Couple Reunited: ಯೌವ್ವನದಲ್ಲಿ ವಿಚ್ಛೇದನ, 52 ವರ್ಷಗಳ ಬಳಿಕ ದಂಪತಿಯನ್ನು ಒಂದು ಮಾಡಿದ ಕೋರ್ಟ್

ದಂಪತಿಗಳು ಇಳಿ ವಯಸ್ಸಿನಲ್ಲಿ ಕಾಂಪ್ರಮೈಸ್ ಆಗಿದ್ದಾರೆ. ಅದೂ ಸಹ 85ರ ವಯಸ್ಸಿನಲ್ಲಿ. ಕಲಘಟಗಿಯಲ್ಲಿ ನಡೆದ ಲೋಕ್ ಅದಾಲತ್ ನಲ್ಲಿ ನ್ಯಾಯಾಧೀಶರು ದಂಪತಿಯನ್ನು ಒಂದಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಒಂದಾದ ವೃದ್ಧ ದಂಪತಿ

ಒಂದಾದ ವೃದ್ಧ ದಂಪತಿ

  • Share this:
ಹುಬ್ಬಳ್ಳಿ: ಇವರು ಸಂಸಾರ ಮಾಡೋ ವಯಸ್ಸಿನಲ್ಲಿ ಅದ್ಯಾವ ಕೆಟ್ಟ ಘಳಿಗೆಯಲ್ಲಿಯೋ ಡೈವರ್ಸ್ (Divorce) ತೆಗೆದುಕೊಂಡರು.. ಗಂಡ-ಹೆಂಡತಿ (Husband -Wife) ಒಂದಾಕೆ ಪ್ರಯತ್ನಗಳನ್ನೇ ಮಾಡಿರ್ಲಿಲ್ಲ. ಬದ್ಲಿಗೆ ಗಂಡ ಕೊಡೋ ಜೀವನಾಂಶದ ಮೇಲೆ ಹೆಂಡತಿ ಬದುಕು ಸಾಗಿಸಿಕೊಂಡು ಹೊರಟಿದ್ದಳು. ಇಂತಹ ವೃದ್ಧ ದಂಪತಿಗಳನ್ನು ನ್ಯಾಯಾಲಯ (Court) ಒಂದು ಮಾಡಿದೆ. 85 ರ ಇಳಿ ವಯಸ್ಸಿನಲ್ಲಿ ಈ ಜೋಡಿ ಒಂದಾಗಿ ಮನೆಯತ್ತ ಹೆಜ್ಜೆ ಹಾಕಿದೆ. ಯೌವ್ವನದಲ್ಲಿ ದೂರವಾಗಿದ್ರು, ವೃದ್ಧಾಪ್ಯದಲ್ಲಿ ಒಂದಾದ್ರು. ಅದೂ ಸಹ ರಾಜೀ ಪಂಚಾಯ್ತಿ ಮೂಲಕ. 52 ವರ್ಷ ದೂರ ಇದ್ದ ದಂಪತಿಗಳನ್ನು ಒಂದು ಮಾಡಿದ ಲೋಕ್ ಅದಾಲತ್. ಇಂಥದ್ದೊಂದು ಅಪರೂಪದ ಘಟನೆಗೆ ಸಾಕ್ಷಿಯಾದದ್ದು ಧಾರವಾಡ ಜಿಲ್ಲೆ ಕಲಘಟಗಿಯಲ್ಲಿ ನಡೆದ ಲೋಕ್ ಅದಾಲತ್ (Lok Adalat) . ಹೀಗೆ ವೃದ್ಧಾಪ್ಯದಲ್ಲಿ ಒಂದಾದ ದಂಪತಿಗಳನ್ನು ಬಸಪ್ಪ ಅಗಡಿ(85) ಹಾಗೂ ಕಲ್ಲವ್ವ ಅಗಡಿ (80) ಎಂದು ಗುರುತಿಸಲಾಗಿದೆ.

52 ವರ್ಷದ ಹಿಂದೆ ಡೈವರ್ಸ್

ಕಲಘಟಗಿ ತಾಲೂಕಿನ ಜಿನ್ನೂರ ಗ್ರಾಮದ ಈ ದಂಪತಿಗಳು 52 ವರ್ಷದ ಹಿಂದೆ ಡೈವರ್ಸ್ ತೆಗೆದುಕೊಂಡಿದ್ದರು. ನ್ಯಾಯಾಲಯದ ಆದೇಶದಂತೆ ಪತಿ ಬಸಪ್ಪ ಅಗಡಿ ಪ್ರತಿ ತಿಂಗಳು ಕಲ್ಲವ್ವಳಿಗೆ ಜೀವನಾಂಶ ನೀಡುತ್ತಿದ್ದ. ಆದ್ರೆ ಕೆಲ ತಿಂಗಳಿನಿಂದ ಜೀವನಾಂಶ ಕೊಡುವಲ್ಲಿ ಬಸಪ್ಪ ವಿಫಲವಾಗಿದ್ದ. ಈ ಹಿನ್ನೆಲೆಯಲ್ಲಿ ಕಲ್ಲವ್ವ ನ್ಯಾಯಾಲಯದ ಮೊರೆ ಹೋಗಿದ್ದಳು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸ್ಥಳೀಯ ಹಿರಿಯ ದಿವಾನಿ ನ್ಯಾಯಲಯ ರಾಷ್ಟ್ರೀಯ ಮೆಗಾ ಲೋಕ ಅದಾಲತ್ ನಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳಲು ತೀರ್ಮಾನಿಸಿತ್ತು.

ಇದನ್ನೂ ಓದಿ: Cat in Police Station: ಕಳ್ಳರನ್ನು ಹಿಡಿಯೋದು ಬಿಟ್ಟು ಈ ಪೊಲೀಸರು ಯಾಕೆ ಬೆಕ್ಕು ಸಾಕ್ತಿದ್ದಾರೆ!?

ಒಂದಾದ ವೃದ್ಧ ದಂಪತಿ 

ಜೀವನಾಂಶ ಕೊಡುವಲ್ಲಿ ವಿಫಲವಾದ ಬಸಪ್ಪ ಅಗಡಿಯನ್ನೂ ನ್ಯಾಯಾಧೀಶರು ಕರೆಯಿಸಿದ್ದರು. ಹಣ್ಣು ಹಣ್ಣು ಮುದುಕರಾದ ಸ್ಥಿತಿಯಲ್ಲಿದ್ದ ದಂಪತಿಗಳು ನ್ಯಾಯಾಲಯದ ಮೆಟ್ಟಿಲು ಹತ್ತಿರೋದನ್ನು ನೋಡಿ ನ್ಯಾಯಾಧೀಶರಿಗೂ ಅಚ್ಚರಿಯಾಗಿದೆ. ರಾಜೀ ಪಂಚಾಯ್ತಿ ಮೂಲಕ ನ್ಯಾಯಾಧೀಶರು ವೃದ್ಧ ದಂಪತಿಗಳನ್ನು ಒಂದು ಮಾಡಿದ್ದಾರೆ. ನ್ಯಾಯಧೀಶರಾದ ಜಿ ಆರ್ ಶೆಟ್ಟರ ಅವರಿಂದ ರಾಜೀ ಸಂಧಾನ ನಡೆಯಿತು. ಗಂಡ ಹೆಂಡತಿ ಇಬ್ಬರನ್ನೂ ಪರಸ್ಪರ ಒಂದುಗೂಡಿಸುವಲ್ಲಿ ಯಶಸ್ವಿಯಾಗಿದೆ. ವಕೀಲರಾದ ಜಿ ಆರ್ ಗಾಣಗೇರಿಂದ ವಕಾಲತ್ತು ವಹಿಸಿದ್ದರು.

113 ಪ್ರಕರಣಗಳ ಇತ್ಯರ್ಥ 
ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಹಾಗೂ ಕಲಘಟಗಿ ತಾಲ್ಲೂಕು ಕಾನೂನು ಸೇವಾ ಸಮಿತಿ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಮೆಗಾ ಲೋಕ್ ಅದಾಲತ್ ನಲ್ಲಿ 113 ಪ್ರಕರಣಗಳನ್ನು ರಾಜಿ ಒಪ್ಪಂದದ ಮೂಲಕ ಇತ್ಯರ್ಥಪಡಿಸಲಾಗಿದೆ. ಸೀನಿಯರ್ ಸಿವಿಲ್ ನ್ಯಾಯಾಲಯದಲ್ಲಿ 30 ಪ್ರಕರಣ ಇತ್ಯರ್ಥಪಡಿಸಿದರೆ, ಕ್ರಿಮಿನಲ್ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣ, ಜೀವನಾಂಶ ಕೌಟಂಬಿಕ ವ್ಯಾಜ್ಯಗಳು, ವಸೂಲಿ, ಎಂವಿಸಿ ಪ್ರಕರಣಗಳನ್ನು ರಾಜಿ ಮೂಲಕ ಬಗೆಹರಿಸಲಾಗಿದೆ.  719,11,684 ರೂಪಾಯಿ ಪರಿಹಾರವನ್ನೂ ಘೋಷಣೆ ಮಾಡಲಾಗಿದೆ.

ಕಲಘಟಗಿ ತಾಲ್ಲೂಕಿನ ಹಿರೇಹೊನ್ನಳ್ಳಿ ಗ್ರಾಮದ ಬಸವರಾಜ ಶಿವಲಿಂಗಪ್ಪ ಗುಡಗೇರಿ ಹಾಗೂ ಮಾರುತಿಗೌಡ ಪಾಟೀಲ ಕುಟುಂಬದ 47 ಪಕ್ಷಗಾರರ ನಡುವೆ ಹಲವಾರು ವರ್ಷಗಳಿಂದ ಇದ್ದ ಆಸ್ತಿ ವಿವಾದವನ್ನೂ ಸಹ ಲೋಕ್ ಅದಾಲತ್ ನಲ್ಲಿ ಇತ್ಯರ್ಥ ಪಡಿಸಲಾಗಿದೆ. ನ್ಯಾಯಾಧೀಶ ಗಣೇಶ ಎನ್. ಅವರು ಈ ಪ್ರಕರಣದ ಇತ್ಯರ್ಥ ಮಾಡಿದ್ದಾರೆ.  ವಾದಿ ಪರ ವಕೀಲರಾದ ಶಿವರುದ್ರಪ್ಪ ದನಿಗೂಂಡ ಹಾಗೂ ಪ್ರತಿವಾದಿ ಪರ ವಕೀಲ ನಿಂಗಪ್ಪ ಮುತ್ತೇನವರ ವಕಾಲತ್ತು ವಹಿಸಿದ್ದರು. ಪ್ರತಿ ಬಾರಿಯ ಲೋಕ್ ಅದಾಲತ್ ಪ್ರಕರಣಗಳ ಇತ್ಯರ್ಥಕ್ಕಿಂತ ಈ ಬಾರಿಯ ಲೋಕ್ ಅದಾಲತ್ ನಲ್ಲಿನ ಪ್ರಕರಣಗಳು ಗಮನ ಸೆಳೆದಿವೆ.
Published by:Kavya V
First published: