news18-kannada Updated:March 11, 2020, 4:21 PM IST
ಕೆಎಸ್ ಈಶ್ವರಪ್ಪ- ಡಿಕೆ ಶಿವಕುಮಾರ್
ಬೆಂಗಳೂರು (ಮಾ.11): ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ಅಧ್ಯಕ್ಷರನ್ನಾಗಿ ಕನಕಪುರ ಶಾಸಕ ಡಿಕೆ ಶಿವಕುಮಾರ್ ಅವರನ್ನು ನೇಮಕ ಮಾಡಿರುವುದು ಆಶ್ಚರ್ಯ ತಂದಿದೆ ಎಂದು ಬಿಜೆಪಿ ಸಚಿವ ಈಶ್ವರಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಈ ಹಿಂದೆ ಅಧ್ಯಕ್ಷರಾದಾಗ ಏನೆಲ್ಲಾ ಆಗಿದೆ ಎಂಬುದು ಗೊತ್ತಿದೆ. ಈಗ ಅವರು ಪಕ್ಷದ ನಾಯಕರ ವಿರೋಧದ ನಡುವೆ ಅಧ್ಯಕ್ಷರಾಗಿರುವುದು ಮತ್ತೊಮ್ಮೆ ಪಕ್ಷದ ಗುಂಪುಗಾರಿಕೆ ಹೊರಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಡಿಕೆ ಶಿವಕುಮಾರ್ ಈಗಾಗಲೇ ಪಕ್ಷದಲ್ಲಿ ಹಿಡಿತ ಸಾಧಿಸಲು ಹವಣಿಸುತ್ತಿದ್ದಾರೆ. ಅವರು ಸಿದ್ದರಾಮಯ್ಯ ಮತ್ತು ಇತರೆ ಗುಂಪುಗಳನ್ನು ಪಕ್ಷದಲ್ಲಿ ಮುಂದುವರೆಯಲು ಬಿಡುವುದಿಲ್ಲ. ಇದರಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ವಿಭಜನೆಯಾಗಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.
ಇದನ್ನು ಓದಿ: KPCC President: ಡಿಕೆ ಶಿವಕುಮಾರ್ ಕರ್ನಾಟಕ ಕಾಂಗ್ರೆಸ್ನ ನೂತನ ಸಾರಥಿ, ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕೃತ ಆಯ್ಕೆ
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಬಿ ಶ್ರೀರಾಮುಲು, ಡಿಕೆ ಶಿವಕುಮಾರ್ ರಾಜ್ಯದಲ್ಲಿ ಪಕ್ಷ ಕಟ್ಟುವ ಕೆಲಸ ಮಾಡಿದ್ದಾರೆ. ಅವರು ಕೆಪಿಸಿಸಿ ಅಧ್ಯಕ್ಷರಾಗಿರುವುದಕ್ಕೆ ಅಭಿನಂದನೆಗಳು ಎಂದರು ಶುಭ ಹಾರೈಸಿದರು.
ಇಂದು ಕಾಂಗ್ರೆಸ್ ಪಕ್ಷ ದೇಶದಲ್ಲಿ ಸಂಪೂರ್ಣ ನೆಲಕಚ್ಚಿದೆ. ಮಧ್ಯಪ್ರದೇಶದಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾ ಅಂತಹವರು ಕಾಂಗ್ರೆಸ್ ತೊರೆದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಲೋಪ ಇದೆ. ಇದನ್ನ ತಿದ್ದಿಕೊಳ್ಳುವ ಸಲುವಾಗಿ ಡಿಕೆಶಿ ಅವರನ್ನ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಆದರೆ, ದೇಶದಲ್ಲಿ ಕಾಂಗ್ರೆಸ್ ಪಕ್ಷ ಉಳಿಯುವ ಸಾಧ್ಯತೆ ಕಡಿಮೆ ಎಂದರು.
ಕೆಪಿಸಿಸಿ ಪಟ್ಟಕ್ಕಾಗಿ ಸಿದ್ದರಾಮಯ್ಯ ಬಣ ಹಾಗೂ ಡಿಕೆ ಶಿವಕುಮಾರ್ ಗುಂಪು ಹೈ ಕಮಾಂಡ್ನಲ್ಲಿ ಸಾಕಷ್ಟು ಲಾಬಿ ನಡೆಸಿತ್ತು. ಕಳೆದೆರಡು ತಿಂಗಳಿನಿಂದ ಕೆಪಿಸಿಸಿ ಅಧ್ಯಕ್ಷಗಾಗಿ ನೇಮಕ ಕುರಿತು ಹಗ್ಗಜಗ್ಗಾಟ ನಡೆಸುತ್ತಿದ್ದ ಕಾಂಗ್ರೆಸ್ ಹೈ ಕಮಾಂಡ್, ಮಧ್ಯಪ್ರದೇಶ ರಾಜಕೀಯ ಬೆಳವಣಿಗೆ ಹಿನ್ನೆಲೆ ತಕ್ಷಣಕ್ಕೆ ಡಿಕೆ ಶಿವಕುಮಾರ್ಗೆ ಪಟ್ಟಕಟ್ಟಿದೆ.
First published:
March 11, 2020, 4:21 PM IST