Evening Digest: ಮತಾಂತರ ನಿಷೇಧ ವಿಧೇಯಕ ಪಾಸ್: ರಾತ್ರಿ ವೇಳೆ ಈ ಲಕ್ಷಣ ಇದ್ದರೆ ಓಮಿಕ್ರಾನ್ ಅಂತೆ; ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಮತಾಂತರ ನಿಷೇಧ ವಿಧೇಯಕ ಪಾಸ್ : ವಿಧಾನಮಂಡಲ ಅಧಿವೇಶ (Belagavi Session) ಶುರುವಾದಗಿನಿಂದ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಮತಾಂತರ ನಿಷೇಧ ವಿಧೇಯಕವನ್ನು (Anti Conversion Bill) ವಿಧಾನಸಭೆಯಲ್ಲಿ (Karnataka Assembly) ಪಾಸ್​ ಮಾಡಿಕೊಳ್ಳುವಲ್ಲಿ ಬಹುಮತ ಹೊಂದಿರುವ ಬಿಜೆಪಿ ಸರ್ಕಾರ (BJP Government) ಸಫಲವಾಗಿದೆ. ವಿರೋಧ ಪಕ್ಷಗಳ ತೀವ್ರ ವಿರೋಧ, ಗದ್ದಲದ ಮಧ್ಯೆಯೂ ಧ್ವನಿಮತದ ಮೂಲಕ ವಿಧೇಯಕವನ್ನು ಅಂಗೀಕರಿಸಲಾಯಿತು. ವಿಧೇಯಕದ ಮೇಲಿನ ಚರ್ಚೆ ವೇಳೆ ಕಾಂಗ್ರೆಸ್​ ನಾಯಕರು ಹಾಗೂ ಸರ್ಕಾರದ ಮಧ್ಯೆ ತೀವ್ರ ವಾಕ್ಸಮರ ನಡೆಯಿತು. ಕಾಂಗ್ರೆಸ್ ಸದಸ್ಯರು ಸದನದ ಬಾವಿಗಳಿದು ಪ್ರತಿಭಟನೆ ನಡೆಸಿದ್ದರ ನಡುವೆಯೇ ವಿಧಾನಸಭೆಯಲ್ಲಿ ಮತಾಂತರ ನಿಷೇಧ ಕಾಯಿದೆ ಅಂಗೀಕಾರಗೊಂಡಿತು.

ರಾತ್ರಿ ವೇಳೆ ನಿಮಗೆ ಈ ಅನುಭವ ಆದರೆ ಓಮೈಕ್ರಾನ್​​ ಕಾಟ ಎಂದೇ ಅರ್ಥ..!

ಒಮಿಕ್ರಾನ್ ವೈರಸ್ ಬಗ್ಗೆ ಜನ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ.. ಸ್ವಲ್ಪ ಜ್ವರ ಬಂದರೂ ಸಾಕು ಎಲ್ಲಿ ಒಮಿಕ್ರಾನ್ ಬಂದಿದೆ ಎಂದು ಭಯಪಡುತ್ತಿದ್ದಾರೆ.. ಜನರ ಈ ಭಯ ಮತ್ತಷ್ಟು ಹೆಚ್ಚು ಮಾಡುವಂತೆ, ರಾತ್ರಿವೇಳೆಯಲ್ಲಿ ನಮಗೆ ಈ ರೀತಿ ಆದರೆ ಅದು ಒಮಿಕ್ರಾನ್ ರೋಗದ ಲಕ್ಷಣಗಳು ಇರಬಹುದು ಎಂದು ಹೇಳಲಾಗುತ್ತಿದೆ. ಒಮಿಕ್ರಾನ್​ ಅಸ್ತಿತ್ವವನ್ನು ಮೊದಲು ಗುರುತಿಸಿದವರಲ್ಲಿ ಒಬ್ಬರಾದ ಡಾ.ಆಯಂಜೆಲಿಕ್​ ಕೊಯೆಟ್ಜೆ ಅವರು ನೀಡಿರುವ ಮಾಹಿತಿ ಈಗ ಜನರನ್ನು ಬೆಚ್ಚಿಬೀಳಿಸಿದೆ..  ರಾತ್ರಿಯ ಹೊತ್ತಿನಲ್ಲಿ ವಿಪರೀತ ಮೈಕೈ ನೋವು ಬಂದು ಬೆವರುವುದು. ಇದರ ಜೊತೆಗೆ ಉಸಿರಾಟದ ಸಮಸ್ಯೆ, ಎದೆನೋವು, ರಕ್ತದಲ್ಲಿನ ಆಮ್ಲಜನಕದ ಪ್ರಮಾಣ ಕುಸಿತ ಕಂಡು ಬರಲಿದೆಯಂತೆ.ಹೀಗಾಗಿ ರಾತ್ರಿ ವೇಳೆ ಈ ರೀತಿಯ ಅನುಭವ ಯಾರಿಗಾದರೂ ಆಗುತ್ತಿದ್ದರೆ ತಕ್ಷಣವೇ ಮುಂಜಾಗ್ರತೆ ವಹಿಸಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ,ಒಮ್ಮೆ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ.

ಸತತ 2ನೇ ದಿನವೂ ಭೂಕಂಪನ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸತತ 2ನೇ ದಿನವೂ ಭೂಕಂಪನ ಸಂಭವಿಸಿದೆ. ಇಂದು ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ. ಚಿಕ್ಕಬಳ್ಳಾಪುರದ ಶೆಟ್ಟಿಗೆರೆ ಗ್ರಾಮದ ಸುತ್ತಮುತ್ತ ಭೂಮಿ ಕಂಪಿಸಿದೆ. ಇಂದು ಮಧ್ಯಾಹ್ನ 2.15 , 2.17 ಹಾಗೂ 2.25ರ ಸಮಯದಲ್ಲಿ ಭೂಮಿ ಅಲುಗಾಡಿದ್ದು ಜನರ ಗಮನಕ್ಕೆ ಬಂದಿದೆ. ಚಿಕ್ಕಬಳ್ಳಾಪುರದಲ್ಲಿ ಇಂದು ಸಂಭವಿಸಿದ ಭೂಕಂಪನ ರಿಕ್ಟರ್ ಮಾಪನದಲ್ಲಿ 3.6 ತೀವ್ರತೆ ದಾಖಲಾಗಿದೆ. ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಪ್ರಾಧಿಕಾರ ಇದನ್ನು ದೃಢಪಡಿಸಿದೆ. ಚಿಕ್ಕಬಳ್ಳಾಪುರ ತಾಲ್ಲೂಕು ಗೊಲ್ಲಹಳ್ಳಿ ಗ್ರಾಮ ಪಂಚಾಯತಿಯ ಸಾದೇನಹಳ್ಳಿ ಗ್ರಾಮದಲ್ಲಿ ಭೂಕಂಪನ ಕೇಂದ್ರ ಬಿಂದು ಇದೆ. ಭೂಮಿಯ ಅಂತರಾಳದಲ್ಲಿ ೧8 ಕಿ ಮೀ ಓಳಭಾಗದಲ್ಲಿ ಭೂಕಂಪನದ ಕೇಂದ್ರಬಿಂದು ಇದೆ. ಕಳೆದ ಒಂದು ವಾರದಿಂದ 5 ಬಾರಿ ಭೂಕಂಪನ ಆಗಿದೆ. ನಿನ್ನೆಯೂ ಸಹ 2.9 ಹಾಗೂ 3.0 ತೀವ್ರತೆ ದಾಖಲಾಗಿತ್ತು. ಇಂದು ಅತಿ ಹೆಚ್ಚು 3.6 ತೀವ್ರತೆಯ ದಾಖಲಾಗಿದೆ.

ಫೋನ್​ ಕದ್ದಿದ್ದಾನೆ ಅಂತ ಉಲ್ಟಾ ನೇತು ಹಾಕಿ ಹಲ್ಲೆ

ಮಂಗಳೂರು (Mangalore) ನಗರದ ಬಂದರ್​ನಲ್ಲಿ ಮೀನುಗಾರನೊಬ್ಬನನ್ನು ಬೋಟ್(Boat)​ ನಲ್ಲಿಯೇ ತಲೆಕೆಳಗಾಗಿಸಿ ನೇತು ಹಾಕಿ ಹಲ್ಲೆ ಮಾಡಿರುವ ಘಟನೆ ತಡ ವಾಗಿ ಬೆಳಕಿಗೆ ಬಂದಿದೆ. ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯನ್ನು ಆಂಧ್ರ  ಪ್ರದೇಶದ ಸೀನು ಎಂದು ಗುರುತಿಸಲಾಗಿದೆ. ಕೇವಲ ಸಣ್ಣ ವಿಚಾರಕ್ಕೆ ಈ ರೀತಿ ಹಲ್ಲೆ ಮಾಡಿರುವುದಕ್ಕೆ ಭಾರೀ ಆಕ್ರೋಶ ಹೊರಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಲ್ಲೆ ಮಾಡುವ ವಿಡಿಯೋ ಸಖತ್​ ವೈರಲ್​ ಆಗಿದೆ. ಮೀನುಗಾರಿಕಾ ಬೋಟ್​​ನಲ್ಲಿ ಮೊಬೈಲ್​(Mobile) ಕದ್ದ ಆರೋಪ ಹೊರಿಸಿ ಆತನಿಗೆ ಚಿತ್ರಹಿಂಸೆ ನೀಡಿದ್ದಾರೆ. ಈತನಿಂದ ಸತ್ಯ ಬಾಯಿ ಬಿಡಿಸಲು ಉಲ್ಟಾ ನೇತು ಹಾಕಿ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಬೋಟ್​ನ ಹುಕ್ಸ್ (Hooks)​ಗೆ ಸೀನು ಕಾಲು ಕಟ್ಟಿ ತಲೆಕೆಳಗಾಗಿ ನೇತು ಹಾಕಿ ಟಾರ್ಚರ್​ ನೀಡಿದ್ದರು. ಈ ಬಗ್ಗೆ ಪಾಂಡೇಶ್ವರ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ಒಟ್ಟು 6 ಜನರನ್ನು ಬಂಧಿಸಿದ್ದಾರೆ.

ಟ್ರೋಲ್​ನಿಂದ ತಪ್ಪಿಸಿಕೊಳ್ಳಲು ಅಪ್ಪು ಫೋಟೋ ಶೇರ್​ ಮಾಡಿದ ರಶ್ಮಿಕಾ

ಅಪ್ಪು ನಿಧನರಾದಗಿನಂದಲೂ ರಶ್ಮಿಕಾ ಮಂದಣ್ಣ ಅಪ್ಪು ಬಗ್ಗೆ ಏನು ಮಾತನಾಡಿಲಿಲ್ಲ. ಯಾವಾಗ ಕನ್ನಡಿಗರು ಈ ನಟಿಯನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಳ್ಳುವಾಗಲೇ, ರಶ್ಮಿಕಾ ಅಪ್ಪು ಅವರ ಪೋಟೋವನ್ನು ತಮ್ಮ ಇನ್​ಸ್ಟಾಗ್ರಾಮ್​ ಅಕೌಂಟ್​ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಅಂಜನಿ ಪುತ್ರ ಸಿನಿಮಾದಲ್ಲಿ ಪುನೀತ್ ರಾಜ್​ಕುಮಾರ್​ ಜೊತೆ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಈ ಸಿನಿಮಾದ ‘ಬಾರಿ ಖುಷಿ ಮಾರ್ರೆ ನಂಗೆ ನನ್ನ ಹೆಂಡ್ತಿ ಕಂಡ್ರೆ’ ಸಾಂಗ್​ ಸೂಪರ್​ ಡೂಪರ್​ ಹಿಟ್​ ಆಗಿತ್ತು. ಅದೇ ಹಾಡಿನ ಫೋಟೊವೊಂದನ್ನು ರಶ್ಮಿಕಾ ಮಂದಣ್ಣ ಶೇರ್​ ಮಾಡಿದ್ದಾರೆ. ಜೊತೆಗೆ ಒಂದು ಹಾರ್ಟ್ ಸಿಂಬಲ್​ ಹಾಕಿದ್ದಾರೆ.
Published by:Kavya V
First published: