ಬೆಂಗಳೂರು (ಜುಲೈ 01): ಯಡಿಯೂರಪ್ಪ ಅವರ ಸಮಕಾಲೀನರಾಗಿ, ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸುವರಲ್ಲಿ ಯಡಿಯೂರಪ್ಪ ಅವರಿಗೆ ಸರಿಸಮಾನವಾಗಿ ದುಡಿದಿರುವ ಕೆಎಸ್ ಈಶ್ವರಪ್ಪ ಯಾವಾಗಲೂ ಯಡಿಯೂರಪ್ಪ ಜೊತೆ ಸಿಎಂ ರೇಸ್ನಲ್ಲಿದ್ದವರು. ಇದೀಗ ನಾಯಕತ್ವ ಬದಲಾವಣೆಯ ಕೂಗು ರಾಜ್ಯ ಬಿಜೆಪಿಯಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವ ಹೊತ್ತಿನಲ್ಲಿ ಈಶ್ವರಪ್ಪ ಕೂಡ ಪರೋಕ್ಷವಾಗಿ ಸಿಎಂ ಸ್ಥಾನಕ್ಕೆ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ, ತಾನು ಸಿಎಂ ಸ್ಥಾನದ ಆಕಾಂಕ್ಷಿ ಎಂದು ಪರೋಕ್ಷವಾಗಿ ತಿಳಿಸಿದರು. ಆದರೆ, ಯಾರು ಯಾವಾಗ ಏನಾಗಬೇಕು ಎಂಬುದನ್ನು ಕೇಂದ್ರದ ನಾಯಕರು ತೀರ್ಮಾನಿಸುತ್ತಾರೆ ಎಂದೂ ಅವರು ಸಮಜಾಯಿಷಿ ನೀಡಿದರು.
ನಿಮಗೆ ಸಿಎಂ ಆಗುವ ಆಸೆ ಇಲ್ಲವಾ ಅನ್ನೋ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, ತಾನು ಆಗಬೇಕೋ ಬೇಡವೋ ಎಂಬುದನ್ನು ಬಿಜೆಪಿ ಹೈ ಕಮಾಂಡ್ ಮತ್ತು ಕೇಂದ್ರ ನಾಯಕರು ತೀರ್ಮಾನಿಸುತ್ತಾರೆ ಬಿಡಿ ಎಂದು ಹೇಳಿದರು. ಇದೇ ವೇಳೆ, ಕಾಂಗ್ರೆಸ್ನಲ್ಲಿ ಉದ್ಭವಿಸಿರುವ ಸಿಎಂ ವಿವಾದವನ್ನು ಉಲ್ಲೇಖಿಸಿ ಈಶ್ವರಪ್ಪ ಕುಟುಕಿದರು.
ಸಿದ್ದರಾಮಯ್ಯ ಚಾಮರಾಜಪೇಟೆಯಲ್ಲಿ ನಿಲ್ತಾರೆ ಅಂತ ಜಮೀರ್ ಅಹ್ಮದನೇ ಬಿ ಫಾರಂ ಕೊಟ್ಟು ಬಿಟ್ಟ. ಸಿದ್ದರಾಮಯ್ಯರೇ ಮುಂದಿನ ಸಿಎಂ ಅಂತಲೂ ಆತ ಹೇಳಿಬಿಟ್ಟ. ಬಿಜೆಪಿ ಅಷ್ಟು ಕೆಟ್ಟು ಹೋಗಿದ್ಯಾ. ಇಲ್ಲಿ ಈಶ್ವರಪ್ಪ ಮುಖ್ಯಮಂತ್ರಿ ಆಗಬೇಕೋ ಬೇಡವೂ ಎಲ್ಲವನ್ನೂ ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದು ಕೆ ಎಸ್ ಈಶ್ವರಪ್ಪ ಸ್ಪಷ್ಟಪಡಿಸಿದರು.
ಇದನ್ನೂ ಓದಿ: Gulshan Kumar - ಗುಲ್ಷನ್ ಕುಮಾರ್ ಹತ್ಯೆ ಪ್ರಕರಣ: ದಾವೂದ್ ಬಂಟನ ಜೀವಾವಧಿ ಶಿಕ್ಷೆ ಎತ್ತಿಹಿಡಿದ ಬಾಂಬೆ ಹೈಕೋರ್ಟ್
ಬಿ ಎಸ್ ಯಡಿಯೂರಪ್ಪ ಅವರೇ ಸಿಎಂ ಆಗಿರಬೇಕಾ ಎಂಬ ಪ್ರಶ್ನೆಯನ್ನು ಸುದ್ದಿಗಾರರು ಒತ್ತಿ ಕೇಳಿದಾಗ, ಈಶ್ವರಪ್ಪ ಅವರು ಮತ್ತೆ ಹೈಕಮಾಂಡ್ನತ್ತ ಬೊಟ್ಟು ತೋರಿಸಿದರು. ತಮ್ಮ ಪಕ್ಷದ ಹೈಕಮಾಂಡ್ ಎಲ್ಲವನ್ನೂ ಕೂತು ಚರ್ಚೆ ಮಾಡಿ ಅವಲೋಕಿಸಿ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದ ಈಶ್ವರಪ್ಪ ಅವರು ಯಡಿಯೂರಪ್ಪರೇ ಪ್ರಶ್ನಾತೀತ ನಾಯಕರು ಎಂಬ ಮಾತನ್ನು ಆಡುವ ಗೋಜಿಗೆ ಹೋಗಲಿಲ್ಲ.
ಸಿಎಂ ಸ್ಥಾನದ ಆಕಾಂಕ್ಷಿ ಎಂದು ನೇರವಾಗಿ ಹೇಳದ ಈಶ್ವರಪ್ಪ ಅವರಿಗೆ ಸುದ್ದಿಗಾರರು ತಾವು ಸನ್ಯಾಸಿಯಾ ಎಂದು ಕೇಳಿದಾಗ, ತನಗೆ ಒಬ್ಬ ಗಂಡು ಮಗ‘, ನಾಲ್ವರು ಹೆಣ್ಣು ಮಕ್ಕಳು ಹಾಗೂ ಎಂಟು ಮೊಮ್ಮಕ್ಕಳಿದ್ದಾರೆ ಎಂದು ಹಾಸ್ಯ ಮಾಡಿದರು. ಅದೇ ಉಸಿರಿನಲ್ಲಿ ಅವರು, ತಾನು ಹಿಂದೆ ಮಾತನಾಡಿದ್ದನ್ನು ಅನೇಕರು ಬಹಳ ತಪ್ಪು ಅರ್ಥ ಮಾಡಿಕೊಂಡಿದ್ಧಾರೆ. ಈಗಲೂ ಮಾಡಿಕೊಳ್ಳಲಿ ಬಿಡಿ ಎಂದು ಸ್ಪಷ್ಟನೆ ನೀಡಿದರು.
ನಾನು ಯಾವತ್ತೂ ಏನನ್ನೂ ಕೇಳಿಪಡೆದಿಲ್ಲ. ನಾನು ಅನೇಕ ಇಲಾಖೆಗಳಿಗೆ ಮಂತ್ರಿಯಾದೆ. ಒಮ್ಮೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ರಾಜ್ಯ ಬಿಜೆಪಿಯ ಅಧ್ಯಕ್ಷನಾದೆ. ಪ್ರತಿಪಕ್ಷ ನಾಯಕನಾಗಿ ಕೆಲಸ ಮಾಡಿದ್ದೇನೆ. ನನ್ನನ್ನ ಸಿಎಂ ಮಾಡಬೇಕು ಅಂತ ನಾನು ಯಾವತ್ತೂ ಕೇಳಲ್ಲ. ಇದನ್ನ ಕೇಂದ್ರದ ನಾಯಕರೇ ತೀರ್ಮಾನಿಸುತ್ತಾರೆ ಎಂದು ಈಶ್ವರಪ್ಪ ಇಂಗಿತ ವ್ಯಕ್ತಪಡಿಸಿದರು.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
ವರದಿ: ಚಿದಾನಂದ ಪಟೇಲ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ