ರೈತನ ಕೈಹಿಡಿದ ಮಳೆರಾಯ; ದೊಡ್ಡಬಳ್ಳಾಪುರದಲ್ಲಿ ಬಿತ್ತನೆ ಮಾಡದಿದ್ದರೂ ಹೊಲದ ತುಂಬ ರಾಗಿ ಬೆಳೆ

ಕಳೆದ ವರ್ಷ ರಾಗಿ ಬೆಳೆಯಲ್ಲಿ ಕಟಾವಾಗಿದ್ದ ಹೊಲದಲ್ಲಿ ಉದುರಿ ಬಿದ್ದಿದ್ದ ರಾಗಿಯೇ ಬೆಳೆದು ಉತ್ತಮ ಬೆಳೆಯಾಗಿರುವ ಅಪರೂಪದ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ ಗ್ರಾಮದಲ್ಲಿ ರೈತ ಚಿಕ್ಕಮುನಿಯಪ್ಪ ಎಂಬುವವರ ಹೊಲದಲ್ಲಿ ನಡೆದಿದೆ. 

ದೊಡ್ಡಬಳ್ಳಾಪುರದಲ್ಲಿ ರಾಗಿ ಬೆಳೆ

ದೊಡ್ಡಬಳ್ಳಾಪುರದಲ್ಲಿ ರಾಗಿ ಬೆಳೆ

  • Share this:
ದೊಡ್ಡಬಳ್ಳಾಪುರ:  ರೈತನಿಗೆ ಉತ್ತಮ ಮಳೆಯಾಗದಿದ್ದರೂ ಸಂಕಷ್ಟ. ಜಾಸ್ತಿ ಮಳೆಯಾದರೂ ಸಂಕಷ್ಟ. ಒಟ್ಟಿನಲ್ಲಿ ಅನ್ನದಾತರ ಜೀವನಾಧಾರವಾದ ಕೃಷಿ ಕೈಗೂಡಬೇಕಾದರೆ ವರುಣ ದೇವನ ಕೃಪೆ ಅತ್ಯಂತ ಪ್ರಮುಖ.  ಈ ಬಾರಿ ರೈತನೊಬ್ಬ ಲಾಕ್​ಡೌನ್ ಸಂಕಷ್ಟದಿಂದ ಬಿತ್ತನೆ ಬೀಜ ಸೇರಿ ಗೊಬ್ಬರಕ್ಕೂ ಹಣವಿಲ್ಲದೆ ಕೈಕಟ್ಟಿ ಕುಳಿತಿದ್ದ ಅನ್ನದಾತನನ್ನು ಮಳೆರಾಯನ  ಜೊತೆಗೆ ಭೂತಾಯಿ ಕೈಹಿಡಿದಿದ್ದಾಳೆ. ಲಾಕ್​ಡೌನ್​ನಿಂದಾಗಿ ಈಗಾಗಲೇ ರೈತ ಸಮುದಾಯ ಸಂಪೂರ್ಣ ಸಂಕಷ್ಟಕ್ಕೀಡಾಗಿದೆ. ಒಂದೆಡೆ ಬೆಳೆದ ಬೆಳೆಗೆ ಉತ್ತಮ ಬೆಲೆಗಳಿಲ್ಲ. ಈ ಮಧ್ಯೆ ರೈತ ಎಪಿಎಂಸಿ ಕಾಯ್ದೆ ತಿದ್ದುಪಡಿ ವರದಾನವೋ? ಅನಾಹುತವೋ ಎಂಬ ಜಿಜ್ಞಾಸೆಯಲ್ಲಿದ್ದಾನೆ. ಇಂತಹ ಸಂಕಷ್ಟದಲ್ಲಿ ಈ ಬಾರಿ ಬಿತ್ತನೆ ಸಮಯಕ್ಕೆ  ಸರಿಯಾಗಿ ಬಿತ್ತನೆ ಮಾಡಲಾಗದೆ ಅನೇಕ ರೈತರು ಕೈಕೈ ಹಿಸುಕಿ ಕೊಳ್ಳುವಂತಾಗಿತ್ತು.

ಆದರೂ ಪ್ರಕೃತಿಯ ವಿಸ್ಮಯವೆಂಬಂತೆ ಕಳೆದ ವರ್ಷ ರಾಗಿ ಬೆಳೆಯಲ್ಲಿ ಕಟಾವಾಗಿದ್ದ ಪಸಲಿನಿಂದಲೇ (ಹೊಲದಲ್ಲಿ) ಉದುರಿ ಬಿದ್ದಿದ್ದ ರಾಗಿಯೇ ಬೆಳೆದು ಉತ್ತಮ ಬೆಳೆಯಾಗಿರುವ ಅಪರೂಪದ ಘಟನೆ ತಾಲೂಕಿನ ರಾಜಘಟ್ಟ ಗ್ರಾಮದಲ್ಲಿ ರೈತ ಚಿಕ್ಕಮುನಿಯಪ್ಪ ಎಂಬುವವರ ಹೊಲದಲ್ಲಿ ನಡೆದಿದೆ. ಎರಡು ಎಕರೆಯ ಹೊಲದಲ್ಲಿ ಇಂತಹ ಅಚ್ಚರಿಯೊಂದು ನಡೆದಿರುವುದು ಎಲ್ಲರೂ ಉಬ್ಬೇರಿಸುವಂತೆ ಮಾಡಿದೆ. ಉಳುಮೆ ಮಾಡಿ, ಗೊಬ್ಬರ ಹಾಕಿ, ಕಾಲ ಕಾಲಕ್ಕೆ ಕಳೆ ಕಿತ್ತರೂ ಉತ್ತಮ ರಾಗಿ ಬೆಳೆಯನ್ನು ಬೆಳೆಯಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಈ ಬಾರಿ ಉತ್ತದೆ ಬಿತ್ತದೆ ತನ್ನಷ್ಟಕ್ಕೆ ತಾನೆ ಉತ್ತಮ ರಾಗಿ ಬೆಳಯಾಗಿರುವುದು ರೈತನ ಮೊಗದಲ್ಲಿ ಮಂದಹಾಸ ತಂದಿದೆ.

ಮೇವು ಸಿಗುತ್ತೆ ಅಂದುಕೊಂಡೆವು. ಭೂತಾಯಿ ಬೆಳೆಯನ್ನೇ ಕೊಟ್ಟಿದ್ದಾಳೆ. ಕಳೆದ ವಾರ್ಷಿಕ ಬೆಳೆಯ ಕಟಾವಿನಲ್ಲಿ ಉದುರಿದ್ದ ರಾಗಿಯೇ‌ ಮುಂಗಾರು ಮಳೆಗೆ ಹೊಲದ ತುಂಬ ಮೊಳಕೆ ಒಡೆದಿತ್ತು. ಬಿತ್ತನೆಗೆಂದು ಉಳುಮೆ ಮಾಡಿದ ನಂತರ ಇನ್ನೂ ಉತ್ತಮವಾಗಿ  ರಾಗಿ ಮೊಳಕೆಯೊಡೆಯಿತು. ಮಳೆಯೂ ಹೆಚ್ಚಾಗಿತ್ತು. ಇದರೊಂದಿಗೆ ಬಿತ್ತನೆ ಮಾಡಲು ಸಾಲ ಮಾಡುವ ಪರಿಸ್ಥಿತಿಯೂ ಇತ್ತು. ಇಂತಹ  ಸಂದರ್ಭದಲ್ಲಿ ರಾಸುಗಳಿಗೆ ಹುಲ್ಲಾದರೂ ಆಗಲಿ ಎಂದು ಹಾಗೆಯೇ ಬಿಟ್ಟುಬಿಟ್ಟೆ. ಆದರೆ, ಕೋವಿಡ್ ಸಂಕಷ್ಟದಲ್ಲಿ ಭೂಮಿ ತಾಯಿ ನಮ್ಮನ್ನು ಕೈ ಬಿಡಲಿಲ್ಲ. ಈ ರೀತಿಯ ಬೆಳೆ ಆಗುತ್ತದೆ ಎಂದು ನಾನು ಕನಸಲ್ಲೂ ಎಣಿಸಿರಲಿಲ್ಲ ಎಂದು ರೈತ ಚಿಕ್ಕಮುನಿಯಪ್ಪ ಆಶ್ಜರ್ಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Yadagiri: ಮಗು ಕಣ್ತೆರೆಯುವ ಮೊದಲೇ ಪೊದೆಯಲ್ಲಿ ಬಿಸಾಡಿದ ತಾಯಿ; ಯಾದಗಿರಿಯಲ್ಲಿ ಅಮಾನುಷ ಘಟನೆ

ಸಾಮಾನ್ಯವಾಗಿ ರಾಗಿ ಬಿತ್ತನೆಗೆ ಒಂದು ಎಕರೆಗೆ ಎರಡು ಬಾರಿ ಉಳುಮೆ, ಕೊಟ್ಟಿಗೆ ಗೊಬ್ಬರ, ರಸಗೊಬ್ಬರ, ಬಿತ್ತನೆ ರಾಗಿ, ಕೂಲಿಯವರು, ಕಳೆ ತೆಗೆಯುವುದು ಸೇರಿ ಕನಿಷ್ಠ 25-30‌ ಸಾವಿರ ರೂ. ಖರ್ಚು ಮಾಡಬೇಕಿತ್ತು, ಆದರೆ ರೈತನ ಮೇಲಿನ ಕರುಣೆಗೆ ಭೂಮಿ ತಾಯಿ ಮತ್ತೆ ವರುಣನ ಕೃಪೆಯಿಂದ ಖರ್ಚು ಇಲ್ಲದೆ ಬಂಪರ್ ಬೆಳೆ ಬೆಳೆದಿರುವುದು ಸಂತಸ ತಂದಿದೆ ಎನ್ನುತ್ತಾರೆ ಚಿಕ್ಕಮುನಿಯಪ್ಪ.

ಸರ್ಕಾರ ಬಡ ರೈತರ ನೆರವಿಗೆ ಧಾವಿಸಲಿ:
ಪ್ರಕೃತಿ ಸಹಜವಾಗಿ ಬಂದಿರುವ ಬೆಳೆ  ಸಂತಸ ತಂದಿದೆ. ಈ ಮೂಲಕ ಸಂಕಷ್ಠದಲ್ಲಿದ್ದ ರೈತನಿಗೆ ಬಂಡವಾಳವನ್ನು ಉಳಿಸಿರುವುದು ಮತ್ತೊಂದು ಸಂತೋಷದ ಸಂಗತಿ. ಆದರೆ ಚಿಕ್ಕಮುನಿಯಪ್ಪನಿಗೆ ಸೇರಿದ ಭೂಮಿ ಸೇರಿದಂತೆ ತಿಮ್ಮಸಂದ್ರದ 10.33 ಎಕರೆ ಭೂಮಿಯಲ್ಲಿ ಸುಮಾರು 13 ಮಂದಿ ದಲಿತರು ಕಳೆದ 30 ವರ್ಷಗಳಿಂದ ಕೃಷಿ ಮಾಡುತ್ತಾ ಬಂದಿದ್ದೇವೆ. ಈ ಭೂಮಿ ಇಂದಿಗೂ ಸರ್ಕಾರಿ ಪಾಳು ಅಂತಲೇ ಕಂದಾಯ ಇಲಾಖೆಯಲ್ಲಿ ನಮೂದಿಸಲಾಗಿದೆ. ಈ ಕುರಿತು ಬಗರ್ ಹುಕ್ಕುಂ ಯೋಜನೆಯಡಿ ಅರ್ಜಿಯನ್ನು ಸಲ್ಲಿಸಿದ್ದೇವೆ. ಆದರೂ ಈವರೆಗೆ ಭೂಮಿ ಮಂಜೂರಾಗಿಲ್ಲ.  ಬಹುತೇಕ ದಲಿತ ಕುಟುಂಬಗಳಿಗೆ ಇದೇ ಜೀವನಾಧಾರವಾಗಿದೆ. ಸರ್ಕಾರ ಈ ಬಗ್ಗೆ ಗಮನಹರಿಸಿ ನಮ್ಮ ಅನ್ನದಾತನ ನೆರವಿಗೆ ಬರಬೇಕಿದೆ ಎಂದು ಇಲ್ಲಿನ ವಿಎಸ್ಎಸ್ಎನ್ ಉಪಾಧ್ಯಕ್ಷ  ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

ನಮ್ಮ ಅಧಿಕಾರಿಗಳು ಆ ಹೊಲಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಾತಾವರಣ ಹಾಗೂ ಉತ್ತಮ ಮಳೆಯಿಂದಾಗಿ ಕಳೆದ ಬಾರಿ ಕಟಾವಿನ ವೇಳೆ ಉದುರಿದ್ದ ರಾಗಿಯಿಂದಾಗಿ ಬೆಳೆ ಬಂದಿದೆ. ರಾಗಿಯೂ ಬಳಕೆಗೆ ಯೋಗ್ಯವಾಗಿದೆ ದೊಡ್ಡಬಳ್ಳಾಪುರ ಸಹಾಯಕ ಕೃಷಿ ‌ನಿರ್ದೇಶಕರಾದ ಸುಶೀಲಮ್ಮ‌ ನ್ಯೂಸ್18 ಮಾಹಿತಿ ನೀಡಿದ್ದಾರೆ.
Published by:Sushma Chakre
First published: