Evening Digest: ವೈರಲ್ ಫೋಟೋ ಬಗ್ಗೆ ಯತ್ನಾಳ್ ಕಿಡಿ; CSK vs KKR ಯಾವ ಟೀಂ ಸ್ಟ್ರಾಂಗ್, ಯಾವ ಟೀಂ ವೀಕ್; ಇಂದಿನ ಪ್ರಮುಖ ಸುದ್ದಿಗಳು

Kannada news Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

evening digest

evening digest

  • Share this:
ವೈರಲ್​​ ಫೋಟೋ ಬಗ್ಗೆ ಯತ್ನಾಳ್​ ಕಿಡಿ: ಇತ್ತೀಚೆಗೆ ರಾಜ್ಯದ ರಾಜಕೀಯ ನಾಯಕರದ್ದು, ಜನಪ್ರತಿನಿಧಿಗಳದ್ದು ಎನ್ನಲಾದ ಫೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇವುಗಳಿಂದ ರಾಜಕೀಯ ನಾಯಕರು ಮುಜುಗರಕ್ಕೊಳಗಾಗಿಯೂ ಇದ್ದಾರೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(bjp mla basanagouda patil yatnal) ಅವರದ್ದು ಎನ್ನಲಾದ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೋಟೋ ಕುರಿತು ಆಕ್ರೋಶಭರಿತವಾಗಿ ಶಾಸಕರು ಪ್ರತಿಕ್ರಿಯಿಸಿದ್ದಾರೆ. ಫೋಟೋ ವೈರಲ್ ಹಿಂದೆ ಯಾರ್ಯಾರು ಇದ್ದಾರೆ ಎಂದು ಎಲ್ಲವೂ ನನಗೆ ಗೊತ್ತಿದೆ ಎಂದರು. ದಾಖಲೆ ಸಮೇತ ನಮಗೆ ಮಾಹಿತಿ ಇದೆ, ಅವರಿಗೆಲ್ಲ ಸರಿಯಾಗಿ ತಕ್ಕ ಶಾಸ್ತಿ ಆಗುತ್ತದೆ ಎಂದು ಅಬ್ಬರಿಸಿದರು.

ಅಫ್ಘಾನಿಸ್ತಾನದಲ್ಲಿ ಮತ್ತೆ ಬಾಂಬ್ ಸ್ಪೋಟ

ಕಳೆದ ಶುಕ್ರವಾರದ ರಕ್ತದ ಕಲೆ ಮಾಸುವ ಮುನ್ನವೇ ಮತ್ತೆ ಅಫ್ಘಾನಿಸ್ತಾದನ ಶಿಯಾ ಮಸೀದಿ ಮೇಲೆ ಉಗ್ರರ ಕರಿನೆರಳು ಬಿದ್ದಿದೆ. ಈ ದಾಳಿಯಲ್ಲಿ ಸುಮಾರು 16 ಜನರು ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಶುಕ್ರವಾರದ ನಮಾಜ್ ವೇಳೆಯೇ ಸ್ಫೋಟ ಸಂಭವಿಸಿದೆ. ಕಳೆದ ಶುಕ್ರವಾರ ನಡೆದ ಬಾಂಬ್ ದಾಳಿಯಲ್ಲಿ ಸುಮಾರು 100 ಜನರು ಸಾವನ್ನಪ್ಪಿದ್ದರು. ಕಂದಹಾರ (Kandahar) ನಗರದ ಫತೇಮೇಹ ಇಮಾಮ್ ಬಾರ್ಗಾದಲ್ಲಿ (Bibi Fatima Mosque Attack) ಸ್ಫೋಟಕ ಸ್ಫೋಟಗೊಂಡಿದೆ. ಸದ್ಯ ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ. ಸ್ಥಳೀಯ ವರದಿಗಳ ಪ್ರಕಾರ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಶುಕ್ರವಾರ ಆಗಿದ್ದರಿಂದ ನಮಾಜ್‍ಗಾಗಿ ಹೆಚ್ಚು ಜನರು ಸೇರಿದ್ದರು. ಹಾಗಾಗಿ ಅಧಿಕಾರಿಗಳು ಸಹ ಸಾವಿನ ಸಂಖ್ಯೆ ಹೇಳಲು ಹಿಂದೇಟು ಹಾಕುತ್ತಿದ್ದಾರೆ.

ಸಿಂಘು ಗಡಿಯಲ್ಲಿ ಕೈ-ಕಾಲುಗಳು ಇಲ್ಲದ ಶವ ಪತ್ತೆ

ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು ಗಡಿಯಲ್ಲಿ ಯುವಕನೋರ್ವನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಗುರುವಾರ ಬೆಳಗಿನ ಜಾವ ಸುಮಾರು 3.30ಕ್ಕೆ ಕೊಲೆ ನಡೆದಿದೆ ಎನ್ನಲಾಗಿದ್ದು, ಜನರು ಯುವಕನಿಗೆ ಚಿತ್ರಹಿಂಸೆ ನೀಡುತ್ತಿರುವ ವಿಡಿಯೋ ಬೆಳಕಿಗೆ ಬಂದಿದೆ. ತಾಲಿಬಾನಿಗಳಿಗಿಂತ ಕ್ರೂರವಾಗಿ ಶಿಕ್ಷೆ ನೀಡಲಾಗಿದ್ದು, ಜನತೆಯನ್ನು ಬೆಚ್ಚಿಬೀಳಿಸಿದೆ. ಯುವಕನ ವಿರುದ್ಧ ಗುರಗ್ರಂಥ ಸಾಹಿಬ್ (Guru Granth Sahib) ಅಪವಿತ್ರಗೊಳಿಸಿದ ಆರೋಪಗಳು ಕೇಳಿ ಬಂದಿದ್ದವು. ಯುವಕನನ್ನು ಹಗ್ಗದಿಂದ ಕಟ್ಟಿ 100 ಮೀಟರ್ ಎಳೆದು ತಂದಿದ್ದಾರೆ. ನಂತರ ಅರೆನಗ್ನಗೊಳಿಸಿ ಕೊಂದು ರೈತರ ಪ್ರತಿಭಟನೆ ನಡೆಸುತ್ತಿರುವ ಸ್ಥಳದಲ್ಲಿಯ ಬ್ಯಾರಿಕೇಡ್ ಗಳಿಗೆ ಶವ ಕಟ್ಟಿ ಹಾಕಲಾಗಿದೆ. ರೈತರ ಪ್ರತಿಭಟನೆಯ ದಿಕ್ಕು ತಪ್ಪಿಸಲು ಸಂಚು ರೂಪಿಸಲಾಗಿದೆ ಎಂಬ ಅನುಮಾನಗಳು ಸಹ ಕೇಳಿ ಬಂದಿವೆ.

ಕುಷ್ಟಗಿಯಲ್ಲಿ ಚಿನ್ನದ ನಿಕ್ಷೇಪ ಪತ್ತೆ?

ಕೊಪ್ಪಳ(Koppal) ಜಿಲ್ಲೆಯ ಕುಷ್ಟಗಿ(Kushtagi) ತಾಲೂಕನ್ನು ಬರಡು ಭೂಮಿಯನ್ನು ಹೊಂದಿರುವ ತಾಲೂಕು ಎನ್ನುತ್ತಾರೆ. ಆದರೆ ಈ ತಾಲೂಕಿನ ಭೂ ಗರ್ಭದಲ್ಲಿ ಚಿನ್ನ(Gold), ಮ್ಯಾಂಗನೀಸ್(Manganese) ಸೇರಿದಂತೆ ವಿವಿಧ ಖನಿಜ ಸಂಪತ್ತು ಇದೆ ಎಂದು ಮೊದಲಿನಿಂದಲೂ ಜನ ಹೇಳುತ್ತಾರೆ. ಅದಕ್ಕೆ ಇಂಬು ಕೊಡುವಂತೆ ಈಗಿನ ಕೇಂದ್ರ ಸರಕಾರದ(Central Government) ಸಂಸ್ಥೆಯೊಂದು ಸಮೀಕ್ಷೆ ನಡೆಸುತ್ತಿದ್ದು, ಇಲ್ಲಿ ಚಿನ್ನವಿದೆ ಎಂಬ ಮಾಹಿತಿ ಇದೆ. ಆದರೆ ಈ ಚಿನ್ನ ಎಷ್ಟು ಪ್ರಮಾಣದಲ್ಲಿದೆ? ಚಿನ್ನದ ಗಣಿಗಾರಿಕೆ ಮಾಡುವಷ್ಟು ಇದೆಯೆ? ಇಲ್ಲಿ ಯಾವ ಪ್ರಮಾಣದಲ್ಲಿ ಚಿನ್ನವಿದೆ ಎಂಬ ಅಧ್ಯಯನ ನಡೆಯುತ್ತಿದೆ. ಈಗಲೇ ಇಲ್ಲಿ ಚಿನ್ನದ ನಿಕ್ಷೇಪ ಸಿಕ್ಕಿದೆ ಎಂದು ಹೇಳೋದು ಕಷ್ಟವೆಂದು ಕೊಪ್ಪಳ ಜಿಲ್ಲಾಧಿಕಾರಿಗಳು(Koppal DC) ಹೇಳಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಚಿನ್ನದ ನಿಕ್ಷೇಪ ಪತ್ತೆ ಆಗಿದೆಯಂತೆ. ರೈತರ ಭೂಮಿಗೆ ಬಂಗಾರದ ಬೆಲೆ ಬಂತು ನೋಡಿ ಎಂಬ ಚರ್ಚೆಗಳು ಕೊಪ್ಪಳ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿದೆ. ಹಾಗಾದ್ರೆ ವಾಸ್ತವದಲ್ಲಿ  ಆಗಿದ್ದೇನೂ ಅಂದ್ರೆ ಈಗಷ್ಟೇ ಸರ್ವೆ ನಡೆದಿದೆ. ಚಿನ್ನದ ನಿಕ್ಷೇಪ ಸಿಕ್ಕಿದೆ ಎಂಬ ಸ್ಥಳ ಪರಿಶೀಲನೆಯನ್ನು ಕುಷ್ಟಗಿಯ ತಹಶೀಲ್ದಾರ್ ಮಾಡುತ್ತಿದ್ದಾರೆ. ಪರೀಕ್ಷೆಗೆ ಅದಿರು ಮಾದರಿಯು ಸಿದ್ದಗೊಂಡಿವೆ.

ಸಿಎಸ್​ಕೆ ಮತ್ತು ಕೆಕೆಆರ್ ತಂಡಗಳ ಪ್ರಮುಖ ಬಲ ಮತ್ತು ದೌರ್ಬಲ್ಯಗಳು

ಈ ಬಾರಿ ಎರಡು ವಿಭಿನ್ನ ತಂಡಗಳ ನಡುವಿನ ಐಪಿಎಲ್ ಫೈನಲ್ ಪಂದ್ಯ ಇದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಳೆದ ಸೀಸನ್​ನ ಕೆಟ್ಟ ಪ್ರದರ್ಶನವನ್ನ ಬದಿಗೊತ್ತಿ ಫೀನಿಕ್ಸ್​ನಂತೆ ಈ ವರ್ಷ ಮೇಲೆದ್ದು 9ನೇ ಬಾರಿ ಫೈನಲ್ ತಲುಪಿದೆ. ಇನ್ನೊಂದೆಡೆ, ಈ ವರ್ಷ ಮೊದಲ ಲೆಗ್​ನಲ್ಲಿ ಹೀನಾಯ ಪ್ರದರ್ಶನ ತೋರಿ, ಯುಎಇಯಲ್ಲಿನ ಎರಡನೇ ಲೆಗ್​ನಲ್ಲಿ ಫೀನಿಕ್ಸ್​ನಂತೆ ಮೇಲೆದ್ದು 3ನೇ ಬಾರಿ ಫೈನಲ್ ತಲುಪಿರುವ ಕೆಕೆಆರ್ ತಂಡ ಇದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಈವರೆಗೆ 8 ಎಂಟು ಫೈನಲ್​ನಲ್ಲಿ ಮೂರು ಬಾರಿ ಪ್ರಶಸ್ತಿ ಗೆದ್ದಿದೆ. ಇವತ್ತು ಗೆದ್ದರೆ ನಾಲ್ಕನೇ ಪ್ರಶಸ್ತಿ ಸಂದಂತಾಗುತ್ತದೆ. ಕೋಲ್ಕತಾ ನೈಟ್ ರೈಡರ್ಸ್ ತಂಡ ಈ ಹಿಂದೆ ಫೈನಲ್ ತಲುಪಿದ ಎರಡೂ ಬಾರಿಯೂ ಪ್ರಶಸ್ತಿ ಗೆದ್ದಿದೆ. ಅಂದರೆ, ಫೈನಲ್​ನಲ್ಲಿ ಕೆಕೆಆರ್​ದು ಕ್ಲೀನ್ ಸ್ಲೇಟ್. ಇವತ್ತಿನ ಪಂದ್ಯದಲ್ಲಿ ಯಾರು ಪ್ರಶಸ್ತಿ ಗೆಲ್ಲುತ್ತಾರೆ ಎಂಬುದು ಅತಿ ಹೆಚ್ಚು ಕುತೂಹಲ ಉಳ್ಳದ್ದು. ಹಾಗೆಯೇ, ಆರೆಂಜ್ ಕ್ಯಾಪ್ ರೇಸ್​ನಲ್ಲಿರುವ ಋತುರಾಜ್ ಗಾಯಕ್ವಾಡ್ ಮತ್ತು ಫ್ಯಾಫ್ ಡುಪ್ಲೆಸಿ ಅವರು ಕೆಎಲ್ ರಾಹುಲ್ ಅವರನ್ನ ಹಿಂದಿಕ್ಕುತ್ತಾರಾ ಎಂಬ ಕುತೂಹಲವೂ ಇದೆ. ಈಗ ಫೈನಲ್​ಗೆ ಮುನ್ನ ಎರಡೂ ತಂಡಗಳಿಗೆ ವಿನ್ನಿಂಗ್ ಕಾಂಬಿನೇಶನ್ ಸಿಕ್ಕಿದಂತಿದೆ. ಬಹುಶಃ ಎರಡೂ ತಂಡಗಳಲ್ಲಿ ಬದಲಾವಣೆ ಆಗುವ ಸಾಧ್ಯತೆ ಕಡಿಮೆ.
Published by:Kavya V
First published: