ರಾಜ್ಯದಲ್ಲಿ ಲಾಕ್ಡೌನ್ ಜಾರಿ? : ರಾಜ್ಯದಲ್ಲಿ ಕೊವೀಡ್-19 (COVID 19), ಓಮೈಕಾನ್ (Omicron Variant) ನಿಯಂತ್ರಣ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸಂಜೆ 6:30ರಿಂದ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ನೇತೃತ್ವದಲ್ಲಿ ತಜ್ಞರ ಮಹತ್ವದ ಸಭೆ ನಡೆಯುತ್ತಿದೆ. ರಾಜ್ಯದಲ್ಲಿ ಕೊವಿಡ್ ನಿಯಂತ್ರಣಕ್ಕೆ ಮುಖ್ಯಮಂತ್ರಿಗಳು ಶಿಫಾರಸು ಕೇಳಿದ್ದಾರೆ. ತಜ್ಞರ ಸಮಿತಿ ಪರಿಸ್ಥಿತಿ, ಜಾರಿಗೆ ತರಬೇಕಿರುವ ನಿಯಮಗಳ ಬಗ್ಗೆ ಸಿಎಂ ವರದಿ ಈಗಾಗಲೇ ಒಪ್ಪಿಸಲಾಗಿದೆ. ಸಭೆಯಲ್ಲಿ ಲಾಕ್ ಡೌನ್ (Lockdown) ಭವಿಷ್ಯ ನಿರ್ಧಾರವಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಇಂದು ಮತ್ತೊಮ್ಮೆ ತಜ್ಞರ ಅಭಿಪ್ರಾಯ ಪಡೆದ ನಂತರ ಗುರುವಾರ ಕ್ಯಾಬಿನೆಟ್ ನಲ್ಲಿ ಚರ್ಚೆ ನಡೆಸಿ ನಿರ್ಧಾರ ಪ್ರಕಟಿಸಲು ಸಿಎಂ ಮುಂದಾಗಲಿದೆ. ಸಂಪುಟ ಸಬೆ ಬಳಿಕ ಸರ್ಕಾರ ಲಾಕ್ ಡೌನ್ ಅಥವಾ ಕಠಿಣ ರೂಲ್ಸ್ ಜಾರಿಯ ಮಾರ್ಗ ಸೂಚಿ ಬಿಡುಗಡೆ ಸಾಧ್ಯತೆ ಇದೆ.
ನಾವು ಪಾದಯಾತ್ರೆ ಮಾಡಿದ್ರೆ ಕೊರೊನಾ ಬರುತ್ತಾ?
ಯಾವುದೇ ಕಾರಣಕ್ಕೂ ಮೇಕೆದಾಟು ಪಾದಯಾತ್ರೆಯಿಂದ (Mekedatu Padayatra) ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಖಡಕ್ ಹೇಳಿಕೆ ನೀಡಿದ್ರು. ಕೊರೊನಾ (Corona) ಸೋಂಕನ್ನು ನಿಯಂತ್ರಿಸುವ ಕೆಲಸ ಯಾರದ್ದು, ಆರೋಗ್ಯ ಸಚಿವ ಕೆ.ಸುಧಾಕರ್ (Health Minister K Sudhakar) ಆ ಕೆಲಸ ಮಾಡಬೇಕು. ಅವರು ಸರಿಯಾಗಿ ನಿಯಂತ್ರಣ ಮಾಡದಿದ್ದರಿಂದ ಸೋಂಕು ಹೆಚ್ಚಾಗಿದೆ. ನಮಗೂ ಜವಾಬ್ದಾರಿ ಇದೆ. ಕೋವಿಡ್ ನಿಯಮಗಳನ್ನು ಪಾಲಿಸಿಯೇ ಪಾದಯಾತ್ರೆ ಮಾಡ್ತೀವಿ. ನಮ್ಮ ಪಾದಯಾತ್ರೆಯಿಂದ ಕೊರೊನಾ ಕೇಸ್ಗಳು ಹೆಚ್ಚಾಗುತ್ತೆ ಅಂತಾರಲ್ಲ. ಉತ್ತರಪ್ರದೇಶದಲ್ಲಿ ನೋಡಿದ್ದೀರಾ, ಅಲ್ಲಿ ಪಾದಯಾತ್ರೆ ಮಾಡಲಿಲ್ವಾ? ಪ್ರಧಾನಿ ಮೋದಿಗೆ ಒಂದು ಕಾನೂನು, ನಮಗೊಂದು ಕಾನೂನಾ ಎಂದು ಪ್ರಶ್ನಿಸಿದರು.
DK ಬ್ರದರ್ಸ್ ವಿರುದ್ಧ ಏನು ಬೇಕಾದ್ರೂ ಕ್ರಮ ತಗೊಬಹುತ್ತಿತ್ತು
ನಿನ್ನೆ ರಾಮನಗರದಲ್ಲಿ ನಡೆದ ಕಾರ್ಯಕ್ರಮದ (Ramanagara program) ವೇದಿಕೆಯಲ್ಲೇ ಸಂಸದ ಡಿಕೆ ಸುರೇಶ್(DK Suresh), ಸಚಿವ ಡಾ.ಸಿ.ಎನ್ ಅಶ್ವಥ್ ನಾರಾಯಣ (Dr.C.N. Ashwath Narayan) ಜಟಾಪಟಿಯ ಕೆಂಡ ಇಂದೂ ಪರಸ್ಪರ ವಾಗ್ದಾಳಿಯಿಂದ ನಿಗಿನಿಗಿ ಎನ್ನುತ್ತಲೇ ಇದೆ. ಡಿಕೆಶಿಯಂತ ಭಂಡರಿಗೆ ನಾನು ನೇರವಾಗಿಯೇ ಹೇಳ್ತೇನೆ. ನಿಮ್ಮ ಗಂಡಸ್ಥನಕ್ಕೆ, ಯೋಗ್ಯತೆಗೆ ಸರಿಯಿಲ್ಲ. ನಿಮ್ಮ ಪುಂಡಾಟಿಕೆಗೆ ನಾವು ಸಹಿಸಲ್ಲ, ಕೆಲಸವಿದ್ದರೆ ಹೇಳಲಿ ಮಾಡೋಣ. ನಾವು ಮಾಡಿದ ಕೆಲಸ ಹೇಳಿಕೊಂಡಿದ್ದೇವೆ. ಇವರನ್ನ ಕೇಳಿ ನಾವು ಮಾತನಾಡಬೇಕಾ..? ಹಲ್ಲೆ ಮಾಡೋಕಾ ನೀವು ಬರೋದು..? ಇವತ್ತು ಏನು ಬೇಕಾದ್ರೂ ಕ್ರಮ ತೆಗೆದುಕೊಳ್ಳಬಹುದಿತ್ತು. ಆದರೆ ಅಂತಹ ಕೆಲಸ ನಾವು ಮಾಡಿಲ್ಲ. ಗಲಾಟೆ ಮಾಡಿ ಇಲ್ಲೇ ಕಳಿಸೋಣ ಎಂಬ ಉದ್ದೇಶ ಅವರದಿತ್ತು. ಅಣ್ಣ-ತಮ್ಮನಿಗೆ ಛೀಮಾರಿ ಹಾಕಬಹುದಿತ್ತು, ಆದರೆ ನನಗೂ ರಾಮನಗರಕ್ಕೂ ಏನು ಸಂಬಂಧ ಅಂತಾರೆ. ನಾನು ಸಚಿವ ಎಲ್ಲಿಗೆ ಬೇಕಾದ್ರೂ ಹೋಗ್ತೇನೆ. ನಾನು ನಿಮಗಿಂತ ಹೆಚ್ಚು ಜಿಲ್ಲೆಗೆ ಸೇರಿದವನು ಎಂದು ಮಾತಿನಲ್ಲೇ ತಿವಿದರು.
ಕೋವಿಡ್ ಆತಂಕದ ನಡುವೆ ಉತ್ತರ ಪ್ರದೇಶದಲ್ಲಿ Congress Marathon
ದೇಶದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ನಡುವೆಯೇ ಉತ್ತರ ಪ್ರದೇಶದಲ್ಲಿ ಮ್ಯಾರಥಾನ್ (Marathon) ಆಯೋಜಿಸಲಾಗಿದೆ. ಕಾಂಗ್ರಸ್ ಆಯೋಜಿಸಿದ್ದ ಈ ಮ್ಯಾರಥಾನ್ ವೇಳೆ ಕಾಲ್ತುಳಿತ ಉಂಟಾಗಿದೆ. ಮಹಿಳೆಯರ ಸಬಲೀಕರಣ ಉದ್ದೇಶದಿಂದ ಲಡ್ಕಿ ಹನ್, ಲಾಡ್ ಶಕ್ತಿ ಹುನ್ (ಮಹಿಳೆಯರು ಹೋರಾಡಬಹುದು) ಎಂಬ ಧ್ಯೇಯ ವಾಕ್ಯದಿಂದ ಈ ಮ್ಯಾರಥಾನ್ ಆಯೋಜಿಸಲಾಗಿತ್ತು. ಈ ಮ್ಯಾರಥಾನ್ ನಲ್ಲಿ ನೂರಾರು ಯುವತಿಯರು ಮತ್ತು ಮಹಿಳೆಯರು ಭಾಗಿಯಾಗಿದ್ದರು. ಈ ವೇಳೆ ಯಾರು ಕೂಡ ಮಾಸ್ಕ್ ಧರಿಸದೇ, ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಿದ್ದು ಕಂಡು ಬಂದಿತು.
ನಟಿ ರಶ್ಮಿಕಾ ಪೂಜೆ ರಹಸ್ಯ ಬಯಲು
ದಕ್ಷಿಣ ಭಾರತ ಸಿನಿಮಾರಂಗದಲ್ಲಿ ನಂಬರ್ ಒನ್ ಸ್ಥಾನದಲ್ಲಿ ರಶ್ಮಿಕಾ ವಿರಾಜಮಾನಳಾಗಿದ್ದಾಳೆ. ಅದೃಷ್ಟ ದೇವತೆ ಇವಳ ಪಕ್ಕದಲ್ಲಿ ಕೂತಿರುವಂತೆ ಕಾಣುತ್ತೆ ಹೀಗಾಗಿಯೇ ಯಶಸ್ಸು, ಹಣ, ಕೀರ್ತಿ ಇದೆಲ್ಲವನ್ನು ಕೂಡ ಕೆಲವೇ ಕೆಲವು ವರ್ಷಗಳಲ್ಲಿ ರಶ್ಮಿಕಾ ಮಂದಣ್ಣ ತನ್ನದಾಗಿಸಿಕೊಂಡಿದ್ದಾಳೆ. ದಿನದಿಂದ ದಿನಕ್ಕೆ ಹೆಸರು ಕೀರ್ತಿ ಹಣಗಳಿಸುತ್ತಿರುವ ರಶ್ಮಿಕಾ ದೈವಕ್ಕೆ ಮೊರೆಹೋಗಿದ್ದರು. ಹೌದು, ಕೆಲ ತಿಂಗಳುಗಳ ಹಿಂದೆ ಖ್ಯಾತ ಜೋತಿಷಿ ವೇಣು ಸ್ವಾಮಿ ಅವರು ಸೂಚಿಸಿದ ಪೂಜೆಯೊಂದನ್ನು ಮಾಡಿಸಿದ್ದಾರೆ. ಆ ಪೂಜೆಯಿಂದಲೇ ರಶ್ಮಿಕಾ ಇಷ್ಟೊಂದು ಹೆಸರು, ಹಣಗಳಿಸಲು ಸಾಧ್ಯವಾಯ್ತು ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಆಂಧ್ರ ಮತ್ತು ತೆಲಂಗಾಣದ ರಾಜಕಾರಣಿಗಳು ಮತ್ತು ಸಿನಿತಾರೆಯರು, ಉದ್ಯಮಪತಿಗಳು ಅತಿಯಾಗಿ ವಿಶ್ವಾಸ ಇರಿಸಿಕೊಂಡಿರುವ ಜ್ಯೋತಿಷಿಗಳಾದ ವೇಣು ಸ್ವಾಮಿ ಹಿಂದೆ ಸಮಂತಾ ನಾಗಚೈತನ್ಯ ವಿಚ್ಛೇದನ ಪಡೆಯುವ ಸಂಗತಿಯನ್ನು ಹೇಳಿದ್ದರು. ಅವರು ಹೇಳಿದಂತೆ ಇವರಿಬ್ಬರು ವಿಚ್ಛೇದನ ಪಡೆದುಕೊಂಡರು. ಕೆಲವು ತಿಂಗಳ ಹಿಂದೆ ಇದೆ ವೇಣು ಸ್ವಾಮಿಯವರು ರಶ್ಮಿಕಾಳ ಜಾತಕ ರೀತ್ಯ ವಿಶೇಷವಾದ ಪೂಜೆ ಒಂದನ್ನು ಮಾಡಿಸಿದ್ದಾರೆ. ಈ ಪೂಜೆಯಲ್ಲಿ ರಶ್ಮಿಕಾಳ ಜೊತೆಗೆ ಅವರ ಇಡೀ ಕುಟುಂಬದ ಸದಸ್ಯರು ಕೂಡ ಭಾಗಿಯಾಗಿದ್ದಾರೆ. ಆಗ ನಡೆದಿರುವ ಪೂಜೆ ರಾಜಶ್ಯಾಮಲಾ ಶಾಮಲಾ ಭಗಳಮುಖಿ ಎಂದು ಹೇಳಲಾಗುತ್ತಿದ್ದು, ಈಗ ಆ ಪೂಜೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ