Evening Digest: ಈ ದಿನದ ಪ್ರಮುಖ ಹತ್ತು ಸುದ್ದಿಗಳು ಇಲ್ಲಿವೆ

Latha CG | news18
Updated:July 4, 2019, 5:45 PM IST
Evening Digest: ಈ ದಿನದ ಪ್ರಮುಖ ಹತ್ತು ಸುದ್ದಿಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ
  • News18
  • Last Updated: July 4, 2019, 5:45 PM IST
  • Share this:
1. ಪ್ರಸಕ್ತ ಸಾಲಿನ ಜಿಡಿಪಿ ದರ ಶೇ 7ರಷ್ಟು ಹೆಚ್ಚಾಗುವ ನಿರೀಕ್ಷೆ; ನಿರ್ಮಲಾ ಸೀತಾರಾಮನ್

ಪ್ರಸಕ್ತ ಸಾಲಿನ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ದರ ಶೇ.7ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ತಿಳಿಸಿದ್ದಾರೆ. ರಾಜ್ಯಸಭೆಯಲ್ಲಿ ಇಂದು 2019  ಆರ್ಥಿಕ ಸಮೀಕ್ಷೆ ಮಂಡಿಸಿ ಮಾತನಾಡಿದ ಅವರು, ಈ ವರ್ಷ ಜಿಎಸ್​ಟಿ ಕುಸಿತ ಸಾಧ್ಯತೆ ಇದ್ದು,  2019- 2020ರ ಆರ್ಥಿಕ ವರ್ಷದಲ್ಲಿ ಜಿಡಿಪಿ ದರ ಶೇ 7ರಷ್ಟು ಹೆಚ್ಚಾಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2018-19ರಲ್ಲಿ ವಿತ್ತೀಯ ಕೊರತೆ ಶೇ 5.8 ರಷ್ಟಿದ್ದು, 2017-18ರಲ್ಲಿ ಶೇ 6.4ರಷ್ಟಿತ್ತು ವಿತ್ತೀಯ ಕೊರತೆ ಪರಿಷ್ಕೃತ ಆಯವ್ಯಯದಲ್ಲಿ 3.4ರಷ್ಟು ಹೆಚ್ಚಾಗುವ ನಿರೀಕ್ಷೆ ಇದ್ದು ಇದು ಸರ್ಕಾರದ ಕಳವಳಕ್ಕೆ ಕಾರಣವಾಗಿದೆ ಎಂದು ಅವರು ತಿಳಿಸಿದರು.

2. ಸಿದ್ಧಾಂತಗಳ ನಡುವಿನ ಹೋರಾಟ ನಿರಂತರ, ರೈತ-ಬಡವರ ಪರ ನನ್ನ ನಿಲುವು; ರಾಹುಲ್​ ಗಾಂಧಿ!

ಮಾನಹಾನಿ ಪ್ರಕರಣದ ಸಂಬಂಧ ಮುಂಬೈ ಕೋರ್ಟ್​ ಮುಂದೆ ಹಾಜರಾದ ರಾಹುಲ್​ ಗಾಂಧಿ ತಪ್ಪಿತಸ್ಥರಲ್ಲ ಎಂದು ನ್ಯಾಯಾಲಯ ತಿಳಿಸಿದ್ದು,  ಅವರನ್ನು ಆರೋಪ ಮುಕ್ತಗೊಳಿಸಲಾಗಿದೆ. ಪ್ರಕರಣ ಸಂಬಂಧ ಸಮನ್ಸ್​ ಜಾರಿಯಾದ ಹಿನ್ನೆಲೆ ವಿಚಾರಣೆಗಾಗಿ ಅವರು ಇಂದು ನ್ಯಾಯಾಲಯಕ್ಕೆ ಹಾಜರಾದರು.  ವಿಚಾರಣೆ ನಡೆಸಿದ ನ್ಯಾಯಾಲಯ, 15 ಸಾವಿರ ಶ್ಯೂರಿಟಿ ಹಣವನ್ನಿಟ್ಟು ಜಾಮೀನು ಪಡೆಯಬಹುದು ಎಂದು ತಿಳಿಸಿದೆ.  "ಇದು ಸಿದ್ಧಾಂತಗಳ ನಡುವಿನ ಹೋರಾಟ. ನಾನು ರೈತ ಹಾಗೂ ಬಡವರ ಪರವಾಗಿ ನಿಂತಿದ್ದೇನೆ. ನನ್ನ ಮೇಲೆ ದಾಳಿ ನಡೆಯುತ್ತಿದ್ದು, ಇದನ್ನು ನಾನು ಸಂತೋಷದಿಂದ ಸ್ವೀಕರಿಸುತ್ತಿದ್ದೇನೆ. ನನ್ನ ಹೋರಾಟ ಮುಂದುವರಿಯಲಿದೆ, ಕಳೆದ ಐದು ವರ್ಷಗಳಲ್ಲಿ 10 ಪಟ್ಟು ಕಠಿಣವಾಗಿ ನಾನು ಹೋರಾಟ ಮಾಡಿದ್ದೇನೆ" ಎಂದರು.

3. ಮಹಾರಾಷ್ಟ್ರದಲ್ಲಿ ಒಡೆದ ತಿವಾರೆ ಡ್ಯಾಂ; ಮೃತಪಟ್ಟವರ ಸಂಖ್ಯೆ 23ಕ್ಕೆ ಏರಿಕೆ

ಮಹಾರಾಷ್ಟ್ರದ ರತ್ನಗಿರಿಯಲ್ಲಿ ನಿನ್ನೆ ಭಾರೀ ಮಳೆಯಿಂದಾಗಿ ತಿವಾರೆ ಡ್ಯಾಂ ಒಡೆದು 12 ಮನೆಗಳು ಕೊಚ್ಚಿಹೋಗಿದ್ದವು. ಘಟನೆಯಲ್ಲಿ ಸತ್ತವರ ಸಂಖ್ಯೆ 23ಕ್ಕೇರಿದ್ದು, ಇನ್ನೂ ಅನೇಕ ಜನರು ನಾಪತ್ತೆಯಾಗಿದ್ದಾರೆ. ಅವರ ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಮಹಾರಾಷ್ಟ್ರ ಕೊಂಕಣ ಭಾಗದಲ್ಲಿ ಈ ಘಟನೆ ನಡೆದಿದ್ದು, ಭಾರೀ ಮಳೆಯಿಂದ ಪ್ರವಾಹವುಂಟಾಗಿ ಡ್ಯಾಂನಲ್ಲಿ ಬಿರುಕು ಮೂಡಿತ್ತು. ರತ್ನಗಿರಿ ಜಿಲ್ಲೆಯ ಚಿಪ್ಲುನ್ ತಾಲೂಕಿನಲ್ಲಿರುವ ತಿವಾರೆ ಅಣೆಕಟ್ಟು 20 ಲಕ್ಷ ಕ್ಯೂಬಿಕ್  ಮೀಟರ್​ ವಿಸ್ತೀರ್ಣ ಹೊಂದಿದೆ. ಇದುವರೆಗೂ 11 ಮೃತದೇಹಗಳು ಪತ್ತೆಯಾಗಿದ್ದು, ಒಟ್ಟು 23 ಜನ ಮೃತಪಟ್ಟಿದ್ದಾರೆ.

4. ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಯಲ್ಲಿ ಬ್ಯಾಂಕಿಂಗ್​ ಪರೀಕ್ಷೆ ಬರೆಯಲು ಕೇಂದ್ರದಿಂದ ಅನುಮತಿಇನ್ಮುಂದೆ ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಯಲ್ಲಿ ಬ್ಯಾಂಕಿಂಗ್​ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ತಿಳಿಸಿದ್ದಾರೆ. ಈ ಮೂಲಕ ಕನ್ನಡಿಗರ ಬಹುದಿನದ ಬೇಡಿಕೆಗೆ ಮನ್ನಣೆ ಸಿಕ್ಕಿದೆ.
ಲೋಕಸಭೆಯಲ್ಲಿ ಈ ಕುರಿತು ವಿಷಯ ಮಂಡಿಸಿದ ಅವರು, ಐಬಿಪಿಎಸ್​ ನಡೆಸುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್​ ಪರೀಕ್ಷೆಗಳನ್ನು ಇಂಗ್ಲಿಷ್​ ಮತ್ತು ಹಿಂದಿ ಭಾಷೆಯಲ್ಲಿ ನಡೆಸಲಾಗುತ್ತಿತ್ತು. ಈ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಕೂಡ ನಡೆಸುವಂತೆ ಬೇಡಿಕೆ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗುವುದು ಎಂದು ಘೋಷಿಸಿದರು.

5. ಮುಂಬೈ ದಾಳಿ ಸಂಚುಕೋರ ಹಫೀಜ್ ಸಯೀದ್ ವಿರುದ್ಧ 23 ಪ್ರಕರಣ ದಾಖಲಿಸಿದ ಪಾಕಿಸ್ತಾನ!

ಮುಂಬೈ ದಾಳಿಯ ಸಂಚುಕೋರ ಹಫೀಜ್​ ಸಯೀದ್​ ವಿರುದ್ಧ ಕ್ರಮ ಕೈಗೊಳ್ಳಲು ಪಾಕಿಸ್ತಾನ ಮುಂದಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಿದ್ದರಿಂದ ಪಾಕ್​ ಈ ನಿರ್ಧಾರಕ್ಕೆ ಬಂದಿದೆ. 2008ರ ಮುಂಬೈ ದಾಳಿಯಲ್ಲಿ 166 ಜನರು ಮೃತಪಟ್ಟಿದ್ದರು. ಈ ದಾಳಿಯ ಹಿಂದೆ ಲಷ್ಕರ್​ ಇ ತೊಯ್ಬಾ ಉಗ್ರ ಸಂಘಟನೆಯ ಕೈವಾಡವಿದೆ ಎಂದು ಭಾರತ ಹಾಗೂ ಅಮೆರಿಕ ಆರೋಪಿಸಿತ್ತು. ಈ ಸಂಘಟನೆಗೆ ಆರ್ಥಿಕ ಸಹಾಯ ಒದಗಿಸಲು ಐದು ಟ್ರಸ್ಟ್​ಗಳನ್ನು ಬಳಕೆ ಮಾಡಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಭಯೋತ್ಪಾದನ ನಿಗ್ರಹ ದಳ ಹಫೀಜ್​ ಹಾಗೂ ಆತನ 12 ಸಹಚರರ ವಿರುದ್ಧ 23 ಪ್ರಕರಣಗಳನ್ನು ದಾಖಲಿಸಿದೆ. ಈಗಾಗಲೇ ನಿಷೇಧಕ್ಕೊಳಗಾಗಿರುವ ಜಮಾತ್​ ಉದ್​ ದವಾ ಹಾಗೂ ಫಲಾಹ್​ ಇ ಇನ್ಸಾನಿಯತ್​ ಫೌಂಡೇಶನ್​ ವಿರುದ್ಧವೂ ಕ್ರಮ ಕೈಗೊಳ್ಳುತ್ತಿರುವುದಾಗಿ ಪಾಕ್​ ಅಧಿಕಾರಿಗಳು ತಿಳಿಸಿದ್ದಾರೆ.

6. ಮುಂದಿನ ಚುನಾವಣೆಯಲ್ಲೂ ಮೋದಿ ಅಂದ್ರೆ ಬಾಯಲ್ಲಿ ಬೂಟು ಹಾಕ್ತೀವಿ; ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ!

ಮುಂದಿನ ಲೋಕಸಭಾ ಚುನಾವಣೆಯಲ್ಲೂ ಮೋದಿ ಅಂದ್ರೆ ಬಾಯಲ್ಲಿ ಬೂಟು ಹಾಕ್ತೀವಿ ಎಂದು ಹೇಳುವ ಮೂಲಕ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬುಧವಾರ ರಾತ್ರಿ ಕಲಬುರ್ಗಿಯ ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದಲ್ಲಿ ವಿರಾಟ್ ಹಿಂದೂ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಮೋದ್ ಮುತಾಲಿಕ್, “ಹಿಂದುತ್ವದ ಹೆಸರಿನಲ್ಲಿ ನಾವೆಲ್ಲಾ ಬಿಜೆಪಿಗೆ ಮತ ಹಾಕಿದ್ದೇವೆ. ಪ್ರಧಾನಿ ಮೋದಿಯ ಮುಖವಾಡಕ್ಕೆ, ಗಂಡಸ್ತನಕ್ಕೆ ಹಾಗೂ ಅವರ ಹಿಂದುತ್ವಕ್ಕೆ ಮತ ಹಾಕಿದ್ದೇವೆ. ಮುಂದಿನ ಐದು ವರ್ಷ ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ. ಇಲ್ಲಾಂದ್ರೆ ಬಾಯಲ್ಲಿ ಬೂಟು ಹಾಕ್ತೀವಿ” ಎಂದು ಅವರು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

7. ಜೆಡಿಎಸ್​ನ ನೂತನ​ ರಾಜ್ಯಾಧ್ಯಕ್ಷರಾಗಿ ಹೆಚ್.ಕೆ.ಕುಮಾರಸ್ವಾಮಿ ನೇಮಕ

ಜೆಡಿಎಸ್​ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ಸಕಲೇಶಪುರ ಶಾಸಕ ಹೆಚ್​.ಕೆ. ಕುಮಾರಸ್ವಾಮಿ ಅವರನ್ನು ಇಂದು ನೇಮಕ ಮಾಡಲಾಗಿದೆ. ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಅಧಿಕೃತ ಘೋಷಣೆ ಮಾಡಿದ್ಧಾರೆ. ಇಂದು ಉತ್ತಮ ದಿನ ಎಂಬ ಕಾರಣಕ್ಕೆ ಬೆಳಗ್ಗೆ ಜೆ.ಪಿ. ಭವನದಲ್ಲಿ ನೂತನ ರಾಜ್ಯಾಧ್ಯಕ್ಷರ ಅಧಿಕೃತ ಘೋಷಣೆ ಮಾಡಲಾಯಿತು. ಜೆಡಿಎಸ್​ ಕಾರ್ಯಾಧ್ಯಕ್ಷರಾಗಿ ಮಧು ಬಂಗಾರಪ್ಪ ನೇಮಕವಾಗಿದ್ಧಾರೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದ ಹೆಚ್​. ವಿಶ್ವನಾಥ್​ ಅವರೇ ಹೆಚ್​.ಕೆ. ಕುಮಾರಸ್ವಾಮಿಗೆ ಅಧಿಕಾರ ಹಸ್ತಾಂತರ ಮಾಡಿದ್ಧಾರೆ. ನಿಖಿಲ್​ ಕುಮಾರಸ್ವಾಮಿ ಯುವ ಜೆಡಿಎಸ್​ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

8. ರಾಮನಗರ ಜಿಲ್ಲಾಧ್ಯಕ್ಷ ಎಂ.ಪಿ.ಅಶೋಕ್​ ಕುಮಾರ್​ ರಾಜೀನಾಮೆ

ಒಂದೆಡೆ ಜೆಡಿಎಸ್​ ನೂತನ ರಾಜ್ಯಾಧ್ಯಕ್ಷರಾಗಿ ನೇಮಕ ನೇಮಕ ಗೊಂಡಿರುವ ಸಕಲೇಶಪುರ ಶಾಸಕ ಹೆಚ್​.ಕೆ.ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಲಿದ್ದಾರೆ.  ಇತ್ತ ರಾಮನಗರ ಜಿಲ್ಲಾಧ್ಯಕ್ಷ ಎಂ.ಪಿ. ಅಶೋಕ್​ ಕುಮಾರ್ ತಮ್ಮ ಸ್ಥಾನಕ್ಕೆ​ ರಾಜೀನಾಮೆ ನೀಡಿದ್ದು, ಸಿಎಂ ಎಚ್.ಡಿ ಕುಮಾರಸ್ವಾಮಿ ಅವರಿಗೆ ತವರು ಜಿಲ್ಲೆಯಲ್ಲೇ ಆಘಾತವಾಗಿದೆ. ಅಶೋಕ್​ ಕುಮಾರ್​ ಕಳೆದ ಮೂರು ವರ್ಷಗಳಿಂದ ರಾಮನಗರದ ಜೆಡಿಎಸ್​ ಜಿಲ್ಲಾಧ್ಯಕ್ಷರಾಗಿದ್ದರು. ಜೊತೆಗೆ ಮಾಗಡಿಯ ಮಾಜಿ ಶಾಸಕ ಬಾಲಕೃಷ್ಣ ಅವರೊಂದಿಗೆ ಗುರುತಿಸಿಕೊಂಡಿದ್ದರು. ಈಗ ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ಕೊಟ್ಟಿದ್ಧಾರೆ. ಎಚ್​.ಡಿ.ಕುಮಾರಸ್ವಾಮಿ ಹಾಗೂ ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

9. ಸಕಲೇಶಪುರ ಬಳಿ ಗುಡ್ಡ ಕುಸಿತ; ರೈಲು ಸಂಚಾರದಲ್ಲಿ ವ್ಯತ್ಯಯ

ಚಿಕ್ಕಮಗಳೂರು, ಹಾಸನ ಸೇರಿದಂತೆ ಮಲೆನಾಡಿನ ಹಲವು ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಮುಂಗಾರು ಚುರುಕುಗೊಂಡಿದ್ದು, ಅಲ್ಲಲ್ಲಿ ಕೆಲವು ಅವಘಡಗಳು ಸಹ ಸಂಭವಿಸುತ್ತಿವೆ. ಸಕಲೇಶಪುರ ಶಿರವಾಗಿಲು ಬಳಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದಿದ್ದು, ಮಂಗಳೂರು-ಬೆಂಗಳೂರು ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ.  ಕಾರವಾರದಿಂದ ಬೆಂಗಳೂರಿಗೆ ತೆರಳುತ್ತಿದ್ದ ರೈಲು ಮಾರ್ಗ ಮಧ್ಯೆ ಗುಡ್ಡ ಕುಸಿತವಾಗಿದೆ. ಹೀಗಾಗಿ ಎರಡು ಗಂಟೆ ತಡವಾಗಿ ರೈಲು ಹಾಸನಕ್ಕೆ ಆಗಮಿಸಲಿದೆ ಎನ್ನಲಾಗಿದೆ. ಈಗಾಗಲೇ ಸಿಬ್ಬಂದಿ ರೈಲ್ವೆ ಹಳಿ ಮೇಲಿನ ಮಣ್ಣನ್ನು ತೆರವುಗೊಳಿಸುತ್ತಿದ್ದಾರೆ. ಪಶ್ಚಿಮಘಟ್ಟದಲ್ಲಿ ಭಾರೀ ಮಳೆಯಿಂದಾಗಿ ಗುಡ್ಡ ಕುಸಿದಿದೆ.

10. ವಿಶ್ವಕಪ್​ ಸೆಮಿ ಫೈನಲ್​ಗೂ ಮೊದಲೇ ವಿರಾಟ್​ ಕೊಹ್ಲಿಗೆ ಐಸಿಸಿ ನಿಷೇಧ?; ಸಂಕಷ್ಟದಲ್ಲಿ ಭಾರತ ತಂಡದ ನಾಯಕ

ವಿಶ್ವಕಪ್ 2019ರ ಟೂರ್ನಿಯಲ್ಲಿ ಭಾರತ ಕ್ರಿಕೆಟ್​ ತಂಡವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ವಿರಾಟ್​ ಕೊಹ್ಲಿ ಮೇಲೆ ಐಸಿಸಿ ನಿಷೇಧ ಹೇರಲಿದೆಯೇ? ಹೀಗೊಂದು ಪ್ರಶ್ನೆ ಈಗ ಎಲ್ಲರನ್ನೂ ಕಾಡಿದೆ. ಬಾಂಗ್ಲಾ ವಿರುದ್ಧ ನಡೆದ ಪಂದ್ಯದಲ್ಲಿ ಕೊಹ್ಲಿ ಮಾಡಿಕೊಂಡ ಎಡವಟ್ಟು ಇದಕ್ಕೆ ಕಾರಣ. ಬಾಂಗ್ಲಾ ವಿರುದ್ಧ ನಡೆದ ಪಂದ್ಯದಲ್ಲಿ ಕೊಹ್ಲಿ ತಪ್ಪೊಂದನ್ನು ಎಸಗಿದ್ದರು. ಮೊಹ್ಮದ್​ ಶಮಿ 12ನೇ ಓವರ್​ ಎಸೆಯುವಾಗ ಸೌಮ್ಯ ಸರ್ಕಾರ್​ ಬ್ಯಾಟಿಂಗ್​ ನಿಂತಿದ್ದರು. ಈ ವೇಳೆ ಶಮಿ ಎಸೆದ ಚೆಂಡು ಸೌಮ್ಯ ಸರ್ಕಾರ್​ ಪ್ಯಾಡ್​ಗೆ ತಾಗಿತ್ತು. ಆದರೆ ಅಂಪೈರ್​ ಮಾರಿಯಸ್ ಎರಾಸ್ಮಸ್​ ನಾಟ್​ ಔಟ್​ ಎಂದು ನೀಡಿದ್ದರು. ಈ ವೇಳೆ ಕೊಹ್ಲಿ ಡಿಆರ್​ಎಸ್​ ರಿವ್ಯೂವ್​ ತೆಗೆದುಕೊಂಡಿದ್ದರು. ಈ ವೇಳೆಯೂ ನಾಟ್​ ಔಟ್​ ಎಂಬ ತೀರ್ಪು ಬಂದಿತ್ತು. ಆದರೆ, ಪ್ಯಾಡ್​ಗೆ ಬಾಲ್​ ಮೊದಲು ತಾಗಿತ್ತು ಎಂದು ಭಾವಿಸಿದ್ದ ಕೊಹ್ಲಿ ಅಂಪೈರ್​ಗಳ ಜೊತೆ ವಾಗ್ವಾದ ನಡೆಸಿದ್ದರು. ಇದು ಐಸಿಸಿ ನಿಯಮದ ಅನ್ವಯ ಶಿಕ್ಷಾರ್ಹ ಅಪರಾಧವಾಗಿದ್ದು ಇದರಿಂದ ಅವರಿಗೆ ನಿಷೇಧ ಭೀತಿ ಕಾಡುತ್ತಿದೆ.
First published:July 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ