ಆನೇಕಲ್(ಫೆ.12): ಶಾಲಾ ಆಡಳಿತ ಮಂಡಳಿ ಫೀಸ್ ಟಾರ್ಚರ್ಗೆ ರೋಸಿ ಹೋಗಿ ಆತ್ಮಹತ್ಯೆಗೆ ಯತ್ನಿಸಿದ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿ ಜಯಂತ್ ಮನೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ದಿಢೀರ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಬೆಂಗಳೂರಿನ ಕೋರಮಂಗಲದ ಜಕ್ಕಸಂದ್ರದಲ್ಲಿರುವ ವಿದ್ಯಾರ್ಥಿ ಜಯಂತ್ ಮನೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಸಚಿವರು, ಪೋಷಕರು ಮತ್ತು ವಿದ್ಯಾರ್ಥಿ ಜೊತೆ ಚರ್ಚಿಸಿ ರವೀಂದ್ರ ಭಾರತಿ ಗ್ಲೋಬಲ್ ಶಾಲೆ ವಿರುದ್ಧ ಅಗತ್ಯ ಕ್ರಮದ ಭರವಸೆ ಸಹ ನೀಡಿದ್ದಾರೆ.
ಹೌದು, ಕಳೆದ ಮೂರು ದಿನಗಳ ಹಿಂದೆ ಸೋಮಸುಂದರ ಪಾಳ್ಯದ ರವೀಂದ್ರ ಭಾರತಿ ಗ್ಲೋಬಲ್ ಶಾಲೆ ಆಡಳಿತ ಮಂಡಳಿ ಕೋರಮಂಗಲದ ಜಕ್ಕಸಂದ್ರ ವಾಸಿ ಎಸ್ಎಸ್ಎಲ್ಸಿ ವಿದ್ಯಾರ್ಥಿ ಜಯಂತ್ ಗೆ ಫೀಸ್ ಪಾವತಿಸಿಲ್ಲ ಎಂದು ಪರೀಕ್ಷೆ ಅರ್ಧದಲ್ಲಿಯೇ ಹೊರ ಕಳುಹಿಸಿದ್ದರು. ಇದರಿಂದ ಮಾನಸಿಕವಾಗಿ ಅಘಾತಗೊಂಡಿದ್ದ ಜಯಂತ್, ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ. ಈ ವಿಚಾರ ಬಂಡೆಪಾಳ್ಯ ಠಾಣೆ ಮೆಟ್ಟಿಲೇರಿ ದೊಡ್ಡ ಸುದ್ಧಿಯಾಗಿತ್ತು. ವಿಚಾರ ತಿಳಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ನೊಂದ ವಿದ್ಯಾರ್ಥಿ ಜಯಂತ್ ಮನೆಗೆ ಭೇಟಿ ಸಾಂತ್ವನದ ಮಾತುಗಳನ್ನಾಡಿದ್ದಾರೆ.
ಎಸ್ಎಸ್ಎಲ್ಸಿ ಶಾಲಾ ಪರೀಕ್ಷೆಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕಿಲ್ಲ. ಸಣ್ಣ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಬಾರದು. ಇನ್ನು ಮುಂದೆ ಆತ್ಮಹತ್ಯೆಯಂತಹ ಪ್ರಯತ್ನಗಳಿಗೆ ಹೋಗುವುದಿಲ್ಲ ಎಂದು ವಿದ್ಯಾರ್ಥಿ ಜಯಂತ್ ಬಳಿ ಪ್ರಮಾಣ ತೆಗೆದುಕೊಂಡಿದ್ದಾರೆ.
ಸೀತಾಫಲ ಸೇವನೆಯಿಂದ ಸಿಗುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ನಿಮಗೆಷ್ಟು ಗೊತ್ತು?
ಫೀಸ್ಗಾಗಿ ವಿದ್ಯಾರ್ಥಿಯೊಂದಿಗೆ ಅತ್ಯಂತ ಕೆಟ್ಟದಾಗಿ ನಡೆದುಕೊಂಡಿರುವ ಶಾಲಾ ಆಡಳಿತ ಮಂಡಳಿ ನಡೆ ಸೂಕ್ಷ್ಮತೆಯನ್ನು ಮೀರಿದೆ. ಖಾಸಗಿ ಶಾಲೆಗಳು ವಿದ್ಯಾರ್ಥಿಗಳು ಮತ್ತು ಪೋಷಕರನ್ನು ತಮ್ಮ ಹಿತೈಷಿಗಳಂತೆ ನಡೆಸಿಕೊಳ್ಳಬೇಕು. ರವೀಂದ್ರ ಭಾರತಿ ಗ್ಲೋಬಲ್ ಶಾಲೆ ನಡೆದುಕೊಂಡಿರುವ ರೀತಿ ಸರಿಯಿಲ್ಲ. ಹಾಗಾಗಿ ಶಿಕ್ಷಣ ಇಲಾಖೆಯಿಂದ ಈಗಾಗಲೇ ನೋಟೀಸ್ ನೀಡಲಾಗಿದೆ. ಜೊತೆಗೆ ಎಲೆಕ್ಟ್ರಾನಿಕ್ ಸಿಟಿ ಎಸಿಪಿ ಸಹ ವಿದ್ಯಾರ್ಥಿ ಪೋಷಕರ ಜೊತೆ ನಡೆದುಕೊಂಡಿರುವ ರೀತಿ ಕೂಡ ಸರಿಯಿಲ್ಲ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಪಿಗೆ ಮಾತನಾಡಿ ಸೂಕ್ತ ಕ್ರಮ ವಹಿಸುವಂತೆ ಸೂಚಿಸಿದ್ದೇನೆ. ಜೊತೆಗೆ ಗೃಹ ಸಚಿವರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೂ ತರುತ್ತೇನೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಶಿಕ್ಷಣ ಸಚಿವರ ದಿಢೀರ್ ಭೇಟಿಗೆ ಬಗ್ಗೆ ವಿದ್ಯಾರ್ಥಿ ಜಯಂತ್ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. ನಿನ್ನೆವರೆಗೂ ನ್ಯಾಯ ದೊರೆಯುವ ಭರವಸೆ ನಮಗೆ ಇರಲಿಲ್ಲ. ಇಂದು ಶಿಕ್ಷಣ ಸಚಿವರ ಭೇಟಿಯಿಂದ ಶಾಲಾ ಆಡಳಿತ ಮಂಡಳಿ ವಿರುದ್ದ ಕ್ರಮದ ಜೊತೆಗೆ ನಮಗೆ ನ್ಯಾಯ ದೊರೆಯುವ ಭರವಸೆ ಮೂಡಿದೆ. ಕಳೆದ ಎರಡು ದಿನಗಳಿಂದ ಮಗ ಜಯಂತ್ ಶಾಲೆಗೆ ಹೋಗಿರಲಿಲ್ಲ. ಇಂದು ಪರೀಕ್ಷೆಗೆ ಹಾಜರಾಗಿದ್ದು, ಸಹಪಾಠಿಗಳಾರು ಮಾತನಾಡಲಿಲ್ಲ ಎಂದು ತಿಳಿಸಿದ್ದಾನೆ. ಬಹುಶಃ ಶಾಲಾ ಆಡಳಿತ ಮಂಡಳಿಯವರು ಶಾಲಾ ಮಕ್ಕಳಿಗೆ ಸೂಚಿಸಿರುವ ಸಾಧ್ಯತೆ ಇದ್ದು, ಮುಂದೆ ನ್ಯಾಯ ದೊರೆಯುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ