ಬೆಂಗಳೂರು (ಏ.4): ರಾಜ್ಯದಲ್ಲಿ ಬೆಲೆ ಏರಿಕೆ (Price Rise) ಬಿಸಿ ಸಾರ್ವಜನಿಕರನ್ನು ತಟ್ಟುತ್ತಲೇ ಇದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ (Gas) ದರ ಈಗಾಗಲೇ ಗಗನಕ್ಕೇರಿದೆ. ಇದೀಗ ರಾಜ್ಯದ ಜನರಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಮತ್ತೊಂದು ಶಾಕ್ ಕೊಟ್ಟಿದೆ. ಇಂಧನ ಹೊಂದಾಣಿಕೆಯ ಶುಲ್ಕವನ್ನು ಅಕ್ಟೋಬರ್ 1ರಿಂದ ಅನ್ವಯವಾಗುವಂತೆ ಮುಂದಿನ 6 ತಿಂಗಳ ಅವಧಿಗೆ ಪರಿಷ್ಕರಿಸಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (KERC) ಆದೇಶ ಹೊರಡಿಸಿದೆ.
ವಿದ್ಯುತ್ ದರ ಏರಿಕೆ, ಗ್ರಾಹಕರಿಗೆ ಮತ್ತಷ್ಟು ಹೊರೆ
ಈ ಆದೇಶದಂತೆ ವಿದ್ಯುತ್ ದರ ಏರಿಕೆಯಾಗಲಿದ್ದು, ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಲಿದೆ. ಪ್ರತಿ ಯೂನಿಟ್‌ಗೆ ಬೆಸ್ಕಾಂ ವ್ಯಾಪ್ತಿಯಲ್ಲಿ 43 ಪೈಸೆ, ಮೆಸ್ಕಾಂ 24 ಪೈಸೆ, ಸೆಸ್ಕ್ –34 ಪೈಸೆ, ಹೆಸ್ಕಾಂ 35 ಪೈಸೆ ಮತ್ತು ಜೆಸ್ಕಾಂ ವ್ಯಾಪ್ತಿಯಲ್ಲಿ 35 ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ.
ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ
ಕೊರೊನಾ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವ ಜನರಿಗೆ ಈಗ ಮತ್ತೆ ಬೆಲೆ ಏರಿಕೆಯ ಶಾಕ್ ತಟ್ಟಲಿದೆ. ಈಗಾಗಲೇ ದೈನಂದಿನ ವಸ್ತುಗಳ ಬೆಲೆಗಳು ಮುಗಿಲು ಮುಟ್ಟುತ್ತಿದ್ದು, ಜನರು ತತ್ತರಿಸುತ್ತಿದ್ದಾರೆ. ಮೊನ್ನೆಯಷ್ಟೇ LPG ದರ ದುಬಾರಿಯಾಗಿತ್ತು. ಈ ನಡುವೆ ವಿದ್ಯುತ್, ಹಾಲು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಮತ್ತೆ ಏರಿಕೆಯಾಗುವ ಮುನ್ಸೂಚನೆ ಸಿಕ್ಕಿದೆ. ಇದರ ಬೆನ್ನಲ್ಲೇ ವಿದ್ಯುತ್ ಹಾಗೂ ಅಗತ್ಯ ವಸ್ತುಗಳ ದರ ಏರಿಕೆಯಾದರೆ ಜನರ ಜೇಬಿಗೆ ಮತ್ತಷ್ಟು ಹೊರೆ ಬೀಳಲಿದೆ.
ಇದನ್ನೂ ಓದಿ:39.56 ಕೋಟಿ ರೂಪಾಯಿ Electricity Bill ಬಾಕಿ! ಈ ಜಿಲ್ಲೆಯ ಗ್ರಾಮಸ್ಥರ ಬದುಕು ಇನ್ನು ಕತ್ತಲು!
ಏರಿಕೆಯಾಗಲಿದೆ ನಂದಿನಿ ಹಾಲಿನ ದರ
ಇಂಧನ ದರ ಏರಿಕೆ, ಖಾದ್ಯ ತೈಲ ದರ ಏರಿಕೆಯಿಂದಾಗಿ ಒತ್ತಡದಲ್ಲಿರುವ ಗ್ರಾಹಕರಿಗೆ ಮತ್ತೊಂದು ಶಾಕ್ ಕಾದಿದ್ದು, ಶೀಘ್ರದಲ್ಲೇ ನಂದಿನಿ ಹಾಲಿನ ದರ ಕೂಡ ಏರಿಕೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಸ್ವತಃ ಕರ್ನಾಟಕ ಹಾಲು ಒಕ್ಕೂಟ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ (Balachandra Jarkiholi) ಅವರು ಹೇಳಿದ್ದು, ನಂದಿನಿ ಹಾಲಿನ ದರ ಹೆಚ್ಚಳಕ್ಕೆ 14 ಜಿಲ್ಲೆಗಳ ಹಾಲಿನ ಒಕ್ಕೂಟದವರು ಒತ್ತಡ ಮಾಡ್ತಿದ್ದಾರೆ. ಹಾಲಿನ ದರ ಹೆಚ್ಚಳ ಮಾಡಬೇಕು ಅದನ್ನೇ ರೈತರಿಗೆ ನೀಡುತ್ತೇವೆ ಎಂದು ಹೇಳಿದ್ದಾರೆ.
ಸಾಧಕ ಬಾಧಕ ನೋಡಿ ಬಳಿಕ ನಿರ್ಧಾರ- ಬೊಮ್ಮಾಯಿ
ಅದನ್ನೇ ನಾವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿ ಮನವಿ ಮಾಡಿದ್ದೇವೆ. ಸಾಧಕ ಬಾಧಕ ನೋಡಿ ಬಳಿಕ ನಿರ್ಧಾರ ತಗೆದುಕೊಳ್ಳೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳುತ್ತಿದ್ದಾರೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೇಸಿಗೆ ಕಾಲದಲ್ಲಿ ಹಾಲು ಕಡಿಮೆ ಬರುತ್ತೆ. ಹೀಗಾಗಿ ಹೆಚ್ಚಿನ ದರ ಕೊಟ್ಟರೆ ರೈತರಿಗೆ ಅನುಕೂಲ ಆಗುತ್ತೆ. ಬೆಳಗಾವಿಯಲ್ಲಿ (Belagavi) ಆಕಳು ಹಾಲು 23 ರೂಪಾಯಿಯಷ್ಟು ಇತ್ತು 25 ರೂಪಾಯಿ ಮಾಡಿದ್ದೇವೆ. ಎಮ್ಮೆ ಹಾಲು 36 ರೂಪಾಯಿ ಇದ್ದದ್ದನ್ನು 38 ರೂಪಾಯಿಗಳಷ್ಟು ಮಾಡಿದ್ದೇವೆ.
ಇದನ್ನೂ ಓದಿ: Milk Price Hike: ಮತ್ತೆ ಹಾಲಿನ ದರ ಏರಿಕೆ, ಕಾಫಿ-ಟೀ ಕುಡಿಯೋದೂ ಕಷ್ಟ ಗುರೂ!
ಗ್ರಾಹಕರಿಗೆ ಹೊರೆ ಆಗದ ಹಾಗೇ ಹಾಲಿನ ದರ ಹೆಚ್ಚು
ಇಡೀ ಭಾರತದಲ್ಲೇ (India) ನಾವು ಅತಿ ಕಡಿಮೆ ದರದಲ್ಲಿ ಹಾಲು ಮಾರುತ್ತೇವೆ. ಬೇರೆಡೆ ಹಾಲಿನ ದರ ಹೆಚ್ಚಿದೆ. ಗ್ರಾಹಕರಿಗೆ ಹೊರೆ ಆಗದ ಹಾಗೇ ಹಾಲಿನ ದರ ಹೆಚ್ಚು ಮಾಡಿದರೆ ರೈತರಿಗೆ (Farmers) ಅನುಕೂಲ ಆಗುತ್ತೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಾವ ನಿರ್ಧಾರ ತಗೆದುಕೊಳ್ಳುತ್ತಾರೆ ನೋಡಿ ನಾವು ನಿರ್ಣಯ ಕೈಗೊಳ್ಳುತ್ತೇವೆ ಎಂದು ಜಾರಕಿಹೊಳಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ