• Home
 • »
 • News
 • »
 • state
 • »
 • Evening Digest: ದೇಶದೆಲ್ಲೆಡೆ ಮೋದಿ ಹುಟ್ಟುಹಬ್ಬದ ಸಂಭ್ರಮ; ಪಾಕ್ ಪ್ರವಾಸ ರದ್ದುಗೊಳಿಸಿದ ಕಿವೀಸ್: ಈ ದಿನದ ಸುದ್ದಿ ಸಾರಾಂಶ

Evening Digest: ದೇಶದೆಲ್ಲೆಡೆ ಮೋದಿ ಹುಟ್ಟುಹಬ್ಬದ ಸಂಭ್ರಮ; ಪಾಕ್ ಪ್ರವಾಸ ರದ್ದುಗೊಳಿಸಿದ ಕಿವೀಸ್: ಈ ದಿನದ ಸುದ್ದಿ ಸಾರಾಂಶ

evening digest

evening digest

ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳು

 • Share this:

  ಹುಟ್ಟು ಹಬ್ಬದ ಸಂಭ್ರಮದಲ್ಲಿ ಮೋದಿ
  ಪ್ರಧಾನಿ ನರೇಂದ್ರ ಮೋದಿ ಇಂದು 71ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ, ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ದಿಗ್ವಿಜಯ್ ಸಿಂಗ್ ಸೇರಿದಂತೆ ಹಲವರು ಪ್ರಧಾನಿ ನರೇಂದ್ರ ಮೋದಿಯ ಹುಟ್ಟು ಹಬ್ಬಕ್ಕೆ ಶುಭಾಶಯಗಳನ್ನು ಕೋರಿದ್ದಾರೆ. ಟ್ವೀಟ್​ ಮಾಡುವ ಮೂಲಕ ಹಲವು ರಾಜಕೀಯ ನಾಯಕರು ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಶುಭಾಶಯ ಗಳನ್ನು ಕೋರಿದ್ದಾರೆ. ಆದಾಗ್ಯೂ, ಪಿಎಂ ಮೋದಿ ಎಂದಿನಂತೆ ಇಂದು ಸಹ ತಮ್ಮ ಕರ್ತವ್ಯ ಗಳನ್ನು ಮುಂದುವರಿಸಿದ್ದಾರೆ.


  ಪೆಟ್ರೋಲ್​-ಡಿಸೇಲ್​ ಜಿಎಸ್​ಟಿ ವ್ಯಾಪ್ತಿಗೆ ರಾಜ್ಯಗಳ ವಿರೋಧ
  ತಿನಿತ್ಯ ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆ ಏರಿಕೆ ಆಗುತ್ತಿದ್ದು ಜನಸಾಮಾನ್ಯರು ಕಂಗಾಲಾಗಿದ್ದಾರೆ. ಕೇಂದ್ರ ಸರ್ಕಾರಕ್ಕೆ ಜನ ಶಾಪ ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಅನ್ನು ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ತರಬೇಕು, ರಾಜ್ಯಗಳು ವಿಧಿಸುವ ತೆರಿಗೆಗೆ ಬ್ರೇಕ್ ಹಾಕಬೇಕು. ಸಂಪೂರ್ಣವಾಗಿ ತಾನೇ ತೆರಿಗೆ ವಿಧಿಸಬೇಕು, ತನ್ಮೂಲಕ ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆ ಕಡಿಮೆ ಮಾಡಬೇಕು ಎಂದು ಹೊರಟಿದ್ದ ಕೇಂದ್ರ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ. ಶುಕ್ರವಾರ ಉತ್ತರ ಪ್ರದೇಶದ ಲಕ್ನೋದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆದ 45ನೇ ಸರಕು ಮತ್ತು ಸೇವಾ ತೆರಿಗೆ ಮಂಡಳಿ ಸಭೆಯಲ್ಲಿ ಪೆಟ್ರೋಲ್​ ಮತ್ತು ಡಿಸೇಲ್​ ಅನ್ನು ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ತರಲು ರಾಜ್ಯಗಳು ವಿರೋದ ವ್ಯಕ್ತಪಡಿಸಿವೆ.


  ದೇವಾಲಯಗಳು ನಮ್ಮ ಅಸ್ಮಿತೆ ಎಂದ ಸಿಎಂ
  ದೇವಾಲಯ ತೆರವು ವಿಚಾರದಲ್ಲಿ ರಾಜ್ಯದಾದ್ಯಂತ ಹಿಂದೂಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ವಿಚಾರ ಕುರಿತು ಇಂದು ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ , ದೇವಾಲಯಗಳು ನಮ್ಮ ಅಸ್ಮಿತೆ , ನಮ್ಮ ಧರ್ಮದ ದೇವಾಲಯ ರಕ್ಷಣೆ ಮಾಡಿಕೊಳ್ಳುತ್ತೇವೆ. ಅನಧಿಕೃತ ದೇವಸ್ಥಾನ ತೆರವಿನ ವಿಚಾರ ಚರ್ಚೆ ಮಾಡುತ್ತಿದ್ದೇವೆ. ಈ ವಿಚಾರದ ಬಗ್ಗೆ ಗಂಭೀರ ಚಿಂತನೆ ಮಾಡುತ್ತಿದ್ದೇನೆ. ಈ ಬಗ್ಗೆ ಕೂಡಲೇ ಪರಿಹಾರ ಕಂಡು ಕೊಳ್ಳುತ್ತೇವೆ. ಯಾರೂ ಕೂಡ ಅವಸರದಲ್ಲಿ ದೇವಾಲಯ ತೆಗೆಯಬಾರದು ಮತ್ತು ಧಕ್ಕೆ ಮಾಡಬಾರದು ಎಂದು ಸೂಚಿಸಿದ್ದೇನೆ.


  ಮಕ್ಕಳನ್ನು ಕಾಡುತ್ತಿದೆ ಜ್ವರದ ಭೀತಿ
  ಕರ್ನಾಟಕದಲ್ಲಿ ಸಾಂಕ್ರಾಮಿಕ ಕೊರೋನಾ ನಡುವೆಯೇ ಮತ್ತೊಂದು ರೋಗದ ಭೀತಿ ಎದುರಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನಿಗೂಢ ಜ್ವರ ಮಕ್ಕಳನ್ನು ಕಾಡುತ್ತಿದ್ದು, ಪೋಷಕರಲ್ಲಿ ಆತಂಕ ಮೂಡಿಸಿದೆ. ಯಾವ ಜಿಲ್ಲೆಗಳಲ್ಲಿ ಎಷ್ಟು ಮಕ್ಕಳಿಗೆ ವೈರಲ್ ಫೀವರ್ ತಗುಲಿದೆ ಎಂಬುದರ ಬಗ್ಗೆ ಆಯಾ ಜಿಲ್ಲೆಗಳ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಜ್ವರ ಕೊರೋನಾ ಜೊತೆಗೆ ಎದುರಿಸಬೇಕಾದ ಮತ್ತೊಂದು ಸವಾಲಾಗಿದೆ. ಇದು ಕೊರೋನಾ ಮೂರನೇ ಅಲೆಯಾ(Corona 3rd wave) ಎಂಬ ಆತಂಕವೂ ಎದುರಾಗಿದೆ. ಆದರೆ ತಜ್ಞರು ಹವಾಮಾನ ವೈಪರೀತ್ಯದಿಂದ ಈ ರೀತಿ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಎಂದು ಹೇಳುತ್ತಿದ್ದಾರೆ.


  ದಾಖಲೆ ಲಸಿಕೆ ಅಭಿಯಾನ
  ಭಾರತವು ಶುಕ್ರವಾರ ಸಂಜೆ 5 ಗಂಟೆಯವರೆಗೆ 2 ಕೋಟಿ ಕೋವಿಡ್ -19 ಲಸಿಕೆಗಳನ್ನು ನೀಡುವ ಮೂಲಕ ದಾಖಲೆ ನಿರ್ಮಿಸಿದೆ. ಭಾರತೀಯ ಜನತಾ ಪಕ್ಷ ಹಲವು ರಾಜ್ಯಗಳ ಜೊತೆಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ದಾಖಲೆ ಮಾಡುವ ಗುರಿಯನ್ನು ಹೊಂದಿತ್ತು. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ನಾಗರಿಕರಿಗೆ ಉಚಿತ ಕೋವಿಡ್ -19 ಲಸಿಕೆ ನೀಡುವುದಾಗಿ ಘೋಷಿಸಿದ್ದಾರೆ ಮತ್ತು ಇದುವರೆಗೆ ಡೋಸ್ ತೆಗೆದುಕೊಳ್ಳದವರಿಗೆ ಲಸಿಕೆ ಹಾಕುವ ಮೂಲಕ ಅವರಿಗೆ ಪಿಎಂ ಮೋದಿ ಹುಟ್ಟುಹಬ್ಬದ ಉಡುಗೊರೆ ನೀಡುವಂತೆ ಜನರನ್ನು ಒತ್ತಾಯಿಸಿದ್ದಾರೆ.


  ಆನ್​ಲೈನ್​ ಜೂಜು, ಬೆಟ್ಟಿಂಗ್ ಗೆ ದುಪ್ಪಟ್ಟು ದಂಡ
  ಕರ್ನಾಟಕದಲ್ಲಿ ಆನ್​​ಲೈನ್​​ ಗ್ಯಾಂಬ್ಲಿಂಗ್, ಬೆಟ್ಟಿಂಗ್​​ಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಇಂದು ವಿಧಾನಸಭೆಯಲ್ಲಿ ಮಹತ್ವದ ವಿಧೇಯಕವನ್ನು ಮಂಡಿಸಲಾಯಿತು. ಗೃಹ ಸಚಿವ ಅರಗ ಜ್ಞಾನೇಂದ್ರ ಕರ್ನಾಟಕ ಪೊಲೀಸ್ ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು. ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಕಾಯ್ದೆಯಲ್ಲಿ ಸರ್ಕಾರ ಆನ್​ಲೈನ್​​​ ಜೂಜನ್ನು ನಿಷೇಧಿಸುವ ಬಗ್ಗೆ ಪ್ರಸ್ತಾಪ ಮಾಡಿದೆ. ಹೀಗಾಗಿ ಇನ್ಮುಂದೆ ಕರ್ನಾಟಕದಲ್ಲಿ ಆನ್​ಲೈನ್​ ಗ್ಯಾಂಬ್ಲಿಂಗ್ ಬೆಟ್ಟಿಂಗ್ ಅಪರಾಧ ಮಾಡಿದರೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.


  ಪಾಕ್ ಪ್ರವಾಸವನ್ನೇ ರದ್ದುಗೊಳಿಸಿದ ಕಿವೀಸ್
  ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ವರದಿ ಬರೆಯುವ ವೇಳೆಗೆ ಪಾಕಿಸ್ತಾನದ ರಾವಲ್​ಪಿಂಡಿಯಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಮಧ್ಯೆ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯ ಆರಂಭವಾಗಬೇಕಿತ್ತು. ಪಂದ್ಯ ಶುರುವಾಗಲು ಕೆಲವೇ ನಿಮಿಷಗಳು ಇರುವಾಗ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯು ತನ್ನ ಇಡೀ ಪಾಕ್ ಪ್ರವಾಸವನ್ನೇ ರದ್ದುಗಳಿಸಿದೆ. ಪಾಕಿಸ್ತಾನದಲ್ಲಿ ಭದ್ರತಾ ಅಪಾಯ ಇದೆ ಎಂದು ನ್ಯೂಜಿಲೆಂಡ್ ಸರ್ಕಾರ ಹಾಗೂ ಕ್ರಿಕೆಟ್ ಮಂಡಳಿಯ ಭದ್ರತಾ ಸಲಹೆಗಾರರು ಎಚ್ಚರಿಸಿದ ಹಿನ್ನೆಲೆಯಲ್ಲಿ ಕ್ರಿಕೆಟ್ ಪ್ರವಾಸ ರದ್ದುಗೊಳಿಸಲು ನಿರ್ಧರಿಸಲಾಗಿದೆ. ಈಗಾಗಲೇ ಪಾಕಿಸ್ತಾನಕ್ಕೆ ಆಗಮಿಸಿದ್ದ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಈಗ ಪಾಕಿಸ್ತಾನದಿಂದ ಹೊರಗೆ ಹೋಗಲು ತಯಾರಿ ನಡೆಸಿದೆ.

  Published by:Seema R
  First published: