Evening Digest: ರಾಜ್ಯದೆಲ್ಲೆಡೆ ಮಳೆ ಆರ್ಭಟ; ನಾಳೆ ಅಮೆರಿಕಕ್ಕೆ ಮೋದಿ; ಈ ದಿನದ ಸುದ್ದಿ ಸಾರಾಂಶ

ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ

evening digest

evening digest

 • Share this:
  ಚಿತ್ರಮಂದಿರ ಭರ್ತಿಗೆ ಮನವಿ
  ನಿರ್ಮಾಪಕರಾದ ಜಯಣ್ಣ, ಸೂರಪ್ಪ ಬಾಬು, ಕೆ.ಪಿ ಶ್ರೀಕಾಂತ್ ಅವರು ಇಂದು ಆರೋಗ್ಯ ಸಚಿವ ಕೆ. ಸುಧಾರಕರ್ ಅವರನ್ನು ಭೇಟಿಯಾಗಿದ್ದಾರೆ. ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಸೀಟು ಭರ್ತಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ನಿರ್ಮಾಪಕರಿಗೆ ತುಂಬಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ದೊಡ್ಡ ನಟರ ಸಿನಿಮಾಗಳು ರಿಲೀಸ್​ಗೆ ರೆಡಿಯಾಗಿವೆ. ಆದರೆ, ಶೇ.50ರಷ್ಟು ಮಾತ್ರ ಸೀಟು ಭರ್ತಿಗೆ ಅವಕಾಶ ನೀಡಿರುವುದರಿಂದ ಸಮಸ್ಯೆಯಾಗುತ್ತಿದೆ. ಇದರಿಂದಾಗಿ ನಿರ್ಮಾಪಕರು ತುಂಬಾ ಸಂಕಷ್ಟದಲ್ಲಿ ಇದ್ದಾರೆ ಎಂದು ನಿರ್ಮಾಪಕರು ತಮ್ಮ ಕಷ್ಟ ಹೇಳಿಕೊಂಡಿದ್ದಾರೆ.

  ರಾಜ್ಯದೆಲ್ಲೆಡೆ ಮಳೆ ಆರ್ಭಟ
  ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳೆದೆರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಧಾರವಾಡ, ಬೆಳಗಾವಿ, ಯಾದಗಿರಿಯಲ್ಲಿ ಮಳೆ ಅಬ್ಬರ ಜೋರಾಗಿದೆ. ಮುಂಗಾರಿನ ಕೊನೆಯ ತಿಂಗಳಲ್ಲಿ ಅಧಿಕ ಮಳೆಯಾಗುವ ನಿರೀಕ್ಷೆ ಇದೆ ಎಂದು ಈ ಹಿಂದೆಯೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು, ಅದರಂತೆ, ಕರಾವಳಿ, ಮಲೆನಾಡು ಸೇರಿದಂತೆ ಉತ್ತರ ಒಳನಾಡಿನಲ್ಲಿ ಮಳೆ ಅಬ್ಬರ ಹೆಚ್ಚಿದೆ.

  ಮುರುಗೇಶ್​​ ನಿರಾಣಿ ಟ್ವಿಟರ್​ ಖಾತೆ ಹ್ಯಾಕ್
  ಬೃಹತ್ ಮತ್ತು ಮಧ್ಯಮ ಕೈಗಾರಿಕಾ ‌ಸಚಿವ ಶ್ರೀ ಮುರುಗೇಶ್ ಆರ್ ನಿರಾಣಿ ಅವರ ಟ್ವಿಟ್ಟರ್ ಖಾತೆ @NiraniMurugesh ಹ್ಯಾಕ್ ಮಾಡಲಾಗಿದೆ ಎಂದು ನಿರಾಣಿ ಅವರೇ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. ವಿದೇಶಿ ಸ್ಥಳದಿಂದ ತಮ್ಮ ಖಾತೆಯನ್ನು ಹ್ಯಾಕ್​ ಮಾಡಲಾಗಿದ್ದು, ಖಾತೆಯಿಂದ ಯಾವುದೇ ಮಾಹಿತಿ ಬಂದರೂ ಅದನ್ನು ನಂಬಬೇಡಿ ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮ ಕಾರ್ಯದರ್ಶಿ ಮೂಲಕ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.

  ನಾಳೆ ಅಮೆರಿಕಕ್ಕೆ ಮೋದಿ
  ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಾಳೆ (ಸೆಪ್ಟೆಂಬರ್ 22ಕ್ಕೆ ಅಮೆರಿಕಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಕೋವಿಡ್ ಸಾಂಕ್ರಾಮಿಕ ಬಳಿಕ ಇದು ಅವರ ಅಮೇರಿಕಾ ಪ್ರವಾಸವಾಗಿದೆ. ಇದೇ ವೇಳೆ ಅವರು ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ ಅವರನ್ನು ಭೌತಿಕವಾಗಿ ‌ಇದೇ ಮೊದಲ ಬಾರಿಗೆ ಭೇಟಿಯಾಗಲಿದ್ದಾರೆ. ಅಮೇರಿಕಾದ ಉನ್ನತ ಸಂಸ್ಥೆಗಳ ಸಿಇಓ (CEO)ಗಳ ಜೊತೆ ಸಭೆ ನಡೆಸಲಿದ್ದಾರೆ. ಕ್ವಾಡ್ ದೇಶಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ‌ ಕೂಡ ಭಾಗಿಯಾಗಲಿದ್ದಾರೆ.

  ಅನುದಾನ ತಾರತಮ್ಯ ಕುರಿತು ಸದನದಲ್ಲಿ ಗದ್ದಲ
  ಅನುದಾನ ತಾರತಮ್ಯದ ವಿಷಯವಾಗಿ ಇಂದು ವಿಧಾನಸಭೆಯಲ್ಲಿ (Assembly Session) ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಆಡಳಿತ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಈ ವಿಷಯವಾಗಿ ಮಾತು ಆರಂಭಿಸಿದ ಎಚ್.ಡಿ. ರೇವಣ್ಣ ಹಾಗೂ ಶಿವಲಿಂಗೇಗೌಡ ಅವರು ಬಿಜೆಪಿ ಈ ಸರ್ಕಾರ ಅನುದಾನ ತಡೆ ಹಿಡಿದಿದೆ, ಶಾಸಕರ ಕ್ಷೇತ್ರಗಳಿಗೆ ಸರ್ಕಾರ ಅನುದಾನ ಕೊಡುತ್ತಿಲ್ಲ ಎಂದು ಆರೋಪ ಮಾಡಿದರು. ಇದಕ್ಕೆ ಸಚಿವ ಮಾಧುಸ್ವಾಮಿ ಉತ್ತರ ಕೊಡುವ ವೇಳೆ ಮತ್ತಷ್ಟು ಆಕ್ರೋಶ ಹೊರಹಾಕಿದರು. ಶಾಸಕರ ಕ್ಷೇತ್ರಗಳಿಗೆ ಸರ್ಕಾರ ಅನುದಾನ ಕೊಡ್ತಿಲ್ಲ. ಸರ್ಕಾರ ಬರೀ ಲೂಟಿ ಮಾಡ್ತಿದೆ ಅಷ್ಟೇ. ಎರಡು ವರ್ಷಗಳಿಂದಲೂ ನಮಗೆ ಅನುದಾನ ಸಿಕ್ಕಿಲ್ಲ. ಅಧ್ಯಕ್ಷರೇ ನೀವು ಅನುದಾನ ಕೊಡಿಸಿ ಎಂದು ಕಿಡಿಕಾರಿದರು.

  ಲಸಿಕೆ ಪಡೆದವರಿಗೆ ಅಮೆರಿಕ ಪ್ರವೇಶ ಮುಕ್ತ
  ಚೀನಾ, ಭಾರತ , ಬ್ರೆಜಿಲ್ ಹಾಗೂ ಬಹುತೇಕ ಯುರೋಪ್ ಸೇರಿದಂತೆ 33 ದೇಶಗಳ ನಿವಾಸಿಗಳು ನವೆಂಬರ್​ನಲ್ಲಿ ಅಮೆರಿಕಕ್ಕೆ ತೆರಳಬಹುದು. ಆದರೆ, ಪ್ರಯಾಣಿಕರು ಕಡ್ಡಾಯವಾಗಿ ಅಧಿಕೃತ ಕೋವಿಡ್ ಲಸಿಕೆ ಪಡೆದವರು ಮಾತ್ರ ಅಮೆರಿಕ ಪ್ರವೇಶಿಸಬಹುದು. ಕಳೆದ ವರ್ಷದ ಆರಂಭದಲ್ಲಿ ಆರಂಭವಾದ ಮಾರಕ ಸಾಂಕ್ರಾಮಿಕ ಕೊರೋನಾ ಕಾರಣದಿಂದ ಹಲವು ನಿರ್ಬಂಧಗಳನ್ನು ವಿಧಿಸಲಾಗಿತ್ತು. ಇದೀಗ ಆ ನಿರ್ಬಂಧಗಳನ್ನು ಸಡಿಲಿಸಿರುವುದಾಗಿ ಶ್ವೇತಭವನ ಸೋಮವಾರ ಹೇಳಿದೆ. ಅಧ್ಯಕ್ಷ ಜೋ ಬಿಡೆನ್ ಅವರು, ವಿವಿಧ ದೇಶಗಳಿಂದ ಅಮೆರಿಕಗೆ ಬರುವ ಪ್ರಯಾಣಿಕರಿಂದ ಇಲ್ಲಿನ ನಿವಾಸಿಗಳಿಗೆ ಕೋವಿಡ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಲವು ಕಠಿಣ ನಿಯಮಗಳನ್ನು ತೆಗೆದುಕೊಂಡಿದ್ದೇವೆ. ಹೊರದೇಶದಿಂದ ಯಾರೇ ಪ್ರಯಾಣಿಕರು ಅಮೆರಿಕಗೆ ಬರಬೇಕಾದರೆ ಅವರು ಕೋವಿಡ್ ಅಧಿಕೃತ ಪೂರ್ಣ ಲಸಿಕೆ ಪಡೆದಿರಬೇಕು ಎಂದು ಹೇಳಿದ್ದಾರೆ
  Published by:Seema R
  First published: