mಬೆಂಗಳೂರು: ರಾಜ್ಯದ 15ನೇ ವಿಧಾನಸಭೆಯ ಅವಧಿಯೂ ಮೇ 24ಕ್ಕೆ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ (Election Commission) ರಾಜ್ಯದ ಸಾರ್ವತ್ರಿಕ ಚುನಾವಣೆಗೆ (Karnataka Election) ಅಗತ್ಯ ಸಿದ್ಧತೆ ನಡೆಸಿದೆ. ಈ ಕುರಿತಂತೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಗುಪ್ತಾ (Rajiv Kumar Gupta) ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಚುನಾವಣಾ ಅಧಿಕಾರಿಗಳು ಕೂಡ ಭಾಗಿಯಾಗಿ ಚುನಾವಣೆಯ ಸಿದ್ಧತೆಗಳ ಬಗ್ಗೆ ಕೈಗೊಂಡಿರುವ ಕ್ರಮಗಳು ಸೇರಿದಂತೆ ಹೊಸ ಅಂಶಗಳ ಬಗ್ಗೆ ಮಾಹಿತಿ ನೀಡಿದರು. ವಿಶೇಷ ಎಂದರೆ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ 80 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗೆ (Senior Citizens) ಮನೆಯಲ್ಲೇ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಹಿರಿಯ ನಾಗರಿಕರು ಮತ್ತು ಅಂಗವಿಕಲ ಮತದಾರರ (Voter) ಅನುಕೂಲಕ್ಕಾಗಿ ಮತದಾನ ಕೇಂದ್ರದಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುವುದು. ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟ 12.15 ಲಕ್ಷ ಮತದಾರರು ಹಾಗೂ 5.55 ಲಕ್ಷ ಅಂಗವಿಕಲ ಮತದಾರರಿಗೆ ಮನೆಯಲ್ಲೇ ಮತದಾನ ಮಾಡಲು ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಮುಖ್ಯ ಚುನಾವಣಾ ಆಯುಕ್ತರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಮುಂಬರುವ ಚುನಾವಣೆಯಲ್ಲಿ ಮತದಾರರು ಸಕ್ರಿಯವಾಗಿ ಭಾಗವಹಿಸುವಂತೆ ಮನವಿ ಮಾಡಿದರು. ಎರಡು ದಿನಗಳಿಂದ ನಾವು ಮಾಹಿತಿ ಸಂಗ್ರಹ ಮಾಡಿದ್ದೇವೆ. ಕರ್ನಾಟಕದಲ್ಲಿ 6.1 ಕೋಟಿ ಜನಸಂಖ್ಯೆ ಇದೆ. ಹೊಸ ಸರ್ಕಾರ ಮೇ 24ರ ಒಳಗೆ ಬರಬೇಕಿದೆ. ರಾಜ್ಯದಲ್ಲಿ 2,62,42,561 ಪುರುಷ ಹಾಗೂ 2,59,26,319 ಮಹಿಳಾ ಮತದಾರರು ಇದ್ದಾರೆ.
ಇದನ್ನೂ ಓದಿ: Chitradurga: ಚುನಾವಣೆಯಲ್ಲಿ ಅಕ್ರಮ ಮದ್ಯ ಸಾಗಣೆ ತಡೆಗೆ ಆಂಧ್ರದ ಅಧಿಕಾರಗಳ ಸಹಕಾರ ಕೋರಿದ ಚಿತ್ರದುರ್ಗ ಡಿಸಿ!
17 ವರ್ಷದ ಮೇಲ್ಪಟ್ಟ 1,25,406 ಜನರು ಮತದಾನಕ್ಕೆ ಅರ್ಜಿ ಹಾಕಿದ್ದಾರೆ. ರಾಜ್ಯದಲ್ಲಿ ಸರ್ಕಾರಿ ನೌಕರ ಮತದಾರರ ಸಂಖ್ಯೆ 47,779 ರಷ್ಟಿದೆ. ರಾಜ್ಯದಾದ್ಯಂತ 58,282 ಸಾವಿರ ಮತಗಟ್ಟೆ ಕೇಂದ್ರಗಳ ಸ್ಥಾಪನೆ ಮಾಡಲಾಗುತ್ತದೆ. 833 ಮತದಾರರಿರುವ ಕಡೆ ಒಂದು ಕಡೆ ಮತಗಟ್ಟೆ ಸ್ಥಾಪನೆ ಮಾಡಲಾಗುತ್ತದೆ. ಇದರಲ್ಲಿ ನಗರ ಪ್ರದೇಶದಲ್ಲಿ 24,063 ಮತಗಟ್ಟೆಗಳು, ಗ್ರಾಮೀಣ ಭಾಗದಲ್ಲಿ 34, 219 ಮತಗಟ್ಟೆಗಳು ಸ್ಥಾಪನೆ ಮಾಡಲಾಗುತ್ತದೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಚುನಾವಣಾಧಿಕಾರಿಗಳು, ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇವೆ ಪೂರ್ವ ಸಿದ್ಧತೆ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಚುನಾವಣಾ ಆಯುಕ್ತರು ಮಾಹಿತಿ ನೀಡಿದ್ದಾರೆ.
ಮತದಾನ ಪ್ರಮಾಣ ಹೆಚ್ಚಿಸಲು ಜಾಗೃತಿ ಕಾರ್ಯಕ್ರಮ
ಉಳಿದಂತೆ ಜೇನು ಕುರುಬ ಮತ್ತು ಕುರ್ಗು ಟ್ರೈಬಲ್ ಅವರನ್ನ ಮತದಾನದಲ್ಲಿ ಭಾಗವಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ನಗರ ಪ್ರದೇಶಗಳಲ್ಲಿ ಬಾರಿ ಕಡಿಮೆ ಮತದಾನವಾಗಿದೆ, ಆದರೆ ಗ್ರಾಮಾಂತರದಲ್ಲಿ ಶೇಕಡಾ 80 ಕ್ಕೂ ಅಧಿಕ ಮತದಾನವಾಗುತ್ತೆ. ಆದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೇವಲ ಶೇಕಡಾ 62ರಷ್ಟು ಮಾತ್ರ ಮತದಾನವಾಗಿದೆ. ಆದ್ದರಿಂದ ಈ ಬಾರಿ ಬಿಬಿಎಂಪಿ ವ್ಯಾಪ್ತಿಯಲ್ಲೂ ಮತದಾನ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಇವಿಎಂ ಯಾವುದೇ ಬದಲಾವಣೆ ಆಗಲ್ಲ
ಉಳಿದಂತೆ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಕೂಡ ನಾಮಪತ್ರ ಸಲ್ಲಿಸಬಹುದು. ಚುನಾವಣಾ ರ್ಯಾಲಿ, ಸಭೆ, ಸಮಾವೇಶಗಳಿಗೂ ಕೂಡ ಆನ್ ಲೈನ್ ನಲ್ಲಿ ಅನುಮತಿ ಪಡೆಯಲು ಅವಕಾಶವಿದೆ. ಗುಜರಾತ್ನಲ್ಲಿ ಬಳಸಿದ ಇವಿಎಂ ಬಳಸದಂತೆ ಕಾಂಗ್ರೆಸ್ ಮಾಡಿದ್ದ ಮನವಿಯನ್ನು ಚುನಾವಣಾ ಆಯುಕ್ತ ರಜೀವ್ ಕುಮಾರ್ ನಿರಾಕರಿಸಿದ್ದಾರೆ.
ಗುಜರಾತ್ ಇಂದ ಬರುವ ಬಸ್ ರಾಜ್ಯಕ್ಕೆ ಬರಲ್ಲವೇ, ಇವಿಎಂ ಯಾವುದೇ ಬದಲಾವಣೆ ಆಗಲ್ಲ. ಹಲವು ಬಾರಿ ಇಂತಹ ಪ್ರಶ್ನೆಗಳು ನಮ್ಮ ಮುಂದೆ ಬಂದಿವೆ. ಇವಿಎಂ ಎಲ್ಲಿಯೂ, ಯಾರಿಂದಲೂ ದುರುಪಯೋಗ ಮಾಡಲು ಸಾಧ್ಯವಿಲ್ಲ. ಇವಿಎಂ ಬದಲಾವಣೆ ಇಲ್ಲ ಎಂದು ಚುನಾವಣಾ ಆಯುಕ್ತ ಸ್ಪಷ್ಟಪಡಿಸಿದ್ದಾರೆ.
ಜನ ನಿಮ್ಮ ಮೇಲೆ ನಂಬಿಕೆ ಇರಿಸುವುದು ಹೇಗೆ?
ಪ್ರತಿ ಚುನಾವಣೆಯೂ ನಮಗೆ ಅಗ್ನಿ ಪರೀಕ್ಷೆ, ಪ್ರತಿ ಚುನಾವಣೆ ಎದುರಿಸುತ್ತೇವೆ. ಅದರಲ್ಲಿ ಯಶಸ್ವಿಯಾಗಿದ್ದೇವೆ. ನೂರಾರು ಚುನಾವಣೆ ಎದುರಿಸಿದ್ದೇವೆ. ವಿಡಿಯೋ ರೆಕಾರ್ಡ್ ಮಾಡಲಾಗುವುದು, ಎಲ್ಲಾ ಪೋಲಿಂಗ್ ಸ್ಟೇಷನ್ ನಲ್ಲಿ ಕನಿಷ್ಟ ಸವಲತ್ತು ನೀಡಲಾಗುತ್ತದೆ. ಅಂಗವಿಕಲರಿಗೆ ರ್ಯಾಂಪ್, ನೆರಳಿನ ವ್ಯವಸ್ಥೆ, ಮೇಲ್ಚಾವಣಿ, ಕುಡಿಯಲು ನೀರು ಮತ್ತು ಶೌಚಾಲಯ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಈ ರೀತಿ ಇವಿಎಂ ಬಗ್ಗೆ ಪ್ರಶ್ನೆ ಮಾಡಿದರೆ ಜನ ನಿಮ್ಮ ಮೇಲೆ ಹೇಗೆ ನಂಬಿಕೆ ಇರಿಸುವುದು ಎಂದು ಆಯುಕ್ತರು ಪ್ರಶ್ನಿಸಿದ್ದಾರೆ.
ಉಳಿದಂತೆ ಕ್ರಿಮಿನಲ್ ಹಿನ್ನೆಲೆ ಅಭ್ಯರ್ಥಿಗಳು ಮೂರು ಬಾರಿ ಪತ್ರಿಕೆಗಳಲ್ಲಿ ವಿವರವುಳ್ಳ ಜಾಹೀರಾತು ಕಡ್ಡಾಯ ಮಾಡಲಾಗುತ್ತದೆ. ಸಿ- ವಿಜಿಲ್ ಆ್ಯಪ್ ನಲ್ಲಿ ಮತದಾರರಿಗೆ ಆಮಿಷ ನೀಡುವ ದೂರು ನೀಡಿದರೆ ಕ್ಷಿಪ್ರ ಸ್ಪಂದನಾ ತಂಡ 100 ನಿಮಿಷಗಳ ಒಳಗೆ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಅಧಿಕಾರಿಗಳ ಮೇಲಿನ ಆರೋಪ ಲಘುವಾಗಿ ಪರಿಗಣಿಸಲ್ಲ. ಅಂಗವಿಕಲ ಮತದಾರರಿಗೆ ಮತಗಟ್ಟೆವರೆಗೆ ವೀಲ್ ಚೇರ್ ಮತ್ತು ಸಾರಿಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: Mandya Politics: ಸುಮಲತಾ ಬಿಜೆಪಿಗೆ ಬೆಂಬಲ ಬೆನ್ನಲ್ಲೇ ಕಾಂಗ್ರೆಸ್-ಜೆಡಿಎಸ್ ಅಲರ್ಟ್; ಕಾರ್ಯಕರ್ತರಿಗೆ ಖಡಕ್ ಸಂದೇಶ ರವಾನೆ
ಭದ್ರತಾ ವ್ಯವಸ್ಥೆ, ಹಬ್ಬ ಹರಿದಿನಗಳು, ಗಲಭೆಗಳ ಹಿನ್ನೆಲೆ ಪರಿಶೀಲಿಸಿ ಚುನಾವಣಾ ಹಂತ ಎಷ್ಟು ಅನ್ನೋದನ್ನ ನಿರ್ಧಾರ ಮಾಡುತ್ತೇವೆ. ಇದು ಆಯೋಗದ ವಿವೇಚನೆ ಮತ್ತು ಪರಮಾಧಿಕಾರ, ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿರುವ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.
ಮತದಾರರಿಗೆ ಆಮಿಷ ಒಡ್ಡುವ ಪ್ರಕರಣಗಳಲ್ಲಿ ತಕ್ಷಣವೇ ಕ್ರಮಕ್ಕೆ ಅನುಮತಿ, ಚುನಾವಣಾ ದಿನಾಂಕದವರೆಗೆ ಕಾಯುವಂತಿಲ್ಲ. ಬ್ಯಾಂಕ್ ಮತ್ತು ಎಟಿಎಂ ಗೆ ಹಣ ಸಾಗಿಸುವ ವಾಹನ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮಾತ್ರ ಅನುಮತಿ ನೀಡಲಾಗುತ್ತದೆ. ದೊಡ್ಡ ಪ್ರಮಾಣದ ಹಣ ಡ್ರಾ, ಗೃಹಪಯೋಗಿ ವಸ್ತುಗಳ ಸಗಟು ಖರೀದಿ ಮೇಲೆ ನಿಗಾ ಇಡಲಾಗುವುದು. ಡಿಜಿಟಲ್ ಕರೆನ್ಸಿ ಮೇಲೂ ನಿಗಾ ವಹಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ