ಕೋಲಾರ: ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಉತ್ತಮ ಮಳೆಯಾಗಿದ್ದು (Rain), ಜನರ ಜೀವನಾಡಿಯಾಗಿರುವ ಕೆರೆ ಕಟ್ಟೆಗಳು (Lakes) ತುಂಬಿ ಕೋಡಿ ಹರಿಯುತ್ತಿದೆ. ಅದರಂತೆ ಇದೇ ಮೊದಲ ಬಾರಿಗೆ ಯರಗೋಳ ಡ್ಯಾಂ (Yaragola Dam) ಕೂಡ ತುಂಬಿ ಹರಿಯುತ್ತಿರುವುದು ಜಿಲ್ಲೆಯ ಜನರಲ್ಲಿ ಸಂತಸ ಉಂಟು ಮಾಡಿದೆ. ಕೋಲಾರ (Kolar) ಜಿಲ್ಲೆಯ ಬಂಗಾರಪೇಟೆ (Bangarapet) ತಾಲೂಕಿನ ಯರಗೋಳ ಡ್ಯಾಂ, ಸುಮಾರು 131 ಅಡಿ ಎತ್ತರವಿದ್ದು, 1350 ಅಡಿ ಅಗಲ ವಿಸ್ತೀರ್ಣ ಹೊಂದಿದೆ. ಭರ್ಜರಿ ಮಳೆಯಿಂದಾಗಿ ತುಂಬಿ ಕೋಡಿ ಹರಿಯುತ್ತಿದ್ದು, ತಮಿಳುನಾಡು (Tamil Nadu) ಕಡೆಗೆ ನೀರು (Water) ಹರಿಯುತ್ತಿದೆ. ಈಗಾಗಲೇ ಡ್ಯಾಂ ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.
45 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ
ಡ್ಯಾಂ ತುಂಬಿದ್ದು ಕೋಲಾರ, ಬಂಗಾರಪೇಟೆ, ಮಾಲೂರು ಪಟ್ಟಣ ಸೇರಿ 45 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಈ ಯರಗೋಳ್ ಯೋಜನೆ ಸಹಕಾರಿಯಾಗಲಿದೆ. ಸುಮಾರು 348 ಕೋಟಿ ವೆಚ್ಚದ 550 ಎಂ.ಸಿ.ಎಫ್.ಟಿ ಸಾಮಾರ್ಥ್ಯದ ಡ್ಯಾಂ ಇದಾಗಿದ್ದು, ಇತ್ತೀಚೆಗೆ ಬಂದ ಮಳೆಗೆ ಕಳೆದ 12 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಜಲಾಶಯ ಇಂದು ತುಂಬಿರುವುದು ಜಿಲ್ಲೆಯ ಜನರಲ್ಲಿ ಖುಷಿ ತಂದುಕೊಟ್ಟಿದೆ.
ನೀರಿದ್ದರು ಬಳಕೆಗೆ ಸಿಗದ ಯೋಜನೆ
ದೇವರು ಕೊಟ್ಟರು ಪೂಜಾರಿ ಕೊಡಲಿಲ್ಲ ಎನ್ನುವಂತಾಗಿದೆ ಕೋಲಾರ ಜಿಲ್ಲೆಯ ಯರಗೋಳ ಡ್ಯಾಂ ಕಥೆ. 2008 ರಲ್ಲಿ ಕಾಮಗಾರಿ ಆರಂಭವಾಗಿ 2021 ರಲ್ಲಿ ಡ್ಯಾಂ ಕಾಮಗಾರಿ ಮುಗಿದಿದ್ದು, ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ಡ್ಯಾಂ ತುಂಬಿ ಹರಿದಿದೆ. ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಇಲಾಖೆಯು ಡ್ಯಾಂ ನಿರ್ವಹಣೆ ನಡೆಸುತ್ತಿದೆ.
ಇದನ್ನೂ ಓದಿ: Karnataka Dams Water Level: ಭರ್ತಿಯಾಗುತ್ತಿವೆ ಡ್ಯಾಂಗಳು, ಪ್ರಮುಖ ಜಲಾಶಯಗಳ ನೀರಿನ ಮಟ್ಟ ಇಂತಿದೆ
ಕಾಮಗಾರಿ ಮುಗಿದರೂ ನಿಲ್ಲದ ತೊಂದರೆ
ಈವರೆಗೂ ಜಾಕ್‍ವೆಲ್ ಪಂಪ್ ಹೌಸ್ ನಲ್ಲಿ ಪಂಪ್ ಯಂತ್ರಗಳ ಅಳವಡಿಕೆ ಕಾರ್ಯವೇ ಮುಗಿದಿಲ್ಲ, ಇತ್ತ ಬಂಗಾರಪೇಟೆ ಹುಣಸನಹಳ್ಳಿ ಬಳಿ, ನೀರನ್ನ ಪಿಲ್ಟರ್ ಮಾಡಿ ಹರಿಸುವ ಬೃಹತ್ ಘಟಕದ ಕಾಮಗಾರಿ ಮುಗಿದಿದ್ದರು, ಪೈಪ್ ಲೈನ್ ಲಿಂಕ್ ಕಾಮಗಾರಿಯನ್ನ ಖಾಸಗಿ ಕಂಪನಿಯವರು ಇನ್ನೂ ಕೈಗೆತ್ತಿಕೊಂಡಿಲ್ಲ.
ಶಾಸಕ ನಾರಾಯಣ ಸ್ವಾಮಿ ಕಿಡಿಕಿಡಿ
ಕೋಲಾರ, ಬಂಗಾರಪೇಟೆ ಹಾಗೂ ಮಾಲೂರು ನಗರದಲ್ಲಿನ ಜನತೆಗೆ ಕುಡಿಯುವ ನೀರು ಪೂರೈಸಲು ಸ್ತಳೀಯ ಆಡಳಿತ ಹರಸಾಹಸಪಡ್ತಿದ್ದು, ಜನರು ಕುಡಿಯುವ ನೀರಿಗಾಗಿ ಪರದಾಡ್ತಿದ್ದಾರೆ. ಆದರೆ ಡ್ಯಾಂನಲ್ಲಿ ನೀರಿನ ಲಭ್ಯತೆಯಿದ್ದರು, ನೀರು ಸರಬರಾಜು ಅಗದಿರಲು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.
ಡ್ಯಾಂ ಭರ್ತಿ, ರಾಜಕೀಯ ನಾಯಕರ ಪೈಪೋಟಿ
ಯರಗೋಳ ಡ್ಯಾಂ ಭರ್ತಿಯಾಗಿ ಕೋಡಿ ಹರಿಯುತ್ತಿದ್ದಂತೆ, ಬಂಗಾರಪೇಟೆ ತಾಲೂಕಿನ ರಾಜಕೀಯ ನಾಯಕರು ತಮ್ಮದೆ ಈ ಸಾಧನೆಯೆಂದು ಪರಸ್ವರ ಭುಜ ತಟ್ಟಿಕೊಳ್ಳುವ ಪೈಪೋಟಿಗೆ ಇಳಿದಿದ್ದಾರೆ,. ಸಾಮಾಜಿಕ ಜಾಲತಾಣ ಮೂಲಕ, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪರವಾಗಿ ಪಕ್ಷದ ಬೆಂಬಲಿಗರು ಪೋಸ್ಟ್ ಮಾಡಿದ್ದು, ಡ್ಯಾಂ ತುಂಬಿ ಕೋಡಿ ಹರಿಯಲು ಅವರವರ ನಾಯಕರೇ ಕಾರಣರೆಂದು ಪೋಸ್ಟ್ ಹರಿದಾಡುತ್ತಿದೆ.
ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪೈಪೋಟಿ
ಹಾಲಿ ಶಾಸಕ ನಾರಾಯಣಸ್ವಾಮಿ ಡ್ಯಾಂ ಕಾಮಗಾರಿಗೆ ಚುರುಕು ನೀಡಿ, ಶುದ್ದೀಕರಣ ಘಟಕ ಮಂಜೂರು ಮಾಡಿಸುವಲ್ಲಿ ಕಾರಣಕರ್ತರಾಗಿದ್ದು, ಯೋಜನೆ ಪೂರ್ಣ ಗೊಳ್ಳಲು ಇವರೇ ಕಾರಣವೆಂದು ಕೈ ಕಾರ್ಯಕರ್ತರು ಪೋಸ್ಟ್ ಮಾಡಿದ್ದಾರೆ, ಇನ್ನು 2006 ರಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಡ್ಯಾಂ ಕಾಮಗಾರಿಗೆ ಒಪ್ಪಿಗೆ ಸೂಚಿಸಿದಾಗ, ಅಂದು ಬಿಜೆಪಿ ಶಾಸಕರಾಗಿ ವೆಂಕಟಮುನಿಯಪ್ಪ ಇದ್ದರು, ಹಾಗಾಗಿ ಅವರ ನೇತೃತ್ವದಲ್ಲಿ ಆರಂಭವಾಗಿದ್ದ ಯೋಜನೆಯೆಂದು ಬಿಜೆಪಿ ಕಾರ್ಯಕರ್ತರು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Kodagu Rain: ಭಾರೀ ಶಬ್ಧದೊಂದಿಗೆ ಜಲಸ್ಫೋಟ, ನೋಡ ನೋಡುತ್ತಿದ್ದಂತೆ ಮನೆಯೊಳಗೆ ನುಗ್ಗಿದ ನೀರು
ಇತ್ತ ಜೆಡಿಎಸ್ ನಾಯಕರು ಪೈಪೋಟಿಗೆ ಇಳಿದಿದ್ದು, ಯೋಜನೆಯ ಮಹತ್ವ ಅರಿತು, ತಮಿಳುನಾಡಿಗೆ ವ್ಯರ್ಥವಾಗಿ ಹರಿದುಹೋಗ್ತಿದ್ದ ನೀರನ್ನ ತಡೆದು ನೀರು ಸದ್ಬಳಕೆ ಮಾಡುವ ಮಾಹಿತಿಯನ್ನು ಸಂಗ್ರಹಿಸಿದ್ದು ಕುಮಾರಸ್ವಾಮಿ, ಜೊತೆಗೆ ಡ್ಯಾಂ ಕಟ್ಟಲು ಆರ್ಥಿಕ ಇಲಾಖೆ ಅನುಮೋದನೆ ಕೊಡಿಸಿದ್ದು ಮಾಜಿ ಸಿಎಂ ಕುಮಾರ್ ಹಾಗಾಗಿ ಇದು ಜೆಡಿಎಸ್ ಪಕ್ಷದ ಸಾಧನೆಯೆಂದು ಜೆಡಿಎಸ್ ಕಾರ್ಯಕರ್ತರು ಪೈಪೋಟಿಗೆ ಇಳಿದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ