಿಸಿ, ಮೊದಲ ಬಾರಿ ಸಂಸತ್​ ಮೆಟ್ಟಿಲೇರಿದ್ದರು. ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ ಅಡಿ ಅವರ ವಿರುದ್ಧದ ಪ್ರಕರಣವನ್ನು ಎನ್​ಐಎ ಕೈ ಬಿಟ್ಟ ಮೇಲೆ ಅನಾರೋಗ್ಯದ ಆಧಾರದ ಮೇಲೆ ಬಾಂಬೆ ಹೈ ಕೋರ್ಟ್ 2017ರಲ್ಲಿ​ ಅವರಿಗೆ ಜಾಮೀನು ನೀಡಿತ್ತು. ಇವರ ಮೇಲೆ ಅನೇಕ ಕಾನೂನುಬಾಹಿತ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಆರೋಪ ಇದೆ.

6.ಬಿಜೆಪಿಯಿಂದ ಶರತ್ ಬಚ್ಚೇಗೌಡ, ಕವಿರಾಜ್ ಅರಸ್ ಉಚ್ಛಾಟನೆ

ನಿರೀಕ್ಷೆಯಂತೆ ಶರತ್ ಬಚ್ಚೇಗೌಡ ಅವರನ್ನು ಬಿಜೆಪಿ ತನ್ನ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಠಿಸಿದೆ. ಬಿಜೆಪಿಯ ಅಧಿಕೃತ ಅಭ್ಯರ್ಥಿಗಳ ವಿರುದ್ಧವೇ ಸ್ಪರ್ಧಿಸಿದ ಕಾರಣಕ್ಕೆ ಶರತ್ ಬಚ್ಚೇಗೌಡ ಮತ್ತು ಕವಿರಾಜ್ ಅರಸ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ಅಧಿಕೃತ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಿರುವುದನ್ನು ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇಂದು ಇಬ್ಬರಿಗೂ ಉಚ್ಛಾಟನೆ ಆದೇಶ ಹೊರಡಿಸಿದ್ದಾರೆ.

7. ಕಾಗಿನೆಲೆ ಸ್ವಾಮೀಜಿ ಜೊತೆಗಿನ ಸಂಧಾನ ಸಭೆ ಯಶಸ್ವಿ; ಸಚಿವ ಮಾಧುಸ್ವಾಮಿ ವಿವಾದಕ್ಕೆ ತೆರೆ

ಕಾಗಿನೆಲೆ ಶಾಖಾಮಠದ ಶ್ರೀಗಳ ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿ ಕುರುಬ ಸಮಾಜದ ಆಕ್ರೋಶಕ್ಕೆ ಗುರಿಯಾಗಿದ್ದ ಸಚಿವ ಮಾಧುಸ್ವಾಮಿ, ಇಂದು ಕಾಗಿನೆಲೆ ಸ್ವಾಮೀಜಿಯೊಂದಿಗೆ ನಡೆಸಿದ ಸಭೆ ಯಶಸ್ವಿಯಾಗಿದೆ. ಸಿಎಂ ವಿಚಾರಕ್ಕೆ ಗೌರವ ಕೊಟ್ಟು ಪ್ರತಿಭಟನೆ ಹಿಂಪಡೆದಿದ್ದೇವೆ. ವಿವಾದವನ್ನು ಮುಂದುವರಿಸದೇ ಇಲ್ಲಿಗೇ ಅಂತ್ಯಗೊಳಿಸಲು ಎಂದು ಕಾಗಿನೆಲೆ ಮಠದ ಈಶ್ವರಾನಂದ ಸ್ವಾಮಿ ಹೇಳಿದ್ದಾರೆ.  ಇದರೊಂದಿಗೆ ಚುನಾವಣಾ ಸಮಯದಲ್ಲಿ ಬಿಜೆಪಿಗೆ ಅಂಟಿಕೊಂಡಿದ್ದ ಅನಗತ್ಯ ವಿವಾದ ಶಮನಗೊಂಡಂತಾಗಿದೆ.

8. ಡಿವೈಎಸ್​​ಪಿ ಗಣಪತಿ ಆತ್ಮಹತ್ಯೆ ಪ್ರಕರಣ: ಮಾಜಿ ಸಚಿವ ಕೆ.ಜೆ ಜಾರ್ಜ್​​ಗೆ ಕ್ಲೀನ್​​ಚಿಟ್​​

ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರದ ಅವಧಿಯಲ್ಲಿ ರಾಜ್ಯಾದ್ಯಂತ ಭಾರೀ ಸದ್ದು ಮಾಡಿದ್ದ ಡಿವೈಎಸ್​​ಪಿ ಎಂ.ಕೆ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲೀಗ ಮಾಜಿ ಸಚಿವ ಕೆ.ಜೆ. ಜಾರ್ಜ್​​​ಗೆ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(ಸಿಬಿಐ) ಕ್ಲೀನ್​​ಚಿಟ್​​ ನೀಡಿದೆ. ಈ ಪ್ರಕರಣ ಸಂಬಂಧ ಸಿಬಿಐ ಮಡಿಕೇರಿ ನ್ಯಾಯಲಯಕ್ಕೆ ನೀಡಿರುವ ‘ಬಿ’ ರಿಪೋರ್ಟ್​​ನಲ್ಲಿ ಮಾಜಿ ಸಚಿವ ಕೆ.ಜೆ ಜಾರ್ಜ್​​ ಮತ್ತು ಹಿರಿಯ ಐಪಿಎಸ್‌ ಅಧಿಕಾರಿಗಳಾದ ಪ್ರಣವ್‌ ಮೊಹಂತಿ, ಎ.ಎಂ. ಪ್ರಸಾದ್​​ ದೋಷಮುಕ್ತರು ಎಂದು ಉಲ್ಲೇಖಿಸಿದೆ.

9. ನಾಲ್ವಡಿ ಕೃಷ್ಣರಾಜ ಒಡೆಯರು ಉಡುಗೊರೆಯಾಗಿ ನೀಡಿದ್ದ ಭೂಮಿ ಕಬಳಿಸಿದ ಪ್ರಕರಣ; 117 ಕೋಟಿ ಮೌಲ್ಯದ ಆಸ್ತಿ ಜಪ್ತಿ

ಮೈಸೂರಿನ ಅರಮನೆಯ ವನ್ಯಜೀವಿ ಪ್ರಸಾಧನ ತಜ್ಞ ಎಡ್ವಿನ್​ ಜೋಬರ್ಟ್​​ ವ್ಯಾಂನಿಗೇನ್​ ಅವರ ಆಸ್ತಿಯನ್ನು ಕಬಳಿಸಿದ್ದ ಮೈಕೆಲ್​ ಫ್ಲಾಯ್ಡ್​​ ಈಶ್ವರನ್​ಗೆ ಆದಾಯ ತೆರಿಗೆ ಇಲಾಖೆ ಶಾಕ್​ ನೀಡಿದೆ. ಕಬಳಿಕೆಯಾದ 117.87 ಕೋಟಿ ಮೌಲ್ಯದ ಆಸ್ತಿಯನ್ನು ಇಡಿ ತನ್ನ ವಶಕ್ಕೆ ಪಡೆದಿದೆ. ಈಶ್ವರ್​ ಒಡೆತನದಲ್ಲಿದ್ದ ಕೇರಳದ ವಯನಾಡಿನ 220 ಎಕರೆ ಕಾಫೀ ತೋಟ, ಮೈಸೂರಿನ ಹೈದರ್​ ಅಲಿ ರಸ್ತೆಯಲ್ಲಿರುವ ಕಟ್ಟಡ ಮತ್ತು ಸಾಕಷ್ಟು ರೋಸ್​ವುಡ್​ನಿಂದ ತಯಾರಿಸಿದ ಪೀಠೋಪಕರಣ ಸೇರಿ ಅನೇಕ ವಸ್ತುಗಳನ್ನು ಇಡಿ ವಶಕ್ಕೆ ಪಡೆದಿದೆ.
10. ಕೆರಿಬಿಯನ್ನರ ನಾಡಲ್ಲಿ ಮೆರೆದ ಭಾರತೀಯ ವನಿತೆಯರು; 5-0 ಅಂತರದಿಂದ ಟಿ-20 ಸರಣಿ ವೈಟ್​ವಾಶ್

ಕೆರಿಬಿಯನ್ ಪ್ರವಾಸ ಬೆಳೆಸಿದ ಭಾರತೀಯ ವನಿತೆಯರು ಭರ್ಜರಿ ಆಟ ಪ್ರದರ್ಶಿಸಿ ವೆಸ್ಟ್​ ಇಂಡೀಸ್​ಗೆ ಶಾಕ್ ನೀಡಿದ್ದಾರೆ. ಏಕದಿನ ಸರಣಿಯನ್ನು 2-1 ರಿಂದ ವಶ ಪಡಿಸಿಕೊಂಡ ಭಾರತ, ಸದ್ಯ ಟಿ-20 ಸರಣಿಯನ್ನೂ 5-0 ಯಿಂದ ವೈಟ್​​ವಾಶ್ ಮಾಡಿ ಮೆರೆದಿದೆ.
ನಿನ್ನೆ ನಡೆದ ಅಂತಿಮ ಐದನೇ ಟಿ-20 ಪಂದ್ಯದಲ್ಲಿ ಭಾರತದ ಮಹಿಳೆಯರು 61 ರನ್​ಗಳ ಭರ್ಜರಿ ಜಯ ಸಾಧಿಸಿದರು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಆರಂಭದಲ್ಲೇ ಶಫಾಲಿ ವರ್ಮಾ(9) ಹಾಗೂ ನಾಯಕಿ ಸ್ಮೃತಿ ಮಂದಾನ(7) ವಿಕೆಟ್ ಕಳೆದುಕೊಂಡಿತು.
First published: November 21, 2019, 6:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading