Evening Digest: ಡಿಕೆಶಿಗೆ ಗರ್ವ ಎಂದ ರಮೇಶ್ ಜಾರಕಿಹೊಳಿ: ಮದುವೆ ಬಗ್ಗೆ ಮುಚ್ಚಿಟ್ರಾ ಸೂರಜ್ ರೇವಣ್ಣ? ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

Evening digest

Evening digest

  • Share this:
ಡಿಕೆಶಿಗೆ ಗರ್ವ ಎಂದ ರಮೇಶ್​ ಜಾರಕಿಹೊಳಿ: ವಿಧಾನ ಪರಿಷತ್​ ಚುನಾವಣೆ (Council Elections)  ಹಿನ್ನೆಲೆಯಲ್ಲಿ ಬೆಳಗಾವಿ ಸ್ವತಂತ್ರ ಅಭ್ಯರ್ಥಿ, ಸೋದರ ಲಖನ್​ ಜಾರಕಿಹೊಳಿ (Lakhan Jarkiholi) ಪರ ಬಿಜೆಪಿಯಲ್ಲಿರುವ ರಮೇಶ್​ ಜಾರಕಿಹೊಳಿ ರಾಯಬಾಗ ಪಟ್ಟಣದಲ್ಲಿ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಪರೋಕ್ಷವಾಗಿ ಕಾಂಗ್ರೆಸ್​ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​​ ವಿರುದ್ಧ ರಮೇಶ್​ ಜಾರಕಿಹೊಳಿ ವಾಗ್ದಾಳಿ ನಡೆಸಿದರು. ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣರಾದವರಿಗೆ ಕಾಂಗ್ರೆಸ್​​ ಟಿಕೆಟ್ ನೀಡಿದೆ ಎಂದು ಹೆಬ್ಬಾಳ್ಕರ ವಿರುದ್ಧ ರಮೇಶ ಗುಡುಗಿದರು. ಲಕ್ಷ್ಮೀ ಹೆಬ್ಬಾಳ್ಕರ್​ ಸೋದರನಿಗೆ ಕಾಂಗ್ರೆಸ್​ ಟಿಕೆಟ್​ ನೀಡಿರುವುದನ್ನು ಟೀಕಿಸಿದರು. ಸಭೆಯಲ್ಲಿ ಹೆಸರು ಹೇಳದೆ ಲಕ್ಷ್ಮೀ ಹೆಬ್ಬಾಳ್ಕರ ಮೇಲೆ ಆರೋಪ ಮಾಡಿದರು. ಯಾರಿಂದ ಸಮ್ಮಿಶ್ರ ಸರ್ಕಾರ ಬಿದ್ದಿದೆ ಅವರ ಮನೆಗೆ ಕಾಂಗ್ರೆಸ್​​ ಟಿಕೆಟ್ ನೀಡಬೇಕಾ? ಕಾಂಗ್ರೆಸ್​​​ ಮತ್ತು ಜೆಡಿಎಸ್ ಸರ್ಕಾರ ಬೀಳಲು ಕಾರಣದವರಿಗೆ ಕೆಪಿಸಿಸಿ ಅಧ್ಯಕ್ಷರು ಟಿಕೆಟ್ ನೀಡುತ್ತಾರೆ ಎಂದರೆ ಎಷ್ಟೊಂದು ಗರ್ವ ಅವರಿಗೆ ಎಂದು ಡಿಕೆ ಶಿವಕುಮಾರ್​​ ವಿರುದ್ಧ ವಾಗ್ದಾಳಿ ನಡೆಸಿದರು.

ಬದಾಮಿಯಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಅಸಮಾಧಾನ 

ವಿಧಾನ ಪರಿಷತ್​ ಚುನಾವಣೆ (MLC Election) ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಇಂದು ಸ್ವಕ್ಷೇತ್ರ ಬದಾಮಿಯಲ್ಲಿ ಪ್ರಚಾರ ನಡೆಸಿದರು. ನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತವಾಯಿತು. ಸಿದ್ದರಾಮಯ್ಯಗಾಗಿ ಕ್ಷೇತ್ರ ಬಿಟ್ಟು ಕೊಟ್ಟ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ (B B Chimmanakatti) ಮಾತಿನಿಂದ ಇಡೀ ಸಭೆ ಗೊಂದಲದ ಗೂಡಾಯಿತು. ಸಿದ್ದರಾಮಯ್ಯ ವರುಣಾ ಬಿಟ್ಟು ಬಂದು ಬದಾಮಿಗೆ (Badami Constituency) ಬಂದು ಸ್ಪಧೆ೯ ಮಾಡಿರೋ ಬಗ್ಗೆ ಚಿಮ್ಮನಕಟ್ಟಿ ಪ್ರಸ್ತಾಪಿಸುತ್ತಲೇ ಸಭೆ ಗೊಂದಲ ಮಯವಾಯಿತು. ವರುಣಾ ಬಿಟ್ಟು ಬಾದಾಮಿಗೆ ಬಂದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಚಿಮ್ಮನಕಟ್ಟಿ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದರು. ವರುಣಾ ಬಿಟ್ಟು ಬದಾಮಿಗೆ ಯಾಕೆ ಬಂದ್ರಿ ಎಂದು ವೇದಿಕೆಯಲ್ಲೇ ಪ್ರಶ್ನಿಸಿದರು. ಈ ಮಾತಿಗೆ ಚಿಮ್ಮನಕಟ್ಟಿ ಬೆಂಬಲಿಗರು ಜೈಕಾರ ಕೂಗಿದರೆ, ಸಿದ್ದರಾಮಯ್ಯ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದರು.

ಸೂರಜ್​ ರೇವಣ್ಣ ಮದುವೆ ದಾಖಲೆ ಗೊಂದಲವೇನು?

ವಿಧಾನ ಪರಿಷತ್​ ಚುನಾವಣೆಗೆ (MLC Election) ಹಾಸನದಿಂದ ಜೆಡಿಎಸ್(JDS)​ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸೂರಜ್​ ರೇವಣ್ಣ (Suraj Revanna) ಅವರ ನಾಮಪತ್ರ ತಿರಸ್ಕರಿಸುವಂತೆ ಹಾಗೂ ಚುನಾವಣೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಹೈಕೋರ್ಟ್(High Court of Karnataka) ನಿರಾಕರಿಸಿದೆ. ಸೂರಜ್ ರೇವಣ್ಣ ಸ್ಪರ್ಧೆ ಪ್ರಶ್ನಿಸಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್​​ ವಜಾ ಮಾಡಿದೆ. ಮದುವೆಯಾಗಿದ್ದರೂ ಪ್ರಮಾಣಪತ್ರದಲ್ಲಿ ಮಾಹಿತಿ ನೀಡಿಲ್ಲ, ಮದುವೆ ವಿವರದಲ್ಲಿ ಅನ್ವಯವಿಲ್ಲ ಎಂದು‌ ನಮೂದಿಸಿದ್ದಾರೆ. ಹೀಗಾಗಿ ಸೂರಜ್ ನಾಮಪತ್ರ ತಿರಸ್ಕಾರ ಮಾಡಬೇಕೆಂದು ಕುಂದೂರು ಗ್ರಾ.ಪಂ ಸದಸ್ಯ ಹರೀಶ್ ಕೆ ಎಲ್ ರಿಟ್​ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಹೈಕೋರ್ಟ್​, ಚುನಾವಣೆ ವೇಳಾಪಟ್ಟಿ ಈಗಾಗಲೇ ಘೋಷಣೆಯಾಗಿದೆ. ಚುನಾವಣೆ ಘೋಷಣೆಯಾದ ಮೇಲೆ‌ ಹಸ್ತಕ್ಷೇಪ ಸಾಧ್ಯವಿಲ್ಲ. ಆಕ್ಷೇಪವಿದ್ದರೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ.

ಅಕ್ಕನ ಕತ್ತು ಸೀಳಿ ಸೆಲ್ಪಿ ತೆಗೆದುಕೊಂಡ ತಮ್ಮ

ಕಳೆದ ಕೆಲವು ವರ್ಷಗಳ ಹಿಂದೆ ಮರಾಠಿಯಲ್ಲಿ ಬಂದಿದ್ದ ಸೈರಾಟ್ (Sairat Movie)​ ಎಂಬ ಸಿನಿಮಾ ಮಹಾರಾಷ್ಟ್ರದಲ್ಲಿ ಮಾತ್ರವಲ್ಲದೇ , ಇಡೀ ದೇಶದಲ್ಲಿ ಸುದ್ದಿಯಾಗಿತ್ತು. ಅನ್ಯ ಜಾತಿ ಯುವಕನನ್ನು ಪ್ರೀತಿಸಿ, ಮನೆ ಬಿಟ್ಟು ಹೋದ ಮಗಳು  ಸುಖ ಸಂಸಾರ ನಡೆಸುತ್ತಿದ್ದರೂ ಆಕೆಯನ್ನು ಹೇಗೆ ಕುಟುಂಬಸ್ಥರು ಕೊಲ್ಲುತ್ತಾರೆ ಎಂಬ ಕಥಾ ಹಂದರವನ್ನು ಈ ಚಿತ್ರ ಹೊಂದಿತ್ತು. ಥೇಟ್​ ಇದೇ ಚಿತ್ರ ಕಥೆಯಂತೆ ಮಹಾರಾಷ್ಟ್ರದ ಔರಾಂಗಬಾದ್​ನಲ್ಲಿ (Aurangabad) ಮರ್ಯಾದಾ ಹತ್ಯೆ (Honor Killing) ಘಟನೆಯೊಂದು ನಡೆದಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಔರಾಂಗಬಾದ್​ನ 19 ವರ್ಷದ ಯುವತಿ ಕೀರ್ತಿ ಎಂಬಾಕೆ ಕಾಲೇಜಿನಲ್ಲಿ ಪರಿಚಯವಾಗಿದ್ದ ಹುಡುಗನನ್ನು ಪ್ರೀತಿಸುತ್ತಿದ್ದಳು. ಮನೆಯವರು ಒಪ್ಪದ ಹಿನ್ನಲೆ ಕಳೆದ ಆರೇಳು ತಿಂಗಳ ಹಿಂದೆ ಹುಡುಗನ ಜೊತೆ ಓಡಿ ಹೋಗಿ ಮದುವೆಯಾಗಿದ್ದಳು. ಅಮ್ಮ-ತಮ್ಮನಿಗೆ ಅಡುಗೆ ಮಾಡಲು ಅಡುಗೆ ಕೋಣೆ ಹೊಕ್ಕ ಮಗಳನ್ನು ಕೊಲ್ಲುವಂತೆ ಮಗನಿಗೆ ಸೂಚನೆ ನೀಡಿದ್ದಾಳೆ. ಈ ವೇಳೆ ಆಕೆಯ ಹಿಂದೆಯೇ ನಡೆದ 17 ವರ್ಷದ ತಮ್ಮ ಅಡುಗೆ ಮಾಡುವಾಗ ಹಿಂದಿನಿಂದ ಹೋಗಿ ಅಕ್ಕನ ಕತ್ತನ್ನು ಚಾಕುವಿನಿಂದ ಸೀಳಿದ್ದಾನೆ. ಆಕೆಯ ಕತ್ತನ್ನು ಕತ್ತರಿಸಿದ ಬಳಿಕ ತಾಯಿಗೆ ತಂದು ಒಪ್ಪಿಸಿ, ಇಬ್ಬರು ಆಕೆಯ ರುಂಡದ ಜೊತೆ ಸೆಲ್ಪಿ ಪಡೆದಿದ್ದಾರೆ.

ಶಾಲಾ ಮಕ್ಕಳೊಂದಿಗೆ ನೀರಜ್ ಜೋಪ್ರಾ ಆಟ

ಗುಜರಾತ್ ರಾಜ್ಯದ ನಗರಿ ಅಹಮದಾಬಾದ್‌ನ ಸಂಸ್ಕಾರಧಾಮ್ ಶಾಲೆಯ ವಿದ್ಯಾರ್ಥಿಗಳೊಂದಿಗೆ ಕೆಲವೊಂದು ಕ್ರೀಡೆಗಳನ್ನು ಆಡುವ ಮೂಲಕ ಮಕ್ಕಳೊಂದಿಗೆ ಸಮಯ ಕಳೆಯುತ್ತಿರುವ ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದಾರೆ. ಮೋದಿಯವರು ಸರಣಿ ಟ್ವೀಟ್‌ಗಳನ್ನು ಮಾಡುವ ಮೂಲಕ ನೀರಜ್ ಚೋಪ್ರಾ ಅವರ ಕ್ರೀಡಾ ಸ್ಫೂರ್ತಿಯನ್ನು ಮೆಚ್ಚಿಕೊಂಡಿದ್ದಾರೆ. ಈ ಸರಣಿ ಟ್ವೀಟ್‌ಗಳು ನಿಮಗೆ ಸಂತೋಷ ನೀಡುವುದು ಖಂಡಿತ. ಈ ಸಂತಸದ ಸಮಯವನ್ನು ಮುಂದುವರಿಸೋಣ ಹಾಗೂ ನಮ್ಮ ಯುವಕರನ್ನು ಕ್ರೀಡಾಂಗಣದಲ್ಲಿ ಮಿಂಚುವಂತೆ ಪ್ರೇರೇಪಿಸೋಣ ಎಂದು ತಿಳಿಸಿ ಟ್ವೀಟ್ ಮಾಡಿದ್ದಾರೆ. ಯುವಕರನ್ನು ಕ್ರೀಡಾ ರಂಗದತ್ತ ಕರೆತರುವ ಹಾಗೂ ಫಿಟ್‌ನೆಸ್‌ನಲ್ಲಿ ಅವರನ್ನು ಪ್ರೇರೇಪಿಸಲು @Neeraj_chopra1 ಅವರಿಂದ ಇದು ಉತ್ತಮ ಉಪಕ್ರಮವಾಗಿದೆ ಎಂದು ಎರಡನೆಯ ಟ್ವೀಟ್ ಬಣ್ಣಿಸಿದ್ದಾರೆ.
Published by:Kavya V
First published: