ಶಾಲೆಗಳು‌ ಹಾಗೂ ಪದವಿಪೂರ್ವ ತರಗತಿಗಳು ಪುನಾರಂಭ: ಸಿದ್ಧತೆ ಪರಿಶೀಲಿಸಿದ ಸಚಿವ ಸುರೇಶ್ ಕುಮಾರ್

ಕಳೆದ ವರ್ಷದ ಬಸ್ ಪಾಸುಗಳನ್ನೇ ಬಳಸಲು ಅವಕಾಶವಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದಿಲ್ಲ ಎಂಬುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಬೇಕೆಂದು  ಹೇಳಿದರು

ಸಿದ್ಧತೆ ಪರಿಶೀಲಿಸಿದ ಸಚಿವ ಸುರೇಶ್ ಕುಮಾರ್

ಸಿದ್ಧತೆ ಪರಿಶೀಲಿಸಿದ ಸಚಿವ ಸುರೇಶ್ ಕುಮಾರ್

  • Share this:
ಬೆಂಗಳೂರು(ಡಿಸೆಂಬರ್. 30): ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಮಾರ್ಗದರ್ಶನದಂತೆ ಶಿಕ್ಷಣ ಇಲಾಖೆ ರೂಪಿಸಿದ  ಎಸ್.ಒ.ಪಿ.ಯನ್ನು ಆಧರಿಸಿ ಶಾಲಾ ಕಾಲೇಜುಗಳು ಜನವರಿ 1 ರಿಂದ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳ ಆರಂಭದ ಪೂರ್ವ ಸಿದ್ಧತೆಯನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ  ಸಚಿವ ಎಸ್. ಸುರೇಶ್ ಕುಮಾರ್ ಪರಿಶೀಲಿಸಿದರು. ನಗರದ ವಿವಿಧ ಸರ್ಕಾರಿ ಹಾಗೂ ಖಾಸಗಿ ಪದವಿ ಪೂರ್ವ ಕಾಲೇಜು ಮತ್ತು ಸರ್ಕಾರಿ ಪ್ರೌಢಶಾಲೆಗಳಿಗೆ ಭೇಟಿ ನೀಡಿ ಸಿದ್ಧತೆಗಳನ್ನು ಅವಲೋಕಿಸಿದರು. ಪ್ರತಿಯೊಂದು ಶಾಲೆಗಳಲ್ಲಿ ತರಗತಿ ಕೊಠಡಿಗಳಿಗೆ ಭೇಟಿ ನೀಡುವ ಮೊದಲು ಶಾಲೆಯಲ್ಲಿ ಹಾಜರಿದ್ದ ಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಕರನ್ನುದ್ದೇಶಿಸಿ ಮಾತನಾಡಿ, ತರಗತಿಗಳನ್ನು ಆರಂಭಿಸುವಾಗ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ವಿವರಿಸಿದರು.  ಮೊದಲ ದಿನದ ಮೊದಲ ತರಗತಿ ಅವಧಿಯಲ್ಲಿ ಕೊರೋನಾ ಕುರಿತು ಮುನ್ನೆಚ್ಚರಿಕೆ ಕ್ರಮಗಳು, ಪಾಲಿಸಬೇಕಾದ ನಿಯಮಗಳು ಮತ್ತು ವಿಶೇಷವಾಗಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯು ತರಗತಿಗಳ ಮಹತ್ವ ಮತ್ತು ಈ ಪರೀಕ್ಷೆಗಳಲ್ಲಿ ಕಷ್ಟಪಟ್ಟು ಓದಿ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾಗಬೇಕಾದ ಮಹತ್ವವನ್ನು ವಿವರಿಸಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಬೇಕು ಎಂದು ಸಚಿವರು ಸಲಹೆ ನೀಡಿದರು. 

ಸರ್ಕಾರಿ ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೊರತೆಯಿಲ್ಲ. ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಶಾಲಾ ಕಾಲೇಜುಗಳಿಂದ ಹೆಚ್ಚಿನ ಸಂಖ್ಯೆಯ ಪ್ರತಿಭಾವಂತರು ಹೊರಬರುತ್ತಿದ್ದಾರೆ. ಅನೇಕ ಕೊರತೆಗಳ ಮಧ್ಯೆಯೂ ಸರ್ಕಾರಿ ಶಾಲೆಗಳಲ್ಲಿ ಅಭ್ಯಸಿರುವ ಅನೇಕ ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೆ ಏರಿದ್ದಾರೆ.

ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ. 97-98 ಅಂಕಗಳೊಂದಿಗೆ ಉತ್ತೀರ್ಣರಾದ ಸರ್ಕಾರಿ ಶಾಲೆಯ ಮಕ್ಕಳಾದ ಬೆಂಗಳೂರಿನ ಯಾದಗಿರಿಯ ವಲಸೆ ವಿದ್ಯಾರ್ಥಿ ಮತ್ತು ವಿಜಯಪುರದ ಸಾವಳಗಿ ಸೇರಿದಂತೆ ಅನೇಕ ವಿದ್ಯಾರ್ಥಿಗಳ ಪರಿಶ್ರಮವನ್ನು ಉದಾಹರಿಸಿದ ಸಚಿವರು ಈ ಕುರಿತು ವಿದ್ಯಾರ್ಥಿಗಳ ಗಮನಕ್ಕೆ ತಂದು ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ತಾವೂ ಸಹ ಅದೇ ರೀತಿ ಹೆಚ್ಚಿನ ಅಂಕಗಳನ್ನು ಪಡೆಯಬೇಕೆಂಬ ಹುಮ್ಮಸ್ಸು, ಆಸಕ್ತಿ ಮೂಡುವಂತೆ  ಪ್ರೇರೇಪಿಸಬೇಕೆಂದು ಉಪಾಧ್ಯಾಯ ಸಮೂಹಕ್ಕೆ ಸಚಿವರು ಸಲಹೆ ನೀಡಿದರು.

ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು, ಕೈತೊಳೆಯಲು ಸ್ಯಾನಿಟೈಸರ್ ಇಲ್ವೇ ಸಾಬೂನು ಬಳಸುವುದು, ಉಪಾಧ್ಯಾಯರು ಕೋವಿಡ್ ಪರೀಕ್ಷೆ ಫಲಿತಾಂಶದೊಂದಿಗೆ ಬರುವುದು, ಫೇಸ್ ಮಾಸ್ಕ ಮತ್ತು ಫೇಸ್ ಶೀಲ್ಡ್ ಧರಿಸುವುದು, ಮಕ್ಕಳ ಶಾರೀರಿಕ‌ ಅಂತರವನ್ನು ಉಳಿಸಿಕೊಳ್ಳುವಲ್ಲಿ ಗಮನ ಹರಿಸುವುದು, ಅವರ ಆರೋಗ್ಯ, ರೋಗಲಕ್ಷಣಗಳ ಕುರಿತು ಆಗಾಗ್ಗೆ ಗಮನ ಹರಿಸುವುದು, ತರಗತಿ ಕೊಠಡಿಯಲ್ಲಿ ಚಿಕ್ಕ ಸಂಖ್ಯೆಯ ಮಕ್ಕಳನ್ನು ಸಾಮಾಜಿಕ ಅಂತರದಲ್ಲಿ ಕೂರಿಸುವುದು ಸೇರಿದಂತೆ ಕೋವಿಡ್ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದು ಸುರೇಶ್ ಕುಮಾರ್ ಹೇಳಿದರು.

ಸಂಜೆ ಶಾಲೆ ಮುಗಿದ ನಂತರ ಶಾಲಾವರಣ, ತರಗತಿ ಕೊಠಡಿ ಮತ್ತು ಶೌಚಾಲಯಗಳನ್ನು ಸ್ಯಾನಿಟೈಸರ್ ಮಾಡುವುದನ್ನು ಮರೆಯದೇ ಪಾಲಿಸಬೇಕಿದೆ. ಈಗಾಗಲೇ ಹೆಚ್ಚಿನ ದಿನಗಳು  ಮುಗಿದಿರುವುದರಿಂದ ಉಪನ್ಯಾಸಕರು ಇಲಾಖೆ ನಿಗದಿಪಡಿಸುವ ಪಠ್ಯಕ್ರಮವನ್ನು ಪೂರ್ಣಗೊಳಿಸಲು ಕ್ರಮ ವಹಿಸಬೇಕು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಿಗದಿತ ಅವಧಿಯೊಳಗೆ ಪೋರ್ಷನ್ ಮುಗಿಸುವುದರತ್ತ ಗಮನ ಹರಿಸಬೇಕು ಎಂದರು.

ಕಳೆದ ವರ್ಷದ ಬಸ್ ಪಾಸುಗಳನ್ನೇ ಬಳಸಲು ಅವಕಾಶವಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದಿಲ್ಲ ಎಂಬುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಬೇಕೆಂದು  ಹೇಳಿದರು. ಮಕ್ಕಳನ್ನು ಶಾಲೆಗೆ ಕಳಿಸುವ ಪೋಷಕರು ಉತ್ಸುಕರಾಗಿದ್ದು, ಪ್ರಥಮ ಪಿಯುಸಿ ತರಗತಿಗಳನ್ನೂ ಆರಂಭಿಸಬೇಕೆಂದು ಒತ್ತಾಯಿಸುತ್ತಿದ್ದಾರೆಂದು ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಪೋಷಕರ ಮನಸ್ಥಿತಿಯನ್ನು ಸಚಿವರ ಗಮನಕ್ಕೆ ತಂದಾಗ, ಪರಿಸ್ಥಿತಿಯನ್ನು ಅವಲೋಕಿಸಿ ಈ ಕುರಿತು ಕೆಲ ದಿನಗಳ ನಂತರ ನಿರ್ಧಾರಕ್ಕೆ ಬರಲಾಗುವುದು ಎಂದು ಸಚಿವರು  ಹೇಳಿದರು.

ಇದನ್ನೂ ಓದಿ : ರೆಸಾರ್ಟ್, ಹೊಟೇಲ್ ಗಳಲ್ಲಿ ಹೊಸ ವರ್ಷಾಚರಣೆ ವೇಳೆ ಕೋವಿಡ್ ಪ್ರಕರಣ ಕಂಡು ಬಂದಲ್ಲಿ ಕ್ರಿಮಿನಲ್ ಕೇಸ್

ಶಾಲೆಗಳ 10ನೇ ತರಗತಿ ಮತ್ತು ಪದವಿ ಪೂರ್ವ ಕಾಲೇಜುಗಳ ದ್ವಿತೀಯ ಪಿಯು ವಿದ್ಯಾರ್ಥಿಗಳ ಸಂಖ್ಯೆಯನ್ನು ವಿಚಾರಿಸಿ ಎಷ್ಟು ತಂಡಗಳು ಮತ್ತು ಎಷ್ಟು ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ ಎಂಬುದನ್ನು ಗಮನಿಸಿ ತರಗತಿ ಕೊಠಡಿಗಳನ್ನು ಪರಿಶೀಲಿಸಿದರು. ಮಲ್ಲೇಶ್ವರಂ 18ನೇ ಕ್ರಾಸ್, ಯಲಹಂಕದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳು, ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಬಿಇಎಸ್ ಪದವಿ ಪೂರ್ವ ಕಾಲೇಜು ಸೇರಿದಂತೆ  ಹೆಬ್ಬಾಳ,  ಮಲ್ಲೇಶ್ವರಂ, ಮತ್ತಿತರ ಕಡೆಯ ಸರ್ಕಾರಿ ಪ್ರೌಢಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ನಂತರ ರಾಜ್ಯದ ವಿವಿಧೆಡೆ ಕೈಗೊಳ್ಳಲಾಗಿರುವ ಸಿದ್ಧತೆಗಳ ಕುರಿತು ಡಿಡಿಪಿಐ, ಡಿಡಿಪಿಯು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ದೂರವಾಣಿ ಮೂಲಕ ಮಾಹಿತಿ ಪಡೆದು, ಅಗತ್ಯ ಸಲಹೆ, ಸೂಚನೆಗಳನ್ನು ನೀಡಿದರು.
Published by:G Hareeshkumar
First published: