HOME » NEWS » State » ELECTION COMMISSION DIRECTED TO HASSAN DC TO TAKE ACTION ON PRAJWAL REVANNA FALSE INFORMATION AFFIDAVIT

ಪ್ರಜ್ವಲ್​ಗೆ ಎದುರಾದ ವಿಘ್ನ; ಅಫಿಡವಿಟ್​ನಲ್ಲಿನ ಸುಳ್ಳು ಮಾಹಿತಿ ನೀಡಿದ ಆರೋಪ, ರೇವಣ್ಣ ಮಗನ ಗೆಲುವಿಗೆ ಹಾಕಲಿದೆಯಾ ಬ್ರೇಕ್​?

ಪ್ರಜ್ವಲ್​ ರೇವಣ್ಣ ಸಲ್ಲಿಸಿದ್ದ ಅಫಿಡೆವಿಡ್​ನಲ್ಲಿ ತಪ್ಪು ಮಾಹಿತಿ ನೀಡಿರುವ ಬಗ್ಗೆ ಚುನಾವಣಾ ಆಯೋಗದ ಕ್ರಮಕೈಗೊಳ್ಳುವಂತೆ ಹಾಸನ ಜಿಲ್ಲಾಧಿಕಾರಿಗೆ ಸೂಚನೆ ನೀಡಿದೆ. ಚುನಾವಣಾ ಆಯೋಗ ನಿರ್ದೇಶನ ನೀಡಿದ್ದು, ಸದ್ಯ ಪ್ರಜ್ವಲ್​ ರೇವಣ್ಣ ಭವಿಷ್ಯ ಹಾಸನ ಜಿಲ್ಲಾಧಿಕಾರಿ ಕೈಯಲ್ಲಿದೆ

Seema.R | news18
Updated:June 2, 2020, 3:23 PM IST
ಪ್ರಜ್ವಲ್​ಗೆ ಎದುರಾದ ವಿಘ್ನ; ಅಫಿಡವಿಟ್​ನಲ್ಲಿನ ಸುಳ್ಳು ಮಾಹಿತಿ ನೀಡಿದ ಆರೋಪ, ರೇವಣ್ಣ ಮಗನ ಗೆಲುವಿಗೆ ಹಾಕಲಿದೆಯಾ ಬ್ರೇಕ್​?
ಪ್ರಜ್ವಲ್​ ರೇವಣ್ಣ
  • News18
  • Last Updated: June 2, 2020, 3:23 PM IST
  • Share this:
ಹಾಸನ (ಮೇ.15): ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಗೆಲುವಿನ ವಿಶ್ವಾಸದಲ್ಲಿರುವ ಪ್ರಜ್ವಲ್​ ರೇವಣ್ಣಗೆ ಕಂಟಕ ಎದುರಾಗಿದೆ. ನಾಮಪತ್ರ ಸಲ್ಲಿಕೆ ವೇಳೆ ಮಾಡಿರುವ ಎಡವಟ್ಟಿನಿಂದಾಗಿ ಅವರು, ಈ ಬಾರಿ ಗೆದ್ದರೂ ಸಂಭ್ರಮಾಚರಣೆ ಮಾಡುವುದು ಕಷ್ಟ ಎಂಬಂತಹ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ.

ಮೊದಲ ಬಾರಿ ಚುನಾವಣೆ ಎದುರಿಸುತ್ತಿರುವ ಪ್ರಜ್ವಲ್​ ರೇವಣ್ಣ, ಅಫಿಡವಿಟ್ ಸಲ್ಲಿಸುವಾಗ​ ತಪ್ಪು ಮಾಹಿತಿ ನೀಡಿರೋದು ಚುನಾವಣಾ ಆಯೋಗದ ತನಿಖೆಯಲ್ಲಿ ಬಯಲಾಗಿದೆ. ನಾಮಪತ್ರ ಸಲ್ಲಿಕೆ ವೇಳೆ ಅಫಿಡವಿಟ್​ನಲ್ಲಿ ಚೆನ್ನಾಂಬಿಕಾ ಕನ್ವೆನ್ಷನ್ ಹಾಲ್ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ. ಅಲ್ಲದೇ ತಾತ ಹೆಚ್​.ಡಿ ದೇವೇಗೌಡ ಸಾಲ ನೀಡಿದ ಬಗ್ಗೆಯೂ ಉಲ್ಲೇಖಿಸಿಲ್ಲ.



ಆದರೆ, ದೇವೇಗೌಡರು ತುಮಕೂರಿನಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಮೊಮ್ಮಗ ಪ್ರಜ್ವಲ್​ಗೆ 26 ಲಕ್ಷ ರೂ. ಸಾಲ ನೀಡಿರುವುದಾಗಿ ಉಲ್ಲೇಖಿಸಿದ್ದಾರೆ.  ಆದರೆ,  ಪ್ರಜ್ವಲ್ ರೇವಣ್ಣ ಸಲ್ಲಿಸಿದ ಅಫಿಡವಿಟ್‌ನಲ್ಲಿ ಈ ಸಾಲ ಪಡೆದ ಬಗ್ಗೆ ಮಾಹಿತಿಯನ್ನೇ ನೀಡಿಲ್ಲ. ಈ ಬಗ್ಗೆ ವಕೀಲ ದೇವರಾಜೇಗೌಡ ಎಂಬುವರು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದು, ಪ್ರಜ್ವಲ್​ ರೇವಣ್ಣಗೆ ಸಂಕಷ್ಟ ಎದುರಾಗಿದೆ.

ಇನ್ನು ದೂರಿನ ಆಧಾರದ ಮೇಲೆ ಜಿಲ್ಲಾ ಚುನಾವಣಾಧಿಕಾರಿಗೆ ಚುನಾವಣಾ ಆಯೋಗ ತನಿಖೆಗೆ ಸೂಚನೆ ನೀಡಿದೆ. ಆಯೋಗದ ಸೂಚನೆಯಂತೆ ತನಿಖೆ ನಡೆಸಿದ ಅಧಿಕಾರಿಗಳು ಅಫಿಡವಿಟ್​ನಲ್ಲಿ ತಪ್ಪು ಮಾಹಿತಿ ನೀಡಿರುವ ಬಗ್ಗೆ ವರದಿಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ವರದಿ ಆಧರಿಸಿ ಕ್ರಮಕೈಗೊಳ್ಳುವಂತೆ ಹಾಸನ ಜಿಲ್ಲಾಧಿಕಾರಿಗೆ ಚುನಾವಣಾ ಆಯೋಗ ನಿರ್ದೇಶನ ನೀಡಿದೆ. ಇದು ಪ್ರಜ್ವಲ್​ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ.

ತಪ್ಪು ಸಾಬೀತಾದರೆ ಪ್ರಜ್ವಲ್​ಗೆ ಸಂಕಷ್ಟ

ಮೊದಲ ಬಾರಿ ಚುನಾವಣಾ ಕಣಕ್ಕೆ ಇಳಿದು ತಾತನಂತೆ ಪಾರ್ಲಿಮೆಂಟ್​ ಮೆಟ್ಟಿಲು ಹತ್ತುವ ಕನಸು ಕಾಣುತ್ತಿರುವ ಪ್ರಜ್ವಲ್​ಗೆ ಈ ತಪ್ಪು ಉರುಳಾಗುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ.ಪ್ರಜ್ವಲ್​​ ನಾಮಪತ್ರ ಸಲ್ಲಿಸುವ ಗಡಿಬಿಡಿಯಲ್ಲಿ ಕೂಲಂಕಷವಾಗಿ​ ನಾಮಪತ್ರ ಪರಿಶೀಲನೆ ನಡೆಸದ ಹಿನ್ನೆಲೆಯಲ್ಲಿ ಈ ಎಡವಟ್ಟು ಸಂಭವಿಸಿದೆ ಎನ್ನಲಾಗಿದೆ. ಆದರೆ ಅಫಿಡವಿಟ್​ನಲ್ಲಿ ತಪ್ಪು ಮಾಹಿತಿ ಬಗ್ಗೆ ಪ್ರಜಾಪ್ರತಿನಿಧಿ ಕಾಯ್ದೆ 1951 125 A ಪ್ರಕಾರ ಕ್ರಮಕ್ಕೆ  ಮುಂದಾಗುವಂತೆ ಹಾಸನ ಡಿಸಿಗೆ ಸೂಚನೆ ನೀಡಿದೆ.  ಒಂದು ವೇಳೆ ಚುನಾವಣೆಯಲ್ಲಿ ಅಭ್ಯರ್ಥಿ ಗೆದ್ದರೂ ಅವರ ಪ್ರಮಾಣ ಪತ್ರವನ್ನು ತಡೆ ಹಿಡಿಯುವ ಅಧಿಕಾರ ಜಿಲ್ಲಾಧಿಕಾರಿಗೆ ಇದೆ. ಈ ಹಿನ್ನೆಲೆ ಪ್ರಜ್ವಲ್​ ಗೆದ್ದರೂ ಅವರಿಗೆ ಸಂಕಷ್ಟ ತಪ್ಪಿದ್ದಲ್ಲ. ಇದರಿಂದಾಗಿ ಸದ್ಯಕ್ಕೆ ಆಯೋಗ ನೀಡಿರುವ ಆದೇಶ ಪ್ರಜ್ವಲ್​ಗೆ ಬಿಸಿ ತುಪ್ಪವಾಗಿದೆ.

ಎ.ಮಂಜುಗೆ ವರದಾನವಾಗಲಿರುವ ಎಡವಟ್ಟು

ಪ್ರಜ್ವಲ್​ ರೇವಣ್ಣ ನಾಮಪತ್ರದಲ್ಲಿನ ತಪ್ಪು ಬಿಜೆಪಿ ಅಭ್ಯರ್ಥಿಗೆ ಎ. ಮಂಜುಗೆ ವರದಾನವಾಗಲಿದೆ. ಕಾರಣ ಒಂದು ವೇಳೆ ಎ ಮಂಜುಗಿಂತ ಪ್ರಜ್ವಲ್​ ರೇವಣ್ಣ ಲೀಡ್​ ಪಡೆದರು. ಈ ಅಂಶವನ್ನು ಹಿಡಿದುಕೊಂಡು ಮಂಜು ನ್ಯಾಯಾಲಯದ ಮೆಟ್ಟಿಲು ಏರಬಹುದು. ಗೆದ್ದ ಅಭ್ಯರ್ಥಿ ನಾಮಪತ್ರ ತಪ್ಪಿದ್ದರೆ ಅದನ್ನು ಪ್ರಶ್ನೆ ಮಾಡಿ, ಎರಡನೇ ಸ್ಥಾನ ಪಡೆದವರು ನ್ಯಾಯಾಲಯದ ಮೊರೆ ಹೋಗಬಹುದು. ಗೆಲುವನ್ನು ಅನೂರ್ಜಿತಗೊಳಿಸುವಂತೆ ಕೋರ್ಟ್ ಮನವಿ ಸಲ್ಲಿಸಬಹುದು.

ಇದನ್ನು ಓದಿ: ನಾನು ಟಿವಿ ನೋಡಿ ನಾಲ್ಕೈದು ದಿನ ಆಯ್ತು, ರಾಜ್ಯದ ಬೆಳವಣಿಗೆ ಬಗ್ಗೆ ನನಗೇನು ಗೊತ್ತಿಲ್ಲ; ಸಚಿವ ರೇವಣ್ಣ

ಈ ರೀತಿಯ ಎಡವಟ್ಟಿನ ಕುರಿತು ಉಚ್ಚ ನ್ಯಾಯಾಲಯ ದ ಆದೇಶದ ಪ್ರಕಾರ ಕೋರ್ಟ್ ಮೂರು ತಿಂಗಳೊಳಗೆ ತೀರ್ಪು ನೀಡಬೇಕು. ಈ ವೇಳೆ ನ್ಯಾಯಾಲಯದಲ್ಲೂ ಸುಳ್ಳು ಅಫಿಡವಿಟ್ಟು ಸಾಬೀತಾದರೆ ಎರಡನೇ ಸ್ಥಾನ ಪಡೆದವರಿಗೆ ಸಂಸದರೆಂದು ಘೋಷಿಸುವ ಅವಕಾಶ ಇದೆ. ಅಲ್ಲದೇ 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸುವಂತೆ ಇಲ್ಲ.  ಇದರಿಂದಾಗಿ ಬಿಜೆಪಿ ನಾಯಕರು ಈ ತಪ್ಪಿನ ಲಾಭ ಪಡೆಯುವ ಸಾಧ್ಯತೆ ಕೂಡ ಇದೆ.

ಜಿಲ್ಲಾಧಿಕಾರಿ ಕೈಯಲ್ಲಿ ಪ್ರಜ್ವಲ್​ ಭವಿಷ್ಯ

ಫಲಿತಾಂಶ ಪ್ರಕಟಣೆಗೆ ಇನ್ನೇನು ಒಂದು ವಾರ ಬಾಕಿಯಿರುವ ಸಮಯದಲ್ಲಿ ಉಂಟಾಗಿರುವ ಈ ಸಮಸ್ಯೆಯಿಂದ ಪ್ರಜ್ವಲ್ ಕಂಗಾಲಾಗಿರುವುದು ಸುಳ್ಳಲ್ಲ. ಈಗಾಗಲೇ ಗೆಲುವಿನ ವಿಶ್ವಾಸದಲ್ಲಿರುವ ಪ್ರಜ್ವಲ್​  ಭಾರೀ ಬಹುಮತದಿಂದ ಗೆದ್ದರೂ ಸಂಭ್ರಮ ಪಡುವ ಪರಿಸ್ಥಿತಿ ಉಂಟಾಗಿವುದಿಲ್ಲ. ಸದ್ಯ ಆಯೋಗದ ಸೂಚನೆ ಮೇಲೆ ಈ ಕುರಿತು ಜಿಲ್ಲಾಧಿಕಾರಿ ತೀರ್ಮಾನದ ಮೇಲೆ ಪ್ರಜ್ವಲ್​ ರಾಜಕೀಯ ನಿಂತಿದ್ದು ಏನಾಗಲಿದೆ ಎಂದು ಕಾದು ನೋಡಬೇಕಿದೆ.

(ವರದಿ: ಚಿದಾನಂದ ಪಟೇಲ್​)
First published: May 15, 2019, 11:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories