Evening Digest: ಚಿಕ್ಕಮಗಳೂರಲ್ಲಿ ನಿಫಾ ಭೀತಿ; ಖಾದ್ಯ ತೈಲದ ಮೇಲಿನ ಆಮದು ಸುಂಕ ಕಡಿತ; ಈ ದಿನದ ಸುದ್ದಿ ಸಾರಾಂಶ

ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

evening digest

evening digest

 • Share this:
  ಕಲಬುರ್ಗಿ ಪಾಲಿಕೆ: ಜೆಡಿಎಸ್ ನಡೆ ನಿಗೂಢ
  ಕಲ್ಬುರ್ಗಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟವಾಗಿ 5 ದಿನಗಳಾದರೂ ಮೇಯರ್ ಆಯ್ಕೆಗೆ ಮಾತ್ರ ಸರ್ಕಾರ ಇನ್ನೂ ದಿನಾಂಕವನ್ನೇ ಪ್ರಕಟ ಮಾಡಿಲ್ಲ. ಇದೀಗ ಸರ್ಕಾರ ಈ ರೀತಿಯ ವಿಳಂಬ ಧೋರಣೆ ಮಾಡ್ತಿರೋದು ಜೆಡಿಎಸ್​ನ ನಿಲುವಿನಿಂದ ಎಂದು ಹೇಳಲಾಗ್ತಿದೆ. ಹೊಂದಾಣಿಕೆ ಬಗ್ಗೆ ಜೆಡಿಎಸ್ ವರಿಷ್ಠರು ಬಿಜೆಪಿಗೆ ಇನ್ನೂ ಸ್ಪಷ್ಟ ಸಂದೇಶ ಕೊಡದೇ ಇರೋದ್ರಿಂದ ಮೇಯರ್ ಆಯ್ಕೆ ದಿನಾಂಕವನ್ನು ಸರ್ಕಾರ ಹೊರಡಿಸಿಲ್ಲ. ಈಗಾಗಲೇ ಬಿಜೆಪಿ ಜೆಡಿಎಸ್​ನ ಸಪೋರ್ಟ್ ಕೇಳಿದೆ. ಆದರೆ ಜೆಡಿಎಸ್ ಮಾತ್ರ ಮೇಯರ್ ಸ್ಥಾನವನ್ನು ಕೇಳಲು ನಿರ್ಧರಿಸಿದ್ದು, ಇದೀಗ ಮೇಯರ್ ಸ್ಥಾನವನ್ನು ಬಿಟ್ಟು ಕೊಡುವ ಸಂಬಂಧ ಚರ್ಚೆ ಮಾತುಕತೆ ಹಂತದಲ್ಲಿ ಇದೆ. ಯಾವುದೇ ರೀತಿಯ ಸ್ಪಷ್ಟ ನಿಲುವನ್ನು ಜೆಡಿಎಸ್ ಪ್ರಕಟ ಮಾಡದೆ ಇರೋದ್ರಿಂದ ಬಿಜೆಪಿ ದಿನಾಂಕ ಪ್ರಕಟ ಮಾಡಿಲ್ಲ. ಜೆಡಿಎಸ್​ನಿಂದ ಸ್ಪಷ್ಟ ಸಂದೇಶ ಬಂದ ನಂತರ ಕಲ್ಬುರ್ಗಿ ಮೇಯರ್ ಆಯ್ಕೆಗೆ ದಿನಾಂಕವನ್ನು ಪ್ರಕಟ ಮಾಡಲು ಮುಂದಾಗಿದೆ ಎನ್ನಲಾಗಿದೆ.

  ಸಿಎಂ ಸ್ಥಾನಕ್ಕೆ ವಿಜಯ್​ ರೂಪಾನಿ ರಾಜೀನಾಮೆ
  ಪ್ರಧಾನಿ ನರೇಂದ್ರ ಮೋದಿ ತವರು ಇಂದು ಅಚ್ಚರಿಯ ರಾಜಕೀಯ ಬೆಳವಣಿಗೆಗೆ ಸಾಕ್ಷ್ಯವಾಗಿದೆ.. ಗುಜರಾತ್​ನಲ್ಲಿ ನಡೆದ ಅನಿರೀಕ್ಷಿತ ಘಟನೆಗಳ ಬೆಳೆವಣಿಗೆ ಹಿನ್ನಲೆ ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್​ ರೂಪಾನಿ ರಾಜೀನಾಮೆ ನೀಡಿದ್ದಾರೆ. ಇಂದು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ರಾಜ್ಯಪಾಲ ಆಚಾರ್ಯ ದೆವ್ರತ್​ ಅವರಿಗೆ ಪತ್ರ ಸಲ್ಲಿಸಿದ್ದಾರೆ. ಗಾಂಧಿ ನಗರದಲ್ಲಿ ಗುಜರಾತ್​ ಮಾದರಿ ಸಂಬಂಧ ನಡೆದ ಸಭೆ ಬಳಿಕ ಈ ಘಟನೆ ಘಟಿಸಿದೆ. ವಿಧಾನ ಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇರುವ ಸಂದರ್ಭದಲ್ಲಿ ನಡೆದ ಈ ಹಠಾತ್ ಬೆಳವಣಿಗೆಗೆ ಏನು ಕಾರಣ ಎಂಬುದು ನಿಖರವಾಗಿಲ್ಲ.

  ಖಾದ್ಯ ತೈಲದ ಮೇಲಿನ ಆಮದು ಸುಂಕ ಕಡಿತ
  ಹಬ್ಬಗಳ ಸಾಲು ಆರಂಭವಾಗುತ್ತಿದ್ದಂತೆ ದೇಶದ ಜನರಿಗೆ ಕೇಂದ್ರ ಸರ್ಕಾರ ಸಂತಸದ ಸುದ್ದಿ ನೀಡಲು ಮುಂದಾಗಿದೆ. ನಿರಂತರವಾಗಿ ಏರಿಕೆ ಕಾಣುತ್ತಿದ್ದ ಅಡುಗೆ ಎಣ್ಣೆ ದರ ಇಳಿಸಲು ಕೇಂದ್ರ ನಿರ್ಧರಿಸಿದೆ. ಇದೇ ಕಾರಣ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಡುಗೆ ಎಣ್ಣೆ ಮೇಲಿನ ಆಮದು ಸುಂಕ ಕಡಿತಗೊಳಿಸಲು ಮುಂದಾಗಿದೆ, ಈ ಸಂಬಂಧ ಇಂದು ಕೇಂದ್ರ ಸರ್ಕಾರ ಸಭೆ ನಡೆಸಿದೆ. ಸಾಮಾನ್ಯ ಜನರ ದೃಷ್ಟಿಕೋನದಲ್ಲಿಟ್ಟುಕೊಂಡು ಅಡುಗೆ ಎಣ್ಣೆ ಮೇಲಿನ ಆಮದು ಸುಂಕವನ್ನು 5.5 ರಷ್ಟು ಇಳಿಕೆ ಮಾಡಲು ನಿರ್ಧರಿಸಿದೆ. ಆಹಾರ ಮತ್ತು ಸಾರ್ವಜನಿಕ ವಿತರಣಾ ಕಾರ್ಯದರ್ಶಿ ರಾಜ್ಯ ಅಧಿಕಾರಿಗಳನ್ನು ಭೇಟಿ ಮಾಡಿದ ಬಳಿಕ ಈ ತೀರ್ಮಾನ ನಡೆಸಲಾಗಿದೆ. ಸರ್ಕಾರ ಕಚ್ಛಾ ತೈಲದ ಮೇಲಿನ ಸೆಸ್​ ಸೇರಿದಂತೆ ಇತರೆ ಶುಲ್ಕಗಳ ಮೇಲಿನ ಆಮದು ಸುಂಕವನ್ನು ಶೇ 30.25ರಿಂದ ಶೇ 24.75ರಷ್ಟಕ್ಕೆ ಇಳಿಸಿದೆ.

  ದೆಹಲಿಯಲ್ಲಿ ದಾಖಲೆ ಮಳೆ
  ಭಾರೀ ಮಳೆಗೆ ರಾಷ್ಟ್ರ ರಾಜಧಾನಿ ತತ್ತರಿಸಿದೆ. ಸರಿಸುಮಾರು 1, 000 ಮಿ.ಮೀ ಮಳೆಯಾಗಿದ್ದು, ಕಳೆದ 46 ವರ್ಷಗಳಲ್ಲೇ ಇದು ದಾಖಲೆ ಮಳೆ ಎನ್ನಲಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಇಲ್ಲಿನ ಇಂದಿರಾಗಾಂಧಿ ವಿಮಾನ ನಿಲ್ದಾಣದ ಕೆಲವು ಭಾಗಗಳು ಸಂಪೂರ್ಣ ಜಲಾವೃತಗೊಂಡಿದೆ. ದೆಹಲಿ ಮತ್ತು ಎನ್​ಸಿಆರ್​ ಭಾಗದಲ್ಲಿ ಭಾರೀ ಮಳೆಯಾದ ಪರಿಣಾಮ ಹಲವೆಡೆ ಕೆಲ ಭಾಗಗಳು ಜಲಾವೃತ್ತಗೊಂಡಿದ್ದು, ಟ್ರಾಫಿಕ್​ ಸಮಸ್ಯೆ ಯಿಂದ ಸಾಮಾನ್ಯ ಜನರು ತತ್ತರಿಸುವಂತೆ ಆಗಿದೆ. ಅಧಿಕ ಮಳೆಯಾಗುವ ನಿರೀಕ್ಷೆಯಿಂದ ಹವಾಮಾನ ಇಲಾಖೆ ಆರೆಂಜ್​ ಅಲರ್ಟ್​ ಘೋಷಣೆ ಮಾಡಿತ್ತು. ಆದರೆ, ಕಳೆದ ವರ್ಷದ ದಾಖಲೆ ಮಳೆಗೂ ಮೀರಿ ದ್ವಿಗುಣ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

  ಚಿಕ್ಕಮಗಳೂರಿನಲ್ಲಿ ನಿಫಾ ಭೀತಿ
  ಜಿಲ್ಲಾಧಿಕಾರಿಗಳ ನಿವಾಸ ಹಾಗೂ ನಗರಸಭೆ ಆವರಣದ ಮರಗಳಲ್ಲಿ ತಲೆಕೆಳಗಾಗಿ ಜೋತು ಬಿದ್ದಿರೋ ಬಾವುಲಿಗಳನ್ನ ಕಂಡು ಕಾಫಿನಾಡಿನ ಜನ ವಿಚಲಿತರಾಗಿದ್ದಾರೆ. ನಗರಸಭೆಯ ರಸ್ತೆಯಲ್ಲಿ ಚಿಕ್ಕಮಗಳೂರಿನ ಜನ ಆತಂಕದಲ್ಲೇ ಓಡಾಡ್ತಿದ್ದಾರೆ. ಯಾಕಂದ್ರೆ, ನಿಫಾ ವೈರಸ್​ಈ ಬಾವುಲಿಯೇ ಮೂಲ ಎಂಬ ಕಾರಣಕ್ಕೆ. ನಗರದ ಕೇಂದ್ರ ಬಿಂದುವಾಗಿರೋ ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಎಸ್​ಪಿ ಆಫೀಸ್ ಮತ್ತು ಮನೆ, ಡಿಸಿ ಮನೆ, ನಗರಸಭೆ, ಕೋರ್ಟ್, ಆಸ್ಪತ್ರೆ, ಶಾಲೆ ಸೇರಿದಂತೆ ಇತರೇ ಸರ್ಕಾರಿ ಕಚೇರಿಗಳೂ ಇವೆ. ನಗರಸಭೆ ಆವರಣದಲ್ಲಿರೋ ಹತ್ತಾರು ವರ್ಷಗಳ ಮರಗಳಲ್ಲಿ ಲೆಕ್ಕವಿಲ್ಲದಷ್ಟು ಬಾವುಲಿಗಳು ನೆಲಸಿವೆ. ಒಂದಲ್ಲ, ಎರಡರಲ್ಲ, ಸಾವಿರಾರು ಬಾವುಲಿಗಳು ಈ ಮರಗಳಲ್ಲಿ ಜೋತು ಬಿದ್ದು ಬದುಕುತ್ತಿವೆ. ಈಗ ನಿಫಾ ಹೆಸರು ಕೇಳುತ್ತಿದ್ದಂತೆ ಆತಂಕಕ್ಕೀಡಾಗಿರುವ ಅಧಿಕಾರಿಗಳು, ಸಾರ್ವಜನಿಕರು ಬಾವುಲಿಗಳ ಸ್ಥಳಾಂತರಕ್ಕೆ ಒತ್ತಾಯಿಸುತ್ತಿದ್ದಾರೆ.

  ಮತ್ತೊಂದು ಬ್ಲೇಡ್​ ಕಂಪನಿ
  ಅಧಿಕ ಲಾಭದ ಆಮಿಷ ಒಡ್ಡಿ ಜನರಿಂದ ಲಕ್ಷಗಟ್ಟಲೆ ಹಣವನ್ನು ಪಡೆದು ವಂಚನೆ ನಡೆಸಿದ ಅನೇಕ ಪ್ರಕರಣಗಳು ಬೆಂಗಳೂರಿನಲ್ಲಿ ನಡೆದಿರುವುದು ಮಾಧ್ಯಮಗಳಲ್ಲಿ ವರದಿಯಾಗಿವೆ. ಆದರೂ ಕೂಡ ಜನರು ಮೋಸ ಹೋಗುವುದು ನಿಂತಿಲ್ಲ. ವಂಚನೆ ಕಂಪನಿಗಳಿಗೆ ಕಡಿವಾಣ ಬಿದ್ದಿಲ್ಲ. ನಗರದಲ್ಲಿ ಇಂಥ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ತಿಲಕ್​ನಗರದ ಸ್ವಾಗತ್ ರಸ್ತೆಯಲ್ಲಿರುವ ಇಕ್ರಾ (IQRA) ಕಂಪನಿಯಿಂದ ಹಲವರಿಗೆ ವಂಚನೆ ಆಗಿರುವುದು ತಿಳಿದುಬಂದಿದೆ. ಇಕ್ರಾ ಕಂಪನಿ 4 ಕೋಟಿಯಷ್ಟು ಹಣವನ್ನು ಲಪಟಾಯಿಸಿದೆ ಎಂದು ಸಾರ್ವಜನಿಕರು ದೂರು ನೀಡಿದ್ಧಾರೆ.

  ಸಂತ್ರಸ್ತೆ ಸಾವು
  ಸೆಪ್ಟೆಂಬರ್ 9 ರಂದು ಸಕಿನಾಕಾ ಪ್ರದೇಶದ ಖೈರಾನಿ ರಸ್ತೆಯಲ್ಲಿ ಅತ್ಯಾಚಾರಕ್ಕೊಳಗಾದ ನಂತರ ಪ್ರಜ್ಞೆ ತಪ್ಪಿ ಬಿದ್ದಿದ್ದ 30 ವರ್ಷದ ಮಹಿಳೆ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ಮುಂಬೈ ಪೊಲೀಸರು ಶನಿವಾರ ಪ್ರಾಥಮಿಕ ತನಿಖೆಯ ಪ್ರಕಾರ, ಮಹಿಳೆಯ ಮೇಲೆ ಅತ್ಯಂತ ನಿರ್ಧಯವಾಗಿ ಅತ್ಯಾಚಾರ ಎಸಗಲಾಗಿದೆ ಮತ್ತು ಆಕೆಯ ಗುಪ್ತಾಂಗಗಳಿಗೆ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
  Published by:Seema R
  First published: