• Home
 • »
 • News
 • »
 • state
 • »
 • Evening Digest: ರಾಜ್ಯ ರಾಜಕೀಯದಿಂದ ಮಲೆನಾಡಿನಲ್ಲಿನ ಮಳೆ ಅಬ್ಬರದವರೆಗೆ ಈ ದಿನದ ಓದಲೇಬೇಕಾದ ಸುದ್ದಿ

Evening Digest: ರಾಜ್ಯ ರಾಜಕೀಯದಿಂದ ಮಲೆನಾಡಿನಲ್ಲಿನ ಮಳೆ ಅಬ್ಬರದವರೆಗೆ ಈ ದಿನದ ಓದಲೇಬೇಕಾದ ಸುದ್ದಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯ, ದೇಶ -ವಿದೇಶದಲ್ಲಿ ಇಂದು ನಡೆದ ಘಟನಾವಳಿ ಕುರಿತಾದ ಮಾಹಿತಿ ಇಲ್ಲಿದೆ

 • Share this:

  ಸಿಎಂ ಬದಲಾವಣೆಗೆ ವಿಶ್ವನಾಥ್​ ಬೇಡಿಕೆ
  ರಾಜ್ಯ ರಾಜಕೀಯದಲ್ಲಿ ಮತ್ತೆ ಬದಲಾಣೆಯ ಗಾಳಿ ಬೀಸುತ್ತಿದೆ. ನಾಯಕತ್ವ ಬದಲಾವಣೆ ವಿಚಾರ ಮತ್ತಷ್ಟು ಚರ್ಚೆಯಾಗುತ್ತಿದೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್​ ರಾಜ್ಯಕ್ಕೆ ಆಗಮಿಸಿದ ಬಳಿಕ ಇನ್ನಷ್ಟು ರಾಜಕೀಯ ವಿಷಯಗಳು ಗರಿಗೆದರಿವೆ. ಬಿಎಸ್​ ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬೇಕು ಎಂಬ ಮಾತುಗಳು ಮತ್ತೆ ಮತ್ತೆ ಕೇಳಿ ಬರುತ್ತಿವೆ. ಈ ವಿಚಾರವಾಗಿ ಮಾಜಿ ಸಚಿವ ಹೆಚ್​.ವಿಶ್ವನಾಥ್​ ಸಿಎಂ ಬದಲಾವಣೆ ಮಾಡಿ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​ ಸಿಂಗ್​ ಮುಂದೆ ಬೇಡಿಕೆ ಇಟ್ಟಿದ್ದಾರೆ.


  ಸರ್ಕಾರ ಇದ್ದರೇನು ಪ್ರಯೋಜನ; ಕುಮಾರಸ್ವಾಮಿ
  ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮತ್ತೆ ಭಿನ್ನಮತ ಭುಗಿಲೆದ್ದಿದ್ದು, ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರ ತಲೆದಂಡಕ್ಕೆ ಹಲವು ನಾಯಕರು ಶಾಸಕರು ಹಾಗೂ ಸಚಿವರುಗಳೇ ಒತ್ತಾಯಿಸುತ್ತಿದ್ದಾರೆ. ಹಲವು ನಾಯಕರು ದೆಹಲಿಗೆ ತೆರಳಿ ಹೈಕಮಾಂಡ್​ ನಾಯಕರನ್ನು ಭೇಟಿ ಮಾಡಿದ ಪ್ರಸಂಗವೂ ನಡೆದದ್ದಾಗಿತ್ತು. ಇದೀಗ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಪಕ್ಷದ ರಾಜ್ಯ ನಾಯಕತ್ವದ ಬಗ್ಗೆ ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ, "ನಾಯಕತ್ವವೇ ಇಲ್ಲದ ಬಿಜೆಪಿ ಸರ್ಕಾರ ಇದ್ದೇನು ಉಪಯೋಗ, ವಿಸರ್ಜಿಸಿ ಮೊದಲು" ಎಂದು ಕಿಡಿಕಾರಿದ್ದಾರೆ.


  ಮಲೆನಾಡಿನಲ್ಲಿ ಮಳೆಯಬ್ಬರ
  ಕಾಫಿನಾಡು ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಮೊನ್ನೆ ರಾತ್ರಿಯಿಂದ ಮಲೆನಾಡಿನಾದ್ಯಂತ ಸುರಿಯುತ್ತಿರುವ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕಳೆದೆರಡು ವರ್ಷಗಳ ಮಳೆಯ ಅವಾಂತರಗಳಿಂದ ಜನರಿನ್ನೂ ಹೊರಗೇ ಬಂದಿಲ್ಲ. ಸೌಲಭ್ಯ-ಪರಿಹಾರವಿಲ್ಲದೆ ಅತಂತ್ರವಾಗಿದ್ದಾರೆ. ಇದೀಗ, ಮತ್ತೆ ಮಲೆನಾಡಿಗೆ ಡೆವಿಲ್ ರಿಟನ್ರ್ಸ್ ಆಗಿದ್ದು ಬೀಸುತ್ತಿರೋ ಗಾಳಿ, ಸುರಿಯುತ್ತಿರೋ ಮಳೆ ಕಂಡು ಭಯಗೊಂಡಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಮಳೆ ಆರಂಭವಾದ ಮೊದಲ ದಿನವೇ ಆದ ಅನಾಹುತ ಕಂಡು ಜನ ಹೈರಾಣಾಗಿ, ವರುಣದೇವನಿಗೆ ಶಾಂತವಾಗಿರಪ್ಪಾ ಅಂತ ಹರಕೆ ಕೊಟ್ಟಿಕೊಂಡಿದ್ದಾರೆ.


  ಸರ್ಕಾರ ವಜಾಗೊಳಿಸಿ-ಸಿದ್ದರಾಮಯ್ಯ
  ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಸಂಬಂಧ ಬಿರುಸಿನ ರಾಜಕೀಯ ಚಟುವಟಿಗಳು ನಡೆಯುತ್ತಿವೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್ ನಿನ್ನೆಯಿಂದ ಸಿಎಂ, ಸಚಿವರು, ಬಂಡಾಯ ಶಾಸಕರ ಜೊತೆ ಸಭೆಗಳ ಮೇಲೆ ಸಭೆಗಳನ್ನು ನಡೆಸುತ್ತಿದ್ದಾರೆ. ಈ ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯಪಾಲ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು. ರಾಜ್ಯಪಾಲರು ಮಧ್ಯ ಪ್ರವೇಶಿಸಿ, ಸರ್ಕಾರವನ್ನು ನಿಷ್ಕ್ರಿಯಗೊಳಿಸಬೇಕು ಎಂದು ಒತ್ತಾಯಿಸಿದರು. ಬಿಜೆಪಿಯ ಒಳ ಜಗಳದಿಂದ ರಾಜ್ಯದ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಈ ಹಿನ್ನೆಲೆ ರಾಜ್ಯಪಾಲರು ತಕ್ಷಣ ಮಧ್ಯ ಪ್ರವೇಶಿಸಿ, ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.


  ಜುಲೈ 31ಕ್ಕೆ ಸಿಬಿಎಸ್​ಇ ಫಲಿತಾಂಶ
  ಸಿಬಿಎಸ್​ಸಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶವನ್ನು ಜುಲೈ 31 ರಂದು ಪ್ರಕಟಿಸಲಾಗುವುದು ಎಂದು ಮಂಡಳಿ ತಿಳಿಸಿದೆ. ಪರೀಕ್ಷೆ ಇಲ್ಲದೇ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡುತ್ತಿರುವ ಮಂಡಳಿ ಕಳೆದ ಮೂರು ವರ್ಷಗಳ ವಿದ್ಯಾರ್ಥಿಗಳ ಸಾಧನೆ ಆಧಾರದ ಮೇಲೆ ಮೌಲ್ಯ ಮಾಪನ ನಡೆಸಲು ತೀರ್ಮಾನಿಸಿದೆ ಎಂದು ಸುಪ್ರೀಂ ಕೋರ್ಟ್​ ಮುಂದೆ ಅಫಿಡವಿಟ್​ನಲ್ಲಿ ತಿಳಿಸಿದೆ. 30: 30: 40 ಮಾನದಂಡದ ಆಧಾರದ ಮೇಲೆ ಫಲಿತಾಂಶ ಪ್ರಕಟಿಸಲಾಗುವುದು. 12 ನೇ ತರಗತಿಯಲ್ಲಿ ನಡೆಸಲಾದ ಕಿರು ಪರೀಕ್ಷೆ ಸೇರಿದಂತೆ ಇತರೆ ಮಾನದಂಡದ ಮೇಲೆ ಶೇ 40ರಷ್ಟು ಮತ್ತು 11ನೇ ತರಗತಿ ಮತ್ತು 10ನೇ ತರಗತಿ ಅಂತಿಮ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಸಾಧನೆ ಆಧಾರದ ಮೇಲೆ ಶೇ 60 ಅಂಕ ನೀಡಲಾಗುವುದು ಎಂದು ತಿಳಿಸಲಾಗಿದೆ.


  ರಾಹುಲ್​ ಭೇಟಿಯಾದ ಪಂಜಾಬ್​ ಎಎಪಿ ಬಂಡಾಯ ನಾಯಕರು
  ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ಪಕ್ಷಕ್ಕೆ ದೆಹಲಿಗೆ ಹೊರತಾಗಿ ಬಲವಾಡ ಬೇರು ಇರುವುದು ಪಂಜಾಬ್ ರಾಜ್ಯದಲ್ಲೇ. ಹೀಗಾಗಿ ಪಂಜಾಬ್​ನಲ್ಲಿ ಮುಂದಿನ ವರ್ಷ ಅಧಿಕಾರ ಹಿಡಿಯಲೇಬೇಕು ಎಂದು ಎಎಪಿ ಪಣ ತೊಟ್ಟಿದೆ. ಈ ನಡುವೆ ಪಂಜಾಬ್ ಎಎಪಿ ಘಟಕದ ಆಂತರಿಕ ಭಿನ್ನಾಭಿಪ್ರಾಯ ಅರವಿಂದ ಕೇಜ್ರಿವಾಲ್ ಮಹತ್ವಾಕಾಂಕ್ಷೆಗೆ ಪೆಟ್ಟು ನೀಡಿದೆ ಎನ್ನಲಾಗುತ್ತಿದೆ. ಇತ್ತೀಚೆಗೆ ತಾನೆ ಗುಜರಾತ್​ನಲ್ಲೂ ಎಎಪಿಯನ್ನು ಗಟ್ಟಿಯಾಗಿಸುವ ಮಾತನ್ನಾಡಿ, ಮುಂದಿನ ಚುನಾವಣೆಯಲ್ಲಿ ಗುಜರಾತ್​ನಲ್ಲಿ ಎಎಪಿ ಎಲ್ಲಾ ಸ್ಥಾನಗಳಲ್ಲೂ ಸ್ಪರ್ಧಿಸಲಿದೆ ಎಂದು ಅರವಿಂದ ಕೇಜ್ರಿವಾಲ್ ಘೋಷಿಸಿದ ಕೇವಲ ಎರಡನೇ ದಿನದಲ್ಲಿ ಪಂಜಾಬ್​ ಎಎಪಿಯ ಮೂವರು ಜನ ಶಾಸಕರು ಬಂಡಾಯ ಎದ್ದು, ಇದೀಗ ರಾಹುಲ್​ ಗಾಂಧಿಯನ್ನೂ ಭೇಟಿ ಮಾಡಿ ಕಾಂಗ್ರೆಸ್​ ಜೊತೆಗೆ ವಿಲೀನವಾಗಿರುವುದು ಎಎಪಿ ಪಕ್ಷಕ್ಕೆ ದೊಡ್ಡ ಹೊಡೆತ ಎನ್ನಲಾಗಿದೆ.

  Published by:Seema R
  First published: