Evening Digest: ಡಿಸೆಂಬರ್​ 22ರ ಟಾಪ್​ 10 ಸುದ್ದಿಗಳು ಇಲ್ಲಿವೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1. ಜೆಟ್​ ಏರ್​ವೇಸ್​ ವಿರುದ್ಧ ಸಂಸದೆ ಪ್ರಜ್ಞಾ ಠಾಕೂರ್ ದೂರು; ಮಾಲೆಗಾಂವ್ ಸ್ಫೋಟ ಆರೋಪಿ ಎಂದು ಉಲ್ಲೇಖಿಸಿ ಉತ್ತರಿಸಿದ ಸಂಸ್ಥೆ

ದೆಹಲಿ-ಭೋಪಾಲ್ ವಿಮಾನದಲ್ಲಿ ಪ್ರಯಾಣಿಸಲು ಗಾಲಿ ಕುರ್ಚಿಯಲ್ಲಿ ಆಗಮಿಸಿದ್ದ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ವಿಮಾನದ ಸಿಬ್ಬಂದಿ ಎಷ್ಟು ಕೇಳಿಕೊಂಡರೂ ತುರ್ತು ರಹಿತ ಆಸನಕ್ಕೆ ತೆರಳದೆ ಇದ್ದ ಕಾರಣ ವಿಮಾನ ಹೊರಡುವುದು ತಡವಾಯಿತು ಎಂದು ಭಾನುವಾರ ಜೆಟ್ ಏರ್ವೇಸ್ ಸ್ಪಷ್ಟಪಡಿಸಿದೆ. ಠಾಕೂರ್ ವಿಮಾನಕ್ಕೆ ಆಗಮಿಸುತ್ತಿದ್ದಂತೆ ಕೆಲವು ಪ್ರಯಾಣಿಕರು ಅವರನ್ನು ತುರ್ತು ಆಸನದ ಸಾಲಿನಿಂದ ತುರ್ತುರಹಿತ ಸಾಲಿಗೆ ಬದಲಾಯಿಸುವಂತೆ ವಿನಂತಿಸಿದರೆ, ಇನ್ನೂ ಕೆಲವು ಪ್ರಯಾಣಿಕರು ಠಾಕೂರ್ ಆಸನವನ್ನು ಬದಲಾಯಿಸಲು ನಿರಾಕರಿಸುತ್ತಿರುವುದರಿಂದ ಅವರನ್ನು ಕೆಳಗೆ ಇಳಿಸುವಂತೆ ವಿಮಾನ ಸಿಬ್ಬಂದಿಯನ್ನು ವಿನಂತಿಸಿದ್ದಾರೆ ಎಂದು ವಿಮಾನಯಾನ ವಕ್ತಾರರು ತಿಳಿಸಿದ್ದಾರೆ.

2. ‘ಸಿಎಎ’ ಜಾರಿಗೆ ಬಂದದ್ದು ತಪ್ಪು ಎಂಬ ಜನರನ್ನು ದೂರವಿಡಿ; ಪ್ರಧಾನಿ ನರೇಂದ್ರ ಮೋದಿ ಕರೆ

ದೇಶದ ಒಳಿತಿಗಾಗಿ ‘ಪೌರತ್ವ ತಿದ್ದುಪಡಿ ಕಾಯ್ದೆ’ಯನ್ನು ಜಾರಿಗೆ ತರಲಾಗಿದೆ. ಹೀಗಾಗಿ ಸಿಎಎ ಜಾರಿಗೆ ಬಂದದ್ದು ತಪ್ಪು ಎಂಬ ಜನರನ್ನು ದೂರವಿಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಇಂದು ದೆಹಲಿಯ ರಾಮ್​ಲೀಲಾ ಮೈದಾನದಲ್ಲಿ ನಡೆದ ಬಿಜೆಪಿ ಪಕ್ಷದ ರ್ಯಾಲಿಯಲ್ಲಿ ಮಾತನಾಡಿದ ಅವರು, “ದೇಶದ ಭವಿಷ್ಯದ ದೃಷ್ಟಿಯಿಂದ ನಾವು ಸಿಎಎ ಅನ್ನು ಜಾರಿಗೆ ತಂದಿದ್ದೇವೆ. ಇಷ್ಟು ವರ್ಷ ಕಾಂಗ್ರೆಸ್ ಪಕ್ಷದವರಿಂದ ಆಗದ ಕೆಲಸವನ್ನು ನಾವು ಮಾಡಿದ್ದೇವೆ. ಈ ಕಾಯ್ದೆ ಲಕ್ಷಾಂತರ ಜನ ಹೊಸ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ.

3. ಸಿಎಎ ಮತ್ತು ಎನ್​​ಆರ್​ಸಿ ತಡೆಯುವುದು ಹೇಗೆ?; ಎರಡು ದಾರಿಗಳು ಬಿಚ್ಚಿಟ್ಟ ಪ್ರಶಾಂತ್​​ ಕಿಶೋರ್​​

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟ ಮುಂದುವರೆದಿದೆ. ಇಂದು ಬೆಳಗ್ಗೆ ಈ ಸಂಬಂಧ ಟ್ವೀಟ್​​ ಮಾಡಿರುವ ಖ್ಯಾತ ರಾಜಕೀಯ ತಜ್ಞ ಪ್ರಶಾಂತ್​ ಕಿಶೋರ್​​, ಸಿಎಎ ಮತ್ತು ಎನ್​​ಆರ್​ಸಿ ತಡೆಯಲು ಎರಡು ದಾರಿಗಳಿವೆ. ಮೊದಲನೆಯದು ಶಾಂತಿಯುತವಾಗಿ ಪೌರತ್ವ ಕಾಯ್ದೆ ವಿರುದ್ಧ ಹೋರಾಟ ಮುಂದುವರೆಸುವುದು. ಎರಡನೇಯದು ಕನಿಷ್ಠ 16 ರಾಜ್ಯಗಳ ಮುಖ್ಯಮಂತ್ರಿಗಳು ಯಾವುದೇ ಕಾರಣಕ್ಕೂ ನಾವು ಪೌರತ್ವ ಕಾಯ್ದೆ ಅನುಷ್ಠಾನಗೊಳಿಸುವುದಿಲ್ಲ ಎಂದು ತೀರ್ಮಾನ ತೆಗೆದುಕೊಳ್ಳುವುದು. ಹೀಗೆ ಒಟ್ಟಾಗಿ ಕೇಂದ್ರ ಸರ್ಕಾರದ ವಿರುದ್ಧ ಒಂದು ನಿಲುವು ತಾಳಿದರೆ ನಾವು ಪೌರತ್ವ ಕಾಯ್ದೆ ಅನುಷ್ಠಾನ ತಡೆಯಬಹುದು ಎಂದು ಟ್ವೀಟ್​​ನಲ್ಲಿ ಉಲ್ಲೇಖ ಮಾಡಿದ್ದಾರೆ.

4.ಬ್ಯಾಂಕ್‌ ಖಾತೆ ತೆರೆಯಲು ಧರ್ಮ ಉಲ್ಲೇಖದ ಅಗತ್ಯವಿಲ್ಲ: ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟನೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟ ಮುಂದುವರೆದಿದೆ. ಈ ಮಧ್ಯೆಯೇ ಪೌರತ್ವ ತಿದ್ದುಪಡಿ ಕಾಯ್ದೆ ಸಂಬಂಧ ದೇಶಾದ್ಯಂತ ಹಲವಾರು ವದಂತಿಗಳು ಹರಡುತ್ತಿವೆ. ಇದರ ಪೈಕಿ  ಪ್ರತಿಯೊಂದಕ್ಕೂ ಜಾತಿ/ಧರ್ಮ ನಮೂದಿಸಬೇಕಾದ ಅಗತ್ಯವಿದೆ ಎಂಬ ವದಂತಿ ಮಾತ್ರ ಭಾರೀ ವೈರಲ್​​ ಆಗಿದೆ.  ಹೌದು, ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಲು ಜಾತಿ/ಧರ್ಮದ ಹೆಸರು ಕಡ್ಡಾಯ ನಮೂದಿಸಲೇಬೇಕು ಎಂಬ ವದಂತಿ ಹರಿದಾಡುತ್ತಿತ್ತು. ಈ ಬೆನ್ನಲ್ಲೇ ಎಚ್ಚೆತ್ತ ಕೇಂದ್ರ ಹಣಕಾಸು ಸಚಿವಾಲಯ ಟ್ವೀಟ್​ ಮೂಲಕ ಸ್ಪಷ್ಟನೆ ನೀಡಿದೆ. ಈ ಸಂಬಂಧ ಟ್ವೀಟ್‌ ಮಾಡಿರುವ ಹಣಕಾಸು ಸಚಿವಾಲಯದ ಕಾರ್ಯದರ್ಶಿ ರಾಜೀವ್‌ ಕುಮಾರ್‌, ಇಂಥಹ ಯಾವುದೇ ವದಂತಿಗಳಿಗೆ ಜನ ಕಿವಿಗೊಡಬೇಡಿ. ಬ್ಯಾಂಕ್‌ಗಳು ಇದುವರೆಗೂ ಇಂತಹ ಯಾವುದೇ ಸೂಚನೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ಧಾರೆ.

5.ಪೌರತ್ವ ಕಾಯ್ದೆಯಿಂದ ಮುಸ್ಲಿಮರಿಗೆ ಹೇಗೆ ತೊಂದರೆಯಾಗಲು ಸಾಧ್ಯ?: ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಗೆ ಸಿಎಂ ಪ್ರಶ್ನೆ

ರಾಷ್ಟ್ರೀಯ ನಾಗರಿಕ ನೋಂದಣಿ ಮತ್ತು ಪೌರತ್ವ ಕಾಯ್ದೆಯಿಂದ ಮುಸ್ಲಿಮರಿಗೆ ಹೇಗೆ ತೊಂದರೆಯಾಗಲು ಸಾಧ್ಯ? ಎಂದು ಸಿಎಂ ಬಿ.ಎಸ್​​ ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್​​.ಡಿ ಕುಮಾರಸ್ವಾಮಿಯವರಿಗೆ ಪ್ರಶ್ನಿಸಿದ್ಧಾರೆ. ಸಿಎಎ ಮತ್ತು ಎನ್​​ಆರ್​​ಸಿ ಎಂದರೇನು? ಇದರಿಂದ ಮುಸ್ಲಿಮರಿಗೆ ಹೇಗೆ ತೊಂದರೆಯಾಗಲಿದೆ? ಎಂಬುದನ್ನು ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ವಿವರಿಸಲಿ. ನಾನು ಮುಸ್ಲಿಂ ಧಾರ್ಮಿಕ ಗುರುಗಳೊಂದಿಗೆ ಈ ಬಗ್ಗೆ ಚರ್ಚಿಸಿದ್ದೇನೆ. ಇಲ್ಲಿಯವರೆಗೂ ಯಾವುದೇ ಧಾರ್ಮಿಕ ಗುರು ಇದರಿಂದ ಮುಸ್ಲಿಮರಿಗೆ ತೊಂದರೆ ಇದೆ ಎಂದು ಹೇಳಲಿಲ್ಲ ಎಂದು ಸಿಎಂ ಬಿ.ಎಸ್​​ ಯಡಿಯೂರಪ್ಪ ಪೌರತ್ವ ಕಾಯ್ದೆಯನ್ನು ಸಮರ್ಥಿಸಿಕೊಂಡರು.

6. ಯಡಿಯೂರಪ್ಪನವರಿಗೆ ಕನಿಷ್ಟ ಸೌಜನ್ಯ ಮಾನವೀಯತೆ ಇಲ್ಲ, ಇವರದ್ದೊಂದು ಸ್ಯಾಡಿಸ್ಟ್​ ಸರ್ಕಾರ; ಕುಮಾರಸ್ವಾಮಿ ಕಿಡಿ

ರಾಜ್ಯದ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರಿಗೆ ಕನಿಷ್ಟ ಸೌಜನ್ಯ ಇಲ್ಲ. ಪೊಲೀಸ್​ ಗೋಲಿಬಾರ್​ಗೆ ಬಲಿಯಾದವರ ಕುರಿತು ಮಾತನಾಡುವಾಗ ಮುಖದಲ್ಲಿ ಕೊಂಚವೂ ಮಾನವೀಯತೆ ಇಲ್ಲ. ಇವರದ್ದೊಂದು ಸ್ಯಾಡಿಸ್ಟ್​ ಸರ್ಕಾರ ಎಂದು ಬಿಜೆಪಿ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಇಂದು ಮಂಗಳೂರಿಗೆ ಭೇಟಿ ನೀಡಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ಕುಮಾರಸ್ವಾಮಿ, “ಮೃತ ಜಲೀಲ್​ ಎಂಬುವವರು ಮಕ್ಕಳನ್ನು ಬಿಟ್ಟು ಮನೆಯಿಂದ ಹೊರಬಂದಾಗ ಪೊಲೀಸರು ಗುಂಡು ಹಾರಿಸಿದ್ದಾರೆ. ಮೃತನ ಮಕ್ಕಳು ಇಲ್ಲೇ ಇದ್ದಾರೆ ಈಗ ಆ ಮಕ್ಕಳ ಭವಿಷ್ಯವೇನು? ಇನ್ನೊಬ್ಬ ಶಿವಮೊಗ್ಗದ ಹುಡುಗ ವಿದ್ಯಾರ್ಥಿ ವೇತನಕ್ಕಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದಾನೆ ಆತನ ಮೇಲೂ ಪೊಲೀಸರು ಗುಂಡು ಹಾರಿಸಿದ್ದಾರೆ.

7. ಎದೆ ಸೀಳಿದರೆ ನಾಲ್ಕು ಅಕ್ಷರ ಇಲ್ಲದವರೂ ಬಂದು ಪ್ರತಿಭಟನೆ ಮಾಡ್ತಾರೆ; ತೇಜಸ್ವಿ ಸೂರ್ಯ ವಿವಾದಾತ್ಮಕ ಹೇಳಿಕೆ

ಎದೆ ಸೀಳಿದರೆ ನಾಲ್ಕು ಅಕ್ಷರ ಇಲ್ಲದವರು ಕೂಡ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಪಂಕ್ಚರ್ ಹಾಕುವವರು ಬಂದು ಪ್ರತಿಭಟನೆ ಮಾಡುತ್ತಾರೆ ಎನ್ನುವ ಮೂಲಕ ಸಂಸದ ತೇಜಸ್ವಿ ಸೂರ್ಯ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ಇಂದು ಟೌನ್​ಹಾಲ್ ಮುಂದೆ ಜನಜಾಗೃತಿ ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ಮಾತನಾಡಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಇಲ್ಲಿ ಯಾರೂ ಯಾರನ್ನೂ ಕರೆದಿಲ್ಲ. ಎಲ್ಲರೂ ಸ್ವ ಇಚ್ಛೆಯಿಂದ ಬಂದಿದ್ದಾರೆ. ಪೌರತ್ವಕ್ಕೆ ಎಷ್ಟು ಬೆಂಬಲ ಇದೆ ಎಂಬುದಕ್ಕೆ ಇದೇ ಸಾಕ್ಷಿ ಎಂದಿದ್ದಾರೆ. ಎದೆ ಸೀಳಿದರೆ ಎರಡಕ್ಷರ ಇಲ್ಲದವರು ಬಂದು ಸಿಎಎ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಪಂಕ್ಚರ್ ಹಾಕೋರು ಬಂದು ಪ್ರತಿಭಟನೆ ಮಾಡುತ್ತಾರೆ ಎಂದು ಸಂಸದ ತೇಜಸ್ವಿ ಸೂರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

8. ಟೌನ್​ಹಾಲ್​ನಲ್ಲಿ ಪ್ರತಿಭಟನೆ ಮಾಡಿದವರು ಲದ್ದಿ ಜೀವಿಗಳು; ವಿವಾದಾತ್ಮಕ ಹೇಳಿಕೆ ನೀಡಿದ ಚಕ್ರವರ್ತಿ ಸೂಲಿಬೆಲೆ

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಬೆಂಗಳೂರಿನ ಟೌನ್​ ಹಾಲ್​ ಎದುರು ಭಾರೀ ಪ್ರತಿಭಟನೆ ನಡೆದಿದ್ದವು. ಇದಕ್ಕೆ ಪ್ರತಿಕ್ರಿಯಿಸಿರುವ ಚಿಂತಕ ಚಕ್ರವರ್ತಿ ಸೂಲಿಬೆಲೆ, ಟೌನ್​ಹಾಲ್​ನಲ್ಲಿ ಪ್ರತಿಭಟನೆ ಮಾಡಿದವರು ಲದ್ದಿ ಜೀವಿಗಳು ಎಂದು ಅಣುಕಿಸುವ ಮೂಲಕ ವಿವಾದ ಮೈಗೆಳೆದುಕೊಂಡಿದ್ದಾರೆ.  “ಯಾರ್ ಯಾರು ಕಲ್ಲು ಎಸೆಯುತ್ತಾರೋ, ಪ್ರತಿಭಟನೆ ಮಾಡುತ್ತಾರೋ ಮಾಡಲಿ. ಪ್ರಧಾನಿ ನರೇಂದ್ರ ಮೋದಿ ಪಿಒಕೆಯಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಿ ನಮ್ಮನ್ನು ರಕ್ಷಿಸುತ್ತಾ ಇದ್ದಾರೆ. ಇಡೀ ಬೆಂಗಳೂರಿನಲ್ಲಿ ಟೌನ್​​ಹಾಲ್ ಬಿಟ್ಟರೆ ಎಲ್ಲೂ ಪ್ರತಿಭಟನೆ ನಡೆಯುತ್ತಿಲ್ಲ. ಇಲ್ಲಿ ಪ್ರತಿಭಟನೆ ಮಾಡಿದವರು ಲದ್ದಿ ಜೀವಿಗಳು,” ಎಂದರು.
 9. ನೌಕಾ ಸಪ್ತಾಹ: ಕಾರವಾರದಲ್ಲಿ ವಿಕ್ರಮಾದಿತ್ಯಾ ಯುದ್ದ ನೌಕೆ ವೀಕ್ಷಣೆಗೆ ಅವಕಾಶ; ಭಾರೀ ಜನಸ್ತೋಮ

ಇಂದು ನೌಕಾ ಸಪ್ತಾಹದ ಅಂಗವಾಗಿ ದೇಶದ ಅತಿದೊಡ್ಡ ಯುದ್ದ ನೌಕೆ ಐಎನ್​​ಎಸ್​​ ವಿಕ್ರಮಾದಿತ್ಯಾ ಯುದ್ದ ನೌಕೆ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಯಿತು. ಕಾರವಾರದ ಅರ್ಗಾ ಕದಂಬ‌ ನೌಕಾನೆಯಲ್ಲಿ ವಿಕ್ರಮಾದಿತ್ಯ ಯುದ್ದ ನೌಕೆಯನ್ನು ಮುಂಜಾನೆಯಿಂದಲೇ ಜಿಲ್ಲೆಯ ವಿವಿಧ ಮೂಲೆಗಳಿಂದ ಬಂದಿದ್ದ ಜನ ವೀಕ್ಷಿಸಿದರು. ಇನ್ನು ಜಿಲ್ಲೆಯಿಂದಷ್ಟಲ್ಲದೇ ನೆರೆಯ ಗೋವಾ ಮಹಾರಾಷ್ಟ್ರ ರಾಜ್ಯದಿಂದಲೂ ವಿಕ್ರಮಾದಿತ್ಯ ವೀಕ್ಷಣೆಗೆ ಜನ‌ ಆಗಮಿಸಿದ್ದರು. ಕೇವಲ ವಿಕ್ರಮಾದಿತ್ಯ ಯುದ್ದ ನೌಕೆಯ‌ ಹೆಸರು ಮಾತ್ರ ಕೇಳುತ್ತಿದ್ದ ಜನ‌ ಮೊದಲ ಬಾರಿಗೆ ದೈತ್ಯ ಯುದ್ದ ನೌಕೆ‌ ನೋಡಿ ಕಣ್ತುಂಬಿಸಿಕೊಂಡರು. ಮೊದಲ ಬಾರಿಗೆ ಯುದ್ದ ನೌಕೆ‌ನೋಡಿದ ಜನರ ಖುಷಿಗೆ ಪಾರವೇ ಇರಲಿಲ್ಲ. ಸಾರ್ವಜನಿಕರ ವೀಕ್ಷಣೆಗೆ ನಿಷೇಧ ವಿರುವ ನೌಕಾನೆಲೆಯಲ್ಲಿ ಸಾರ್ವಜನಿಕರಿಗೆ ಗುರುತಿನ ಚೀಟಿ ನೀಡಿ ಮುಕ್ತ ಅವಕಾಶ ನೀಡಲಾಗಿತ್ತು.


10. ಭಾರತಕ್ಕೆ 316 ರನ್​ಗಳ ಟಾರ್ಗೆಟ್ಕಟಕ್​ನ ಬಾರಬತಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ- ವೆಸ್ಟ್ ಇಂಡೀಸ್ ಮೂರನೇ ಏಕದಿನ ಪಂದ್ಯದಲ್ಲಿ ಕೆರಿಬಿಯನ್ನರು ಉತ್ತಮ ಮೊತ್ತ ಕಲೆಹಾಕಿದ್ದಾರೆ. ಕೀರೊನ್ ಪೊಲಾರ್ಡ್ ಹಾಗೂ ನಿಕೋಲಸ್ ಪೂರನ್ ಅರ್ಧಶತಕದ ನೆರವಿನಿಂದ ಭಾರತಕ್ಕೆ ಗೆಲ್ಲಲು 316 ರನ್ಗಳ ಟಾರ್ಗೆಟ್ ನೀಡಿದೆ. ಪೊಲಾರ್ಡ್ 51 ಎಸೆತಗಳಲ್ಲಿ 3 ಬೌಂಡರಿ, 7 ಸಿಕ್ಸರ್ ಸಿಡಿಸಿ ಅಜೇಯ 74 ರನ್ ಗಳಿಸಿದರೆ, ಪೂರನ್ ಕೇವಲ 63 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ ಸಿಡಿಸಿ 89 ರನ್ ಚಚ್ಚಿದರು. ವೆಸ್ಟ್ ಇಂಡೀಸ್ 50 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 315 ರನ್ ಕಲೆಹಾಕಿದೆ.

Published by:Latha CG
First published: