Bengaluru: ಬೆಸ್ಕಾಂ ಅಧಿಕಾರಿಗಳ ಸೋಗಿನಲ್ಲಿ ಮೋಸ: ವಿದ್ಯುತ್ ಬಿಲ್ ಪಾವತಿ ಹೆಸರಲ್ಲಿ ₹2.3 ಲಕ್ಷ ಪೀಕಿದ ಆರೋಪಿಗಳು

ಬಿಲ್‌ಗಳನ್ನು ಪಾವತಿಸದೇ ಇದ್ದ ಸಂದರ್ಭದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸುವ ಕುರಿತು ಬರುವಂತಹ ಯಾವುದೇ ಸಂದೇಶಗಳ ಬಗ್ಗೆ ಕಿವಿಗೊಡದಂತೆ ಬೆಸ್ಕಾಂ ತನ್ನ ಗ್ರಾಹಕರಿಗೆ ಈಗಾಗ್ಲೇ ಸಾಕಷ್ಟು ಸಾರಿ ಹೇಳಿದೆ. ಹೀಗಿರುವಾಗಲೂ ಬಿಲ್ ಪಾವತಿ ಹಗರಣ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಗ್ರಾಹಕರನ್ನು ಕಾಡುತ್ತಲೇ ಇದೆ.

ವಿದ್ಯುತ್ ಬಿಲ್ ಪಾವತಿ ಹೆಸರಲ್ಲಿ ವಂಚನೆ

ವಿದ್ಯುತ್ ಬಿಲ್ ಪಾವತಿ ಹೆಸರಲ್ಲಿ ವಂಚನೆ

  • Share this:
ಬೆಂಗಳೂರಿನಲ್ಲಿ (Bengaluru) ವಿದ್ಯುತ್ ಬಿಲ್ ಪಾವತಿಗೆ (Electricity bill payment) ಸಂಬಂಧಿಸಿದಂತೆ ಒಂದಲ್ಲ ಒಂದು ಹಗರಣಗಳು ನಡೆಯುತ್ತಲೇ ಇರುತ್ತವೆ. ಇಲಾಖೆ ಕೂಡ ಜನರನ್ನು ಕೆಲವು ವಂಚನೆಗಳಿಂದ ದೂರವಿರುವಂತೆ ಎಚ್ಚರಿಸುತ್ತಲೇ ಇರುತ್ತದೆ. ಆದರೆ ಏನು ಮಾಡುವುದು ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ. ಬಿಲ್‌ಗಳನ್ನು ಪಾವತಿಸದೇ ಇದ್ದ ಸಂದರ್ಭದಲ್ಲಿ ವಿದ್ಯುತ್ ಪೂರೈಕೆ (Electricity Payment) ಸ್ಥಗಿತಗೊಳಿಸುವ ಕುರಿತು ಬರುವಂತಹ ಯಾವುದೇ ಸಂದೇಶಗಳ ಬಗ್ಗೆ ಕಿವಿಗೊಡದಂತೆ ಬೆಸ್ಕಾಂ (BESCOM) ತನ್ನ ಗ್ರಾಹಕರಿಗೆ ಈಗಾಗ್ಲೇ ಸಾಕಷ್ಟು ಸಾರಿ ಹೇಳಿದೆ. ಹೀಗಿರುವಾಗಲೂ ಬಿಲ್ ಪಾವತಿ ಹಗರಣ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಗ್ರಾಹಕರನ್ನು ಕಾಡುತ್ತಲೇ ಇದೆ.

ಒಂದೂವರೆ ಲಕ್ಷ ಹಣ ಕಳೆದುಕೊಂಡ ವ್ಯಕ್ತಿ

ವಿದ್ಯಾರಣ್ಯಪುರದ ನಿವಾಸಿ ಶ್ರೀರಾಮ್ ಕೆ.ವಿ (56) ಎಂಬುವರು, ಜುಲೈ 17ರಂದು ಬೆಸ್ಕಾಂ ಸಿಬ್ಬಂದಿ ಎಂದು ಹೇಳಿಕೊಂಡು ವ್ಯಕ್ತಿಯಿಂದ ಮೋಸ ಹೋಗಿದ್ದು, ಒಂದೂವರೆ ಲಕ್ಷ ಹಣ ಕಳೆದುಕೊಂಡಿದ್ದಾರೆ. ಶ್ರೀರಾಮ್ ಗೆ ಬೆಸ್ಕಾಂ ಪ್ರತಿನಿಧಿಗಳ ಸೋಗಿನಲ್ಲಿದ್ದ ವ್ಯಕ್ತಿಯಿಂದ ಒಂದು ಸಂದೇಶ ಬಂದಿತ್ತು. ಅದನ್ನು ನಂಬಿ ಹಣ ಪಾವತಿಸಿದ್ದೆ ಎಂದು ಶ್ರೀರಾಮ್ ದೂರಿನಲ್ಲಿ ತಿಳಿಸಿದ್ದಾರೆ.

ಆ ವ್ಯಕ್ತಿಯು ಬಿಲ್ ಪಾವತಿಯ ಕುರಿತು ನವೀಕರಣವನ್ನು ಕೋರಿದರು. ನವೀಕರಣವನ್ನು ಸಲ್ಲಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಸಂದೇಶದಲ್ಲಿ ಎಚ್ಚರಿಕೆ ನೀಡಿದ್ದರು ಎಂದು ಸಹ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆನ್‌ಲೈನ್ ಪಾವತಿ ಮಾಡಲು ಸಹಾಯ ಮಾಡುವ ನೆಪದಲ್ಲಿ ವಂಚನೆ 

ಸಂದೇಶ ಬಂದ ನಂಬರ್ ಮೂಲಕ ಶ್ರೀರಾಮ್ ವ್ಯಕ್ತಿಯನ್ನು ಸಂಪರ್ಕಿಸಿದ್ದಾರೆ. ವ್ಯಕ್ತಿ, ಆನ್‌ಲೈನ್ ಪಾವತಿ ಮಾಡಲು ಸಹಾಯ ಮಾಡುವ ನೆಪದಲ್ಲಿ, ಶ್ರೀರಾಮ್‌ಗೆ ತಾನು ಹಂಚಿಕೊಂಡ ಲಿಂಕ್ ಬಳಸಿ ₹11 ಅನ್ನು ವರ್ಗಾಯಿಸಲು ಕೇಳಿದ್ದಾನೆ. ವಹಿವಾಟು ನಡೆದ ಕೆಲವೇ ನಿಮಿಷಗಳಲ್ಲಿ ಶ್ರೀರಾಮ್ ಅವರ ಬ್ಯಾಂಕ್ ಖಾತೆಯಿಂದ ₹1.5 ಲಕ್ಷ ವರ್ಗಾವಣೆಯಾಗಿರುವ ವಹಿವಾಟಿನ ಸಂದೇಶ ಬಂದಿದೆ.

ಇದನ್ನೂ ಓದಿ: Twitter Campaign: ಸುಸಜ್ಜಿತ ಆಸ್ಪತ್ರೆಗಾಗಿ ಟ್ವಿಟರ್​ನಲ್ಲಿ ಅಭಿಯಾನ; ಉತ್ತರ ಕನ್ನಡ ಜನರಿಗೆ ಅನೇಕರ ಬೆಂಬಲ

ತಕ್ಷಣವೇ ಶ್ರೀರಾಮ್ ಆ ನಂಬರ್ ಗೆ ಕರೆ ಮಾಡಿದರು, ಆದರೆ ನಂಬರ್ ನಾಟ್ ರೀಚಬಲ್ ಆಗಿತ್ತು. ನಂತರ ತಾನು ಮೋಸ ಹೋಗಿರುವುದನ್ನು ಅರಿತ ಶ್ರೀರಾಮ್ ಜುಲೈ 18ರಂದು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರಿಗೆ ವಿಷಯ ತಿಳಿಸಿ ದೂರು ದಾಖಲಿಸಿದ್ದಾರೆ.

ಇಂಥದ್ದೇ ಮತ್ತೊಂದು ಪ್ರಕರಣ

ಮೂಲಗಳ ಪ್ರಕಾರ ಈಶಾನ್ಯ ವಿಭಾಗವೊಂದರಲ್ಲೇ ಇದೇ ರೀತಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ತಿಂಗಳಲ್ಲಿ 10 ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ.

ವಸಂತನಗರದ ಗೃಹಿಣಿ ರೇಖಾ ನಂದಕುಮಾರ್ (53) ಅವರು ಸಹ ಜುಲೈ 19 ರಂದು ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸರಿಗೆ ಇದೇ ರೀತಿಯ ದೂರು ಸಲ್ಲಿಸಿದ್ದರು. ರೇಖಾ ಅವರಿಗೂ ಸಹ ಕಿಡಿಗೇಡಿಗಳು ಶ್ರೀರಾಮ್ ಅವರಿಗೆ ವಂಚಿಸಿದಂತೆಯೇ ಮೋಸ ಮಾಡಿದ್ದಾರೆ. ಮೊದಲಿಗೆ ಸಂದೇಶ ಕಳುಹಿಸಿ ಆನ್‌ಲೈನ್‌ನಲ್ಲಿ ಬಿಲ್ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:  Potholed Road Protest: ಬೆಂಗಳೂರಿನ ಅಂಜನಾಪುರ ರಸ್ತೆಯಲ್ಲಿ 'ಯಮನ' ವಿಹಾರ! ಇಲ್ಲಿದೆ ನೋಡಿ ಅಸಲಿ ವಿಷ್ಯ

ರೇಖಾ ಅದೇ ನಂಬರ್ ಗೆ ಕರೆ ಮಾಡಿದಾಗ ವ್ಯಕ್ತಿಯು, ₹10 ಪಾವತಿ ಮಾಡಲು ‘ಕ್ವಿಕ್ ಸಪೋರ್ಟ್ ಆ್ಯಪ್’ ಅನ್ನು ಡೌನ್‌ಲೋಡ್ ಮಾಡುವಂತೆ ರೇಖಾ ಅವರಿಗೆ ತಿಳಿಸಿದರು. ಆ್ಯಪ್ ಡೌನ್ಲೋಡ್ ಮಾಡಿದ್ದ ರೇಖಾ, ಬಿಲ್ ಪಾವತಿಸಲೆಂದು ವೈಯಕ್ತಿಕ ಮಾಹಿತಿ ನಮೂದಿಸಿದ್ದರು. ಇದಾದ ಕೆಲ ನಿಮಿಷಗಳಲ್ಲೇ ಬ್ಯಾಂಕ್ ಖಾತೆಯಿಂದ ₹ 79,115 ಡ್ರಾ ಆಗಿರುವುದು ತಿಳಿದು ಬಂತು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಜನರಿಗೆ ಎಚ್ಚರಿಕೆ ನೀಡುತ್ತಿರುವ ಸೈಬರ್ ಕ್ರೈಂ ಪೊಲೀಸರು

ಬೆಸ್ಕಾಂ ಪ್ರತಿನಿಧಿ ಎಂದು ಹೇಳಿಕೊಳ್ಳುತ್ತಿರುವ ಆರೋಪಿಗಳು ಬಿಲ್ ಪಾವತಿಸುವಂತೆ ಹೇಳಿ ಆ್ಯಪ್ ಒಂದನ್ನು ಡೌನ್ಲೋಡ್ ಮಾಡಿಸಿ ಬಳಿಕ ಜನರ ಬ್ಯಾಂಕಿನಿಂದ ಹಣ ದೋಚುತ್ತಿದ್ದಾರೆ. ಹೀಗಾಗಿ ಇಂತಹ ಸಂದೇಶಗಳು ಅಥವಾ ಕರೆಗಳಿಗೆ ಕಿವಿಗೊಡದಂತೆ ಸೈಬರ್ ಕ್ರೈಂ ಪೊಲೀಸರು ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಬೆಸ್ಕಾಂ ಕೂಡ ಬಿಲ್ ಪಾವತಿ ಮಾಡದಿರುವ ಸಂದರ್ಭದಲ್ಲಿ ಇಲಾಖೆ ಇಂತಹ ಯಾವುದೇ ಸಂದೇಶ, ಕರೆ ಮಾಡುವುದಿಲ್ಲ. ಇಂತಹವುಗಳನ್ನು ನಂಬಿ ಹಣ ಕಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದೆ.
Published by:Ashwini Prabhu
First published: