• Home
 • »
 • News
 • »
 • state
 • »
 • Evening Digest: ಬಿಎಸ್​ವೈ ನಾಯಕತ್ವದ ವಿಚಾರದಿಂದ ಧಾರಾವಾಹಿ ಶೂಟಿಂಗ್​ಗೆ ಅನುಮತಿವರೆಗೂ ಓದಲೇಬೇಕಾದ ಈ ದಿನದ ಸುದ್ದಿಗಳು

Evening Digest: ಬಿಎಸ್​ವೈ ನಾಯಕತ್ವದ ವಿಚಾರದಿಂದ ಧಾರಾವಾಹಿ ಶೂಟಿಂಗ್​ಗೆ ಅನುಮತಿವರೆಗೂ ಓದಲೇಬೇಕಾದ ಈ ದಿನದ ಸುದ್ದಿಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯ, ದೇಶ -ವಿದೇಶದಲ್ಲಿ ಇಂದು ನಡೆದ ಘಟನಾವಳಿ ಕುರಿತಾದ ಮಾಹಿತಿ ಇಲ್ಲಿದೆ

 • Share this:

  ಯಡಿಯೂರಪ್ಪ ನಾಯಕತ್ವ ಬದಲಾವಣೆ ಇಲ್ಲ
  ರಾಜ್ಯ ಬಿಜೆಪಿ ಸರ್ಕಾರದಲ್ಲಿ ಬಿಎಸ್‌ವೈ ನಾಯಕತ್ವ ಬದಲಾವಣೆ ಸಂಬಂಧ ಹೈಕಮಾಂಡ್ ನಲ್ಲಿ ಮಹತ್ವದ ಚರ್ಚೆ ನಡೆದಿದೆ. ಸದ್ಯಕ್ಕೆ ನಾಯಕತ್ವ ಬದಲಾವಣೆ ಮಾಡದಿರಲು ಹೈಕಮಾಂಡ್ ಚಿಂತನೆ ನಡೆಸಿದ್ದು, ಬಿಎಸ್‌ವೈ ಮುಂದುವರಿಸಲು, ಶೇ. 50 ರಷ್ಟು ಸಂಪುಟ ಪುನಾರಚನೆಗೆ ಹೈಕಮಾಂಡ್ ಪ್ಲ್ಯಾನ್ ಮಾಡಿದೆ. ಕೊರೋನಾ ಸಂಕಷ್ಟ ಮುಗಿದ ಬಳಿಕ ರಾಜ್ಯ ಸಚಿವ ಸಂಪುಟದಲ್ಲಿ ಭಾರೀ ಬದಲಾವಣೆ ಆಗಲಿದೆ. ಹಿರಿಯ ಸಚಿವರು, ನಿಷ್ಕ್ರಿಯ ಸಚಿವರನ್ನು ಕೈಬಿಡಲು ಹೈಕಮಾಂಡ್ ಚಿಂತನೆ ನಡೆಸಿದೆ. ಈ ಮೂಲಕ ಹಲವು ಸಚಿವರಿಗೆ ಬಿಜೆಪಿ ಕೊಕ್ ನೀಡಲಿದೆ.


  ಜಾತಿ ಆಧಾರಿತ ಲಸಿಕೆ
  ಮಲ್ಲೇಶ್ವರಂ ಕ್ಷೇತ್ರದಲ್ಲಿ ಡಿಸಿಎಂ ಅಶ್ವಥ್​ ನಾರಾಯಣ ಅವರು ಅರ್ಚಕರಿಗೆ ಪ್ರತ್ಯೇಕವಾಗಿ ಲಸಿಕೆ ಕೊಡಿಸಿದ್ದಾರೆ ಎಂಬ ಆರೋಪ ವಿವಾದಕ್ಕೆ ಕಾರಣವಾಗಿದೆ. ಜಾತಿ ಆಧಾರದ ಮೇಲೆ ಲಸಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್​ ಕಾರ್ಯಕರ್ತರು ಈ ಸಂಬಂಧ ಮಲ್ಲೇಶ್ವರಂ ಠಾಣೆಗೆ ದೂರು ನೀಡಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಆಶಾ ಕಂಪ್ಲೇಂಟ್​​ ದಾಖಲಿಸಿದ್ದಾರೆ. ವಿವಾದ ಭುಗಿಲೇಳುತ್ತಲೇ ಡಿಸಿಎಂ ಅಶ್ವಥ್​ ನಾರಾಯಣ ಅವರು ಸ್ಪಷ್ಟನೆ ನೀಡಿದ್ದಾರೆ ನಮ್ಮ ಸರ್ಕಾರದಲ್ಲಿ ಜಾತಿ ಆಧರಿತ ವ್ಯವಸ್ಥೆ ಮಾಡಿಲ್ಲ. ಇಂತಹ ಯೋಚನೆ ಕೂಡ ಮಾಡಿಲ್ಲ. ಜಾತಿ, ಧರ್ಮ ಆಧರಿತ ರಾಜಕಾರಣ ಕಾಂಗ್ರೆಸ್​​ನವರದ್ದು ಎಂದು ತಿರುಗೇಟು ನೀಡಿದರು.


  ವೈದ್ಯರ ಮೇಲೆ ಹಲ್ಲೆ ನಡೆಸದಂತೆ ಕಠಿಣ ಕ್ರಮ
  ದೇಶದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದರ ಜೊತೆಗೆ ಸಾವಿನ ಸಂಖ್ಯೆಯೂ ಅಧಿಕವಾಗುತ್ತಿದೆ. ಕೊರೋನಾ ಸಾವುಗಳು ಹೆಚ್ಚಾಗುತ್ತಿರುವಂತೆಯೇ ವೈದ್ಯರ ಮೇಲೆ ಹಲ್ಲೆಗಳು ಹೆಚ್ಚಾಗುತ್ತಿವೆ. ಗುವಾಹಟಿಯಿಂದ 140 ಕಿಲೋಮೀಟರ್ ದೂರದಲ್ಲಿರುವ ಅಸ್ಸಾಂನ ಹೊಜೈನಲ್ಲಿರುವ ಕೋವಿಡ್ ಆರೈಕೆ ಕೇಂದ್ರದಲ್ಲಿ ವೈದ್ಯರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಆಮ್ಲಜನಕದ ಕೊರತೆಯಿಂದಾಗಿ ಸಾವನ್ನಪ್ಪಿದ ಕೊರೊನಾ ಸೋಂಕಿತ ರೋಗಿಯ ಸಂಬಂಧಿಕರು, ವೈದ್ಯರ ಮೇಲೆ ಲೋಹದ ಕಸದ ಡಬ್ಬಿ ಮತ್ತು ಇಟ್ಟಿಗೆಗಳಿಂದ ಮನ ಬಂದಂತೆ ಥಳಿಸಿದ್ದಾರೆ. ಮೃತನ ಸಂಬಂಧಿಕರ ಜೊತೆಗೆ ವೈದ್ಯರ ಮೇಲೆ ಸ್ಥಳೀಯರು ಹಲ್ಲೆ ಮಾಡಿದ್ದಾರೆ. ವೈದ್ಯರ ಮೇಲಿನ ಮಾರಣಾಂತಿಕ ಹಲ್ಲೆಯ ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಘಟನೆಯಲ್ಲಿ ಮುಖ್ಯ ಆರೋಪಿಗಳು ಸೇರಿದಂತೆ 24 ಜನರನ್ನು ಬಂಧಿಸಲಾಗಿದೆ.


  ಫೈಜರ್​ ಲಸಿಕೆಗೆ ಅನುಮೋದನೆ
  ದೇಶಾದ್ಯಂತ ಕೊರೋನಾ ಎರಡನೇ ಅಲೆಯ ಅಬ್ಬರ ಕಳೆದ ಒಂದು ವಾರದಿಂದ ತುಸು ತಗ್ಗಿದೆ. ಆದರೂ ಸೋಂಕಿತ ಆತಂಕ ಮುಂದುವರೆದಿದೆ. ವೈರಸ್ ನಿಯಂತ್ರಣಕ್ಕಾಗಿ ಸರ್ಕಾರ ಈಗಾಗಲೇ ದೇಶವ್ಯಾಪಿ ಲಸಿಕೆ ಅಭಿಯಾನ ಆರಂಭಿಸಿದೆ. ದೇಶದಲ್ಲಿ ಈವರೆಗೂ ಮೂರು ಲಸಿಕೆಗಳಿಗೆ ಅನುಮೋದನೆ ನೀಡಲಾಗಿದೆ. ಅವುಗಳಲ್ಲಿ ಎರಡು ದೇಶೀಯ ಉತ್ಪಾದಿತ ಕೋವಿಶಿಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳಾದರೆ ಉಳಿದ ಮತ್ತೊಂದು ಲಸಿಕೆ ಸ್ಪುಟ್ನಿಕ್ ವಿ ರಷ್ಯಾ ದೇಶದ್ದು. ಆದರೆ, ಇನ್ನು ಸ್ಪುಟ್ನಿಕ್ ವಿ ಲಸಿಕೆ ಹಂಚಿಕೆ ಆರಂಭವಾಗಿಲ್ಲ. ಹೀಗಾಗಿ ಎರಡು ಲಸಿಕೆಗಳನ್ನು ಮಾತ್ರ ನೀಡಲಾಗಿದೆ. ದೇಶದಲ್ಲಿ ಲಸಿಕೆಗೆ ಅಭಾವ ತಲೆ ತೋರಿರುವ ಕಾರಣ ನಿರೀಕ್ಷಿತ ಮಟ್ಟದಲ್ಲಿ ಲಸಿಕೆ ನೀಡಲು ಸಾಧ್ಯವಾಗುತ್ತಿಲ್ಲ.ಇದೀಗ ಫೈಜರ್ ಲಸಿಕೆ ಅನುಮೋದನೆಗಾಗಿ ಕಂಪನಿ ಮತ್ತು ಸರ್ಕಾರದ ನಡುವೆ ಮಾತುಕತೆ ನಡೆಯುತ್ತಿದೆ. ಒಂದು ವೇಳೆ ಈ ಲಸಿಕೆಗೆ ಭಾರತ ಅನುಮೋದನೆ ನೀಡಿದರೆ ಲಸಿಕೆ ಅಭಾವ ತುಸು ಕಡಿಮೆಯಾಗಲಿದೆ.


  ಉತ್ತರ ಪ್ರದೇಶ ಪಠ್ಯದಲ್ಲಿ ಯೋಗಿ ಕುರಿತ ಪಾಠ
  ಉತ್ತರಪ್ರದೇಶದ ಮೀರತ್‌ನಲ್ಲಿರುವ ಸರ್ಕಾರಿ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯವು ರಾಮದೇವ್, ಯೋಗಿ ಆದಿತ್ಯನಾಥ್​ ಹಾಗೂ ಜಗ್ಗಿ ವಾಸುದೇವ್​ ಅವರನ್ನು ದಾರ್ಶನಿಕರು ಎಂದು ಈಗಾಗಲೇ ತನ್ನ ಪಠ್ಯಕ್ರಮದಲ್ಲಿ ಸೇರಿಸಿದ್ದು, ಉಳಿದ ವಿವಿಗಳು ಶೀಘ್ರದಲ್ಲೇ ಅನುಸರಿಸುವ ಸಾಧ್ಯತೆಯಿದೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.


  ವೈದ್ಯರಿಗೆ ವಿಶ್ವದರ್ಜೆ ಸೇವೆ ಸಿಗಬೇಕು
  ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶ್ವದರ್ಜೆಯ ಆರೋಗ್ಯ ಸೇವೆ ದೊರೆಯುವ ಮಟ್ಟಿಗೆ ಕೆಲಸ ಮಾಡಿ, ಸರ್ಕಾರಿ ಆಸ್ಪತ್ರೆಗಳ ಬಗೆಗಿನ ಜನರ ಮನೋಧೋರಣೆ ಬದಲಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೊಸ ವೈದ್ಯರಿಗೆ ಕರೆ ನೀಡಿದರು.


  ಬೆಂಗಳೂರಿನಲ್ಲೇ ಆರಂಭವಾಗಿದೆ ಧಾರಾವಾಹಿ ಶೂಟಿಂಗ್​​
  ಕೊರೋನಾ ಎರಡನೇ ಅಲೆ ಆರಂಭವಾದಾಗಿನಿಂದ ರಾಜ್ಯದಲ್ಲಿ ಲಾಕ್​ಡೌನ್​ ಜಾರಿಗೆ ತರಲಾಗಿದೆ. ಲಾಕ್​ಡೌನ್​ ಆದಾಗಿನಿಂದ ಸಿನಿಮಾ ಹಾಗೂ ಧಾರಾವಾಹಿ ಚಿತ್ರೀಕರಣಕ್ಕೆ ನಿಷೇಧ ಹೇರಲಾಗಿತ್ತು. ಲಾಕ್​ಡೌನ್​ ತೆರವುಗೊಳಿಸುವ ಸಮಯ ಹತ್ತಿರ ಬರುತ್ತಿದೆ. ರಾಜ್ಯದಲ್ಲಿ ಲಾಕ್​ಡೌನ್​ ಮುಂದುವರೆಯುತ್ತಾ ಅಥವಾ ಸಂಪೂರ್ಣವಾಗಿ ತೆರವುಗೊಳಿಸಲಾಗುತ್ತಾ ಎಂಬ ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಸದ್ಯಕ್ಕೆ ಮಾಹಿತಿಯೊಂದು ಲಭ್ಯವಾಗಿದ್ದು, ಹಂತ ಹಂತವಾಗಿ ಲಾಕ್​ಡೌನ್​ ತೆರೆವುಗೊಳಿಸಲು ರಾಜ್ಯ ಸರ್ಕಾರ ಯೋಚಿಸುತ್ತಿದೆ ಎನ್ನಲಾಗುತ್ತಿದೆ. ಇದರ ಭಾಗವಾಗಿಯೇ ಧಾರಾವಾಹಿಗಳ ಚಿತ್ರೀಕರಣಕ್ಕೆ ಅನುಮತಿ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆಯಂತೆ. ಅದೂ ಕೇವಲ ಸ್ಟುಡಿಯೋಗಳಲ್ಲಿ ಮಾತ್ರ ಶೂಟಿಂಗ್​ ಮಾಡಲು ಅನುಮತಿ ನೀಡಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ.

  Published by:Seema R
  First published: