‘ಜನರಿಗೆ ಮಾತ್ರವಲ್ಲ ನನಗೂ ಗೊಂದಲ ಇದೆ’: ಸಿಎಂ ಬದಲಾವಣೆ ವಿಚಾರಕ್ಕೆ ಈಶ್ವರಪ್ಪ ಪ್ರತಿಕ್ರಿಯೆ

ಯಡಿಯೂರಪ್ಪ ಅವಧಿಯಲ್ಲಿ ಅತಿ ಹೆಚ್ಚು ಕೆಲಸ ಆಗಿದೆ. ಆದರೆ, ಈಗ ಗೊಂದಲ ಇರುವುದು ನಿಜ. ರಾಷ್ಟ್ರೀಯ ನಾಯಕರು ಮತ್ತು ಯಡಿಯೂರಪ್ಪ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕೆಎಸ್ ಈಶ್ವರಪ್ಪ ಹೇಳಿದ್ದಾರೆ.

ಕೆಎಸ್ ಈಶ್ವರಪ್ಪ

ಕೆಎಸ್ ಈಶ್ವರಪ್ಪ

 • Share this:
  ಬೆಂಗಳೂರು(ಜುಲೈ 26): ಮುಖ್ಯಮಂತ್ರಿ ಸ್ಥಾನದಲ್ಲಿ ಬದಲಾವಣೆ ಆಗಲಿದೆ ಎಂಬ ಮಾತು ದಟ್ಟವಾಗಿಯೇ ಹಬ್ಬಿದ್ದು, ಅದಕ್ಕೆ ಪೂರಕ ಎಂಬಂತೆ ಬಿಜೆಪಿಯೊಳಗೆ ಕೆಲ ರಾಜಕೀಯ ಬೆಳವಣಿಗೆಗಳು ನಡೆಯುತ್ತಲೇ ಇವೆ. ಸಿಎಂ ಬದಲಾವಣೆ ವಿಷಯದಲ್ಲಿ ಪಕ್ಷದ ಹೈಕಮಾಂಡ್ ಇಂದು ಒಂದು ನಿರ್ಧಾರಕ್ಕೆ ಬರುವ ನಿರೀಕ್ಷೆ ಇದೆ. ಇದೇ ವೇಳೆ, ಮುಖ್ಯಮಂತ್ರಿ ಸ್ಥಾನಕ್ಕೆ ರೇಸ್​ನಲ್ಲಿದ್ದಾರೆನ್ನಲಾಗುತ್ತಿರುವ ಹಿರಿಯ ಮುಖಂಡ ಕೆ ಎಸ್ ಈಶ್ವರಪ್ಪ ಅವರು ಈ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ತನ್ನಲ್ಲಿ ಈ ಬಗ್ಗೆ ಗೊಂದಲ ಇದೆ ಎಂದಿದ್ದಾರೆ. ಸಿಎಂ ಬದಲಾವಣೆ ಬಗ್ಗೆ ನನಗೂ ಗೊತ್ತಿಲ್ಲ. ನನಗೂ ಗೊಂದಲ ಇದೆ. ಈ ಚರ್ಚೆ ಆರಂಭ ಮಾಡಿದ್ದೇ ಗೊಂದಲದಲ್ಲಿ. ಇದು ಇಡೀ ರಾಜ್ಯದ ಭವಿಷ್ಯದ ವಿಚಾರವಾಗಿದೆ ಎಂದು ಸಚಿವ ಈಶ್ವರಪ್ಪ ಹೇಳಿದ್ಧಾರೆ.

  ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಆಗಿದೆ. ಯಡಿಯೂರಪ್ಪ ನೇತೃತ್ವದ ಈ ಸರ್ಕಾರದ ಅವಧಿಯಲ್ಲಿ ಅತಿ ಹೆಚ್ಚು ಕೆಲಸ ಆಗಿದೆ. ಆದರೆ, ಈಗ ಗೊಂದಲ ಇರುವುದು ನಿಜ. ಅದನ್ನ ಪಕ್ಷದ ರಾಷ್ಟ್ರೀಯ ನಾಯಕರು ಮತ್ತು ಯಡಿಯೂರಪ್ಪ ಅವರು ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುವುದು ಅವರಿಗೆ ಬಿಟ್ಟು ಯಾರಿಗೂ ಗೊತ್ತಿಲ್ಲ. ಇವತ್ತೇ ಅದರ ಚರ್ಚೆ ಮಾಡಿ ನಿಲುವು ತೆಗೆದುಕೊಳ್ಳುತ್ತಾ ಎಂಬುದೂ ನನಗೆ ಗೊತ್ತಿಲ್ಲ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಅಂತ ಯಡಿಯೂರಪ್ಪ ಈಗಾಗಲೇ ಹೇಳಿದ್ಧಾರೆ. ಏನಾಗ್ತಿದೆ ಅಂತ ವರಿಷ್ಠರು ಮತ್ತು ಯಡಿಯೂರಪ್ಪ ಅವರಿಗೆ ಮಾತ್ರ ಗೊತ್ತು. ಇಬ್ಬರೂ ಒಟ್ಟಿಗೆ ಕೂತು ಚರ್ಚೆ ಮಾಡಿ ನಿರ್ಧರಿಸುತ್ತಾರೆ ಎಂದು ಕೆ ಎಸ್ ಈಶ್ವರಪ್ಪ ತಿಳಿಸಿದ್ಧಾರೆ.

  ಇನ್ನು, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು ಸಿಎಂ ಬದಲಾವಣೆ ವದಂತಿಯನ್ನು ಮತ್ತೊಮ್ಮೆ ತಳ್ಳಿಹಾಕಿದ್ದಾರೆ. ಯಡಿಯೂರಪ್ಪ ಎರಡು ವರ್ಷ ಉತ್ತಮ ಆಡಳಿತ ನೀಡಿದ್ದಾರೆ. ಅವರು ಪೂರ್ಣಾವಧಿ ಸಿಎಂ ಆಗುವುದು ನಿಶ್ಚಿತ. ರಾಜ್ಯಕ್ಕೆ ಅನೇಕ ಬಾರಿ ಬಂದು ಹೋಗಿರುವ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಸಿಎಂ ಬದಲಾವಣೆ ಇಲ್ಲ ಎಂದು ಅನೇಕ ಬಾರಿ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಹೊನ್ನಾಳಿ ಶಾಸಕರೂ ಆದ ರೇಣುಕಾಚಾರ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  ಇದನ್ನೂ ಓದಿ: Degree Colleges Reopen: ರಾಜ್ಯದಲ್ಲಿ ಇಂದಿನಿಂದ ಪದವಿ ಕಾಲೇಜುಗಳು ಆರಂಭ; ಈ ನಿಯಮಗಳನ್ನು ಪಾಲಿಸದಿದ್ದರೆ ಕಾಲೇಜಿಗೆ ನೋ ಎಂಟ್ರಿ..!

  ಇದೇ ವೇಳೆ, ಡಿಸಿಎಂಗಳಾದ ಗೋವಿಂದ ಕಾರಜೋಳ ಮತ್ತು ಡಾ. ಅಶ್ವಥ ನಾರಾಯಣ ಅವರೂ ಕೂಡ ಸಿಎಂ ಬದಲಾವಣೆ ಸುದ್ದಿಯನ್ನು ಬರೀ ವದಂತಿ ಎಂದು ತಳ್ಳಿಹಾಕಿದ್ದಾರೆ. ಇನ್ನು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ತಾವು ಸಿಎಂ ಸ್ಥಾನದ ಆಕಾಂಕ್ಷಿಯಲ್ಲ. ಸಿಎಂ ಬದಲಾವಣೆ ವಿಚಾರ ತಮಗೂ ಗೊತ್ತಿಲ್ಲ ಎಂದಿದ್ದಾರೆ. ನಿನ್ನೆ ಪ್ರಲ್ಹಾದ್ ಜೋಷಿ ಕೂಡ ಈ ವಿಚಾರವನ್ನ ತಳ್ಳಿಹಾಕಿದ್ದಾರೆ.

  ಇವತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ನೇತೃತ್ವದಲ್ಲಿ 2 ವರ್ಷ ಆಡಳಿತ ಪೂರೈಸಿದ ಹಿ್ನನೆಲೆಯಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಸಾಧನಾ ಸಮಾವೇಶ ಹಮ್ಮಿಕೊಂಡಿದ್ದಾರೆ. ಸಮಾವೇಶದ ಬಳಿಕ ನಿಗದಿಯಾಗಿದ್ದ ಉತ್ತರ ಕನ್ನಡ ಜಿಲ್ಲಾ ಪ್ರವಾಸವನ್ನು ಯಡಿಯೂರಪ್ಪ ರದ್ದುಗೊಳಿಸಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
  Published by:Vijayasarthy SN
  First published: