ಉಪಚುನಾವಣೆ: ಕೋವಿಡ್​ ಸೋಂಕಿತರಿಗೂ ಮುನ್ನೆಚ್ಚರಿಕೆ ಕ್ರಮದೊಂದಿಗೆ ಮತದಾನಕ್ಕೆ ಅವಕಾಶ; ಚುನಾವಣಾಧಿಕಾರಿ

ಉಪಚುನಾವಣೆಯಲ್ಲಿ ಮತದಾನ ಮಾಡಲು ಎಲ್ಲಾ ರೀತಿಯ ಮುಂಜಾಗ್ರತ ಕ್ರಮವಹಿಸಲಾಗಿದೆ. ಇದರಿಂದ ಮತದಾರರಲ್ಲಿ ಯಾವುದೇ ಆತಂಕ ಬೇಡ. ಅಷ್ಟೇ ಅಲ್ಲದೇ, ಕೋವಿಡ್​ ಸೋಂಕಿತರು ಕೂಡ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ತಮ್ಮ ಹಕ್ಕನ್ನು ಚಲಾಯಿಸುವ ಅವಕಾಶ ನೀಡಲಾಗಿದೆ

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಬೆಂಗಳೂರು (ನ.2): ಕೊರೋನಾ ಸೋಂಕಿನ ಆತಂಕದ ನಡುವೆ ಎದುರಾಗಿರುವ ಶಿರಾ ಮತ್ತು ಆರ್​ಆರ್​ ನಗರ ಉಪಚುನಾವಣೆಯಲ್ಲಿ ಮತದಾನ ಮಾಡಲು ಎಲ್ಲಾ ರೀತಿಯ ಮುಂಜಾಗ್ರತ ಕ್ರಮವಹಿಸಲಾಗಿದೆ. ಇದರಿಂದ ಮತದಾರರಲ್ಲಿ ಯಾವುದೇ ಆತಂಕ ಬೇಡ. ಅಷ್ಟೇ ಅಲ್ಲದೇ, ಕೋವಿಡ್​ ಸೋಂಕಿತರು ಕೂಡ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ತಮ್ಮ ಹಕ್ಕನ್ನು ಚಲಾಯಿಸುವ ಅವಕಾಶ ನೀಡಲಾಗಿದೆ ಎಂದು ಚುನಾವಣಾಧಿಕಾರಿ ಮಂಜುನಾಥ್​ ಪ್ರಸಾದ್​ ತಿಳಿಸಿದ್ದಾರೆ. ನಾಳೆ ನಡೆಯಲಿರುವ ಉಪಚುನಾವಣೆಗೆ ಸಕಲ ಸಿದ್ಧತೆ ನಡೆಸಲಾಗಿದ್ದು, ಈ ಕುರಿತು ಮಾತನಾಡಿದ ಅವರು, ಮತದಾನ ಸಂದರ್ಭದಲ್ಲಿ ಜನರಿಗೆ ಕೊರೋನಾ ಸೋಂಕಿನ ಹೆದರಿಕೆ ಕಾಡಿದೆ. ಆದರೆ, ಈ ರೀತಿ ಯಾವುದೇ ಆತಂಕ ಕಾಡದಂತೆ ಕ್ರಮ ಕೈಗೊಳ್ಳಲಾಗಿದೆ. ಮತಗಟ್ಟೆಯಲ್ಲಿ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ಗಳ ವ್ಯವಸ್ಥೆ ಜೊತೆ ಸಾಮಾಜಿಕ ಅಂತರ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ,  ಮತದಾನ ನಡೆಯುವ ಎಲ್ಲ 678 ಮತಗಟ್ಟೆಗಳಲ್ಲೂ ತಲಾ ಒಬ್ಬ ಆರೋಗ್ಯಾಧಿಕಾರಿ ನೇಮಕ ಮಾಡಲಾಗಿದೆ. ಈ ಹಿನ್ನಲೆ ಮತದಾರರು ಯಾವುದೇ ಭಯ ಪಡದೇ ತಮ್ಮ ಹಕ್ಕಿನ ಅಧಿಕಾರವನ್ನು ಚಲಾಯಿಸಬೇಕು ಎಂದು ಮನವಿ ಮಾಡಿದರು. ಈ ಬಾರಿ ಮತದಾನದ ವೇಳೆ 20 % ಚುನಾವಣಾ ಸಿಬ್ಬಂದಿಯ ನ್ನು ಹೆಚ್ಚುವರಿ ನೇಮಕ ಮಾಡಿದ್ದೇವೆ. ಮತದಾನದ ಸಂದರ್ಭದಲ್ಲಿ ಯಾರಿಗಾದರೂ ಸಿಬ್ಬಂದಿಗೆ ಹುಷಾರ್ ಇಲ್ಲವಾದರೆ ತಕ್ಷಣಕ್ಕೆ ಬದಲಾಯಿಸುತ್ತೇವೆ. ಇನ್ನು ಸಿಂಟಮ್ಸ್ ಇದ್ದವರಿಗೆ ಯಾರನ್ನು ಕೆಲಸಕ್ಕೆ ಬರುವಂತೆ ಒತ್ತಾಯ ಮಾಡಿಲ್ಲ. 678 ಭೂತ್ ಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಆಗಿದೆ. ಮತ ಚಲಾಯಿಸುವ ವ್ಯಕ್ತಿಗೆ ಬಲಗೈಗೆ ಹ್ಯಾಂಡ್ ಗ್ಲೌಸ್ ನೀಡುತ್ತೇವೆ. ಬಳಿಕ ಎಡಗೈನ ಮಧ್ಯ ಬೆರಳಿಗೆ ಶಾಯಿ ಹಾಕುತ್ತೇವೆ ಎಂದರು.

ಸೋಂಕಿತರಿಗೂ ಮತದಾನದ ಅವಕಾಶ:

ಕ್ಷೇತ್ರದಲ್ಲಿ ಯಾರಾದರೂ ಕೊರೋನಾ ಸೋಂಕಿಗೆ ತುತ್ತಾಗಿದ್ದರೆ, ಅವರು ಮತದಾನದಿಂದ ವಂಚಿತರಾಗುತ್ತೇವೆ ಎಂಬ ಅನುಮಾನ ಬೇಡ. ಸೋಂಕಿತರಿಗೂ ತಮ್ಮ ಹಕ್ಕು ಚಲಾಯಿಸಲು ಅವಕಾಶ ನೀಡಲಾಗಿದೆ. ಈ ಕುರಿತು ಕ್ಷೇತ್ರದಲ್ಲಿ ಸೋಂಕಿತರಿಗೆ ಮಾಹಿತಿ ನೀಡಲಾಗಿದೆ. ಸೋಂಕಿತರ ಮನೆಗೆ  ಅಂಬ್ಯುಲೆನ್ಸ್ ಕಳಿಸುತ್ತೇವೆ. ಅವರನ್ನು ಥರ್ಮಲ್ ಸ್ಕ್ರಿನಿಂಗ್, ಟೆಂಪರೇಚರ್ ಚೆಕ್ ಅಪ್ ಮಾಡಿ ಮತ ಕೇಂದ್ರಕ್ಕೆ ಕರೆತಂದು ಮತದಾನ ಮಾಡುವಂತೆ ನೋಡಿಕೊಳ್ಳಲಾಗುವುದು. ಬಳಿಕ ಅವರನ್ನು ಅಂಬ್ಯುಲೆನ್ಸ್ ಮೂಲಕ ಮನೆಗೆ ಬಿಡುತ್ತೇವೆ. ಈ ಬಗ್ಗೆ ಎಲ್ಲಾ ವ್ಯವಸ್ಥೆಗಳು ಆಗಿವೆ.

ಬೆಳಗ್ಗೆ 7 ರಿಂದ ಸಂಜೆ ಆರು ಗಂಟೆ ತನಕ ಮತದಾನಕ್ಕೆ ಅವಕಾಶ ನೀಡಲಾಗಿದೆ. ಆರು ಗಂಟೆ ಒಳಗೆ ಸಾಲಿನಲ್ಲಿ ನಿಂತವರಿಗೂ ಮತದಾನಕ್ಕೆ ಅವಕಾಶ ನೀಡಲಾಗುತ್ತದೆ ಎಂದರು.

ಕೊನೆ ಅವಧಿಯಲ್ಲಿ ಮತದಾನಕ್ಕೆ ಅವಕಾಶ:

ಶಿರಾದಲ್ಲಿ ಕೂಡ ಕೋವಿಡ್​ ಸೋಂಕಿತರಿಗೆ ಮತದಾನ ಮಾಡುವ ಎಲ್ಲಾ ವ್ಯವಸ್ಥೆ ಮಾಡಿಕೊಂಡಿರುವ ಕುರಿತು ತುಮಕೂರು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ತಿಳಿಸಿದ್ದಾರೆ. ಕ್ಷೇತ್ರದಲ್ಲಿ 130 ಮಂದಿ ಕೋವಿಡ್​ ಸೋಂಕಿತರಿದ್ದು, ಅವರಿಗೆ ಅಂಚೆ ಮತದಾನದ ಮೂಲಕ ಹಕ್ಕು ಚಲಾಯಿಸಲು ಅವಕಾಶ ನೀಡಲಾಗಿದೆ. ಕೋವಿಡ್ ಕೇರ್ ಸೆಂಟರ್ ನಲ್ಲಿರುವ 65 ಮಂದಿ ಮತದಾನ ಮಾಡಲಿದ್ದಾರೆ.

ಇದನ್ನು ಓದಿ: ಆರ್​ಆರ್​​ ನಗರ ಉಪಚುನಾವಣೆ: ನ.4ರವರೆಗೆ ನಿಷೇಧಾಜ್ಞೆ, ನಾಳೆವರೆಗೆ ಮದ್ಯ ಮಾರಾಟ ನಿಷೇಧ

ಮತದಾನದ ಕೊನೆ ಅವಧಿಯ ಒಂದು ತಾಸು ಮಾತ್ರ ಪಾಸಿಟಿವ್ ಪೇಷಂಟ್ ಗಳಿಗೆ ಹಕ್ಕು ಚಲಾವಣೆಗೆ ಅವಕಾಶ ನೀಡಲಾಗುವುದು. ಪಿಪಿಇ ಕಿಟ್ ಧರಿಸಿಯೇ ಕೊನೆ ಅವಧಿಯಲ್ಲಿ  ಚುನಾವಣಾ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಕೋವಿಡ್ ಕೇರ್ ಸೆಂಟರ್ ನಿಂದ ಬಂದು ಮತದಾನ‌ ಮಾಡುವ ಪೇಷಂಟ್ ಗಳಿಗೆ ಪ್ರತ್ಯೇಕ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಅಹಿತಕರ ಘಟನೆ, ಅಕ್ರಮ ಚಟುವಟಿಕೆ ತಡೆಯಲು 24/7 ಫ್ಲೈಯಿಂಗ್ ಸ್ಕ್ವ್ಯಾಡ್ ಕಣ್ಗಾವಲು ಇಡಲಾಗಿದೆ.ಪ್ರತಿ ಬೂತ್ ನಲ್ಲೂ ಇವಿಎಂ ಮಷಿನ್ ಗಾಗಿ ಪ್ರತ್ಯೇಕ ಗ್ಲೌಸ್ ಗಳನ್ನು ನೀಡಲಾಗತ್ತದೆ. ಗ್ಲೌಸ್ ಗಳನ್ನು ಅಲ್ಲಿಯೇ ವಾಪಸ್ ವಿಲೇವಾರಿ ಮಾಡಲು ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಬೂತ್ ನಲ್ಲೂ ಸ್ಯಾನಿಟೈಸರ್, ಮಾಸ್ಕ್, ಗ್ಲೌಸ್ ಗಳು ಲಭ್ಯವಿರಲಿದೆ ಎಂದರು.
Published by:Seema R
First published: