ಒಡಲಲ್ಲಿ ಕಾಳಿ ನದಿ ಇದ್ದರೂ ಅಂತರ್ಜಲದಲ್ಲಿ ಉಪ್ಪುನೀರು; ಕುಡಿಯುವ ನೀರಿಗೆ 3 ಕಿಮೀ ಅಲೆಯುವ ಕಿನ್ನರ ಗ್ರಾ.ಪಂ. ಹಳ್ಳಿಗರು

ಬೇಸಿಗೆ ಪ್ರಾರಂಭವಾಗುತಿದ್ದಂತೆ ಉತ್ತರ ಕನ್ನಡ ಜಿಲ್ಲೆಯ ಭಾಗಗಳಲ್ಲಿ ಅಂತರಜಲ  ಮಟ್ಟ ಇಳಿಮುಖವಾಗಿದೆ. ಒಂದೆಡೆ ಕರಾವಳಿ ಭಾಗದಲ್ಲಿ ನೀರು ಇದ್ದರೂ ಉಪ್ಪು ಮಿಶ್ರಿತವಾದ್ರೆ, ಹಲವು ಕಡೆ ಬಾವಿಗಳು ಬರಿದಾಗಿದೆ. ಇನ್ನು ನೀರಿಗಾಗಿ ತಮ್ಮ ಜೀವವನ್ನೇ ಪಣಕಿಟ್ಟು ತರುವಂತ ಸ್ಥಿತಿ ಈ ಭಾಗದಲ್ಲಿ ಉದ್ಭವವಾಗಿದೆ.

ನೀರನ್ನು ಹೊತ್ತುಕೊಂಡು ಹೋಗುತ್ತಿರುವ ಜನರು

ನೀರನ್ನು ಹೊತ್ತುಕೊಂಡು ಹೋಗುತ್ತಿರುವ ಜನರು

  • News18
  • Last Updated :
  • Share this:
ಕಾರವಾರ(ಮೇ 15): ಒಂದೆಡೆ ಎದೆಮಟ್ಟಕ್ಕೆ ಹರಿಯುತ್ತಿರುವ ಕಾಳಿನದಿಯ ಉಪ್ಪು ಮಿಶ್ರಿತ ನೀರು... ಇನ್ನೊಂದೆಡೆ ತಲೆಯ ಮೇಲೆ ಕೊಡಹೊತ್ತು ಈ ನದಿಯಲ್ಲಿ ಸಾಗುತ್ತಿರುವ ಮಹಿಳೆಯರು... ಈ ದೃಶ್ಯ ಕಂಡು ಬುರುವುದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಿನ್ನರ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ. ಇಲ್ಲಿಯ ಭಾಗವಾಡಾ, ಚಾಮಕುಳಿವಾಡಾ, ಅಂಬೆಜೂಗ, ಝಾಡಕಿ ಗ್ರಾಮದ ಮಹಿಳೆಯರು ಒಂದು ಕೊಡ ಕುಡಿಯುವ ನೀರನ್ನು ತರಲು ಮೂರು ಕಿಲೋಮೀಟರ್​ಗೂ ಹೆಚ್ಚು ದೂರ ಕಲ್ಲು ಮುಳ್ಳಿನ ಹಾದಿಯಲ್ಲಿ ಸಂಚರಿಸಿ ಕಾಳಿ ನದಿಯ ಹಿನ್ನೀರು  ಹರಿಯುವ ಅಂಬೆಜೂಗ ಹಳ್ಳ ದಾಟಿ ದಿಗಾಳಿ ಗ್ರಾಮದ ಸಾರ್ವಜನಿಕ ಬಾವಿಯಿಂದ ನೀರು ತರಬೇಕಾದ ಪರಿಸ್ಥಿತಿ ಕಳೆದ ನಾಲ್ಕು ವರ್ಷಗಳಿಂದ ಉದ್ಭವಿಸಿದೆ.

ಭಾವಿ ತೆಗೆದರೆ ಉಪ್ಪು ನೀರು ಬರುತ್ತದೆ:

ಈ ಭಾಗದ ಊರುಗಳಲ್ಲಿ ಬಾವಿ ತೆಗೆದರೆ ಉಪ್ಪುನೀರು ಸಿಗುತ್ತದೆ .ಹೀಗಾಗಿ ಮೂರು ವರ್ಷದ ಹಿಂದೆ ಅಂಬೆಜೂಗ ಹಳ್ಳಕ್ಕೆ ಮರದ ಸಂಕ ನಿರ್ಮಿಸಲಾಗಿತ್ತು .ಆದರೆ ಇದು ಮುರಿದು ಬಿದ್ದಿದ್ದು  ದಿಗಾಳಿ ಗ್ರಾಮಕ್ಕೆ  ಮಹಿಳೆಯರು ನೀರು ತರಲು ಜೀವ ಕೈಯಲ್ಲಿಟ್ಟು ಎದೆ ಮಟ್ಟಕ್ಕೆ ಬರುವ ಹಳ್ಳದ ನೀರಿನಲ್ಲಿ ಸಾಗಿ ತರಬೇಕು .ಇನ್ನು ಮಳೆಗಾಲದಲ್ಲಂತೂ ಮಳೆಯ ನೀರೆ ಇವರಿಗೆ ಕುಡಿಯುವ ನೀರಾಗಿದೆ. ಇದಲ್ಲದೆ ನಗರಕ್ಕೆ ಬರಬೇಕಾದರೂ ಜನ ಈ ದಾರಿಯಲ್ಲೇ ಬರುವುದು ಅನಿವಾರ್ಯವಾಗಿದ್ದು ಈ ಮಾರ್ಗ ಬಿಟ್ಟು ಮೊತ್ತೊಂದು ಮಾರ್ಗದಲ್ಲಿ ಬರಬೇಕಾದರೆ ಕಾಡು ಮೇಡು ದಾಟಿ 10 ಕಿಲೋಮೀಟರ್ ರಸ್ತೆ ದಾಟಬೇಕಿದ್ದು ಪ್ರತಿ ವರ್ಷ ಜೀವ ಪಣಕ್ಕಿಟ್ಟು ಕುಡಿಯುವ ನೀರು ತರುತ್ತಿದ್ದಾರೆ.

ಹಳ್ಳ ಉಪ್ಪು ನೀರಿನಿಂದ ಕೂಡಿದ್ದು ಜನರಿಗೆ ಉಪಯೋಗವಾಗುತ್ತಿಲ್ಲ. ಇನ್ನು ಸಿಹಿ ನೀರು ಬೇಕೆಂದರೆ ಸುಮಾರು 3 ಮೈಲು ಸುತ್ತಿ ಹಳ್ಳದ ಇನ್ನೊಂದು ಮಗ್ಗುಲಿಗೆ ಹೋಗಬೇಕು. ಇದು ಇಲ್ಲಿನ ಬಹುತೇಕರಿಗೆ ಅಸಾಧ್ಯವಾದ ಕೆಲಸ. ಈ ಹಿನ್ನೆಲೆಯಲ್ಲಿ ಗ್ರಾಪಂ ವ್ಯಾಪ್ತಿಯ ಬಹುತೇಕ ಹಳ್ಳಿಗಳ ಜನ ಪ್ರಾಣದ ಹಂಗು ತೊರೆದು ತುಂಬಿ ಹರಿಯುವ ಹಳ್ಳ ದಾಟಿ ಕೊಡದಲ್ಲಿ ನೀರು ತುಂಬಿ ತಲೆಯ ಮೇಲೆ ಹೊತ್ತು ತರುತ್ತಾರೆ.

 ಅಂಬೇಜೂಗ ಹಳ್ಳಕ್ಕೆ ಮೊದಲು ಕಟ್ಟಿಗೆ ಸೇತುವೆಯಿತ್ತು. ಈ ಭಾಗದ ಜನರು ಈ ಸೇತುವೆ ಮೂಲಕ ನಿತ್ಯ ಸಂಚರಿಸುತ್ತಿದ್ದರು.  ಬಳಿಕ ಜನ ಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಸೇತುವೆ ನಿರ್ಮಿಸಿಕೊಡುವಂತೆ ಇಲ್ಲಿನ ಜನ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದಾರೆ. ಆದರೆ ಮನವಿಗೆ ಯಾರೂ ಸ್ಪಂದಿಸುತ್ತಿಲ್ಲ . ಹಳ್ಳದ ಇನ್ನೊಂದು ದಡವನ್ನು ಸುಮಾರು 3 ಕಿಮೀ ಸುತ್ತಿ ತೆರಳಬೇಕು. ಅಥವಾ ಹಳ್ಳ ದಾಟುವುದು ಅನಿವಾರ್ಯವಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

 ನೀರಿಗಾಗಿ 3 ಕಿ.ಮೀ ದೂರು ಸಾಗಬೇಕು:

ಮಹಿಳೆಯರು, ಮಕ್ಕಳೆನ್ನದೇ ಇಲ್ಲಿನ ಜನ ನಿತ್ಯ ಜೀವ ಒತ್ತೆಯಿಟ್ಟು ಹಳ್ಳ ದಾಟಿ ನೀರು ತರುವುದು ಮನ ಕಲಕುವಂತಿದೆ. ಜನಪ್ರತಿನಿಧಿಗಳು ಕೇವಲ ಆಶ್ವಾಸನೆ ನೀಡುವುದಕ್ಕೆ ಸೀಮಿತವಾಗದೆ ಅಂಬೇಜೂಗ ಹಳ್ಳಕ್ಕೆ ಸೇತುವೆ ನಿರ್ಮಿಸಿ ಕೊಡಬೇಕು. ಅಲ್ಲದೇ ಗ್ರಾಮದಲ್ಲಿ ಕುಡಿಯುವ ನೀರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಭಾಗದ ಸುಮಾರು 200 ಕುಟುಂಬಗಳು ನಿತ್ಯ ಕುಡಿಯುವ ನೀರಿಗೆ ಪರದಾಡುತ್ತಿವೆ. ಹಳ್ಳದಲ್ಲಿ ನೀರಿದ್ದರೂ ಕಾಳಿ ನದಿ ಸಮುದ್ರ ಸೇರುವ ಸಂಗಮದ ಸಮೀಪದಲ್ಲಿರುವುದರಿಂದ ಸಮುದ್ರದ ಉಪ್ಪು ನೀರು ನದಿಗೆ ನುಗ್ಗಿ ಹಳ್ಳದ ನೀರು ಉಪ್ಪಾಗುತ್ತಿದೆ. ಹೀಗಾಗಿ ದ್ವೀಪ ಗ್ರಾಮದಲ್ಲಿ ಸಾಕಷ್ಟು ನೀರಿದ್ದರೂ ಅವು ಕುಡಿಯಲು ಯೋಗ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಮೂರು ಕಿ. ಮೀ. ದೂರದ ದಿಗಾಳಿ ಬಳಿಯ ಹನುಮಾನ್‌ ಬಾವಿಯ ನೀರನ್ನು ಇಲ್ಲಿನ ಜನ ಅವಲಂಬಿಸಿದ್ದಾರೆ.

ಇದನ್ನೂ ಓದಿ :  ಮುಕ್ಕಾಲು ಪಾಲು ರಾಜ್ಯಕ್ಕೆ ಬರದ ಬರೆ: ಬೆಚ್ಚಿಬೀಳಿಸಿದೆ ವರದಿ

ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಸರಕಾರದ ಯೋಜನೆಯಡಿ ಪೈಪ್‌ಲೈನ್‌ ಅಳವಡಿಸಲಾಗಿದೆ. ಆದರೆ ಈ ಪೈಪ್‌ ಲೈನ್‌ ನಾಮಕಾವಸ್ತೆಯಂತಾಗಿದ್ದು ವಾರದಲ್ಲಿ 2-3 ಸಲ ಮಾತ್ರ ಅಲ್ಪ ಸ್ವಲ್ಪ ನೀರು ಬರುತ್ತಿದೆ. ಕಡಿಮೆ ಪ್ರಮಾಣದ ನೀರು ಮನೆಯ ಬಳಕೆಗೆ ಸಾಕಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಹಳ್ಳ ದಾಟಿ ನೀರು ತರುವುದು ಅನಿವಾರ್ಯವಾಗಿದೆ ಎಂದು ಜನ ಆರೋಪಿಸುತ್ತಾರೆ.

ಅತಿ ದೊಡ್ಡ  ಗ್ರಾಮಕ್ಕೆ ನೀರಿನ ತತ್ವಾರ

ತಾಲೂಕಿನಲ್ಲಿ ಅತೀ ದೊಡ್ಡ ಗ್ರಾಮ ಎನಿಸಿದ ಈ ಗ್ರಾಮದಲ್ಲಿ ಪ್ರತಿ ವರ್ಷ ಬೇಸಿಗೆಯಲ್ಲಿ ನೀರಿಗೆ ತತ್ವಾರ ಉಂಟಾಗುತ್ತಿದೆ. ಈ ಗ್ರಾಮದಲ್ಲಿ ಸಮಪರ್ಕವಾದ  ರಸ್ತೆ ಸೇರಿದಂತೆ ಎಲ್ಲಾ ಸೌಲಭ್ಯಗಳಿವೆ. ಆದ್ರೇ ಕುಡಿಯುವ ನೀರಿನದ್ದೇ ದೊಡ್ಡ ಸಮಸ್ಯೆಯಾಗಿದೆ.  ಈ ಗ್ರಾಮ ಕಾಳಿ ನದಿ ತಟದಲ್ಲೇ ಇದ್ದರೂ ನೀರಿನ ಸಮಸ್ಯೆ ಮಾತ್ರ ನೀಗಿಲ್ಲ. ಸಮುದ್ರ ಉಬ್ಬರವಿದ್ದಾಗ ಈ ನದಿಗೆ ಸಮುದ್ರದ ನೀರು ಸೇರಿ ಉಪ್ಪಾಗುವುದರಿಂದ ಕುಡಿಯಲು ಯೋಗ್ಯವಾಗಿಲ್ಲ. ಅಲ್ಲದೇ ಇಲ್ಲಿನ ಬಾವಿಗಳ ನೀರು ಕೂಡ ಉಪ್ಪಾಗಿರುತ್ತದೆ. ಈ ಭಾಗಕ್ಕೆ ಜಿಲ್ಲಾಡಳಿತದಿಂದ ಟ್ಯಾಂಕರ್ ಮೂಲಕ ಮೂರು ದಿನಕ್ಕೊಮ್ಮೆ ಚಿಕ್ಕ ಬ್ಯಾರಲ್ ನಲ್ಲಿ ಒಂದು ಬ್ಯಾರಲ್ ನೀರನ್ನು ಒದಗಿಸುವ ಕಾರ್ಯ ಕೈಗೊಂಡಿದೆ. ಆದರೆ, ಇಲ್ಲಿಯ ಜನರಿಗೆ ಸಾಕಾಗದೇ ಪಕ್ಕದ ಗ್ರಾಮದಿಂದ ಕುತ್ತಿಗೆ ಮಟ್ಟದಲ್ಲಿ ನೀರು ಹರಿಯುವ ನದಿಯನ್ನು ದಾಟಿ ಕುಡಿಯಲು ನೀರು ತರುವ ಪರಿಸ್ಥಿತಿಯುಂಟಾಗಿದೆ. ಇಲ್ಲಿಯ ಜನರು ಮೂರು ದಿನಕ್ಕೆ ಎರಡು ಬ್ಯಾರಲ್ ನೀರು ಒದಗಿಸುವ ಬಗ್ಗೆ ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಬೇಸಿಗೆಗೆ ಮುನ್ನವೆ ನೀರಿಗೆ ಆಹಾಕಾರ; ಚಿಂಚೋಳಿ ವನ್ಯಜೀವಿ ಧಾಮದಲ್ಲಿ ಪರದಾಡುತ್ತಿವೆ ಪ್ರಾಣಿಪಕ್ಷಿಗಳು

ಬೇಸಿಗೆ ಆರಂಭದಲ್ಲಿಯೇ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಅತಿರೇಕಕ್ಕೆ ಹೋಗುತ್ತಿದೆ. ಕರಾವಳಿಯ ಜನ ನದಿಯ ನೀರಿದ್ದರೂ ಉಪ್ಪು ಮಿಶ್ರಿತವಾಗಿ ಕುಡಿಯಲು ಯೋಗ್ಯವಿಲ್ಲದೇ ಜೀವವನ್ನೇ ಪಣಕ್ಕಿಟ್ಟು ನೀರು ತರುವಂತಹ ಸ್ಥಿತಿ ಈ ಭಾಗದಲ್ಲಿದೆ. ಈ ಸಮಸ್ಯೆಗೆ ಜಿಲ್ಲಾಡಳಿತ ಶಾಶ್ವತ ಪರಿಹಾರ ನೀಡಬೇಕಿದೆ. ಇನ್ನಾದರೂ ಜಿಲ್ಲಾಡಳಿತ ಇತ್ತ ಗಮನಿಸಿ ಅಂತರ್ಜಲ ಮಟ್ಟ ಹೆಚ್ಚಿಸುವ ಜೊತೆಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕಿದೆ.
First published: