Elephant: ಹಾಸನದಲ್ಲಿ ಹೆಚ್ಚಾಯ್ತು ಕಾಡುಪ್ರಾಣಿ-ಮಾನವರ ಸಂಘರ್ಷ, ಆಹಾರ ಅರಸಿ ಬಂದಿದ್ದ ಕಾಡಾನೆ ಹತ್ಯೆ!

ಗುಂಡು ಹೊಡೆದು ಕಾಡಾನೆ ಹತ್ಯೆ ಮಾಡಿರುವುದು ಬಯಲಾಗಿದೆ. ಸುಮಾರು ಹದಿನೈದು ವರ್ಷದ ಕಾಡಾನೆಯ ಹಣೆ ಭಾಗಕ್ಕೆ ಗುಂಡು ಹಾರಿಸಿ ಕೊಲೆಗೈಯ್ಯಲಾಗಿದೆ. ಪ್ರಕರಣ ಸಂಬಂಧ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಕಾಡಾನೆಯ ಮೃತ ದೇಹ

ಕಾಡಾನೆಯ ಮೃತ ದೇಹ

  • Share this:
ಹಾಸನ: ಜಿಲ್ಲೆಯಲ್ಲಿ ಕಾಡಾನೆ (Elephant) ಹಾಗೂ ಮಾನವನ (Human) ನಡುವಿನ ಸಂಘರ್ಷಕ್ಕೆ (Conflict) ಕೊನೆ ಇಲ್ಲದಂತಾಗಿದೆ. ಕಳೆದ ಎರಡು ದಶಕಗಳಿಂದ ಕಾಡಾನೆ ಸಮಸ್ಯೆಯಿದ್ದು (Problems) ಶಾಶ್ವತ ಪರಿಹಾರ ಕಂಡು ಹಿಡಿಯುವಂತೆ ಅನೇಕ ಪ್ರತಿಭಟನೆ (Protest) ಹೋರಾಟ ನಡೆಸಿದರು ಇದುವರೆಗೂ ಆಳಿದ ಸರ್ಕಾರಗಳು (Government) ಇತ್ತ ಗಮನಹರಿಸಿಲ್ಲ. 2000 ಇಸವಿಯಿಂದ ಇಲ್ಲಿಯವರೆಗೂ 68 ಮಂದಿ ಅಮಾಯಕರು ಕಾಡಾನೆ ದಾಳಿಗೆ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ 8 ಕಾಡಾನೆಗಳು ಸಾವನ್ನಪ್ಪಿವೆ. ಇತ್ತೀಚಿನ ದಿನಗಳಲ್ಲಿ ಹಗಲು ರಾತ್ರಿ ಎನ್ನದೆ ಕಾಡಾನೆಗಳು ಗ್ರಾಮದೊಳಗೆ ಎಂಟ್ರಿ ಕೊಡುತ್ತಿವೆ.

ಗಜಪಡೆಗಳಿಂದ ಬೆಳೆ ಹಾನಿ

ಗಜಪಡೆ ಗಲಾಟೆ ನಿರಂತರವಾಗಿದ್ದು ಕಾಫಿ, ಭತ್ತ, ಅಡಿಕೆ, ಬಾಳೆ ಸೇರಿದಂತೆ ಅಪಾರ ಪ್ರಮಾಣದ ಬೆಳೆ ನಾಶ ಮಾಡುತ್ತಿವೆ. ಬೆಳೆ ನಷ್ಟಕ್ಕೆ ಸರ್ಕಾರ ಕೊಡುತ್ತಿರುವ ಪರಿಹಾರ ಆನೆ ಹೊಟ್ಟೆಗೆ ಅರೆಕಾಸು ಮಜ್ಜಿಗೆ ನೀಡಿದಂತಿದೆ. ಕಾಡಾನೆ ದಾಳಿಯಿಂದ ಮೃತಪಟ್ಟ ವೇಳೆ ಬರುವ ಜನಪ್ರತಿನಿಧಿಗಳು ಪರಿಹಾರದ ಚೆಕ್ ವಿತರಿಸಿ ಭರವಸೆಗಳನ್ನು ನೀಡಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ.

ಕೆಲಸಕ್ಕೆ ತೆರಳವು ಹಿಂದೇಟು ಹಾಕುವ ಕಾರ್ಮಿಕರು

ವರ್ಷದಿಂದ ವರ್ಷಕ್ಕೆ ಕಾಡಾನೆಗಳ ಸಂತತಿ ಹೆಚ್ಚುತ್ತಿದ್ದು ಕಾಫಿ ತೋಟದ ಕೆಲಸಕ್ಕೆ ತೆರಳಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದರೆ, ಜನರ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: Rock Garden: ಬಣ್ಣವೂ ಇಲ್ಲ, ನಿರ್ವಹಣೆಯೂ ಇಲ್ಲ! ಸೊರಗುತ್ತಿದೆ ಕಾರವಾರದ ರಾಕ್ ಗಾರ್ಡನ್

ಹಲವು ತಾಲೂಕುಗಳಲ್ಲಿ ಕಾಡಾನೆ ಆತಂಕ

ಸಕಲೇಶಪುರ, ಆಲೂರು ತಾಲ್ಲೂಕಿನಲ್ಲಿ ಕಾಡಾನೆಗಳ ಉಪಟಳ ಹೆಚ್ಚಿತ್ತು. ಇದೀಗ ಬೇಲೂರು ತಾಲ್ಲೂಕಿಗೂ ಕಾಡಾನೆಗಳ ಹಿಂಡು ದಾಂಗುಡಿ ಇಟ್ಟಿವೆ. ಅರೇಹಳ್ಳಿ ಹೋಬಳಿ ಸುತ್ತಮುತ್ತ ಮೂವತ್ತಕ್ಕು ಹೆಚ್ಚು ಕಾಡಾನೆಗಳಿದ್ದು ಎರಡು ಮೂರು ಗುಂಪುಗಳಾಗಿ ಬೇರ್ಪಟ್ಟಿವೆ. ಮಲಸಾವರ, ಕಡೆಗರ್ಜೆ, ಇಂಟಿತೊಳಲು, ಗೂರ್ಗಿಹಳ್ಳಿ ಸುತ್ತಮುತ್ತ ಎರಡು ಹೆಣ್ಣಾನೆ ಒಂದು ಗಂಡಾನೆ ಸೇರಿ ಒಟ್ಟು ಮೂರು ಕಾಡಾನೆಗಳು ಬೀಡುಬಿಟ್ಟಿದ್ದವು.

 ಗುಂಡು ಹೊಡೆದು ಕಾಡಾನೆ ಹತ್ಯೆ

ಪ್ರತಿನಿತ್ಯ ಅರಣ್ಯ ಇಲಾಖೆ ಸಿಬ್ಬಂದಿ ಈ ಕಾಡಾನೆಗಳ ಇರುವ ಸ್ಥಳ, ಚಲನ ವಲನಗಳ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡುತ್ತಿದ್ದಾರೆ. ಇತ್ತೀಚಿಗೆ ದಾಸನಗುಡ್ಡ ಗ್ರಾಮದ ಬಳಿ ಮೂರು ಆನೆಗಳು ಕಾಣಿಸಿಕೊಂಡಿವೆ. ಬೆಳಗ್ಗೆ ಕಾಡಾನೆಗಳು ಇರುವ ಸ್ಥಳವನ್ನು ಪತ್ತೆ ಹಚ್ಚಿದಾಗ ಎರಡು ಕಾಡಾನೆಗಳು ಮಾತ್ರ ಕಾಣಿಸಿಕೊಂಡಿವೆ. ಇನ್ನೊಂದು ಕಾಡಾನೆ ಹುಡುಕಾಟ ನಡೆಸುವ ವೇಳೆ ದಾಸನಗುಡ್ಡ ಗ್ರಾಮದ ಸಯ್ಯದ್ ಸತ್ತರ್ ಎಂಬುವವರ ಭತ್ತದ ಗದ್ದೆಯಲ್ಲಿ ಕಾಡಾನೆ ಶವ ಪತ್ತೆಯಾಗಿದೆ. ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಆನೆ ಹತ್ಯೆ ಸಂಬಂಧ ನಾಲ್ವರು ಅರೆಸ್ಟ್

ಸ್ಥಳಕ್ಕೆ  ಸಿಸಿಎಫ್ ಶಂಕರ್.ಬಿ., ಡಿಸಿಎಫ್ ಡಾ.ಬಸವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೈಸೂರಿನಿಂದ ಆಗಮಿಸಿದ್ದ ವೈದ್ಯರ ತಂಡ ಮರಣೋತ್ತರ ನಡೆಸಿದ್ದು, ಗುಂಡು ಹೊಡೆದು ಕಾಡಾನೆ ಹತ್ಯೆ ಮಾಡಿರುವುದು ಬಯಲಾಗಿದೆ. ಸುಮಾರು ಹದಿನೈದು ವರ್ಷದ ಕಾಡಾನೆಯ ಹಣೆ ಭಾಗಕ್ಕೆ ಗುಂಡು ಹಾರಿಸಿ ಕೊಲೆಗೈಯ್ಯಲಾಗಿದೆ. ಪ್ರಕರಣ ಸಂಬಂಧ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಸಮಸ್ಯೆ ಬಗೆಹರಿಸದ ಅರಣ್ಯ ಸಚಿವರು

ಇನ್ನೂ ಪ್ರತಿನಿತ್ಯ ಕಾಡಾನೆಗಳು ಸಂಚರಿಸುತ್ತಿರುವ ಬಗ್ಗೆ ಮೈಕ್ ಅನೌನ್ಸ್‌ಮೆಂಟ್ ಹಾಗೂ ವ್ಯಾಟ್ಸಪ್ ಮೂಲಕ ಜನರಿಗೆ ಮಾಹಿತಿ ನೀಡಲಾಗುತ್ತಿದೆ. ಕಾಡಾನೆ ದಾಳಿದ ಮಾಡಿದಾಗ ಸ್ಥಳಕ್ಕೆ ತೆರಳುವ ಅರಣ್ಯ ಇಲಾಖೆ ಸಿಬ್ಬಂದಿ ರೈತರ ಆಕ್ರೋಶಕ್ಕೆ ಗುರಿಯಾಗುತ್ತಿದ್ದು ಅವರ ಪರಿಸ್ಥಿತಿ ಹೇಳತೀರದಾಗಿದೆ. ಕಳೆದ ಒಂದು ವಾರದ ಹಿಂದೆ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯುವಂತೆ ಶಾಸಕ ಎಚ್.ಕೆ.ಕುಮಾರಸ್ವಾಮಿ ನೇತೃತ್ವದಲ್ಲಿ ಬಾಗೆ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಆದರೂ ಅರಣ್ಯ ಸಚಿವ ಉಮೇಶ್ ಕತ್ತಿ ಕಣ್ಣು-ಕಿವಿ ಇಲ್ಲದ ರೀತಿ ವರ್ತಿಸುತ್ತಿದ್ದಾರೆ. ಕಾಡಾನೆ ಸಮಸ್ಯೆ ತೀವ್ರಗೊಂಡಿದ್ದರು ಒಮ್ಮೆಯು ಇತ್ತ ತಿರುಗಿ ನೋಡಿಲ್ಲ.

ಇದನ್ನೂ ಓದಿ: Chicken in Police Station: ಪೋಲಿಸ್ ಠಾಣೆಯಲ್ಲಿ ಅರೆಸ್ಟ್ ಆಗಿದ್ದ ಕೋಳಿಗಳ ಹರಾಜು‌, ಕೊಳ್ಳಲು ಮುಗಿಬಿದ್ದ ಜನ

ಕಾಡಾನೆ ಸಮಸ್ಯೆಯಿಂದ ಕಂಗಾಲಾಗಿರುವ ಮಲೆನಾಡು ಭಾಗದ ಜನರ ತಾಳ್ಮೆಯ ಕಟ್ಟೆ ಹೊಡೆಯುತ್ತಿದ್ದು ಹೆಚ್ಚಿನ ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟ ಸಚಿವರು ಆಗಮಿಸಿ ಜನಪ್ರತಿನಿಧಿಗಳು, ಸ್ಥಳೀಯರು, ರೈತರು ಹಾಗೂ ಕಾಫಿ ಬೆಳೆಗಾರರೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬೇಕಿದೆ‌.
Published by:Annappa Achari
First published: