• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಕೋವಿಡ್ ಕರಿನೆರಳಲ್ಲಿ ಎಳ್ಳು ಅಮಾವಾಸ್ಯೆ: ಭೂ ತಾಯಿಗೆ ಸೀಮಂತ ನೆರವೇರಿಸಿದ ರೈತರು

ಕೋವಿಡ್ ಕರಿನೆರಳಲ್ಲಿ ಎಳ್ಳು ಅಮಾವಾಸ್ಯೆ: ಭೂ ತಾಯಿಗೆ ಸೀಮಂತ ನೆರವೇರಿಸಿದ ರೈತರು

ಎಳ್ಳು ಅಮಾವಾಸ್ಯೆಯ ಸಂಭ್ರಮ

ಎಳ್ಳು ಅಮಾವಾಸ್ಯೆಯ ಸಂಭ್ರಮ

ಕೋವಿಡ್ ಕರಿ ನೆರಳಿನಲ್ಲಿಯೇ ಕಲ್ಯಾಣ ಕರ್ನಾಟಕದಾದ್ಯಂತ ಎಳ್ಳು ಅಮಾವಾಸ್ಯೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

  • Share this:

ಕಲಬುರ್ಗಿ (ಜ. 13): ಎಳ್ಳು ಅಮಾವಾಸ್ಯೆ ಉತ್ತರ ಕರ್ನಾಟಕದ ದೊಡ್ಡ ಹಬ್ಬಗಳಲ್ಲಿ ಒಂದು. ಅದರಲ್ಲಿಯೂ ರೈತ ಸಮುದಾಯಕ್ಕೆ ಇದು ಮರೆಯಲಾರದ ಹಬ್ಬ. ಭೂಮಿಗೆ ಹಾಕಿದ ಬೀಜ ಪೈರಾಗಿ ಬೆಳೆದು, ಫಲ ನೀಡಿದ ನಂತರ ಭೂ ತಾಯಿಗೆ ಕೃತಜ್ಞತೆ ಸಲ್ಲಿಸಲೆಂದು ರೂಢಿಗೆ ಬಂದಿರುವ ಹಬ್ಬ ಎಳ್ಳು ಅಮಾವಾಸ್ಯೆ. ಕೋವಿಡ್ ಕರಿ ನೆರಳಿನಲ್ಲಿಯೇ ಕಲ್ಯಾಣ ಕರ್ನಾಟಕದಾದ್ಯಂತ ಎಳ್ಳು ಅಮಾವಾಸ್ಯೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಎಲ್ಲರ ಭಾರವನ್ನೂ ಸಹಿಸಿಕೊಂಡಿರುವ ಭೂ ದೇವಿಗೆ ಸೀಮಂತ ಕಾರ್ಯ ನೆರವೇರಿಸಲಾಯಿತು. ವಿವಿಧ ಧಾನ್ಯ, ತರಕಾರಿ ಮಿಶ್ರಣದ ಭಜಿ, ಜೋಳದ ಕಡುಬುಗಳ ಮಿಶ್ರಣದ ಚರಗ ಚೆಲ್ಲುವ ಮೂಲಕ ರೈತರು ಭೂ ತಾಯಿಗೆ ಗೌರವ ಸಲ್ಲಿಸಿದರು.  ಸಹಪಂಕ್ತಿಯಲ್ಲಿ ಕುಳಿತು ಭೋಜನ ಸವಿದು ಸಂಭ್ರಮಿಸಿದರು.


ಕಲ್ಯಾಣ ಕರ್ನಾಟಕದಾದ್ಯಂತ ಎಳ್ಳು ಅಮಾವಾಸ್ಯೆಯ ಸಂಭ್ರಮ


ಎಲ್ಲರ ಜೀವನಾಧಾರ ಎನಿಸಿರುವ ಭೂಮಾತೆಗೆ ಪೂಜೆ ಸಲ್ಲಿಸಲೆಂದು ಈ ಹಬ್ಬವನ್ನು ಶತಶತಮಾನಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಕೋವಿಡ್ ಕರಿನೆರಳಿನಲ್ಲಿಯೇ ಈ ಬಾರಿ ಎಳ್ಳು ಅಮಾವಾಸ್ಯೆ ನಡೆಯಿತು. ಮಾನವನಿಂದ ಹಿಡಿದು ಸಕಲ ಜೀವ ರಾಶಿಗಳನ್ನು ಹೊತ್ತು, ಕ್ಷಮಯಾ ಧರಿತ್ರಿ ಎನಿಸಿಕೊಂಡು, ಎಲ್ಲರ ಕಲ್ಯಾಣವನ್ನೇ ಬಯಸುವ ಭೂಮಿ ತಾಯಿಗೆ ಗೌರವ ಸಲ್ಲಿಸುವ ದಿನ ಇದಾಗಿದೆ. ಸಾಮಾನ್ಯವಾಗಿ ಹೆಣ್ಣು ಗರ್ಭ ಧರಿಸಿದಾಗ ಆಕೆಯ ಅಪೇಕ್ಷೆಗೆ ಅನುಗುಣವಾಗಿ ವೈವಿಧ್ಯಮಯ ಖಾದ್ಯಗಳನ್ನು ಸಿದ್ದಪಡಿಸಿ ಸೀಮಂತ ಕಾರ್ಯಕ್ರಮ ನೆರವೇರಿಸಲಾಗುತ್ತದೆ. ಹೆಣ್ಣಿನಂತೆಯೇ ಭೂ ತಾಯಿಯೂ ಫಲ ಹೊತ್ತು ನಿಂತಿದ್ದಾಳೆ. ಆಕೆಗೂ ಶ್ರೀಮಂತದಂತಹ ಕಾರ್ಯಕ್ರಮ ಮಾಡಲೆಂದೇ ಎಳ್ಳು ಅಮಾವಾಸ್ಯೆಯಲ್ಲಿ ವೈವಿಧ್ಯಮಯ ಖಾದ್ಯಗಳನ್ನು ಸಿದ್ಧಪಡಿಸಿ ಚರಗ ಚೆಲ್ಲಲಾಗುತ್ತದೆ. ಆ ಮೂಲಕ ಭೂ ತಾಯಿಗೆ ಪುಟ್ಟ ಗೌರವ ಸಲ್ಲಿಸಲಾಗುತ್ತದೆ. ಹೊಲದಲ್ಲಿ ಬೆಳೆದ ಧಾನ್ಯ, ತರಕಾರಿಗಳಿಂದ ಭಜಿ ಸಿದ್ಧಪಡಿಸಿ, ಜೋಳ ಮತ್ತು ಸಜ್ಜೆಯ ಕಡುಬುಗಳನ್ನು ತಯಾರಿಸಿ, ಚರಗ ಚೆಲ್ಲಿದ ನಂತರ ಸಹ ಪಂಕ್ತಿಯಲ್ಲಿ ಕುಳಿತು ಭೋಜನ ಸವಿಯಲಾಗುತ್ತದೆ.


ಎಳ್ಳು ಅಮಾವಾಸ್ಯೆಯ ಅಂಗವಾಗಿ ಕಲಬುರ್ಗಿ ಹೊರವಲಯದಲ್ಲಿ ಒಕ್ಕಲಿಗ ಮುದ್ದಣ್ಣನ ಸ್ಮರಣೆ ಮಾಡಲಾಯಿತು. ಶರಣರಲ್ಲಿ ಒಕ್ಕಲಿಗ ಮುದ್ದಣ್ಣನೂ ಶ್ರೇಷ್ಟ ವ್ಯಕ್ತಿ. ಒಕ್ಕಲುತನವನ್ನೇ ಕಾಯಕವನ್ನಾಗಿಸಿಕೊಂಡು ಆದರ್ಶ ಬದುಕು ಬದುಕಿದಾತ. ಎಳ್ಳು ಅಮಾವಾಸ್ಯೆಯನ್ನು ಆತನ ಸ್ಮರಣ ದಿನವನ್ನಾಗಿ ಆಚರಿಸಿ, ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ಭೂ ತಾಯಿಗೆ ಗೌರವ ಸಲ್ಲಿಸೋ ಸಂಪ್ರದಾಯ ನೆರವೇರಿಸುತ್ತೇವೆ ಎಂದು ಕ ರೈತ ಸೋಮಣ್ಣ ನಡಕಟ್ಟಿ ಅಭಿಪ್ರಾಯಪಟ್ಟಿದ್ದಾರೆ.


ಎಳ್ಳು ಅಮಾವಾಸ್ಯೆ ವರ್ಷಕ್ಕೊಂದು ದಿನ ಬರೋ ಹಬ್ಬ. ರೈತರಿಗೆ ಈ ಹಬ್ಬ ಎಷ್ಟು ಮುಖ್ಯವೋ, ಇತರರಿಗೂ ಅಷ್ಟೇ ಮುಖ್ಯ. ರೈತ ಬಿತ್ತಿ ಬೆಳೆದರೆ, ಅದರ ಫಲವನ್ನು ನಾವೆಲ್ಲರೂ ಉಣ್ಣುತ್ತೇವೆ. ನಮ್ಮ ಹೊಟ್ಟೆ ತುಂಬಬೇಕೆಂದರೆ ಭೂ ತಾಯಿ ತಣ್ಣಗಿರಬೇಕು. ಹೀಗಾಗಿ ಭೂ ತಾಯಿಗೆ ಪೂಜೆ ಸಲ್ಲಿಸಲೆಂದು ಈ ಹಬ್ಬ ಆಚರಿಸುತ್ತೇವೆ. ಹಬ್ಬದ ನೆರದಲ್ಲಿ ಎಲ್ಲರೂ ಒಂದು ಕಡೆ ಸೇರಿ ಸಂಭ್ರಮಿಸುತ್ತೇವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಭದ್ರ ಸಿಂಪಿ ಅಭಿಪ್ರಾಯಪಟ್ಟಿದ್ದಾರೆ.ಎಲ್ಲ ಜಾತಿ, ಧರ್ಮೀಯರೂ ಸಾಮೂಹಿಕವಾಗಿ ಕುಳಿತು ಸಹ ಪಂಕ್ತಿ ಭೋಜನ ಮಾಡಿದರು. ಸೌಹಾರ್ದತೆ ಮೆರೆದರು. ಹೊಲ ಇದ್ದವರು ತಮ್ಮ ಹೊಲಗಳಿಗೆ ಹೋಗಿ ಊಟ ಮಾಡಿ ಬಂದರೆ, ಹೊಲ ಇಲ್ಲದವರು ಪಾರ್ಕ್ ಮತ್ತಿತರ ಕಡೆ ಹೋಗಿ ಊಟ ಸವಿದು, ಸಂಜೆಯವರೆಗೂ ಕಾಲ ಕಳೆದರು.

top videos


    ( ವರದಿ : ಶಿವರಾಮ ಅಸುಂಡಿ)

    First published: