• Home
 • »
 • News
 • »
 • state
 • »
 • Evening Digest: ಲಾಕ್​ಡೌನ್​ ವಿಸ್ತರಣೆಯಿಂದ ನಟಿ ಬಿ ಜಯಾ ನಿಧನದವರೆಗೆ ಈ ದಿನದ ಓದಲೇಬೇಕಾದ ಸುದ್ದಿಗಳು

Evening Digest: ಲಾಕ್​ಡೌನ್​ ವಿಸ್ತರಣೆಯಿಂದ ನಟಿ ಬಿ ಜಯಾ ನಿಧನದವರೆಗೆ ಈ ದಿನದ ಓದಲೇಬೇಕಾದ ಸುದ್ದಿಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯ, ದೇಶ -ವಿದೇಶದಲ್ಲಿ ಇಂದು ನಡೆದ ಘಟನಾವಳಿ ಕುರಿತಾದ ಮಾಹಿತಿ ಇಲ್ಲಿದೆ

 • Share this:

  ಜೂನ್​ 14ರವರೆಗೆ ಲಾಕ್​ಡೌನ್​ ಮುಂದುವರಿಕೆ
  ಕೊರೋನಾ ಸೋಂಕು ರಾಜ್ಯದಲ್ಲಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಸೋಂಕು ನಿಯಂತ್ರಣದ ದೃಷ್ಟಿಯಿಂದ ಲಾಕ್​ಡೌನ್ ಅನ್ನು ಮತ್ತೆ ಒಂದು ವಾರ ವಿಸ್ತರಣೆ ಮಾಡಲಾಗಿದೆ ಎಂದು ಸಿಎಂ ಬಿ.ಎಸ್​. ಯಡಿಯೂರಪ್ಪ ಇಂದು ದೃಢಪಡಿಸಿದ್ದಾರೆ. ಅಲ್ಲದೆ, ಕಾರ್ಮಿಕರು ಸೇರಿದಂತೆ ವಿವಿಧ ವಲಯದ ಜನರಿಗೆ ರೂ.500 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಈಗಾಗಲೇ ಜೂನ್​ 7ರವರೆಗೆ ಜಾರಿಯಲ್ಲಿದ್ದ ಲಾಕ್​ಡೌನ್​ನ್ನು ಜೂನ್ 14ರವರೆಗೆ ವಿಸ್ತರಿಸುವುದು ಖಚಿತವಾಗಿದೆ. ಇಂದು ಸಂಜೆ 5 ಗಂಟೆಗೆ ಆದೇಶ ಹೊರಡಿಸಿರುವ ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ಇದನ್ನು ಅಧೀಕೃತಪಡಿಸಿದ್ದಾರೆ.


  ಮೈಸೂರು ಪಾಲಿಕೆ ಆಯುಕ್ತೆ ರಾಜೀನಾಮೆ
  ಕೋವಿಡ್​ ನಿರ್ವಹಣೆ ವಿಚಾರ ಸಂಬಂಧಿಸಿದಂತೆ ರೋಹಿಣಿ ಸಿಂಧೂರಿ ಅವರ ನಡೆಗೆ ಬೇಸತ್ತು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್​ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾಜ್ಯ ಮುಖ್ಯ ಕಾರ್ಯದರ್ಶಿಗೆ ಈ ಕುರಿತು ಪತ್ರ ಬರೆದಿದ್ದು, ಈ ಸಂಬಂಧ ಇಂದು ತುರ್ತು ಸುದ್ದಿಗೋಷ್ಠಿ ನಡೆಸಿದ ಅವರು, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕೆಲಸ ಮಾಡಿದರೂ ಪಾಲಿಕೆ ಕೆಲಸ ಮಾಡುತ್ತಿಲ್ಲ ಎಂದು ನಮ್ಮನ್ನು ಗುರಿಯಾಗಿಸಿಕೊಂಡು ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಈ ಹಿನ್ನಲೆ ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ


  ಗೂಗಲ್​ ವಿರುದ್ಧ ಕನ್ನಡಿಗರ ಆಕ್ರೋಶ
  2 ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ವಿಶ್ವದ ಲಿಪಿಗಳ ರಾಣಿ ಎಂದೆಲ್ಲ ವಿನೋಬಾ ಬಾವೆ ಬಣ್ಣಿಸಿದ್ದರು. ಕನ್ನಡ ಭಾಷೆಯನ್ನು ಬಳಸುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಆರೋಪದ ನಡುವೆಯೂ ಒಂದಷ್ಟು ಯುವಪೀಳಿಗೆಯವರು ಕನ್ನಡ ಭಾಷೆಯ ಉಳಿವಿಗಾಗಿ ಅಭಿಯಾನಗಳನ್ನು ಮಾಡುತ್ತಾ, ಆಧುನಿಕ ತಂತ್ರಜ್ಞಾನದಲ್ಲೂ ಕನ್ನಡದ ಉಳಿಸುವಿಕೆಗೆ ಪ್ರಯತ್ನಿಸುತ್ತಿದ್ದಾರೆ. ಆದರೆ, ಇಂತಹ ಭಾಷೆ ಭಾರತದ ಅತ್ಯಂತ ಅಸಹ್ಯಕರ, ಕೊಳಕು ಭಾಷೆ ಎಂದು ಗೂಗಲ್ ಘೋಷಿಸಿತು. ಇದಕ್ಕೆ ರಾಜ್ಯಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾದ ಬಳಿಕ ಗೂಗಲ್ ತನ್ನ ತಪ್ಪನ್ನು ಅರಿತು ಆ ಹೇಳಿಕೆಯನ್ನು ಹಿಂಪಡೆದಿದೆ.


  ಕೇರಳ ಪಾಲಾದ ಕೆಎಸ್​ಆರ್​ಟಿಸಿ ಲೋಗೋ


  ಕೆಎಸ್​ಆರ್​ಟಿಸಿ (KSRTC) ಲೋಗೋ ಬಳಕೆ ವಿಚಾರವಾಗಿ ಕರ್ನಾಟಕ ಮತ್ತು ಕೇರಳ ನಡುವೆ ನಡೆಯುತ್ತಿದ್ದ ತಿಕ್ಕಾಟಕ್ಕೆ ಬ್ರೇಕ್ ಬಿದ್ದಿದ್ದು, ಕರ್ನಾಟಕ ರಾಜ್ಯಕ್ಕೆ ಹಿನ್ನಡೆಯಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(Karnataka State Road Transport Corporation)- ಈ ಲೋಗೋವನ್ನು ಇನ್ಮುಂದೆ ಕರ್ನಾಟಕ ಬಳಸುವಂತಿಲ್ಲ. ಈಗ ಕೆಎಸ್​ಆರ್​ಟಿಸಿ ಲೋಗೋ(KSRTC Logo) ಕೇರಳದ ಪಾಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಅಧೀನದ ಟ್ರೇಡ್​ ಮಾರ್ಕ್​ ರಿಜಿಸ್ಟ್ರಿ (Trade Mark Registry)​ ಆದೇಶ ಹೊರಡಿಸಿದೆ.


  ಕೇರಳಕ್ಕೆ ಮುಂಗಾರು ಪ್ರವೇಶ
  ಕೇರಳಕ್ಕೆ ಇಂದು ಮುಂಗಾರು ಮಳೆ ಪ್ರವೇಶಿಸಲಿದೆ. ಈ ಬಾರಿ ಕಳೆದ ವರ್ಷಗಳಿಗಿಂತಲೂ 2 ದಿನ ತಡವಾಗಿ ಇಂದು ಕೇರಳಕ್ಕೆ ಮಾನ್ಸೂನ್ ಪ್ರವೇಶವಾಗಲಿದೆ. ಈ ಹಿನ್ನೆಲೆಯಲ್ಲಿ ಕೇರಳದಲ್ಲಿ ಕೃಷಿ ಚಟುವಟಿಕೆಗಳನ್ನು ಚುರುಕುಗೊಳಿಸಲಾಗಿದೆ. ಇಂದು ನೈಋತ್ಯ ಮುಂಗಾರು ಕೇರಳವನ್ನು ಪ್ರವೇಶಿಸುವುದರಿಂದ ಕರ್ನಾಟಕದಲ್ಲೂ ಮಳೆಯ ಅಬ್ಬರ ಹೆಚ್ಚಾಗಲಿದೆ. ಮುಂಗಾರು ಪ್ರವೇಶದಿಂದ ಇಂದು ಕೇರಳದಲ್ಲಿ ಭಾರೀ ಗಾಳಿ, ಗುಡುಗು- ಸಿಡಿಲು ಸಹಿತ ಮಳೆಯ ಅಬ್ಬರವಿರಲಿದೆ. ಹೀಗಾಗಿ, 4 ಜಿಲ್ಲೆಗಳಲ್ಲಿ ಇಂದು ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.


  ಯೋಗಗುರುಗೆ ನೋಟಿಸ್​
  ಪತಂಜಲಿ ಸಂಸ್ಥೆಯ ಕೊರೋನಿಲ್ ಕಿಟ್ ಕೋವಿಡ್-19 ಗುಣಪಡಿಸುತ್ತದೆ ಎಂದು ತಪ್ಪು ಮಾಹಿತಿ ನೀಡಿದ ಯೋಗ ಗುರು ಬಾಬಾ ರಾಮ್​ದೇವ್​ಗೆ ದೆಹಲಿ ಹೈಕೋರ್ಟ್ ಗುರುವಾರ ಸಮನ್ಸ್ ನೀಡಿದೆ. ರಾಮ್​ದೇವ್ ಅವರು ತಮ್ಮ ಸಂಸ್ಥೆಯ ಕೊರೊನಿಲ್ ಕಿಟ್ ಬಗ್ಗೆ ಜನರಿಗೆ ತಪ್ಪು ಮಾಹಿತಿ ಹಬ್ಬಿಸುತ್ತಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ದೆಹಲಿ ವೈದ್ಯಕೀಯ ಸಂಘ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಜುಲೈ 13 ಕ್ಕೆ ಪ್ರಕರಣದ ವಿಚಾರಣೆಯ ಮುಂದಿನ ದಿನಾಂಕದವರೆಗೆ ಯಾವುದೇ ಪ್ರಚೋದನಕಾರಿ ಹೇಳಿಕೆ ನೀಡಬಾರದು ಮತ್ತು ಮೊಕದ್ದಮೆಗೆ ಸ್ಪಂದಿಸಬೇಡಿ ಎಂದು ಹೈಕೋರ್ಟ್ ಮೌಖಿಕವಾಗಿ ರಾಮದೇವ್ ಅವರಿಗೆ ಸೂಚಿಸಿದೆ.


  ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬದಲಾವಣೆಗೆ ಕ್ಷಣಗಣನೆ
  ಪ್ಯಾಲೆಸ್ಟೀನ್​ ವಿರುದ್ಧದ ಯುದ್ಧದ ಬೆನ್ನಿಗೆ ಇದೀಗ ಇಸ್ರೇಲ್‌ನಲ್ಲಿ ಮತ್ತೆ ರಾಜಕೀಯ ಅನಿಶ್ಚಿತತೆ ಪ್ರಾರಂಭವಾಗಿದ್ದು, ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಸರ್ಕಾರ ಉರುಳುವ ಸಾಧ್ಯತೆ ಹೆಚ್ಚಾಗಿದೆ. ಪ್ರಧಾನಿ ನೆತನ್ಯಾಹು ಅವರ ವಿರೋಧಿ ನಾಯಕರು ಮೈತ್ರಿ ಮಾಡಿಕೊಂಡಿದ್ದು ಹೊಸ ಒಕ್ಕೂಟ ಸರ್ಕಾರವನ್ನು ರಚನೆ ಮಾಡಲು ಮುಂದಾಗಿದ್ದಾರೆ. ಪ್ರಮುಖ ವಿರೋಧ ಪಕ್ಷವಾದ ಯೆಸ್‌ ಅಟೈಡ್ ಪಕ್ಷದ ನಾಯಕ ಯೇರ್‌ ಲ್ಯಾಪಿಡ್ ಮತ್ತು ಯೆಮಿನ ಪಕ್ಷದ ನಾಯಕ, ಮಾಜಿ ರಕ್ಷಣಾ ಸಚಿವ ನಫ್ತಾಲಿ ಬೆನೆಟ್‌ ಅವರು ಬುಧವಾರ ಮಧ್ಯರಾತ್ರಿ ಸಭೆ ನಡೆಸಿದ್ದು, ಹೊಸ ಒಕ್ಕೂಟ ರಚಿಸುವ ವಿಚಾರವನ್ನು ಪ್ರಕಟಿಸಿದ್ದಾರೆ. ಈ ಮೂಲಕ ಎರಡು ವರ್ಷಗಳಲ್ಲಿ ದೇಶದಲ್ಲಿ ಮತ್ತೆ ಚುನಾವಣೆ ನಡೆಯುವುದು ತಪ್ಪಲಿದೆ ಎಂದು ಅವರು ಹೇಳಿದ್ದಾರೆ.


  ಬಿ ಜಯಾ ಇನ್ನಿಲ್ಲ
  ಕನ್ನಡದಲ್ಲಿ ಆರು ದಶಕಗಳ ಕಾಲ ನಟಿಸಿದ್ದ ಬಿ ಜಯಾ ಇತ್ತೀಚೆಗೆ ಪಾರ್ಶ್ವವಾಯುಗೆ ತುತ್ತಾಗಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಿಸದೇ ಇಂದು ಮಧ್ಯಾಹ್ನ ಸಾವನ್ನಪ್ಪಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಪೋಷಕ ನಟಿ, ಹಾಸ್ಯ ನಟಿಯಾಗಿ ಗುರುತಿಸಿಕೊಂಡಿದ್ದ ಇವರು 350ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದರು. ಅಲ್ಲದೇ ಅನೇಕ ಧಾರಾವಾಹಿಗಳಲ್ಲಿಯೂ ನಟಿಸಿ ಪ್ರೇಕ್ಷಕರನ್ನು ಮನರಂಜಿಸಿದ್ದರು

  Published by:Seema R
  First published: