ಬಾಗಲಕೋಟೆ ಡಿಸಿಸಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ; 'ಕೈ' ಯಲ್ಲಿ ಬಂಡಾಯ, ಬಿಜೆಪಿ ಒಗ್ಗಟ್ಟಿನ ಮಂತ್ರ

ಬಿಡಿಸಿಸಿ ಬ್ಯಾಂಕ್ ನಲ್ಲಿ  ಸರ್ಕಾರದ ಷೇರು ಇಲ್ಲ ಹಾಗಾಗಿ  ಸರ್ಕಾರ ಸಿದ್ದನಗೌಡ ಪಾಟೀಲ್  ನಾಮನಿರ್ದೇಶನ ಮಾಡಲು ಬರುವುದಿಲ್ಲ ಎಂದು ಕಾಂಗ್ರೆಸ್​ ಕೋರ್ಟ್​ ಮೊರೆ ಹೋಗಿದೆ

ಡಿಸಿಸಿ ಬ್ಯಾಂಕ್​ ಚುನಾವಣೆ

ಡಿಸಿಸಿ ಬ್ಯಾಂಕ್​ ಚುನಾವಣೆ

  • Share this:
ಬಾಗಲಕೋಟೆ (ನ. 17): ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗೆ ಇಂದು ಮತದಾನ ನಡೆದಿದೆ. ಆದರೆ ಮತ ಎಣಿಕೆಗೆ ತಡೆಯಾಗಿದೆ.  ಸರ್ಕಾರ ನಾಮನಿರ್ದೇಶನ ಮಾಡಿದ್ದ ಸಿದ್ದನಗೌಡ ಪಾಟೀಲ್ ನೇಮಕ ಪ್ರಶ್ನಿಸಿ ಕಾಂಗ್ರೆಸ್ ಕೋರ್ಟ್ ಮೊರೆ ಹೋಗಿದ್ದು, ನಾಳೆ ಕೋರ್ಟ್​ ತೀರ್ಪಿನ ಆಧಾರದ ಮೇಲೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಫಲಿತಾಂಶದ ಭವಿಷ್ಯ ನಿಂತಿದೆ. ಈ ನಡುವೆ ಬಾದಾಮಿ ತಾಲೂಕು ಪಿಕೆಪಿಎಸ್ ಕ್ಷೇತ್ರದಿಂದ ಪಕ್ಷೇತರರಾಗಿ ಆಯ್ಕೆಯಾಗಿದ್ದ ಕುಮಾರ್ ಗೌಡ ಜನಾಲಿಗೆ ಬಿಡಿಸಿಸಿ ಅಧ್ಯಕ್ಷ ಪಟ್ಟ ಒಲಿದು ಬರುವುದು ದಟ್ಟವಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ, ಪ್ರಕಾಶ್ ತಪಶೆಟ್ಟಿಗೆ ಬಹುತೇಕ ಖಚಿತವಾಗಿದೆ. ಕಳೆದ ಎರಡು ದಿನಗಳಿಂದ ಬಿಜೆಪಿ ಪಾಳಯದಲ್ಲಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಲು ಸಿಎಂ ಬಿಎಎಸ್​ವೈ ಸೂಚನೆ ಹಿನ್ನೆಲೆಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ಜಿಲ್ಲೆಯಲ್ಲಿ ಠಿಕಾಣಿ ಹೂಡಿದ್ದು ನಿರಂತರವಾಗಿ ಗೌಪ್ಯ ಸಭೆಯ ಮೂಲಕ ಒಡಂಬಡಿಕೆ ಸೂತ್ರ ಹೆಣೆದು, ಬಿಜೆಪಿ ಬೆಂಬಲಿತರಲ್ಲಿ ಒಗ್ಗಟ್ಟು ಮೂಡಿಸಿದ್ದಾರೆ.

ಬಿಜೆಪಿಯಲ್ಲಿ ರಾಮಣ್ಣ ತಳೇವಾಡ, ಹನಮಂತ ನಿರಾಣಿ ಮಧ್ಯೆ ಅಧ್ಯಕ್ಷಗಿರಿಗಾಗಿ ತೀವ್ರ ಪೈಪೋಟಿ ನಡೆದಿತ್ತು.ಈ ವೇಳೆ ಬಿಜೆಪಿಗೆ ರೆಬಲ್ ಆಗಿ ಆಯ್ಕೆಯಾಗಿದ್ದ ಕುಮಾರ್ ಗೌಡ ಜನಾಲಿ ಕೂಡಾ ಅಧ್ಯಕ್ಷ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ. ಅಧಿಕಾರದ ಮೊದಲ ಅವಧಿ ಅಧ್ಯಕ್ಷ ಸ್ಥಾನ ಕುಮಾರ್ ಗೌಡ ಜನಾಲಿ, ಎರಡನೇ ಅವಧಿಗೆ ಹನಮಂತ ನಿರಾಣಿ ಗೆ ಎಂದು ಒಡಂಬಡಿಕೆಯಾಗಿದೆ. ಅದರಂತೆ ಇಂದು ಬಿಜೆಪಿ ಬೆಂಬಲಿತರು ಒಗ್ಗಟ್ಟು ಪ್ರದರ್ಶಿಸಿ, ಅಧ್ಯಕ್ಷ ಸ್ಥಾನಕ್ಕೆ ಕುಮಾರ್ ಗೌಡ ಜನಾಲಿ, ಉಪಾಧ್ಯಕ್ಷ ಸ್ಥಾನಕ್ಕೆ ಪ್ರಕಾಶ್ ತಪಶೆಟ್ಟಿ ನಾಮಪತ್ರ ಸಲ್ಲಿಸಿದರು.

ಇನ್ನು ಕಾಂಗ್ರೆಸ್ ಬೆಂಬಲಿತರಲ್ಲಿ  ಒಡಕು ಮೂಡಿ,ಬಂಡಾಯ ಅಭ್ಯರ್ಥಿಯಾಗಿ ಅಧ್ಯಕ್ಷ ಸ್ಥಾನಕ್ಕೆ ವಿಜಯಾನಂದ ಕಾಶಪ್ಪನವರ್ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಬೆಂಬಲಿತರಾಗಿ ಅಧ್ಯಕ್ಷ ಸ್ಥಾನಕ್ಕೆ ಅಜಯ್ ಕುಮಾರ್ ಸರನಾಯಕ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ರೆಬೆಲ್ ಆಗಿ ಸ್ಪರ್ಧಿಸಿ, ಗೆದ್ದಿದ್ದ ಮುರುಗೇಶ್ ಕಡ್ಲಿಮಟ್ಟಿ ನಾಮಪತ್ರ ಸಲ್ಲಿಸಿದರು. ಮೊದಲಿನಿಂದಲೂ ಅಧ್ಯಕ್ಷ ಸ್ಥಾನದ ಮೇಲೇ ಕಣ್ಣಿಟ್ಟಿದ್ದ ವಿಜಯಾನಂದ ಕಾಶಪ್ಪನವರ್, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಎಸ್ ಆರ್ ಪಾಟೀಲ್,ಜಿಲ್ಲಾ ನಾಯಕರಿಗೆ ಬೇಡಿಕೆಯಿಟ್ಟಿದ್ದರು. ಆದರೆ ಯಾರು ಸ್ಪಂದಿಸಲಿಲ್ಲ. ಹಾಗಾಗಿ ನಾಮಪತ್ರ ಸಲ್ಲಿಸಿದ್ದೇನೆ. ಈ ಚುನಾವಣೆಯಲ್ಲಿ ಪಕ್ಷ ಬರುವುದಿಲ್ಲ, ಮುಂದಿನ ಚುನಾವಣೆಯೂ ಹೀಗೆ ನಡೆಯಲಿ ಎಂದು ತಮ್ಮ ಪಕ್ಷದ ನಾಯಕರಿಗೆ ಎಚ್ಚರಿಕೆ ನೀಡಿ, ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯ ಮತದಾನದಿಂದ ದೂರ ಉಳಿದರು. ಘಟಾನುಘಟಿ ನಾಯಕರಾದ ಎಸ್ ಆರ್ ಪಾಟೀಲ್,ಎಚ್ ವೈ ಮೇಟಿ, ಸಿದ್ದು ಸವದಿ,ಆನಂದ್ ನ್ಯಾಮಗೌಡ,ಅಜಯ್ ಕುಮಾರ್ ಸರನಾಯಕ, ಹನುಮಂತ ನಿರಾಣಿ ಮತ ಚಲಾಯಿಸಿದ್ದಾರೆ

ನ್ಯಾಯಾಲಯದ ಮೊರೆ ಹೋದ ಕಾಂಗ್ರೆಸ್ಸಿಗರು

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಒಟ್ಟು ಸ್ಥಾನ-13, ಪೈಕಿ ಕಾಂಗ್ರೆಸ್-6, ಬಿಜೆಪಿ-5, ಇಬ್ಬರು ಪಕ್ಷೇತರರು ಆಯ್ಕೆಯಾಗಿದ್ದಾರೆ. ಅಪೇಕ್ಷ ಬ್ಯಾಂಕ್ ಪ್ರತಿನಿಧಿಯಾಗಿ ಬಸವರಾಜ ಪಾಟೀಲ ನೇಮಕಗೊಂಡಿದ್ದು, ರಾಜ್ಯ ಸರ್ಕಾರ ಸಿದ್ದನಗೌಡ ಪಾಟೀಲ್ ಎಂಬುವರನ್ನು ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಿತ್ತು.ಈ ವೇಳೆ ಕಾಂಗ್ರೆಸ್ ಬಿಡಿಸಿಸಿ ಬ್ಯಾಂಕ್ ನಲ್ಲಿ  ಸರ್ಕಾರದ ಷೇರು ಇಲ್ಲ ಹಾಗಾಗಿ  ಸರ್ಕಾರ ಸಿದ್ದನಗೌಡ ಪಾಟೀಲ್  ನಾಮನಿರ್ದೇಶನ ಮಾಡಲು ಬರುವುದಿಲ್ಲ ಎಂದು ಕೋರ್ಟ್ ಮೊರೆ ಹೋಗಿದ್ದಾರೆ. ನವೆಂಬರ್ 17 ರಂದು ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆಸಬಹುದು. ಆದರೆ ಸಿದ್ದನಗೌಡ ಪಾಟೀಲ್ ಮತ ಪರಗಣಿಸಬೇಕೋ ಬೇಡವೋ ಎಂದು ತೀರ್ಪು ಕಾಯ್ದಿರಿಸಿ, ಫಲಿತಾಂಶ ಪ್ರಕಟಿಸದಂತೆ ನಿರ್ಬಂಧಿಸಿ, ನ್ಯಾಯಾಲಯ ಆದೇಶಿಸಿತ್ತು.

ನವೆಂಬರ್ 18ರಂದು  ನ್ಯಾಯಾಲಯ ಈ ಬಗ್ಗೆ ವಿಚಾರಣೆ ನಡೆಯಲಿದ್ದು ,ಕೋರ್ಟ್ ತೀರ್ಪು ಬಳಿಕ ಫಲಿತಾಂಶ ಪ್ರಕಟಗೊಳ್ಳಲಿದೆ. ಇವತ್ತು ಮಧ್ಯಾಹ್ನ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಒಟ್ಟು 16 ಮತ ಚಲಾಯಿಸುವ ಅಧಿಕಾರ ಹೊಂದಿದ್ದು,ಅದರಲ್ಲಿ 15 ಮತ ಚಲಾವಣೆಯಾಗಿವೆ. ಬಿಜೆಪಿ-05, ಕಾಂಗ್ರೆಸ್-06 ಪೈಕಿ ವಿಜಯಾನಂದ ಕಾಶಪ್ಪನವರ್ ಗೈರು, ಪಕ್ಷೇತರು-2, ಅಪೇಕ್ಷ ಬ್ಯಾಂಕ್ ಪ್ರತಿನಿಧಿ, ಸಹಕಾರಿ ಸಂಘಗಳ ಉಪನಿಬಂಧಕರು, ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡಿರುವ ಸಿದ್ದನಗೌಡ ಪಾಟೀಲ್ ಮತ ಚಲಾಯಿಸಿದ್ದಾರೆ.

ಬಿಜೆಪಿ ಬೆಂಬಲಿತರು ಅಡ್ಡಮತ 

ಬಿಜೆಪಿ ಪಾಳಯದಲ್ಲಿ ಗೆಲುವಿನ ನಗೆಯಿದ್ದು, ಚುನಾವಣೆ ಮುನ್ನವೇ ವಿಜಯದ ಸಂಕೇತ ತೋರಿಸಿದ್ದಾರೆ.ಆದರೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಈ ಹಿಂದಿನಿಂದಲೂ ಜಾತಿ ರಾಜಕಾರಣ ಸದ್ದು ಮಾಡುತ್ತಾ ಬಂದಿದ್ದು.ಈ ಬಾರಿಯೂ ಒಳಗೊಳಗೆ ಮತಗಳು ಹಂಚಿಕೆಯಾಗುವ(ಅಡ್ಡಮತದಾನ) ಸಾಧ್ಯತೆ ಅಲ್ಲಗಳೆಯುವಂತಿಲ್ಲ.ಏನೇ ಆಗಲಿ ಮತ ಎಣಿಕೆ ಬಳಿಕವಷ್ಟೇ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಯಾರ ಪಾಲಿಗೆ ಎನ್ನುವದು ಗೊತ್ತಾಗಲಿದೆ.
Published by:Seema R
First published: