ಅಜಾತ ಶತ್ರು ಇನ್ನಿಲ್ಲ: ಕೆಸರಲ್ಲಿನ ಕಮಲ ವಾಜಪೇಯಿ ಎಂದಿಗೂ ಅಜರಾಮರ

Ganesh Nachikethu | news18
Updated:August 18, 2018, 11:13 PM IST
ಅಜಾತ ಶತ್ರು ಇನ್ನಿಲ್ಲ: ಕೆಸರಲ್ಲಿನ ಕಮಲ ವಾಜಪೇಯಿ ಎಂದಿಗೂ ಅಜರಾಮರ
  • Advertorial
  • Last Updated: August 18, 2018, 11:13 PM IST
  • Share this:
ಗಣೇಶ್​ ನಚಿಕೇತು, ನ್ಯೂಸ್​-18 ಕನ್ನಡ

ಬೆಂಗಳೂರು( ಆಗಸ್ಟ್​.16): ದೇಶ ಕಂಡ ಅಪರೂಪದ ರಾಜಕಾರಣಿ ಅಟಲ್​ ಬಿಹಾರಿ ವಾಜಪೇಯಿ ಇನ್ನಿಲ್ಲ. ಕಳೆದೆರಡು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅಟಲ್​ ಬಿಹಾರಿ ವಾಜಪೇಯಿ ಅವರು ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಏಮ್ಸ್​ ಆಸ್ಪತ್ರೆ ಅಧಿಕೃತವಾದ ಪ್ರಕರಟಣೆಯನ್ನು ಹೊರಡಿಸಿದೆ. ದೇಶ ಕಂಡ ಮಹಾನ್​ ನಾಯಕ ಬೆಳೆದು ಬಂದ ಹಾದಿ ಇಲ್ಲಿದೆ.

ಸ್ವತಂತ್ರ ನಂತರದ ಮಹಾನ್​ ನಾಯಕರ ಪಟ್ಟಿ ಮಾಡಿದರೆ ತಟ್ಟಂತ ನೆನಪಾಗೋದೆ ಅಟಲ್ ಬಿಹಾರಿ ವಾಜಪೇಯಿ. ರಾಜಕೀಯ ಮುತ್ಸದ್ದಿಯಾಗಿ, ಕವಿಯಾಗಿ, ಶ್ರೇಷ್ಟ ಪ್ರಧಾನಿಯಾಗಿ ಅಟಲ್ ಜೀ ದೇಶಕ್ಕೆ ನೀಡಿದ ಕೊಡುಗೆ ಅಪಾರ. ಅವರ ಆದರ್ಶ ಹಾಗೂ ಪ್ರಾಮಾಣಿಕ ಜೀವನ ಇಂದಿನ ರಾಜಕಾರಣಿಗಳಿಗೆ ಮಾದರಿ ಎಂದರೆ ತಪ್ಪಾಗಲಿಕ್ಕಿಲ್ಲ. ಅಟಲ್ ಜೀ ದೇಶ ಪ್ರೇಮ ಮತ್ತು ಸಜ್ಜನ ವ್ಯಕ್ತಿತ್ವ ನಾಲ್ಕು ದಶಕಗಳ ರಾಜಕಾರಣದಲ್ಲಿ ಅಜಾತ ಶತ್ರುವೆಂದೇ ಪ್ರಸಿದ್ದಿ ಮಾಡಿದೆ. ಇಂತಹ ಮಹಾನ್ ನಾಯಕನ ಬಗ್ಗೆ ಕೆಲವು ಕುತೂಹಲಕಾರಿ ಮಾಹಿತಿ ನಿಮ್ಮ ಮುಂದಿಡುತ್ತಿದ್ದೇವೆ.

ಬಾಲ್ಯ ಮತ್ತು ಶಿಕ್ಷಣ: ದೇಶದ ಮಹಾನ್ ನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಮಧ್ಯ ಪ್ರದೇಶದ ಗ್ವಾಲಿಯರ್ನಲ್ಲಿ 1924ರ ಡಿಸೆಂಬರ್ 25 ರಂದು ಜನಿಸಿದರು. ತಂದೆ ಕೃಷ್ಣ ಬಿಹಾರಿ ವಾಜಪೇಯಿ ಮತ್ತು ತಾಯಿ ಕೃಷ್ಣಾ ದೇವಿ ದಂಪತಿಗಳಿಗೆ ಜನಿಸಿದ ಈತ ದೇಶದ ಅಜಾತಶತೃ. ತಂದೆ ಕೃಷ್ಣ ಬಿಹಾರಿ ವಾಜಪೇಯಿ ಅಧ್ಯಾಪಕರಾಗಿದ್ದರು. ಹಾಗಾಗಿ ಬಹಳ ಚಿಂತಿಸಿ ಮಗುವಿಗೆ ‘ಅಟಲ್(ಕಾರ್ಯಸಾಧಕ)ಬಿಹಾರಿ’ ಎಂದು ನಾಮಕರಣ ಮಾಡಿದರು.

ಅಟಲ್ ಜೀಯವರಿಗೆ ಓದಿನಲ್ಲಿ ಬಹಳ ಶ್ರದ್ದೆಯಿತ್ತು. ಸ್ವತಃ ತಂದೆ ಅಧ್ಯಾಪಕರಾಗಿದ್ದರಿಂದ ಓದನ್ನು ಆಸಕ್ತಿಯಿಂದ ಕಲಿತರು. ಗ್ವಾಲಿಯರ್ನ ಗೋರಖಿ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿದ ಅಟಲ್, ಶಾಲಾ ದಿನಗಳಲ್ಲೇ ಉತ್ತಮ ಭಾಷಣಕಾರರಾಗಿದ್ದರು. ಶಾಲೆಯಲ್ಲಿ ನಡೆಯುವ ಚರ್ಚಾ ಸ್ಪರ್ಧೆ ಭಾಗವಹಿಸಿ ಪ್ರಶಸ್ತಿ ಗಳಿಸುತ್ತಿದ್ದರು. ಎಲ್ಲಾ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆಯುತ್ತಿದ್ದರು.

ವಾಜಪೇಯಿ ಗ್ವಾಲಿಯರ್ನ ವಿಕ್ಟೋರಿಯಾ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದರು. ಹಿಂದಿ ಸಾಹಿತ್ಯ, ಇಂಗ್ಲಿಷ್ ಸಾಹಿತ್ಯ, ಸಂಸ್ಕೃತ ಸಾಹಿತ್ಯ ಮತ್ತು ಸಾಮಾನ್ಯ ಇಂಗ್ಲಿಷ್ ವಿಷಯಗಳನ್ನು ಆರಿಸಿಕೊಂಡು ಬಿ.ಎ ತರಗತಿಯನ್ನು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು. ಬಳಿಕ ಕಾನಾಪುರದ ಡಿ.ಎ.ಬಿ. ಕಾಲೇಜಿನಿಂದ ರಾಜ್ಯಶಾಸ್ತ್ರದಲ್ಲಿ ಎಂ.ಎ ಮುಗಿಸಿದರು.

ಎಂ.ಎ ಪರೀಕ್ಷೆಯಲ್ಲಿ ತೇರ್ಗಡೆಯಾದ ಮೇಲೆ ತಮ್ಮ ತಂದೆಯ ಆಶಯದಂತೆ ಕಾನೂನು ವಿದ್ಯಾಭ್ಯಾಸಕ್ಕೆ ಮುಂದಾದರು. ತಂದೆಯ ಒತ್ತಾಯಕ್ಕೆ ಮಣಿದು ವಾಜಪೇಯಿ, ಕಾನೂನು ಶಿಕ್ಷಣ ಪಡೆದರು. ಮಧ್ಯದಲ್ಲೇ ಕಾಲೇಜನ್ನು ತ್ಯಜಿಸಿದರು. ತಂದೆ ಕೃಷ್ಣ ಬಿಹಾರಿಯವರ ಒತ್ತಾಯದಿಂದ ಕಾನೂನು ಪದವೀಧರರಾದರು.ಪತ್ರಕರ್ತರಾಗಿದ್ದ ವಾಜಪೇಯಿ: ಕಾನೂನು ಪದವಿ ತ್ಯಜಿಸಿದ ಅಟಲ್ ಜಿ ರಾಷ್ಟ್ರೀಯ ಸ್ವಯಂಸೇವಕ ಸಂಘದದಲ್ಲಿ ಸಕ್ರಿಯರಾದರು. ಸಂಘಪರಿವಾರದ ಕೆಲಸದ ನಡುವೆಯೇ ಅವರ ಗಮನ ಪತ್ರಿಕೊದ್ಯಮದತ್ತ ಹರಿಯಿತು. ಪತ್ರಿಕೋದ್ಯಮ ಪ್ರವೇಶಿಸಿದ ಅಟಲ್ ಅವರು, ರಾಷ್ಟ್ರಧರ್ಮ, ಸ್ವದೇಶ, ವೀರ ಅರ್ಜುನ್ ಪತ್ರಿಕೆಗಳಲ್ಲಿ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಅವರ ಸಂಪಾದಕೀಯ ತುಂಬಾ ಹರಿತವಾಗಿರುತ್ತಿತ್ತು. ಓದುಗರ ಮೇಲೆ ಅದು ಹೆಚ್ಚು ಪರಿಣಾಮ ಬೀರುತ್ತಿತ್ತು.

ರಾಜಕೀಯ ಪ್ರವೇಶ: ವಾಜಪೇಯಿಯವರಿಗೆ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಪರಿಚಯವಾಯಿತು. ಬಳಿಕ ಉತ್ಸಾಹಿ ತರುಣನಾಗಿದ್ದ ಅಟಲ್ ಮುಖರ್ಜಿಯವರಿಗೆ ದೇಶದ ರಾಜಕೀಯ ಕ್ಷೇತ್ರದಲ್ಲಿ ಮುಂದುವರಿಯುವುದಾಗಿ ಕೇಳಿಕೊಂಡರು. ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲನೆಂಬ ನಂಬಿಕೆಯನ್ನು ಮುಖರ್ಜಿಯವರಲ್ಲಿ ಹುಟ್ಟಿ ಹಾಕಿದರು.

1951 ರಲ್ಲಿ ಭಾರತೀಯ ಜನ ಸಂಘ ಉದಯವಾಯಿತು. ಅಟಲ್ ಜಿ ಇದರ ಸಂಸ್ಥಾಪಕ ಸದಸ್ಯರಲ್ಲೊಬ್ಬರಾಗಿದ್ದರು. ಜನ ಸಂಘ ಪಂಡಿತ್ ದೀನದಯಾಳ ಉಪಾಧ್ಯಾಯರ ಮಾರ್ಗ ದರ್ಶನದಲ್ಲಿ ಕಾಂಗ್ರೆಸ್ಗೆ ಪ್ರಬಲ ವಿರೋಧ ಪಕ್ಷವಾಗಿ ಬೆಳೆಯಿತು. 1951 ರಲ್ಲಿ ಭಾರತದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆದಾಗ ವಾಜಪೇಯಿ ದೇಶದ ನಾನಾ ಭಾಗಗಳಲ್ಲಿ ಸಂಚರಿಸಿ ಚುನಾವಣಾ ಪ್ರಚಾರ ಮಾಡಿದರು.

1953ರಲ್ಲಿ ಲಕ್ನೋ ಕ್ಷೇತ್ರದಿಂದ ಉಪ ಚುನಾವಣೆಯಲ್ಲಿ ಮೊಟ್ಟ ಮೊದಲ ಬಾರಿಗೆ ವಾಜಪೇಯಿ ಸ್ಪರ್ಧಿಸಿದಾಗ ಅವರಿಗೆ ಕೇವಲ 27 ವರ್ಷ. ವಾಜಪೇಯಿ ವ್ಯಾಪಕ ಪ್ರಚಾರ ಮಾಡಿ 150ಕ್ಕೂ ಹೆಚ್ಚು ಕಾರ್ಯಗಳನ್ನು ಹಮ್ಮಿಕೊಂಡರು. ಅಷ್ಟಾಗಿಯೂ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ದ ಸೋಲನ್ನು ಒಪ್ಪಿಕೊಳ್ಳುವಂತಾಯಿತು.

ಬಳಿಕ 1957ರ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಿಂದ ಕಣಕ್ಕಿಳಿದ ಅಟಲ್ ಅವರು, ಮಥುರಾ ಮತ್ತು ಲಕ್ನೋ ಕ್ಷೇತ್ರಗಳಲ್ಲಿ ಸೋತು ಬಲರಾಮ್ ಪುರದಿಂದ ವಿಜಯ ಸಾಧಿಸಿದರು. 1962 ರಲ್ಲಿ ಮತ್ತೊಮ್ಮೆ ಸೋತ ವಾಜಪೇಯಿ ಕುಗ್ಗದೆ 1967 ಮತ್ತು 1971 ರ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ವಿಜಯ ಸಾಧಿಸಿದರು.

1975 ರಲ್ಲಿ ಇಂದಿರಾ ಗಾಂಧಿ ಸರ್ಕಾರ ತುರ್ತು ಪರಿಸ್ಥಿತಿ ಘೋಷಿಸಿತು. ಈ ವೇಳೆ ಇಂದಿರಾ ಗಾಂಧಿ ವಿರುದ್ದ ಹೋರಾಡಿ ಅಟಲ್ ಜೈಲು ಸೇರಿದರು. ಇಂದಿರಾ ಆಡಳಿತ ಕೊನೆಗೊಳ್ಳುವ ತನಕ ಜೈಲಿನಲ್ಲಿದ್ದರು. ಬಳಿಕ ಜೈಲಿನಿಂದ ಹೊರಬಂದು 1977 ರ ಚುನಾವಣೆ ಸಂಧರ್ಭದಲ್ಲಿ ತಮ್ಮ ಸಂಗಡಿಗರೊಂದಿಗೆ ಜನತಾ ಪಕ್ಷ ಸೇರಿದರು.

ವಿದೇಶ ಮಂತ್ರಿಯಾಗಿ ಕಾರ್ಯ: 1977 ರಲ್ಲಿ ಇಂದಿರಾ ಸರ್ಕಾರ ಕೊನೆಗೊಂಡಿತು. ಈ ಸಂದರ್ಭದಲ್ಲಿ ಮೊರಾರ್ಜಿ ದೇಸಾಯಿ ನೇತೃತ್ವದಲ್ಲಿ ಸರ್ಕಾರ ಸ್ಥಾಪನೆಯಾಯಿತು. ಮೋರಾರ್ಜಿಯವರ ಮಂತ್ರಿಮಂಡಲದಲ್ಲಿ ಅಟಲ್ ವಿದೇಶಾಂಗ ಸಚಿವರಾದರು. ಪಾಕಿಸ್ತಾನ ಸೇರಿದಂತೆ ಚೀನಾ ದೇಶಗಳೊಂದಿಗೆ ಒಳ್ಳೆಯ ಸಂಬಂಧ ಬೆಳೆಸಿದ ಕೀರ್ತಿಗೆ ಪಾತ್ರರಾದರು.

ಬಿ.ಜೆ.ಪಿ ಯ ಉದಯ: ಮೊರಾರ್ಜಿ ದೇಸಾಯಿಯವರ ಸರ್ಕಾರ ಕೇವಲ ಎರಡು ವರ್ಷ ಆಡಳಿತ ನಡೆಸಿತು. ನಂತರ ಸರ್ಕಾರ ಬಿದ್ದುಹೋಯಿತು. 1980ರಲ್ಲಿ ಚುನಾವಣೆ ನಡೆಯಿತು. ಆಗ ಜನತಾ ಪಕ್ಷ ತೊರೆದ ಅಟಲ್ ಜಿ ಭಾರತೀಯ ಜನತಾ ಪಕ್ಷ(ಬಿ.ಜೆ. ಪಿ) ಸ್ಥಾಪಿಸಿದರು.

ಬಿಜೆಪಿಯಿಂದ ಸ್ಪರ್ಧಿಸಿ ವಾಜಪೇಯಿ ಗೆದ್ದರು. ಪಕ್ಷವನ್ನು ಬೆಳೆಸಲು ಶ್ರಮ ಪಟ್ಟರು. ಬಿಜೆಪಿಯನ್ನು ಪ್ರಬಲ ರಾಜಕೀಯ ಪಕ್ಷವಾಗಿ ರೂಪಿಸಿದರು. 1984 ರಲ್ಲಿ ನಡೆದ ಚುನಾವಣೆಯಲ್ಲಿ ಸೋತರು. ಆದರೆ ಮುಂದೆ ಲಕ್ನೋ ಕ್ಷೇತ್ರದಲ್ಲಿ ಸ್ಪರ್ಧಿಸಿ 1991, 1996, 1998ರಲ್ಲಿ  ಸತತವಾಗಿ ಅದೇ ಕ್ಷೇತ್ರದಿಂದ ಆಯ್ಕೆಯಾದರು.

ಪೂರ್ಣ ಪ್ರಮಾಣದ ಪ್ರಧಾನಿ: ಅಟಲ್ ಬಿಹಾರಿ ವಾಜಪೇಯಿ ಅವರು ತಮ್ಮ ರಾಜಕೀಯ ಚಿಂತನೆಗಳಿಗೆ ಕಟಿಬದ್ಧರಾದವರು. 1999ರಲ್ಲಿ, ಹೊಸ ಸಮ್ಮಿಶ್ರ ಸರ್ಕಾರದಲ್ಲಿ ಎರಡನೇ ಬಾರಿ ಭಾರತದ ಪ್ರಧಾನಮಂತ್ರಿಯಾಗಿದ್ದರು. 1996ರಲ್ಲಿ 13 ದಿನಗಳ ಕಾಲ ಪ್ರಧಾನಮಂತ್ರಿಯಾಗಿದ್ದ ವಾಜಪೇಯಿ, ಪಂಡಿತ್ ಜವಾಹರ್ ಲಾಲ್ ನೆಹರು ಅವರ ನಂತರ ಭಾರತದ ಪ್ರಧಾನಮಂತ್ರಿಯಾಗಿ ಎರಡು ಬಾರಿ ಸೇವೆ ಸಲ್ಲಿಸಿದ ಪ್ರಥಮ ಪ್ರಧಾನಿ ಎಂಬ ಹೆಗ್ಗಳಿಗೆ ಪಾತ್ರರಾದರು.

ಹಿರಿಯ ರಾಜಕಾರಣಿ ವಾಜಪೇಯಿ ಅವರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಾಜಕೀಯದಲ್ಲಿದ್ದವರು. ಲೋಕಸಭೆಗೆ ಒಂಭತ್ತು ಬಾರಿ ಹಾಗೂ ರಾಜ್ಯಸಭೆಗೆ ಎರಡು ಬಾರಿ ಆಯ್ಕೆಯಾಗಿ ದಾಖಲೆ ನಿರ್ಮಿಸಿದ್ದಾರೆ. ಭಾರತದ ಪ್ರಧಾನಿ, ವಿದೇಶಾಂಗ ಸಚಿವ, ಸಂಸತ್ತಿನ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷ, ವಿರೋಧಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಸ್ವಾತಂತ್ರ್ಯ ನಂತರದಲ್ಲಿ ದೇಶೀಯ-ವಿದೇಶಿ ನೀತಿಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ.

ರಾಷ್ಟ್ರ ರಾಜಕೀಯ ರಂಗದಲ್ಲಿ ಅಜಾತಶತ್ರು, ಚಾಣಾಕ್ಷ ರಾಜಕಾರಣಿ ಎಂದೇ ಪ್ರಖ್ಯಾತರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತ ಕಂಡ ಅಪರೂಪದ ಮಹಾ ರಾಜಕೀಯ ನಾಯಕರಲ್ಲಿ ಒಬ್ಬರು. ತಮ್ಮ ಅಸಾಮಾನ್ಯ ವಾಕ್ ಚಾತುರ್ಯ ಮತ್ತು ವಾಕ್ಪಟುತ್ವ ಈ ಮುತ್ಸದ್ದಿ ತಮ್ಮ ಅಧಿಕಾರಾವಧಿಯಲ್ಲಿ ಕೈಗೊಂಡ ದಿಟ್ಟ ಮತ್ತು ದೂರದೃಷ್ಟಿಯ ಕ್ರಮಗಳಿಂದ ಎಲ್ಲರ ಪ್ರಶಂಸೆಗೆ ಪಾತ್ರರಾದರು.

ಸರಳ ಮತ್ತು ಸ್ನೇಹ ಜೀವಿ: ವಾಜಪೇಯಿ ಸರಳ ಜೀವಿಯಾಗಿದ್ದರು.ಅಟಲ್ ರವರು ಬಾಲ್ಯದಿಂದಲೇ ಸ್ನೇಹ ಜೀವಿಯಾಗಿದ್ದರು.ಅವರು ಯಾರನ್ನು ದ್ವೇಷಿಸಿದವರಲ್ಲ, ಯಾರೊಂದಿಗೂ ಜಗಳವಾಡಿದವರಲ್ಲ. ಎಲ್.ಕೆ ಅಡ್ವಾಣಿ, ಜಸ್ವಂತ್ ಸಿಂಗ್, ಎನ್.ಎಂ ಘಟಾಟೆ, ಬೈರೋನ್ ಸಿಂಗ್ ಷೇಕವಾತ್, ಮುಕುಂದ ಮೋದಿ ಮುಂತಾದವರು ಅಟಲ್ ರ ಆಪ್ತಮಿತ್ರರು.

ಎಲ್ಲ ರಾಜಕೀಯ ಪಕ್ಷಗಳಲ್ಲೂ ಅಟಲ್ ರವರರಿಗೆ ಸ್ನೇಹಿತರಿದ್ದಾರೆ. ವಾಜಪೇಯಿ ಅವರ ಸರಳ ವ್ಯಕ್ತಿತ್ವ ಆದರ್ಶ ವಿಚಾರಗಳಿಂದ ದೇಶ ವಿದೇಶಗಳಲ್ಲಿ ಸ್ನೇಹಜೀವಿ ಎಂದೇ ಪ್ರಸಿದ್ದರಾಗಿದ್ದಾರೆ. ಪಾಕಿಸ್ತಾನಿಯರು ಕೂಡ ವಾಜಪೇಯಿ ಅವರ ಸ್ನೇಹಕ್ಕೆ ಪಾತ್ರರಾಗಿದ್ದಾರೆ. ಹೀಗಾಗಿಯೇ ಅವರು ಭಾರತದಿಂದ ಪಾಕಿಸ್ತಾನಕ್ಕೆ ಬಸ್ ಸಂಚಾರ ಆರಂಭಿಸಿದ್ದು. ಇದು ಅವರ ಸ್ನೇಹಕ್ಕೆ ಹಿಡಿದ ಕನ್ನಡಿಯಾಗಿದೆ.

ಅಟಲ್ ಜೀ ಅಗಲಿಕೆ: 93 ವರ್ಷದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯದಲ್ಲಿ ಏರುಪೇರು ಕಂಡಿತ್ತು. ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ ಆಸ್ಪತ್ರಗೆ ದಾಖಲಿಸಿದ್ದರು. ಸದ್ಯ ಚಿಕಿತ್ಸೆ ಫಲಿಸದೇ ವಾಜಪೇಯಿ ವಿಧಿವಶರಾಗಿದ್ದಾರೆ. ವಿರೋಧ ಪಕ್ಷಗಳ ಪಾಲಿನ 'ಅಜಾತ ಶತ್ರು', ದೇಶದ ಅಭಿವೃದ್ಧಿಗಾಗಿ ಶ್ರಮಿಸಿದ ವಾಜಪೇಯಿ ಅವರ ನಮ್ಮನ್ನಗಲಿದ್ದಾರೆ.

ಬಿಜೆಪಿ ಹಿರಿಯ ಮುಖಂಡ ವಾಜಪೇಯಿ ಸುಮಾರು ಹತ್ತು ವರ್ಷಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಆರೋಗ್ಯದಲ್ಲಿ ವಯೋಸಹಜ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಪ್ರತಿಬಾರಿ ಆರೋಗ್ಯ ತಪಾಸಣೆ ನಡೆಸಲು ಏಮ್ಸ್ಗೆ ಕರೆದೊಯ್ಯಲಾಗುತ್ತಿತ್ತು.

ವಾಜಪೇಯಿ ಅವರು ತಮ್ಮ ಆತ್ಮೀಯರನ್ನು ಗುರುತಿಸುವಲ್ಲಿ ವಿಫಲರಾಗುತ್ತಿದ್ದರು. ಡೆಮೆನ್ಷಿಯಾ ಮತ್ತು ದೀರ್ಘಕಾಲದ ಮಧುಮೇಹದಿಂದ ಬಳಲುತ್ತಿದ್ದರು. ಆರೋಗ್ಯದಲ್ಲಿ ಏರುಪೇರು ತೀವ್ರ ಗಂಭೀರ ಸ್ಥಿತಿಗೆ ತಲುಪಿತ್ತು. ವೈದ್ಯರ ಸಲಹೆ ಮೇರೆಗೆ ಸೂಕ್ತ ಚಿಕಿತ್ಸೆ ಕೈಗೊಂಡರು ಫಲಿಸದೇ ವಿಧಿವಶರಾಗಿದ್ದಾರೆ. ಮಾಜಿ ಪ್ರಧಾನಿ ವಾಜಪೇಯಿ ಅವರ ಅಕಾಲಿಕ ಮರಣದಿಂದ ದೇಶದಲ್ಲಿ ದುಃಖ ಮಡುಗಟ್ಟಿದೆ.
First published:August 16, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ