Evening Digest: ಸಿಎಂ ರಾಜೀನಾಮೆ, ಕಾರ್ಗಿಲ್​ ವಿಜಯ್​ ದಿವಸ್​; ಈ ದಿನದ ಪ್ರಮುಖ ಸುದ್ದಿ ಸಾರಾಂಶ

ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಸುದ್ದಿಗಳಿವು

evening digest

evening digest

 • Share this:
  ಬಿಎಸ್ ಯಡಿಯೂರಪ್ಪ ರಾಜೀನಾಮೆ
  ರಾಜ್ಯದಲ್ಲಿ ಬಿಎಸ್​ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ 2 ವರ್ಷ ಪೂರೈಸಿದೆ. ಈ ಸಂಭ್ರಮದ ನಡುವೆಯೇ ಸಿಎಂ ಬಿಎಸ್​ವೈ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಲೇ ಇತ್ತು. ಇಂದು ವಿಧಾನಸೌಧದ ಬ್ಯಾಂಕ್ವೆಟ್​ ಹಾಲ್​ನಲ್ಲಿ ನಡೆದ ಸರ್ಕಾರದ ಎರದು ವರ್ಷದ ಸಾಧನಾ ಸಮಾವೇಶದಲ್ಲಿ ಯಡಿಯೂರಪ್ಪ ತಮ್ಮ ರಾಜೀನಾಮೆ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ರಾಜೀನಾಮೆ ಕೊಡುವಂತೆ ಬಿಜೆಪಿ ಹೈಕಮಾಂಡ್​ ಯಡಿಯೂರಪ್ಪನವರಿಗೆ ಸೂಚನೆ ನೀಡಿತ್ತು ಎನ್ನಲಾಗಿದೆ. ಅದರಂತೆ ಇಂದು ಮಧ್ಯಾಹ್ನ ರಾಜ್ಯಪಾಲರನ್ನು ಭೇಟಿಯಾಗಿ ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ.

  ಮುಂದಿನ ಸಿಎಂ ಯಾರು?
  ಬಿಜೆಪಿಯಲ್ಲಿ ಹಲವು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಬೆಳವಣಿಗೆಗಳು ಯಡಿಯೂರಪ್ಪ ರಾಜೀನಾಮೆಯಿಂದ ಒಂದು ತಾರ್ಕಿಕ ಹಂತಕ್ಕೆ ಬಂದಿವೆ. ಯಡಿಯೂರಪ್ಪ ಕೊನೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದರ ಬೆನ್ನ ಹಿಂದೆಯೇ ಮುಂದಿನ ಸಿಎಂ ಯಾರಾಗಬೇಕೆಂಬ ಚರ್ಚೆಗಳು ಜೋರಾಗಿವೆ. ಬಿಜೆಪಿಯಲ್ಲಿ ಸಿಎಂ ಸ್ಥಾನದ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಹುಬ್ಬಳ್ಳಿಯ ನಾಲ್ವರು ಪ್ರಬಲ ಬಿಜೆಪಿ ನಾಯಕರ ಚಿತ್ತವೂ ಸಿಎಂ ಕುರ್ಚಿಯತ್ತ ನೆಟ್ಟಿದ್ದು, ಹೈಕಮಾಂಡ್ ಯಾರಿಗೆ ಗ್ರೀನ್ ಸಿಗ್ನಲ್ ನೀಡಲಿದೆ ಅನ್ನೋದು ಕುತೂಹಲ ಕೆರಳಿಸಿದೆ.

  ಇಂದಿನಿಂದ ಆರಂಭವಾಯಿತು ಕಾಲೇಜ್​
  ನಾಲ್ಕು ತಿಂಗಳ ಬಳಿ ಅಕ್ಷರ ದೇಗುಲಗಳು ಗಿಜಿಗುಟ್ಟಿತು. ಕಳೆ ಗುಂದಿದ್ದ ವಿದ್ಯಾಲಕ್ಷ್ಮಿ ಮುಖ ಮಕ್ಕಳ ಬರುವಿಕೆಯಿಂದ ಇಂದು ಮತ್ತೆ ಅರಳಿತು. ಮಕ್ಕಳ ಕಲವರದಿಂದ ಶಿಕ್ಷಕರಲ್ಲಿ ಉತ್ಸಾಹದ ಕಟ್ಟೆ ಹೊಡೆಯಿತು‌. ಹೌದು, ಕೊರೋನಾ ಕಾರಣದಿಂದ ಮುಚ್ಚಲ್ಪಟ್ಟಿದ್ದ ಪದವಿ ಕಾಲೇಜುಗಳು ಇಂದಿನಿಂದ ಅದ್ದೂರಿಯಾಗಿ ಕೆಲಸ ಪ್ರಾರಂಭಿಸಿದೆ. ಕೊರೋನಾ ಎರಡನೇ ಅಲೆಯಿಂದ ಅನ್ ಲೈನ್ ಕ್ಲಾಸ್ ನಲ್ಲಿದ್ದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇಂದು ಭೌತಿಕ ತರಗತಿಗಳಿಗೆ ಹಾಜರಾದರು. ಸರ್ಕಾರದ ಎಲ್ಲಾ‌ ಸಿಎಬಿ (Covid Appropriate Behavior) ನಿಯಮಗಳನ್ನ ಪಾಲಿಸುವುದುರ ಮೂಲಕ ರಾಜ್ಯದ ಎಲ್ಲಾ ಪದವಿ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಸರ್ಕಾರ ಸೂಚಿಸಿದೆ. ಹಿನ್ನೆಲೆ ಇಂದು ಬೆಂಗಳೂರು ಸೇರಿದಂತೆ ಎಲ್ಲಾ ಪದವಿ ಶಿಕ್ಷಣ ದೇಗುಲಗಳು ಚಟುವಟಿಕೆ ಆರಂಭಿಸಿದೆ.

  ಕಾರ್ಗಿಲ್​ ವಿಜಯ್​ ದಿವಸ್​
  ಕಾರ್ಗಿಲ್‌ ಯುದ್ಧ ಬಹುತೇಕ ಎಲ್ಲರಲ್ಲೂ ಈಗಲೂ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಜಮ್ಮು ಕಾಶ್ಮೀರದ ಕಾರ್ಗಿಲ್‌ನಲ್ಲಿ ನಡೆದ ಈ ಯುದ್ಧದಲ್ಲಿ ಪಾಕಿಸ್ತಾನವನ್ನು ಭಾರತದ ವೀರ ಯೋಧರು ಸದೆಬಡಿದು, ಅವರು ಆಕ್ರಮಿಸಿಕೊಂಡಿದ್ದ ಜಾಗವನ್ನು ವಶಕ್ಕೆ ಪಡೆದರು. ಈ ಯುದ್ಧದಲ್ಲಿ ಹಲವಾರು ಯೋಧರು ದೇಶಕ್ಕಾಗಿ ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ. ಐತಿಹಾಸಿಕ ಕಾರ್ಗಿಲ್ ಯುದ್ಧವು 1999 ರ ಮೇ ಮತ್ತು ಜುಲೈ ನಡುವೆ ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿ ನಡೆಯಿತು. ಪಾಕಿಸ್ತಾನದ ಪಡೆಗಳು ಆಕ್ರಮಿಸಿಕೊಂಡ ತಾಣಗಳ ಮೇಲೆ ಭಾರತ ಜಯ ಸಾಧಿಸಿದಾಗ ನಮ್ಮ ಸೇನೆಯ ಹೋರಾಟ, ಉತ್ಸಾಹ ಮತ್ತು ಸ್ಥಿತಿಸ್ಥಾಪಕತ್ವವು ಫಲ ನೀಡಿತು. ಪ್ರತಿ ವರ್ಷ, ಯುದ್ಧದಲ್ಲಿ ಹುತಾತ್ಮರಾದ ಸೈನಿಕರನ್ನು ಸ್ಮರಿಸಲು ದೇಶವು ಜುಲೈ 26 ರಂದು ಕಾರ್ಗಿಲ್ ದಿವಸ್ ಅನ್ನು ಆಚರಿಸುತ್ತದೆ

  ನಟಿ ಜಯಂತಿ ಇನ್ನಿಲ್ಲ
  ಮನಮೋಹಕ ಅಭಿನಯಕ್ಕೆ ಹೆಸರಾಗಿದ್ದ ಹಿರಿಯ ನಟಿ ಜಯಂತಿ ಇಹಲೋಕ ತ್ಯಜಿಸಿದ್ದಾರೆ. ಇದರೊಂದಿಗೆ ಸ್ಯಾಂಡಲ್​ವುಡ್​ನಲ್ಲಿ ಮತ್ತೊಂದು ಪ್ರಮುಖ ಕೊಂಡಿ ಕಳಚಿದೆ. ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ದೀರ್ಘಕಾಲದಿಂದ ಅನಾರೋಗ್ಯ ಹೊಂದಿದ್ದ ಅವರು ಮಗ ಕೃಷ್ಣಕುಮಾರ್ ಅವರನ್ನ ಅಗಲಿದ್ದಾರೆ. 1945, ಜನವರಿ 6ರಂದು ಬಳ್ಳಾರಿ ಜಿಲ್ಲೆಯಲ್ಲಿ ಜನಿಸಿದ ಜಯಂತಿ ಅವರ ಮೂಲ ಹೆಸರು ಕಮಲಾ ಕುಮಾರಿ ಆಗಿತ್ತು. 60ರಿಂದ 80ರ ದಶಕಗಳವರೆಗೆ ಸ್ಯಾಂಡಲ್​ವುಡ್​ನಲ್ಲಿ ನಾಯಕನಟಿಯಾಗಿ ಜನರನ್ನ ಪುಳಕಿತಗೊಳಿಸಿದ್ದ ಜಯಂತಿ ಅವರು ಕನ್ನಡ ಮಾತ್ರವಲ್ಲದೆ ಇನ್ನೂ ಐದು ಭಾಷೆಗಳ ಸಿನಿಮಾಗಳಲ್ಲಿ ಅಭಿನಯಿಸಿ ರಂಜಿಸಿದ್ದಾರೆ.

  ಮೀರಾಬಾಯಿ ಚಾನುಗೆ ಚಿನ್ನದ ಪದಕ ಸಿಗುವ ಸಾಧ್ಯತೆ
  ಟೊಕಿಯೋ ಒಲಿಪಿಂಕ್ಸ್​ನಲ್ಲಿ ಭಾರತದ ಪದಕದ ಬೇಟೆಯನ್ನು ಶುರು ಮಾಡಿದ ಮೀರಾಬಾಯಿ ಚಾನುಗೆ ಯಾರೂ ಊಹಿಸದ ಅದೃಷ್ಟ ಕೈ ಹಿಡಿಯುವ ಸಾಧ್ಯತೆ ಇದೆ. ಶನಿವಾರ 49 ಕೆಜಿ ವೇಯ್ಟ್​​ ಲಿಫ್ಟಿಂಗ್​ ವಿಭಾಗದಲ್ಲಿ ಮೀರಾಬಾಯಿ ಚಾನು 2ನೇ ಸ್ಥಾನ ಗೆಲ್ಲುವ ಮೂಲಕ ಭಾರತಕ್ಕೆ ಬೆಳ್ಳಿ ಪದಕ ಗಿಟ್ಟಿಸಿದ್ದರು. ಆದರೆ ಈಗ ಮೀರಾಗೆ ಚಿನ್ನದ ಪದಕ ಸಿಗುವ ಸಾಧ್ಯತೆ ಇದೆ. ಮೀರಾ ಎದುರು ಮೊದಲ ಸ್ಥಾನ ಗೆದ್ದಿದ್ದ ಚೀನಾದ ಹೋಹು ಜಿಝಿಹಿ (Hou Zhizhi) ಚಿನ್ನದ ಪದಕವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಹೋಹು ಜಿಝಿಹಿ ವಿರುದ್ಧ ಡೋಪಿಂಗ್​ ಆರೋಪ ಎದುರಾಗಿದ್ದು, ಪರೀಕ್ಷೆಗಾಗಿ ಆಟದ ಬಳಿಕವೂ ಅವರನ್ನು ಒಲಿಂಪಿಕ್​ ಗ್ರಾಮದಲ್ಲಿ ಉಳಿಸಿಕೊಳ್ಳಲಾಗಿದೆ.
  Published by:Seema R
  First published: