Evening Digest: ಸರ್ವಪಕ್ಷ ಸಭೆಗೆ ಮೋದಿ ಗೈರಾಗಿದ್ದೇಕೆ? ಬಿಜೆಪಿಗೆ ಬೆಂಬಲ ನೀಡಿ ಕಣ್ಣೀರಾಕಿದ ವರ್ತೂರು ಪ್ರಕಾಶ್: ಇಂದಿನ ಪ್ರಮುಖ ಸುದ್ದಿಗಳು

Kannada news Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

Evening digest

Evening digest

  • Share this:
ಸರ್ವಪಕ್ಷ ಸಭೆಗೆ ಮೋದಿ ಗೈರಾಗಿದ್ದೇಕೆ?: ಚಳಿಗಾಲದ ಅಧಿವೇಶನದ (Winter Session) ನಿಮಿತ್ತ ಇಂದು ನಡೆದ ಸರ್ವಪಕ್ಷಗಳ ಸಭೆಗೆ (All Party Meeting) ಪ್ರಧಾನಿ ಮೋದಿ (PM Modi) ಅವರು ಗೈರಾಗಿದ್ದಾರೆ. ಸಭೆಗೆ ಪ್ರಧಾನಿಗಳ ಗೈರನ್ನು ವಿರೋಧ ಪಕ್ಷಗಳು (Opposition Party) ಪ್ರಶ್ನೆ ಮಾಡಿವೆ. ಪ್ರಧಾನಿ ಹಾಜರಾತಿ ಸರ್ವಪಕ್ಷಗಳ ಸಭೆಗೆ ಕಡ್ಡಾಯವಲ್ಲ. ಮತ್ತು ಅದು ಸಂಪ್ರದಾಯವಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ಸರ್ವಪಕ್ಷಗಳ ಸಭೆಗೆ ಪ್ರಧಾನಿ ಹಾಜರಾಗುವ ಸಂಪ್ರದಾಯವನ್ನು ಆರಂಭಿಸಿದ್ದೆ ಮೋದಿ ಅವರು. ಈ ಹಿಂದೆ ಯಾವುದೇ ನಾಯಕರು ಇಂತಹ ಸಭೆಗೆ ಬರುತ್ತಿರಲಿಲ್ಲ ಎಂದು ಸರ್ಕಾರವು ಹೇಳಿದೆ. “ಇದು ಪ್ರಧಾನಿ ಮೋದಿ ಆರಂಭಿಸಿದ ಸಂಪ್ರದಾಯ. ಈ ಸಭೆಗೆ ಈ ಹಿಂದೆ ಯಾರೂ ಬರುತ್ತಿರಲಿಲ್ಲ. ಹಾಗಾಗಿ ಪ್ರತಿಪಕ್ಷಗಳು ಇಂತಹ ಪ್ರಶ್ನೆಗಳನ್ನು ಎತ್ತುವುದು ಸರಿಯಲ್ಲ. ಇಂದು ಪ್ರಧಾನಿಯವರು ಈ ಸಭೆಗೆ ಬರಲು ಸಾಧ್ಯವಾಗಲಿಲ್ಲ ಎಂದು ಸರ್ಕಾರ ಪ್ರಧಾನಿ ಮೋದಿ ಗೈರಿನ ಬಗ್ಗೆ ಸಮರ್ಥನೆ ನೀಡಿದೆ.

ಬಿಜೆಪಿಗೆ ಬೆಂಬಲ ನೀಡಿ ಕಣ್ಣೀರಾಕಿದ ವರ್ತೂರು ಪ್ರಕಾಶ್

ವಿಧಾನ ಪರಿಷತ್ ಚುನಾವಣೆ (Council Elections) ಹಿನ್ನೆಲೆಯಲ್ಲಿ ಜಿಲ್ಲೆಯ ಮಾಜಿ ಸಚಿವ ವರ್ತೂರು ಪ್ರಕಾಶ್ (Varthur Prakash) ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು (CM Basavaraj Bommai) ಭೇಟಿ ಮಾಡಿ ಮಾತುಕತೆ ನಡೆಸಿದರು. ನಂತರ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದರು. ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೇಣುಗೋಪಾಲ್ ಗೆ  ವರ್ತೂರು ಪ್ರಕಾಶ್ ಬೆಂಬಲ ನೀಡುವುದಾಗಿ ಕೋಲಾರದ ಪೂಜಾ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಘೋಷಿಸಿದರು. ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡುವ ವೇಳೆ ವೇದಿಕೆಯಲ್ಲೇ ವರ್ತೂರು ಪ್ರಕಾಶ್ ಕಣ್ಣೀರು ಹಾಕಿದರು. ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ನನ್ನನ್ನು ಹಿಂದೆ ಸೋಲಿಸಿದ್ರು. ಅದೇ ರೀತಿ ನಾನು ಅವರನ್ನು ಸೋಲಿಸುವವರೆಗೂ ಸಮಾಧಾನವಿಲ್ಲ ಎಂದು ಗದ್ಗದಿತರಾದರು. ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಎಂದು ಕಾರ್ಯಕರ್ತರ ಮುಂದೆ ಕಣ್ಣೀರು ಸುರಿಸಿ ಮನವಿ ಮಾಡಿಕೊಂಡರು.

‘ನಳೀನ್ ಕುಮಾರ್ ಕಟೀಲ್ ಒಬ್ಬ ಭಯೋತ್ಪಾದಕ’

ಭಯೋತ್ಪಾದನೆಗೆ (Terrorism) ಬಡ್ತಿ ನೀಡುವ ಪಕ್ಷ ಕಾಂಗ್ರೆಸ್ (Cngress) ಎಂಬ ಬಿಜೆಪಿ (BJP) ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ (Nalin Kumar Kateel) ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ತಿರುಗೇಟು ನೀಡಿದರು. ನಳೀನ್ ಕುಮಾರ್ ಕಟೀಲ್ ಒಬ್ಬ ಭಯೋತ್ಪಾದಕ, ಕಟೀಲ್ ಮಾತಿಗೆ ಮೂರು ಕಾಸಿನ ಕಿಮ್ಮತ್ತಿಲ್ಲ ಎಂದು ಲೇವಡಿ ಮಾಡಿದರು. ರಾಜ್ಯದ ಜನ ತೀರ್ಮಾನ ಮಾಡಿದ್ದಾರೆ, ಬಿಜೆಪಿಯನ್ನು ಕಿತ್ತೋಗೆಯುತ್ತಾರೆ ಎಂದು ವಾಗ್ದಾಳಿ ನಡೆಸಿದರು. ನಾವು A ಟೀಂ ಅಲ್ಲ B ಟೀಂ ಕೂಡ ಅಲ್ಲ ಎಂಬ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಮತ್ತೆ ಎಲ್ಲಾ ಕಡೆ ಯಾಕೆ ಅಭ್ಯರ್ಥಿ ಹಾಕಿಲ್ಲ. ಉಳಿದ ಕಡೆಗಳಲ್ಲಿ ಈಗ ಏನೂ ಮಾಡುತ್ತಾರೆ. ಪರಿಷತ್​ ಚುನಾವಣೆಯಲ್ಲಿ ಜೆಡಿಎಸ್​ ಪಕ್ಷ ಬಿಜೆಪಿಯ ಬಿ ಟೀಂ ಎಂದು ಟೀಕಿಸಿದರು.

ಕಲಬುರಗಿ ಪಾಲಿಕೆ ಆಯುಕ್ತ ಸ್ನೇಹಲ್ ವಿರುದ್ಧ ಲೈಂಗಿಕ ವಂಚನೆ ಆರೋಪ

ಬಿಸಿಲೂರು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರ ಮೇಲೆ ವಂಚನೆ ಗಂಭೀರ ಆರೋಪ ಕೇಳಿ ಬಂದಿದೆ. ಐಎಎಸ್ 2017 ಬ್ಯಾಚ್ ನ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ವಿರುದ್ದ ದೆಹಲಿ ಮೂಲದ ಯುವತಿ ದೋಖಾ ಮಾಡಿರುವ ಆರೋಪ ಮಾಡಿದ್ದಾಳೆ. ಯುವತಿ ದೆಹಲಿಯಲ್ಲಿ ಐಎಎಸ್ ಪರೀಕ್ಷೆಗೆ ಸಿದ್ಧವಾಗುತ್ತಿದ್ದಾಗ 2019 ರಲ್ಲಿ ಲೋಖಂಡೆ ಪರಿಚಯವಾಗಿತ್ತಂತೆ. ಅಲ್ಲದೆ ಪರಸ್ಪರ ಭೇಟಿ ಅಲ್ಲದೆ ರೂಂಗೆ ಕರೆಸಿಕೊಂಡು ದಿನ ಕಳೆದಿದ್ದಾರಂತೆ. ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಸ್ನೇಹಲ್ ಲೋಖಂಡೆ ಮೋಸ ಮಾಡಿದ್ದಾರೆ ಅಂತಾ ದೆಹಲಿ ಯುವತಿ ಗಂಭೀರ ಆರೋಪ ಮಾಡಿದ್ದಾಳೆ. ವಿಜಯಪುರದ ಸಿಂಧಗಿಯಲ್ಲಿ ಲೋಖಂಡೆ ಎಸಿ ಆಗಿದ್ದಾಗ ಪೋಷಕರ ಜೊತೆಗೆ ಯುವತಿ ಆಗಮಿಸಿ ಲೋಖಂಡೆ ಅವರ ಕುಟುಂಬಸ್ಥರಿಗೆ ಭೇಟಿ ಆದರೂ ನ್ಯಾಯ ಸಿಗಲಿಲ್ಲವಂತೆ. ದೆಹಲಿಯಲ್ಲಿ 2019 ಮೇ 17ರಿಂದ ಮೂರು ದಿನಗಳ ಕಾಲ ಸ್ನೇಹಲ್ ಅವರು ತನ್ನ ಜೊತೆ ಇದ್ದರು. ಆಗ ಮದುವೆ ಆಗುವುದಾಗಿ ಸ್ನೇಹಲ್ ಭರವಸೆ ಕೊಟ್ಟಿದ್ದರಂತೆ. ಅದೇ ಜೂನ್ ತಿಂಗಳಲ್ಲಿ ಲಂಡನ್​ಗೆ ಹೋಗುವ ಮುನ್ನ ಯುವತಿ ಜೊತೆ ಸ್ನೇಹಲ್ ಕಾಲ ಕಳೆದಿದ್ದರಂತೆ. ಜುಲೈ 20ರಂದು ದೆಹಲಿಯ ಹಾಸ್ಟೆಲ್​ನಲ್ಲಿ ಇಬ್ಬರೂ ಒಂದು ರಾತ್ರಿ ಇದ್ದರು. ಮಾರನೇ ದಿನ ಐಪಿಲ್ ತೆಗೆದುಕೊಳ್ಳುವಂತೆ ಸ್ನೇಹಲ್ ಸಲಹೆ ನೀಡಿದರಂತೆ.

ಸರಿಗಮಪ ಶೋಗೆ ಹಂಸಲೇಖ ಗೈರು, ವಾಹಿನಿ ಹೇಳಿದ್ದು ಹೀಗೆ..!

ಕನ್ನಡದಲ್ಲಿ ನೂರಾರು ಹೊಸ ಪ್ರತಿಭೆಗಳನ್ನು ಹುಟ್ಟುಹಾಕಿದ್ದ ‘ಸರಿಗಮಪ’ ಸಂಗೀತ ರಿಯಾಲಿಟಿ ಶೋಗೆ (Music reality show)ಅದರದೇ ಆದ ಗೌರವ ಇದೆ. ಪ್ರತಿ ವರ್ಷದಂತೆ ಈ ಬಾರಿಯೂ ನಾದಬ್ರಹ್ಮ ಹಂಸಲೇಖ ಅವರು ಈ ಶೋನ ಮಹಾಗುರು ಆಗಿ ಕಾಣಿಸಿಕೊಂಡಿದ್ದಾರೆ. ಆದರೆ, ಅವರು ಶನಿವಾರ ಶೋನಲ್ಲಿ (Saturday's show)ಕಾಣಿಸಿಕೊಂಡಿಲ್ಲದ ಕಾರಣ ಭಾರಿ ಗುಸುಗುಸು ಶುರುವಾಗಿ ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು. ಇದಕ್ಕೆ ಜೀ ಕನ್ನಡ ಬಿಸ್ನೆಸ್​ ಹೆಡ್ ರಾಘವೇಂದ್ರ ಹುಣಸೂರು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿರುವ  ಅವರು, ಮಹಾಗುರುಗಳು ತಮ್ಮ ಆರೋಗ್ಯ ಮತ್ತು ವೈಯಕ್ತಿಕ ಕಾರಣಗಳಿಂದ ಒಂದು ವಾರ ಹೊರಗುಳಿಯಲು ನಿರ್ಧರಿಸಿದರು. ನಾವು ಅವರ ನಿರ್ಧಾರವನ್ನು ಗೌರವಿಸಿ, ವಿರಾಮ ತೆಗೆದುಕೊಳ್ಳಲು ಒಪ್ಪಿದ್ದೇವೆ. ಮುಂದಿನ ವಾರದಿಂದ ಎಂದಿನಂತೆ ಗುರುಗಳು ನಮ್ಮೊಂದಿಗಿರುತ್ತಾರೆ’ ಎಂದು ತಿಳಿಸಿದ್ದಾರೆ.
Published by:Kavya V
First published: