Evening Digest: ಸದನದಲ್ಲಿ ಬೆಲೆ ಏರಿಕೆ ಕೋಲಾಹಲ, ಎಲೆಕ್ಟ್ರಿಕ್​ ವಾಹನಕ್ಕೆ ಉತ್ತೇಜನ: ಈ ದಿನದ ಸುದ್ದಿ ಸಾರಾಂಶ

ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳು

evening digest

evening digest

 • Share this:
  ಧಾರ್ಮಿಕ ಕ್ಷೇತ್ರಗಳ ತೆರವು ಕಾರ್ಯಾಚರಣೆ; ಪ್ರತಿಭಟನೆಗೆ ಸಜ್ಜು
  ರಾಜ್ಯದಲ್ಲಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಇದೀಗ ರಾಜ್ಯದಾದ್ಯಂತ ಭಾರೀ ವಿರೋಧ ಆರಂಭಗೊಂಡಿದೆ. ಅದರಲ್ಲೂ ಬಿಜೆಪಿ ಸರಕಾರ ಅಧಿಕಾರದಲ್ಲಿರುವ ಸಂದರ್ಭದಲ್ಲಿ ಈ ರೀತಿಯ ಬೆಳವಣಿಗೆ ನಡೆಯುತ್ತಿರುವುದು ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಒಳಗಾಗಿದೆ. ಹಿಂದುತ್ವದ ಕರ್ಮಭೂಮಿಯಾಗಿರುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಈ ವಿಚಾರದ ಕುರಿತಂತೆ ಹಿಂದೂಪರ ಸಂಘಟನೆಗಳು ಬಿಜೆಪಿ ವಿರುದ್ಧವೇ ಬೀದಿಗಿಳಿದು ಹೋರಾಟ ನಡೆಸಲು ಸಿದ್ಧಗೊಂಡಿದೆ. ಸುಪ್ರೀಂಕೋರ್ಟ್ ಆದೇಶದ ಹಿನ್ನಲೆಯಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿಯ ಸೂಚನೆ‌ ಮೇರೆಗೆ ದಕ್ಷಿಣ ಕನ್ನಡ‌ ಜಿಲ್ಲೆಯಲ್ಲೂ 1500 ಕ್ಕೂ ಮಿಕ್ಕಿದ‌ ಅನಧಿಕೃತ ಧಾರ್ಮಿಕ‌ ಕೇಂದ್ರಗಳ ಪಟ್ಟಿ ಮಾಡಲಾಗಿದ್ದು, ಯಾವುದೇ‌‌ ಸಂದರ್ಭದಲ್ಲಿ ಇವುಗಳ ನೆಲಸಮವಾಗುವ ಸಾಧ್ಯತೆಯೂ ಇದೆ.

  ಮೊಬೈಲ್ ಯಾಕೆ ಇಟ್ಟುಕೊಳ್ಳಲ್ಲ ಎಂದು ಕಾರಣ ಹೇಳಿದ ಸಿದ್ದರಾಮಯ್ಯ
  ಸಿದ್ದರಾಮಯ್ಯ ಮೊಬೈಲ್ ಇಟ್ಟುಕೊಂಡಿಲ್ಲದ ವಿಚಾರ ಸದನದಲ್ಲಿ ಪ್ರತಿಧ್ವನಿಸಿತು. ನೀವು ಯಾಕೆ ಮೊಬೈಲ್ ಇಟ್ಟುಕೊಂಡಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಸಿದ್ದರಾಮಯ್ಯರನ್ನ ಕೇಳಿಯೇ ಬಿಟ್ಟರು. ಇದಕ್ಕೆ ಉತ್ತರಿಸಿದ ವಿಪಕ್ಷ ನಾಯಕ, ಕೆಲವರಿಗೆ ಮೊಬೈಲ್ ಮೇಲೆ ಬಹಳ ಅಟ್ಯಾಚ್ಮೆಂಟ್ ಇದೆ. ನಾನಂತೂ ಮೊಬೈಲ್​ನಿಂದ ದೂರವೇ. ನನಗೆ ಮೊಬೈಲ್ ನ್ಯೂಸೆನ್ಸ್ ಆಗಿ ಹೋಗಿತ್ತು. ರಾತ್ರಿ ಹೊತ್ತೆಲ್ಲಾ ಫೋನ್ ಕರೆಗಳು ಬರುತ್ತಿದ್ದವು. ಅದ್ಕಕೆ ನಾನು ಮೊಬೈಲ್ ಫೋನ್ ಇಟ್ಟುಕೊಂಡಿಲ್ಲ. ಸಿಎಂ ಆದಾಗ ಐದು ವರ್ಷವೂ ನಾನು ಮೊಬೈಲ್ ಇಟ್ಟುಕೊಂಡಿರಲಿಲ್ಲ ಎಂದು ತಮ್ಮ ಹೇಳಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಪ್ರಿಯಾಂಕ್ ಖರ್ಗೆ, ಪೆಗಾಸಸ್ (ಮೊಬೈಲ್​ನಿಂದ ಮಾಹಿತಿ ಕದಿಯುವ ತಂತ್ರಾಂಶ) ಕಾರಣದಿಂದ ಮೊಬೈಲ್ ಇಟ್ಟುಕೊಂಡಿಲ್ಲ ಎಂದು ಸಿದ್ದರಾಮಯ್ಯ ಮಾತಿಗೆ ಧ್ವನಿಗೂಡಿಸಿದರು. ನಂತರ ಮಾತು ಮುಂದುವರಿಸಿದ ಸಿದ್ದರಾಮಯ್ಯ, ಮೊಬೈಲ್ ಇಲ್ಲದೇ ಇರುವುದನ್ನು ನೀವು ಟ್ರೈ ಮಾಡಿ ಎಂದು ಸಿಎಂ ಬೊಮ್ಮಾಯಿಗೆ ಸಲಹೆಯನ್ನೂ ನೀಡಿದರು.

  ಸದನದಲ್ಲಿ ಬೆಲೆ ಏರಿಕೆ ಕೋಲಾಹಲ
  ಪೆಟ್ರೋಲ್​ , ಡಿಸೇಲ್​ ಹಾಗೂ ಅಡುಗೆ ಸಿಲಿಂಡರ್​ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರ ಇಂದು ವಿಧಾನಸಭೆ ಅಧಿವೇಶನದಲ್ಲಿ ಜೋರು ಸದ್ದು ಮಾಡಿತು. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಮಧ್ಯಮ ಮತ್ತು ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಹೊಟೇಲ್​ಗಳಲ್ಲಿ ತಿಂಡಿ ರೇಟುಗಳು ದುಬಾರಿಯಾಗಿವೆ. ಒಂದು ಇಡ್ಲಿಗೆ 36 ರೂ ಆಗಿದೆ. ಹೊಟೇಲ್​ನಲ್ಲಿ ತಿಂಡಿ ದರ ಹೆಚ್ಚಿದ ಕಾರಣ ನಾನು ಹೋಟೇಲ್​ಗೆ ಹೋಗುವುದನ್ನೇ ನಿಲ್ಲಿಸಿದ್ದೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು. ಈ ವೇಳೆ ವಿಪಕ್ಷ ನಾಯಕರ ಗ್ಯಾಸ್​ ದರ ಏರಿಕೆ ವಿಚಾರ ಪ್ರಸ್ತಾಪದ ಚರ್ಚೆ ಸಮಯದಲ್ಲಿ ಮಧ್ಯೆ ಪ್ರವೇಶಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಸಿದ್ದರಾಮಯ್ಯ ಹೋಂ ವರ್ಕ್​ ಕೊಟ್ಟ ಸ್ವಾರಸ್ಯಕರ ಘಟನೆ ಕೂಡ ಸದನದಲ್ಲಿ ನಡೆಯಿತು.

  ಜಮ್ಮು ಮಾಜಿ ಶಾಸಕನ ಕೊಲೆ ಆರೋಪಿ ಬಂಧನ
  ಸೆಪ್ಟೆಂಬರ್ 2 ರಂದು ಜಮ್ಮು ಮತ್ತು ಕಾಶ್ಮೀರ ಮಾಜಿ ವಿಧಾನ ಪರಿಷತ್ ಸದಸ್ಯ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ತ್ರಿಲೋಚನ್ ಸಿಂಗ್ ವಜೀರ್ ಹತ್ಯೆ ನಡೆದ ಫ್ಲಾಟ್ ನಲ್ಲಿದ್ದ ಇಬ್ಬರು ವ್ಯಕ್ತಿಗಳನ್ನು ಪಶ್ಚಿಮ ದೆಹಲಿ ಪೊಲೀಸರು ಜಮ್ಮುವಿನಿಂದ ಬಂಧಿಸಿದ್ದಾರೆ. ಮಂಗಳವಾರ ಬೆಳಿಗ್ಗೆ ಅವರು ಜಮ್ಮುವಿನಿಂದ ರಾಜೇಂದ್ರ ಚೌಧರಿ ಅಲಿಯಾಸ್ ಬಂಧಿಸಿದರು ಮತ್ತು ನಂತರ ಮತ್ತೊಬ್ಬ ಆರೋಪಿ ಬಲಬೀರ್ ಸಿಂಗ್ ಅಲಿಯಾಸ್ ಬಿಲ್ಲಾ ಅವರನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  ಡ್ರೋನ್​ಗಳ ಅಭಿವೃದ್ಧಿಗೆ ಕೇಂದ್ರ ಒತ್ತು
  ಮುಂದಿನ ದಿನಗಳಲ್ಲಿ ಭಾರೀ ಮಹತ್ವ ಪಡೆಯಲಿರುವ ಡ್ರೋನ್ ಕ್ಷೇತ್ರದ ಬೆಳವಣಿಗೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಡ್ರೋನ್ ತಯಾರಿಕೆಗೆ ಪುಷ್ಟಿ ನೀಡುವ ಉದ್ದೇಶದಿಂದ ಡ್ರೋನ್ ಉದ್ಯಮಕ್ಕೆ ಕೇಂದ್ರ ಸರ್ಕಾರ ಪಿಎಲ್​ಐ ಯೋಜನೆಗೆ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರ ಹೊರಡಿಸಿರುವ ಉತ್ಪಾದನೆ ಸಂಬಂಧಿತ ಪ್ರೋತ್ಸಾಹಕ ಸ್ಕೀಮ್​ನ ಪರಿಣಾಮವಾಗಿ ಮುಂದಿನ ಮೂರು ವರ್ಷಗಳಲ್ಲಿ ಭಾರತದ ಡ್ರೋನ್ ಉದ್ಯಮಕ್ಕೆ ಐದು ಸಾವಿರ ಕೋಟಿ ರೂ ಹೂಡಿಕೆ ಹರಿದುಬರುವ ಮತ್ತು ಹತ್ತು ಸಾವಿರ ಹೆಚ್ಚುವರಿ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. ಕೇಂದ್ರದ ಈ ಕ್ರಮವನ್ನು ಸ್ವಾಗತಿಸಿರುವ ಉದ್ಯಮ ತಜ್ಞರು, ಭಾರತದಲ್ಲಿ ಡ್ರೋನ್ ತಯಾರಿಕೆ ಸಾಮರ್ಥ್ಯ ಹೆಚ್ಚಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

  ಎಲೆಕ್ಟ್ರಿಕ್​ ವಾಹನಕ್ಕೆ ಉತ್ತೇಜನ
  ದೇಶದಲ್ಲಿ ಎಲೆಕ್ಟ್ರಿಕ್ ವಾಹನ ಮತ್ತು ಹೈಡ್ರೋಜನ್ ಫ್ಯೂಯಲ್ ಸೆಲ್ ವಾಹನಗಳನ್ನು ಹೆಚ್ಚಿಸಲು, ಕೇಂದ್ರ ಕ್ಯಾಬಿನೆಟ್ ಬುಧವಾರ ಆಟೋಮೊಬೈಲ್ ವಲಯಕ್ಕೆ ರೂ .26,000 ಕೋಟಿ ವೆಚ್ಚದ ಉತ್ಪಾದನೆ-ಸಂಬಂಧಿತ ಪ್ರೋತ್ಸಾಹಕ ಯೋಜನೆಗೆ ಅನುಮೋದನೆ ನೀಡಿದೆ ಎಂದು ಮೂಲಗಳು ನ್ಯೂಸ್ 18 ಗೆ ತಿಳಿಸಿವೆ. ಕೇಂದ್ರ ಸರ್ಕಾರವು ಈ PLI ಯೋಜನೆಗೆ ರೂ. 57,043 ಕೋಟಿಯಿಂದ ಸುಮಾರು 26,000 ಕೋಟಿ ರೂ. ಸುಧಾರಿತ ಆಟೋಮೋಟಿವ್ ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಿಸಲು ಯೋಜನೆಯನ್ನು ಇಷ್ಟು ದೊಡ್ಡ ಮೊತ್ತಕ್ಕೆ ಮಾರ್ಪಡಿಸಲಾಗಿದೆ. ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ವಾಹನ ತಯಾರಕರು ಈ ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ.
  Published by:Seema R
  First published: