• Home
 • »
 • News
 • »
 • state
 • »
 • Evening Digest: ಲಾಕ್​ಡೌನ್​ ತೆರವು ಸೇರಿದಂತೆ ದರ್ಶನ್​ ಮನವಿವರೆಗೆ ಈ ದಿನ ಓದಲೇ ಬೇಕಾದ ಸುದ್ದಿಗಳಿವು

Evening Digest: ಲಾಕ್​ಡೌನ್​ ತೆರವು ಸೇರಿದಂತೆ ದರ್ಶನ್​ ಮನವಿವರೆಗೆ ಈ ದಿನ ಓದಲೇ ಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯ, ದೇಶ -ವಿದೇಶದಲ್ಲಿ ಇಂದು ನಡೆದ ಘಟನಾವಳಿ ಕುರಿತಾದ ಮಾಹಿತಿ ಇಲ್ಲಿದೆ

 • Share this:

  ಕೆಎಸ್​ಆರ್​ಟಿಸಿ ಬ್ರ್ಯಾಂಡ್​ ಕೈ ತಪ್ಪಿಲ್ಲ
  ಕೆಎಸ್​ಆರ್​ಟಿಸಿ ಲೋಗೋವನ್ನು ಕರ್ನಾಟಕ ಸಾರಿಗೆ ಬಳಸುವಂತಿಲ್ಲ, ಅದು ಕೇರಳ ರಾಜ್ಯದ ಪಾಲಾಗಿದೆ ಎಂಬ ಸುದ್ದಿಯನ್ನು ರಾಜ್ಯದ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ನಿರಾಕರಿಸಿದ್ದಾರೆ. ಕೆಎಸ್​ಆರ್​ಟಿಸಿ ಟ್ರೇಡ್ ಮಾರ್ಕ್ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವ ಸವದಿ, KSRTC ಬ್ರ್ಯಾಂಡ್ ಕೇರಳದ ಪಾಲಾಗಿಲ್ಲ. ಕೆಎಸ್​ಆರ್​ಟಿಸಿ ಎಂಬ ಹೆಸರು ಕರ್ನಾಟಕದ ಕೈತಪ್ಪಿದೆ ಎಂಬ ಆತಂಕ ಇಲ್ಲ. KSRTC ಎಂಬ ಹೆಸರನ್ನು ಬಳಸಲು ನಾವು ಸ್ವತಂತ್ರವಾಗಿದ್ದೇವೆ. ಈ ಬಗ್ಗೆ ಕೇರಳ ಸರ್ಕಾರದ ಅನುಮತಿ ನಮಗೆ ಬೇಕಾಗಿಲ್ಲ. ಅಗತ್ಯವಿದ್ದರೆ ನ್ಯಾಯಾಲಯಲ್ಲಿ ಕಾನೂನಾತ್ಮಕ ಹೋರಾಟಗಳನ್ನು ನಡೆಸಲು ನಾವು ಹಿಂದೆ ಬೀಳುವುದಿಲ್ಲ ಎಂದಿದ್ದಾರೆ.


  ಗ್ರೇಡಿಂಗ್​ ಆಧಾರದ ಮೇಲೆ ಫಲಿತಾಂಶ
  ಕೊರೋನಾ ಕಾರಣದಿಂದಾಗಿ ಈ ಬಾರಿ ದ್ವಿತೀಯ ಪಿಯು ಪರೀಕ್ಷೆಯನ್ನು ರದ್ದುಗೊಳಿಸಲಾಗಿದ್ದು, ಗ್ರೇಡಿಂಗ್ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಫಲಿತಾಂಶ ನೀಡಲಾಗುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಇಷ್ಟೇ ಅಲ್ಲದೇ, ಪಿಯುಸಿ ಫಲಿತಾಂಶ ನೀಡಲು ಪ್ರಥಮ ಪಿಯುಸಿ ಅಂಕಗಳ ಜೊತೆಗೆ ಎಸ್​ಎಸ್​ಎಲ್​ಸಿ ಅಂಕಗಳನ್ನು ಕೂಡ ಗಣನೆಗೆ ತೆಗೆದುಕೊಳ್ಳುವುದಾಗಿ ಸುರೇಶ್​ ಕುಮಾರ್​ ಸ್ಪಷ್ಟಪಡಿಸಿದ್ದಾರೆ.


  ಕನ್ನಡ ಧ್ವಜಕ್ಕೆ ಅಪಮಾನ
  2 ದಿನಗಳ ಹಿಂದೆ ಕನ್ನಡ ಭಾರತದ ಅತ್ಯಂತ ಕೊಳಕು, ಅಸಹ್ಯ ಭಾಷೆ ಎಂದು ಗೂಗಲ್​ ಸರ್ಚ್​ನಲ್ಲಿ ತೋರಿಸುವ ಮೂಲಕ ಕನ್ನಡಿಗರ ವಿರೋಧವನ್ನು ಎದುರಿಸಿತ್ತು. ಇದೀಗ ಅಮೇಜಾನ್ ಕೂಡ ಇದೇ ರೀತಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಗೂಗಲ್​ನಲ್ಲಿ ಕನ್ನಡ ಭಾಷೆಯ ಅವಹೇಳನ ಮಾಡಿ, ಕ್ಷಮೆ ಕೇಳಿದ ಬೆನ್ನಲ್ಲೇ ಜಗತ್ತಿನ ಅತ್ಯಂತ ದೊಡ್ಡ ಆನ್​ಲೈನ್ ಶಾಪಿಂಗ್ ವೇದಿಕೆಯಾದ ಅಮೇಜಾನ್​ನಲ್ಲಿ ಕನ್ನಡ ಧ್ವಜದ ಬಣ್ಣದ ಬಿಕಿನಿಯನ್ನು ಮಾರಾಟಕ್ಕಿಡಲಾಗಿದೆ. ಕೆನಡಾ ದೇಶದಲ್ಲಿ ಅಮೇಜಾನ್ ಆನ್​ಲೈನ್ ಶಾಪಿಂಗ್ ಸೈಟ್​ನಲ್ಲಿ ಕನ್ನಡ ಧ್ವಜವಾದ ಕೆಂಪು, ಹಳದಿ ಬಣ್ಣವಿರುವ ಜೊತೆಗೆ ಕರ್ನಾಟಕದ ಧ್ವಜದ ಲಾಂಛನವಿರುವ ಬಿಕಿನಿಯನ್ನು ಮಾರಾಟ ಮಾಡಲಾಗುತ್ತಿದೆ.


  ಸಿಇಟಿ ಪರೀಕ್ಷೆ
  ಕೊರೋನಾ ಕಾರಣದಿಂದಾಗಿ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಲಾಗಿದ್ದು, ಗ್ರೇಡಿಂಗ್ ಫಲಿತಾಂಶವನ್ನು ನೀಡುವುದಾಗಿ ಶಿಕ್ಷಣ ಸಚಿವ ಸುರೇಶ್​ ಕುಮಾರ್ ಹೇಳಿದ್ದಾರೆ. ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಿಲ್ಲದ ಕಾರಣ, ವೃತ್ತಿಪರ ಕೋರ್ಸ್​​ಗಳಿಗೆ ಪ್ರವೇಶ ಪಡೆಯಲು ಸಿಇಟಿ ಪರೀಕ್ಷೆಯೇ ಮಾನದಂಡ ಎನ್ನಲಾಗುತ್ತಿದೆ. ಈ ಮೊದಲು ಶೇ.50 ರಷ್ಟು ಪಿಯುಸಿ ಅಂಕ ಹಾಗೂ ಶೇ.50ರಷ್ಟು ಸಿಇಟಿ ಅಂಕಗಳನ್ನು ಪರಿಗಣಿಸಿ ರ್ಯಾಂಕಿಂಗ್ ನೀಡಲಾಗುತ್ತಿತ್ತು. ಆದರೆ ಈ ಬಾರಿ ಎಕ್ಸಾಂ ನಡೆಯದ ಕಾರಣ ಮೆಡಿಕಲ್, ಎಂಜಿನಿಯರಿಂಗ್ ಕೋರ್ಸ್​​ಗಳಿಗೆ ಪ್ರವೇಶ ಪಡೆಯಲು ಸಿಇಟಿ ಪರೀಕ್ಷೆಯೇ ಮುಖ್ಯ ಮಾನದಂಡ ಆಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ, ಡಿಸಿಎಂ ಅಶ್ವತ್ಥ ನಾರಾಯಣ ಹೇಳಿದ್ದಾರೆ.


  ಲಾಕ್​ಡೌನ್​ ಹಂತ ಹಂತವಾಗಿ ತೆರವು
  ರಾಜ್ಯದಲ್ಲಿ ಕೊರೊನಾ 2ನೇ ಅಲೆ ಅಬ್ಬರಿಸಿದ್ದ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಲಾಕ್​​ಡೌನ್​ ಘೋಷಿಸಿದ್ದರು. ಮೂರು ಬಾರಿ ಲಾಕ್​​ಡೌನ್​ ವಿಸ್ತರಣೆಯಾಗಿ ಜೂನ್​​ 14ರವರೆಗೆ ರಾಜ್ಯಾದ್ಯಂತ ಲಾಕ್​ಡೌನ್​ ಜಾರಿಯಲ್ಲಿರಲಿದೆ. ಜೂನ್​ 14ರ ನಂತರ ಹಂತ ಹಂತವಾಗಿ ಲಾಕ್​​ಡೌನ್​ ತೆರವಿಗೆ ರಾಜ್ಯ ಸರ್ಕಾರ ಚಿಂತಿಸುತ್ತಿದೆ. ಅನ್​ಲಾಕ್​ ಪ್ರಕ್ರಿಯೆಯನ್ನು ಕೊರೊನಾ ಪಾಸಿಟಿವಿಟಿ ರೇಟ್​ ಆಧರಿಸಿ ಮಾಡಲು ಮುಂದಾಗಿದ್ದಾರೆ. ಸದ್ಯ ಕರ್ನಾಟಕದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್​​ ಒಟ್ಟಾರೆ 11.21%ರಷ್ಟು ಇದೆ. ಪಾಸಿಟಿವಿಟಿ ರೇಟ್ ಶೇ. 5ಕ್ಕಿಂತ ಕಡಿಮೆ ಇದ್ದ ಕಡೆ ಅನ್ ಲಾಕ್ ಮಾಡಲು ಚಿಂತಿಸಲಾಗುತ್ತಿದೆ.


  ಟಿಎಂಸಿ ಪ್ರಧಾನಕಾರ್ಯದರ್ಶಿಯಾಗಿ ಅಭಿಷೇಕ್​ ನೇಮಕ
  ಜಿದ್ದಾಜಿದ್ದಿ ಕಣವಾಗಿದ್ದ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಭಾರೀ ವಿಜಯದೊಂದಿಗೆ ಮತ್ತೊಮ್ಮೆ ತೃಣಮೂಲಕ ಕಾಂಗ್ರೆಸ್​ ಅಧಿಕಾರ ಚುಕ್ಕಾಣಿ ಹಿಡಿದಿದೆ. ಇದರ ಬೆನ್ನಲ್ಲೇ ಪಕ್ಷವನ್ನು ಪುನರ್ ರಚನೆ ಮಾಡಲಾಗಿದೆ. ಇದೇ ವೇಳೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಸಿಎಂ ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್​ ಬ್ಯಾನರ್ಜಿಯನ್ನು ನೇಮಕ ಮಾಡಲಾಗಿದೆ. ಅಭಿಷೇಕ್​ ಬ್ಯಾನರ್ಜಿ ಡೈಮಂಡ್​ ಹಾರ್ಬರ್​ ಲೋಕಸಭಾ ಕ್ಷೇತ್ರದ ಸಂಸದರೂ ಕೂಡ ಆಗಿದ್ದಾರೆ. ಚುನಾವಣೆ ಬಳಿಕ ಇಂದು ಟಿಎಂಸಿ ಕಾರ್ಯಕಾರಿ ಸಮಿತಿಯ ಮೊದಲ ಸಭೆ ನಡೆಸಿದೆ. ಈ ವೇಳೆ ಈ ನಿರ್ಧಾರ ನಡೆಸಲಾಗಿದ್ದು, ಇದೇ ವೇಳೆ ಸಭೆಯಲ್ಲಿ ಒಬ್ಬ ವ್ಯಕ್ತಿಗೆ ಒಂದು ಅಧಿಕಾರ ಎಂಬ ಮಂತ್ರ ಜಪಿಸಲಾಗಿದೆ


  ದೆಹಲಿಯಲ್ಲಿ ಮಾಲ್​, ಮಾರ್ಕೆಟ್​ ತೆರೆಯಲು ಅನುಮತಿ
  ಎರಡನೇ ಅಲೆ ಕೊರೋನಾ ಸೋಂಕಿಗೆ ತತ್ತರಿಸಿದ್ದ ರಾಷ್ಟ್ರ ರಾಜಧಾನಿಯಲ್ಲಿ ಹಂತ ಹಂತವಾಗಿ ಅನ್​ಲಾಕ್​ ಪ್ರಕ್ರಿಯೆ ಆರಂಭವಾಗಿದೆ. ಕಳೆದವಾರವಷ್ಟೇ ಈ ಕುರಿತು ತಿಳಿಸಿದ್ದ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ತಜ್ಞರ ಅಭಿಪ್ರಾಯದಂತೆ ಹಂತಹಂತವಾಗಿ ಲಾಕ್​ಡೌನ್​ ಸಡಿಲ ಮಾಡಲಾಗುವುದು ಎಂದಿದ್ದರು. ಮೊದಲ ಹಂತದಲ್ಲಿ ಅವರು ಕಟ್ಟಡ ಕಾರ್ಮಿಕ ಸೇರಿ ಬಡ ಕುಟುಂಬದ ಜೀವನ ನಿರ್ವಹಣೆಗೆ ಸಹಾಯವಾಗುವಂತೆ ಅನ್​ಲಾಕ್​ ಪ್ರಕ್ರಿಯೆ ನಡೆಸಿದ್ದರು. ಇದೀಗ ಎರಡನೇ ಹಂತದ ಅನ್​ಲಾಕ್​ ಪ್ರಕ್ರಿಯೆಗೆ ಅವರು ಹಸಿರು ನಿಶಾನೆ ತೋರಿದ್ದಾರೆ. ಆದರೂ ಕೂಡ ಕೆಲವು ನಿರ್ಬಂಧಗಳು ಮುಂದುವರೆಯಲಿದ್ದು, ಜೂನ್​ 14ರವರೆಗೆ ಲಾಕ್​ಡೌನ್​ ವಿಸ್ತರಿಸುವುದಾಗಿ ಘೋಷಿಸಿದ್ದಾರೆ.


  ಪ್ರಾಣಿ ದತ್ತು ಪಡೆಯುವಂತೆ ಮನವಿ
  ಕೋವಿಡ್​ ಸೋಂಕು ಮನು ಕುಲಕ್ಕೆ ಮಾತ್ರವಲ್ಲ. ಪ್ರಾಣಿ ಸಂಕುಲಕ್ಕೂ ಕಂಟಕವಾಗಿದೆ. ಸೋಂಕು ನಿಯಂತ್ರಣಕ್ಕೆ ದೇಶದ ವಿವಿಧ ರಾಜ್ಯಗಳು ಹೇರಿರುವ ಲಾಕ್​ಡೌನ್​ ನಿಂದಾಗಿ ಜನಸಾಮಾನ್ಯರು ಮಾತ್ರವಲ್ಲ ಮೃಗಾಲಯದಲ್ಲಿನ ಪ್ರಾಣಿಗಳು ಕೂಡ ತೊಂದರೆಗೆ ಒಳಗಾಗಿವೆ. ಪ್ರವಾಸಿಗರಿಲ್ಲದೇ, ಮೃಗಾಲಯದಲ್ಲಿನ ವನ್ಯ ಜೀವಿಗಳು ಸಂಕಷ್ಟಕ್ಕೆ ಒಳಗಾಗಿವೆ. ಇವುಗಳ ರಕ್ಷಣೆ ಮಾಡುವುದು ನಮ್ಮ ಹೊಣೆಯಾಗಿದೆ. ಇದೇ ಕಾರಣಕ್ಕೆ ಇವುಗಳನ್ನು ದತ್ತು ಪಡೆಯುವ ಮೂಲಕ ಪ್ರಾಣಿ ಸಂಕುಲಕ್ಕೆ ನೆರವಾಗಬೇಕು ಎಂದು ನಟ ದರ್ಶನ್​ ನಾಡಿನ ಜನತೆಯಲ್ಲಿ ಮನವಿ ಮಾಡಿದ್ದಾರೆ.

  Published by:Seema R
  First published: