ಸದಾ ಒಂದಿಲ್ಲೊಂದು ವಿಶೇಷಕ್ಕೆ ಸುದ್ದಿಯಾಗುತ್ತಿದ್ದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಇಂದು ಸೂತಕದ ಛಾಯೆ ಆವರಿಸಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 9 ಮರಿಗಳಿಗೆ ಜನ್ಮ ನೀಡಿದ್ದ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಮಹಾತಾಯಿ ಸುವರ್ಣ ಆನೆ ಇನ್ನೂ ನೆನಪು ಮಾತ್ರ. ಅಷ್ಟಕ್ಕೂ ಸುವರ್ಣ ಆನೆಗೆ ಏನಾಯ್ತು ಅಂತೀರಾ? ಇಲ್ಲಿದೆ ವಿವರ.
ಹೌದು ಬನ್ನೇರುಘಟ್ಟ ಜೈವಿನ ಉದ್ಯಾನವನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಮಡಿಲಿನಲ್ಲಿ ಅಪಾರ ಜೀವಸಂಕುಲಗಳನ್ನು ಸಲಹಿ ಪ್ರಾಣಿ ಪ್ರಿಯರಿಗೆ ರಸದೌತಣ ಬಡಿಸುತ್ತಿರುವ ಅದಮ್ಯ ಪ್ರಕೃತಿ ಮತ್ತು ಪ್ರವಾಸಿ ತಾಣ. ಆದ್ರರಲ್ಲೂ ಕಾಡಿನ ನಡುವೆ ಕೆರೆಯ ದಂಡೆಯಲ್ಲಿ ವಿಹರಿಸುವ ಸಾಕಾನೆಗಳ ಸಾಮೀಪ್ಯ ಪ್ರವಾಸಿಗರು ಹಾಗೂ ಪ್ರಾಣಿ ಪ್ರಿಯರಿಗೆ ಹರ್ಷಧಾರೆಯಂತಹದ್ದು. ಆದರೆ ಬನ್ನೇರುಘಟ್ಟ ಸಾಕಾನೆಗಳಲ್ಲಿ ಹಿರಿಯ ಮತ್ತು ಅನುಭವಿ ಮಹಾತಾಯಿಯಂತಿದ್ದ ಸುವರ್ಣ ಆನೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಸೂತಕದ ಛಾಯೆ ಆವರಿಸಿದೆ.
ತುಂಬು ಗರ್ಭಿಣಿಯಾಗಿದ್ದ ಸುವರ್ಣ ಆನೆಯ ಗರ್ಭದಲ್ಲಿ ಮರಿ ಸಾವನ್ನಪ್ಪಿದ್ದರಿಂದ ಪ್ರಸವ ವೇದನೆಯಿಂದ ನರಳುತ್ತಿದ್ದ ಆನೆಗೆ ಹೆಬ್ಬಾಳ ಪಶುವೈದ್ಯ ವಿಭಾಗದ ತಜ್ಞರು ಶಸ್ತ್ರಚಿಕಿತ್ಸೆ ಮೂಲಕ ಮೃತ ಮರಿಯನ್ನು ಹೊರ ತೆಗೆದಿದ್ದರು. ಹೀಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಸುವರ್ಣ ಆನೆ ಸಾವನ್ನಪ್ಪಿದೆ. ವಿ
ಇನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆನೆಗಳ ಪಾಲನೆ ಪೋಷಣೆಗೆ ಹೇಳಿ ಮಾಡಿಸಿದಂತಹ ಪರಿಸರ ಕಾಡು ಮೇಡು ಹೊಂದಿರುವ ಸ್ಥಳ. ಹಾಗಾಗಿ ಉದ್ಯಾನವನದ ಸಾಕಾನೆಗಳ ಸಂಖ್ಯೆ ದಿನದಂದ ದಿನಕ್ಕೆ ಹೆಚ್ಚಾಗುತ್ತಿವೆ. ಆದರೂ ಉದ್ಯಾನವನದ ಮಹಾತಾಯಿ ಸುವರ್ಣ ಆನೆ ಸಾವನ್ನಪ್ಪಿರುವುದು ಬೇಸರದ ಸಂಗತಿ. ಸಾಮಾನ್ಯವಾಗಿ ಉದ್ಯಾನವನದ ಸಾಕಾನೆಗಳನ್ನು ಬೆಳಗಿನ ವೇಳೆ ಪ್ರವಾಸಿಗರ ವೀಕ್ಷಣೆಗೆ ಲಭ್ಯವಿದ್ದರೆ ರಾತ್ರಿ ವೇಳೆ ಮೇವಿಗಾಗಿ ಕಾಡಿಗೆ ಬಿಡಲಾಗುತ್ತದೆ.
ಆದ್ರೆ ತುಂಬು ಗರ್ಭಿಣಿಯಾದ ಸುವರ್ಣ ಆನೆಯನ್ನು ರಾತ್ರಿ ವೇಳೆ ಕಾಡಿಗೆ ಕಳುಹಿಸದೇ ಉದ್ಯಾನವನದ ಆನೆ ಬಿಡಾರದಲ್ಲಿ ಮುತುವರ್ಜಿ ವಹಿಸಬೇಕಿತ್ತು. ಆದರೆ ಉದ್ಯಾನವನದ ಅಧಿಕಾರಿಗಳ ನಿರ್ಲಕ್ಷ್ಯ ಇಂದು ಸುವರ್ಣ ಆನೆ ಜೀವ ಕಳೆದುಕೊಳ್ಳುವಂತಾಗಿದೆ ಎಂದು ಪ್ರಾಣಿ ಪ್ರಿಯರು ಬೇಸರ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕಾಡಾನೆಗಳ ಕ್ಯೂಟ್ ಜೆಂಟಲ್ ಆನೆ ಸುವರ್ಣ ಇನ್ನಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಉದ್ಯಾನವನದ ಸಿಬ್ಬಂದಿಗೆ ಆಗುತ್ತಿಲ್ಲ. ನಿರ್ಲಕ್ಷ್ಯವೋ ವಿಧಿಯಾಟವೋ ಸುವರ್ಣ ಆನೆ ಇನ್ನು ನೆನಪು ಮಾತ್ರ.
-ಆದೂರು ಚಂದ್ರು, ನ್ಯೂಸ್ 18 ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ