• Home
 • »
 • News
 • »
 • state
 • »
 • Evening Digest: ಕಾಂಗ್ರೆಸ್​ಗೆ ಮರಳಲು ಎ ಮಂಜು ಪ್ರಯತ್ನದಿಂದ ಲಂಕಾ ಕ್ರಿಕೆಟಿಗರಿಗೆ ನಿಷೇಧದವರೆಗೆ ಈ ದಿನ ಓದಲೇಬೇಕಾದ ಸುದ್ದಿಗಳು

Evening Digest: ಕಾಂಗ್ರೆಸ್​ಗೆ ಮರಳಲು ಎ ಮಂಜು ಪ್ರಯತ್ನದಿಂದ ಲಂಕಾ ಕ್ರಿಕೆಟಿಗರಿಗೆ ನಿಷೇಧದವರೆಗೆ ಈ ದಿನ ಓದಲೇಬೇಕಾದ ಸುದ್ದಿಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯ, ದೇಶ-ವಿದೇಶಗಳಲ್ಲಿ ಇಂದು ನಡೆದ ಘಟಾನವಳಿಗಳ ಕುರಿತ ಸುದ್ದಿಗಳು

 • Share this:

  ಗಡಿ ಗ್ರಾಮಗಳ ಹೆಸರು ಬದಲಾವಣೆ ಇಲ್ಲ; ಕೇರಳ ಸಿಎಂ
  ಕೇರಳದ ಕಾಸರಗೋಡು ಜಿಲ್ಲೆಯ ಗ್ರಾಮಗಳ ಹೆಸರನ್ನು ಕನ್ನಡದಿಂದ ಮಲಯಾಳಂಗೆ ಬದಲಾಯಿಸುವ ಯಾವುದೇ ಆಲೋಚನೆಯನ್ನು ಹೊಂದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ತಿಳಿಸಿದ್ದಾರೆ. ತಿರುವನಂತರಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗಡಿ ಜಿಲ್ಲೆಯ ಗ್ರಾಮಗಳ ಹೆಸರು ಬದಲಾಯಿಸುವ ಯಾವುದೇ ಆಲೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


  ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಕ್ಷ ರಾಮಯ್ಯ ಮುಂದುವರಿಕೆ
  ರಾಜ್ಯ ಯುವ ಕಾಂಗ್ರೆಸ್ ಘಟಕದಲ್ಲಿ ಮಹತ್ವದ ಬದಲಾವಣೆ ಆಗುತ್ತದೆ ಎಂಬ ವದಂತಿಗೆ ಇಂದು ಅಧಿಕೃತವಾಗಿ ತೆರೆಬಿದ್ದಿದೆ. ಕೆಪಿಸಿಸಿ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಕ್ಷ ರಾಮಯ್ಯ ಅವರೇ ಮುಂದುವರಿಯಲಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಪ್ರಕಟಣೆ ಹೊರಡಿಸಲಾಗಿದೆ. ಇಂಡಿಯನ್ ಯೂತ್ ಕಾಂಗ್ರೆಸ್ ವೆಬ್ ಸೈಟ್​ನಲ್ಲೂ ರಕ್ಷ ರಾಮಯ್ಯ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ. ಇದರೊಂದಿಗೆ, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮೊಹಮ್ಮದ್ ನಲಪಾಡ್​ಗೆ ನಿರಾಸೆಯಾಗಿದೆ.


  ಹಾನಗಲ್ ಕ್ಷೇತ್ರದ ಮೇಲೆ ಸಿಎಂ ಪುತ್ರ ವಿಜಯೇಂದ್ರ ಕಣ್ಣು?
  ಸಿಎಂ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅವರ ರಾಜಕೀಯ ಬದುಕಿಗೆ ಕ್ಷೇತ್ರದ ಸಮಸ್ಯೆ ಎದುರಾಗಿದೆ. ಅವರ ಮುಂದಿನ ರಾಜಕೀಯ ಜೀವನ ಯಾವ ಕ್ಷೇತ್ರದಿಂದ ಆರಂಭವಾಗಲಿದೆ ಎಂಬ ಗೊಂದಲ ಮೊದಲಿನಿಂದಲೂ ಇದೆ. ಇದೀಗ ಬಿಜೆಪಿ ಶಾಸಕ ಸಿಎಂ ಉದಾಸಿ ನಿಧನದಿಂದ ತೆರವಾಗಿರುವ ಹಾನಗಲ್ ಕ್ಷೇತ್ರದ ಮೇಲೆ ಸಿಎಂ ಪುತ್ರ ಬಿ ವೈ ವಿಜಯೇಂದ್ರ ಕಣ್ಣು ಹಾಕಿದ್ದಾರೆ ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ


  ಕಾಂಗ್ರೆಸ್​ ಕದ ತಟ್ಟುತ್ತಿರುವ ಎ ಮಂಜು
  ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಶೀತಲ ಸಮರ ಮುಂದುವರೆದಿದೆ. ಅದು ಅರಕಲಗೂಡು ಮಾಜಿ ಶಾಸಕ ಎ ಮಂಜು ವಿಚಾರವಾಗಿ ಮತ್ತೊಮ್ಮೆ ಭುಗಿಲೇಳುವ ಸಂಭವವಿದೆ. ಈ ಹಿಂದೆ ಕಾಂಗ್ರೆಸ್​ನಲ್ಲಿದ್ದು, ಬಳಿಕ ಬಿಜೆಪಿ ಸೇರಿದ್ದ ಎ ಮಂಜು ಇದೀಗ ಬಿಜೆಪಿಗೆ ಗುಡ್ ಬೈ ಹೇಳಿ ಮತ್ತೆ ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ.


  ಜುಲೈ 31ರವರೆಗೆ ಅಂತಾರಾಷ್ಟ್ರೀಯ ವಿಮಾನಗಳ ಮೇಲೆ ನಿರ್ಬಂಧ
  ಕೊರೊನಾ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಮೇಲೆ ಹೇರಿದ್ದ ನಿರ್ಬಂಧವನ್ನು ಜುಲೈ 31ರವರೆಗೆ ವಿಸ್ತರಿಸಲಾಗಿದೆ. ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನಯಾನವನ್ನು ಜು.31ರವರೆಗೆ ನಿರ್ಬಂಧಿಸಿ ನಾಗರಿಕ ವಿಮಾನಯಾನ ನಿರ್ದೇಶನಾಲಯ(DGCA) ಆದೇಶ ಹೊರಡಿಸಿದೆ. ಈ ಹಿಂದೆ ವಿಧಿಸಿದ್ದ ನಿರ್ಬಂಧ ಇಂದಿಗೆ (ಜೂ.30) ಮುಕ್ತಾಯಗೊಳ್ಳಬೇಕಿತ್ತು. ಆದರೆ ಕೊರೊನಾ 3ನೇ ಅಲೆ ಭೀತಿ, ಡೆಲ್ಟಾ ಪ್ಲಸ್​​ ಭೀತಿ ದೇಶದ ಮೇಲಿದ್ದು, ಭಾರತ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ.


  ನಿರ್ಮಾಪಕ ರಾಜ್​ ಕೌಶಲ್ ಹೃದಯಾಘಾತದಿಂದ ಸಾವು
  ಖ್ಯಾತ ಬಾಲಿವುಡ್​ ನಟಿ ಹಾಗೂ ಕ್ರಿಕೆಟ್ ವಿಶ್ಲೇಷಕಿ ಮಂದಿರಾ ಬೇಡಿ ಅವರ ಪತಿ ಚಿತ್ರ ನಿರ್ಮಾಪಕ ರಾಜ್​ ಕೌಶಲ್​ ಇಂದು ಬೆಳಗ್ಗೆ 10:09ಕ್ಕೆ ಹೃದಯಾಘಾತ ದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. 49 ವರ್ಷದ ರಾಜ್ ಕೌಶಲ್ ಅವರು ತಮ್ಮ ಮನೆಯಲ್ಲಿ ಇಂದು ಮುಂಜಾನೆ 4.30 ರಿಂದಲೇ ಎದೆ ನೋವಿನಿಂದ ಬಳಲುತ್ತಿದ್ದರು, ಆದರೆ, ಯಾವುದೇ ವೈದ್ಯಕೀಯ ಸಹಾಯ ಪಡೆಯುವ ಮೊದಲೇ ನಿಧನರಾದರು ಎಂದು ನಟ ರೋಹಿತ್ ರಾಯ್ ಮಾಹಿತಿ ನೀಡಿದ್ದಾರೆ.


  ಮೂವರು ಲಂಕಾ ಕ್ರಿಕೆಟಿಗರಿಗೆ ಒಂದು ವರ್ಷ ನಿಷೇಧ
  ಇಂಗ್ಲೆಂಡ್‌ನಲ್ಲಿ ಬಯೋ-ಬಬಲ್ ಉಲ್ಲಂಘನೆ ಮಾಡಿದ್ದ ಶ್ರೀಲಂಕಾ ತಂಡದ ದನುಷ್ಕ ಗುಣತಿಲಕೆ, ಕುಸಾಲ್‌ ಮೆಂಡಿಸ್‌ ಹಾಗೂ ನಿರೋಶನ್‌ ಡಿಕ್ವೆಲ್‌ ಅವರಿಗೆ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಒಂದು ವರ್ಷದವರೆಗೆ ನಿಷೇಧ ಹೇರಿದೆ ಎಂದು ವರದಿಯಾಗಿದೆ. ಅದರಂತೆ ಈ ಆಟಗಾರರು ಇನ್ನು ಒಂದು ವರ್ಷಗಳ ಕಾಲ ರಾಷ್ಟ್ರೀಯ ತಂಡಗಳ ಆಯ್ಕೆಗೆ ಲಭ್ಯರಿರುವುದಿಲ್ಲ. ಈಗಾಗಲೇ ಸತತ ಸೋಲಿನಿಂದ ಕಂಗೆಟ್ಟಿರುವ ಲಂಕಾ ತಂಡಕ್ಕೆ ಇದೀಗ ಮೂವರ ನಿಷೇಧ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಏಕೆಂದರೆ ಶ್ರೀಲಂಕಾ ತಂಡ ಟಿ20 ವಿಶ್ವಕಪ್ ಅರ್ಹತಾ ಪಂದ್ಯವನ್ನು ಆಡಬೇಕಿದ್ದು, ಇದಕ್ಕೂ ಮುನ್ನ ತಂಡದಲ್ಲಿದ್ದ ಮೂವರು ಸ್ಟಾರ್ ಆಟಗಾರರು ಹೊರಬಿದ್ದಿದ್ದಾರೆ.

  Published by:Seema R
  First published: