Evening News Roundup: ಥಿಯೇಟರ್ 100% ಭರ್ತಿಗೆ ಅನುಮತಿ; ಕೋರ್ಟ್ ಬಳಿ ಗುಂಡಿನ ಚಕಮಕಿ: ಇಂದಿನ ಪ್ರಮುಖ ಸುದ್ದಿಗಳು

Today Kannada news: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

evening digest

evening digest

  • Share this:
ಥಿಯೇಟರ್​​ 100% ಭರ್ತಿಗೆ ಅನುಮತಿ:  ಕೋವಿಡ್ -19 ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ನಡೆಸಲಾಯಿತು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಸಿನಿಮಾ ಮಂದಿರಗಳನ್ನು ಕೆಲವು ನಿರ್ಬಂಧಗಳೊಂದಿಗೆ ತೆರೆಯಲು ಅವಕಾಶ ನೀಡಿರುವುದಾಗಿ ತಿಳಿಸಿದರು. ಈ ಮೂಲಕ ಸಿನಿಮಾ ರಂಗದವರಿಗೆ ಹಾಗೂ ಸಿನಿ ಪ್ರಿಯರಿಗೆ ಸರ್ಕಾರ ಗುಡ್​ ನ್ಯೂಸ್ ನೀಡಿದೆ. ಮುಂದುವರೆದು ಮಾತನಾಡಿದ ಸಿಎಂ, ಕೋವಿಡ್ ತಜ್ಞರ ಜೊತೆ ಸಭೆ ಮಾಡಿದ್ದೇವೆ. ಪಾಸಿಟಿವ್ ರೇಟ್ ನಿಯಂತ್ರಣದಲ್ಲಿ ಇದೆ. ಅ. 1 ರಿಂದ ಪಾಸಿಟಿವ್ ರೇಟ್ 1 ಕ್ಕಿಂತ ಕಮ್ಮಿ ಇದ್ದರೆ ಸಿನಿಮಾ ಮಂದಿರದಲ್ಲಿ ಶೇ  100 ರಷ್ಟು ಆಸನ ಭರ್ತಿಗೆ ಅವಕಾಶ ನೀಡಲಾಗಿದೆ. ಅಕ್ಟೋಬರ್ 1 ರಿಂದ ಸಿನಿಮಾ ಥಿಯೇಟರ್ ಶೇ. 100ರಷ್ಟು ತೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಶೆ.1 ಕ್ಕಿಂತ ಪಾಸಿಟಿವಿಟಿ ದರ ಕಡಿಮೆ ಇರುವ ಜಿಲ್ಲೆಗಳಲ್ಲಿ ಶೇ. 100 ರಷ್ಟು ಸೀಟಿಂಗ್ ಅನುಮತಿ ನೀಡಲಾಗಿದೆ. ಶೇ.1 ಕ್ಕಿಂತ ಪಾಸಿಟಿವಿಟಿ ದರ ಜಾಸ್ತಿ ಇರುವ ಜಿಲ್ಲೆಗಳಲ್ಲಿ ಶೇ. 50 ಸೀಟಿಂಗ್ ಅನುಮತಿ ನೀಡಲಾಗಿದೆ. ಶೇ. 2ರಷ್ಟು ಇದ್ದರೆ ಸಿನಿಮಾ ಮಂದಿರಗಳೇ ಸ್ಥಗಿತಗೊಳಿಸಲಾಗುವುದು ಎಂದರು.

ದೆಹಲಿಯ ಕೋರ್ಟ್​ ಆವರಣದಲ್ಲಿ ಗುಂಡಿನ ಚಕಮಕಿ

ದೆಹಲಿಯ ನ್ಯಾಯಾಲಯದಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಈ ಗಲಭೆ ವೇಳೆ ಒಬ್ಬ ಗ್ಯಾಂಗ್​ ಸ್ಟರ್​ ಮತ್ತು ಇತರೆ ಮೂವರು ಸಾವನ್ನಪ್ಪಿದ್ದಾರೆ. ಜಿತೇಂದರ್​ ಗೋಗಿ (gangster Jitender Gogi)  ಸಾವನ್ನಪ್ಪಿರುವ ಗ್ಯಾಂಗ್​ಸ್ಟರ್​. ದೆಹಲಿಯ ರೋಹಿಣಿ ನ್ಯಾಯಾಲಯದ ( Delhi’s Rohini court) ಆವರಣದಲ್ಲಿ ಗ್ಯಾಂಗ್​ಸ್ಟರ್​ ಜಿತೇಂದರ್​ ಗೋಗಿ ಎದುರಾಳಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸರ ತಂಡ ಕೂಡ ಗುಂಡಿನ ದಾಳಿ ನಡೆಸಿದೆ. ತಿಹಾರ್​ ಜೈಲಿನಲ್ಲಿದ್ದ ಹಲವಾರು ಕ್ರಿಮಿನಲ್​ ಪ್ರಕರಣದಲ್ಲಿ ಮೋಸ್ಟ್​ ವಾಂಟೆಡ್​ ಆಗಿದ್ದ ಜಿತೇಂದರ್​ ಗೋಗಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತು. ಈ ವೇಳೆ ಸಿನಿಮೀಯ ರೀತಿಯಲ್ಲಿ ಆತನ ಎದುರಾಳಿ ತಂಡದ ನ್ಯಾಯಾಲಯದಲ್ಲಿ ವಕೀಲರ ವೇಷ ಧರಿಸಿ ಬಂದು, ಆತನ ಮೇಲೆ ಗುಂಡು ಹಾರಿಸಿದ್ದಾರೆ.

ಸಿಎಂ-ಸ್ಪೀಕರ್​​​ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ವಿಧಾನಸಭೆ ಅಧಿವೇಶನವನ್ನು ಕೊನೆಯ ದಿನ ಸ್ಪೀಕರ್​ (speaker )ಮುಂದೂಡಿದ್ದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ (Opposition leader Siddaramaiah )ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸ್ಪೀಕರ್​ ಹಾಗೂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸ್ಪೀಕರ್ ಸರ್ಕಾರದ ಕೈಗೊಂಬೆಯಾಗಿದ್ದಾರೆ, ಸ್ವತಂತ್ರವಾಗಿ ನಿರ್ಧಾರ ಹೇಗೆ ತೆಗೆದುಕೊಳ್ತಾರೆ. ಸ್ಪೀಕರ್ ಪಕ್ಷಾತೀತವಾಗಿ ನಡೆದುಕೊಳ್ಳಬೇಕು, ಸರ್ಕಾರದ ಭಾಗವಾದರೆ ಹೇಗೆ ಎಂದು ಪ್ರಶ್ನಿಸಿದರು. ಎಲ್ಲಾ ಬಿಲ್ ಪಾಸು ಮಾಡಿಕೊಂಡ್ರು, ಜನರ ಸಮಸ್ಯೆ ಚರ್ಚೆಗೆ ಅವಕಾಶ ಕೊಡಲಿಲ್ಲ ಎಂದು ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ಬಸವರಾಜ್​​ ಬೊಮ್ಮಾಯಿ ಮೇಲೆ ನಿರೀಕ್ಷೆಯಿತ್ತು, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದೆ ಅಂದುಕೊಂಡಿದ್ದೆ. ಆದರೆ ಸಿಎಂ ಆರ್ ಎಸ್ ಎಸ್ ಕೈಗೊಂಬೆಯಂತೆ ಕೆಲಸ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಲೋಕಸಭೆ ಸ್ಪೀಕರ್ ಹಿಂದಿ ಭಾಷಣಕ್ಕೆ ಅನ್ನದಾನಿ ವಿರೋಧ

ಜಂಟಿ ಸದನ ಉದ್ದೇಶಿಸಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಹಿಂದಿಯಲ್ಲಿ ಭಾಷಣ ಆರಂಭಿಸಿದರು. ಆಗ ಹಿಂದಿ‌ ಭಾಷಣಕ್ಕೆ ಜೆಡಿಎಸ್ ಶಾಸಕ‌ ಅನ್ನದಾನಿ ಅವರು ವಿರೋಧ ವ್ಯಕ್ತಪಡಿಸಿದರು. ಕನ್ನಡ ಬಾವುಟ ಪ್ರದರ್ಶಿಸಿ, ಕನ್ನಡದಲ್ಲಿ ಭಾಷಣ ಮಾಡುವಂತೆ ಎದ್ದು ನಿಂತು ಕೂಗಿದರು. ಬಾವುಟ ಪ್ರದರ್ಶಿಸಿ, ಕರ್ನಾಟಕಕ್ಕೆ ಜೈ ಎಂದು ಘೋಷಣೆ ಕೂಗಿದರು. 

ಬಿ.ಎಸ್.ಯಡಿಯೂರಪ್ಪಗೆ ಅತ್ಯುತ್ತಮ ಶಾಸಕ ಪ್ರಶಸ್ತಿ

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಅತ್ಯತ್ತಮ ಶಾಸಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ವಿಧಾನಸಭೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಪ್ರಶಸ್ತಿ ಘೋಷಿಸಿದ್ದು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಅತ್ಯುತ್ತಮ ಶಾಸಕ ಪ್ರಶಸ್ತಿ ಬಗ್ಗೆ ಬಿಎಸ್ವೈ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಜನಪ್ರತಿನಿಧಿಯಾಗಿ, ಪ್ರಜಾಪ್ರಭುತ್ವದ ದೇಗುಲದಲ್ಲಿ ಜನರ ಆಶೋತ್ತರಗಳ ಈಡೇರಿಕೆಯ ದೊಡ್ಡ ಜವಾಬ್ದಾರಿಯ ಅರಿವಿನೊಂದಿಗೆ, ಶಾಸಕಾಂಗದ ಕರ್ತವ್ಯಗಳನ್ನು ನಿರ್ವಹಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ ಎಂದಿದ್ದಾರೆ.
Published by:Kavya V
First published: