SSLC ವಿದ್ಯಾರ್ಥಿನಿಗೆ ಮನೆ ಕಟ್ಟಿಕೊಟ್ಟ ಶಿಕ್ಷಣ ಇಲಾಖೆ! ಮುಂದಿನ ತಿಂಗಳೇ ಗೃಹ ಪ್ರವೇಶ

ಇಬ್ಬರು ಹೆಣ್ಣು ಮಕ್ಕಳ ಜೊತೆ ಸುನಂದಾ ಭದ್ರತೆಯಿಲ್ಲದ ಜೋಪಡಿಯಲ್ಲಿ ವಾಸಿಸುವ ಸ್ಥಿತಿಯಿತ್ತು. ಈ ಸಂದರ್ಭದಲ್ಲಿ ಆಕೆಗೆ ಸಹಾಯ ಮಾಡುವುದಾಗಿ ಹಲವರು ಭರವಸೆಗಳನ್ನೇನೋ ನೀಡಿದ್ದರೂ, ಭರವಸೆ ಮಾತ್ರ ಭರವಸೆಯಾಗಿಯೇ ಉಳಿದಿತ್ತು.

ಮೊದಲು ಹೀಗಿತ್ತು ಮನೆ!

ಮೊದಲು ಹೀಗಿತ್ತು ಮನೆ!

  • Share this:
ಪುತ್ತೂರು: ಶಿಕ್ಷಕ ಮತ್ತು ಶಿಕ್ಷಣ ಇಲಾಖೆ ಓರ್ವ ವಿದ್ಯಾರ್ಥಿಯ ಬೌದ್ಧಿಕ ಮಟ್ಟದ ಜೊತೆಗೆ ಆ ವಿದ್ಯಾರ್ಥಿಯ ಮನೆಯನ್ನೂ ಬೆಳಗಿಸುತ್ತದೆ ಎನ್ನುವ ಮಾತಿದೆ. ವಿದ್ಯಾರ್ಥಿಯ ಬೌದ್ಧಿಕ ಮಟ್ಟವನ್ನೇನೋ ಶಿಕ್ಷಕ, ಶಿಕ್ಷಣ ಇಲಾಖೆ ಬೆಳೆಸುತ್ತದೆ. ಆದರೆ ಆ ವಿದ್ಯಾರ್ಥಿಯ ಮನೆಯನ್ನು ಹೇಗೆ ಬೆಳೆಸುತ್ತದೆ ಎನ್ನುವ ಪ್ರಶ್ನೆಗೆ ಉತ್ತರವೊಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ (Puttur) ಇದೀಗ ದೊರೆತಿದೆ. ಹೌದು, ಪ್ರತಿಭಾವಂತ ಬಡ ವಿದ್ಯಾರ್ಥಿನಿಯೋರ್ವಳ ಮನೆಗೆ ಭೇಟಿ ನೀಡಿದ ಶಿಕ್ಷಣ ಇಲಾಖೆ (Karnataka Education Department) ಅಧಿಕಾರಿ ಹಾಗೂ ಶಿಕ್ಷಕರ ತಂಡ ಯಾವ ರೀತಿ ಆ ಬಡ ವಿದ್ಯಾರ್ಥಿನಿಯ ಮನೆಯನ್ನು ಬೆಳಗಿತು ಅನ್ನೋದನ್ನ ಹೇಳ್ತೀವಿ, ಈ ಸ್ಟೋರಿ ನೋಡಿ.

ಇದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರಸಭೆಯ ವ್ಯಾಪ್ತಿಗೆ ಬರುವ ಪೆರ್ವತ್ತೋಡಿಯ ಸುನಂದಾ ಎನ್ನುವ ದಲಿತ ಸಮುದಾಯದ ವಿಧವೆಯ ನಿರ್ಮಾಣ ಹಂತದಲ್ಲಿರುವ ಮನೆಯ ಕಥೆ. ಜೋಪಡಿ ಹಾಕಿಕೊಂಡು ಜೀವನ ಸಾಗಿಸುತ್ತಿದ್ದ ಈ ವಿಧವೆ ಹಾಗೂ ಈಕೆಯ ಎರಡು ಹೆಣ್ಣು ಮಕ್ಕಳ ಮನೆಯ ಸ್ಥಿತಿಯನ್ನು ಕಂಡು ಮರುಗಿದವರೇ ಹೆಚ್ಚು.

ಈಗ ಹೀಗಾಗಿದೆ ಮನೆ!


ಸ್ವತಃ ಮನೆಗೇ ಭೇಟಿ ನೀಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ
ಕಳೆದ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆ ಎದುರಿಸಲು ಸಿದ್ಧಳಾಗಿದ್ದ ಸುನಂದಾ ಅವರ ಎರಡನೇ ಮಗಳಾದ ಅನಿತಾ ಮನೆಗೆ ಎಸ್. ಎಸ್.ಎಲ್.ಸಿ ಪರೀಕ್ಷೆಯ ಸಿದ್ಧತೆಯನ್ನು ಪರಿಶೀಲಿಸಲೆಂದು ಪುತ್ತೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಹಾಗೂ ಪುತ್ತೂರಿನ ಕೊಂಬೆಟ್ಟು ಶಾಲೆಯ ಶಿಕ್ಷಕಿಯಾದ ಗೀತಾಮಣಿ ತಂಡ ಭೇಟಿ ನೀಡಿತ್ತು. ಭೇಟಿಯ ಸಂದರ್ಭದಲ್ಲಿ ಸುನಂದಾ ಹಾಗೂ ಆಕೆಯ ಮಕ್ಕಳು ಅನುಭವಿಸುತ್ತಿರುವ ಕಷ್ಟ, ಮಕ್ಕಳ ಓದಿಗಾಗಿ ಸುನಂದಾ ಅವರ ಪರದಾಟ ಕಂಡ ಶಿಕ್ಷಣಾಧಿಕಾರಿ ಹಾಗೂ ಶಿಕ್ಷಕರು ಅಂದೇ ಒಂದು ನಿರ್ಧಾರಕ್ಕೆ ಬಂದಿತ್ತು.

ಈಗಲೂ ಚಿಮಣಿ ದೀಪದ ಬೆಳಕು ಮಾತ್ರ
ಅತ್ಯಂತ ಬಡತನದಿಂದ ಜೀವನ ಸಾಗಿಸುತ್ತಿದ್ದರೂ, ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚು ಒತ್ತು ನೀಡಿದ್ದ ಸುನಂದಾ, ಊರಲ್ಲಿ ಕೂಲಿ-ನಾಲಿ ಮಾಡಿ ಮಕ್ಕಳನ್ನು ಓದಿಸುತ್ತಿದ್ದರು. ಮನೆಯಲ್ಲಿ ವಿದ್ಯುತ್ ಸಂಪರ್ಕವಿಲ್ಲದಿದ್ದರೂ, ಚಿಮಣಿ ದೀಪದ ಸಹಾಯದಿಂದ ಮಕ್ಕಳನ್ನು ಓದಿಸಿದ್ದ ಸುನಂದಾರ ಹಿರಿಮಗಳು ಲಾವಣ್ಯ ಪದವಿ ಮುಗಿಸಿ, ಬಿಎಡ್ ಮಾಡಿ ಇದೀಗ ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಅಧ್ಯಾಪಕಿಯಾಗಿ ದುಡಿಯುತ್ತಿದ್ದಾರೆ.

ನಡೆಯಿತು ಪವಾಡ! ಮುಂದಿನ ತಿಂಗಳು ಗೃಹ ಪ್ರವೇಶ
ಎಸ್.ಎಸ್.ಎಲ್.ಸಿ ಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿರುವ ಕಿರಿಮಗಳು ಅನಿತಾ ಇದೀಗ ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಮೊದಲ ವರ್ಷದಲ್ಲಿ ಕಲಿಯುತ್ತಿದ್ದಾಳೆ. ಸುನಂದಾ ತನ್ನ ಮಕ್ಕಳಿಗೆ ಈ ರೀತಿಯ ಬಡತನದಲ್ಲೂ ಶಿಕ್ಷಣ ನೀಡಿರುವ ವಿಚಾರವನ್ನು ಕಣ್ಣಾರೆ ಕಂಡ ಶಿಕ್ಷಣಾಧಿಕಾರಿ ಮತ್ತು ಕೊಂಬೆಟ್ಟು ಶಾಲೆಯ ಶಿಕ್ಷಕಿ ಗೀತಾಮಣಿ ಹಕ್ಕುಪತ್ರವಿಲ್ಲದ ಜಮೀನಿಗೆ ಹಕ್ಕುಪತ್ರವನ್ನು ಒದಗಿಸುವ ಕೆಲಸವನ್ನು ಮಾಡಿದ್ದಾರೆ. ಆ ಬಳಿಕ ರೋಟರಿ ಕ್ಲಬ್ ಸಹಾಯದೊಂದಿಗೆ ಇದೀಗ ಸುನಂದಾ ಕುಟುಂಬಕ್ಕೆ ಹೊಸ ಮನೆಯನ್ನೂ ನಿರ್ಮಿಸುತ್ತಿದ್ದು, ಮುಂದಿನ ತಿಂಗಳು ಈ ಮನೆಯ ಗೃಹಪ್ರವೇಶವೂ ನಡೆಯಲಿದೆ.

ಇದನ್ನೂ ಓದಿ: Madhavananda Prabhu: ಬ್ರಿಟೀಷರ ಎದೆ ನಡುಗಿಸಿದ್ದ ವಿಜಯಪುರದ ಸಂತ! 27 ಬಾರಿ ಜೈಲುವಾಸ ಅನುಭವಿದ್ದ ಮಾಧವಾನಂದ ಪ್ರಭು

ಸುನಂದಾ ಪತಿ ಪ್ರತಿದಿನವೂ ಕುಡಿದು ಗಲಾಟೆ ಮಾಡುತ್ತಿದ್ದು, ಮನೆಯ ಹಾಗು ಮಕ್ಕಳ ಎಲ್ಲಾ ಜವಾಬ್ದಾರಿಯೂ ಸುನಂದಾ ಮೇಲಿತ್ತು. ಈ ನಡುವೆ ವರ್ಷದ ಹಿಂದೆ ಪತಿ ಕೂಡಾ ಕುಡಿದೂ ಕುಡಿದು ಸಾವನ್ನಪ್ಪಿದ ಬಳಿಕ ಇಬ್ಬರು ಹೆಣ್ಣು ಮಕ್ಕಳ ಜೊತೆ ಸುನಂದಾ ಭದ್ರತೆಯಿಲ್ಲದ ಜೋಪಡಿಯಲ್ಲಿ ವಾಸಿಸುವ ಸ್ಥಿತಿಯಿತ್ತು. ಈ ಸಂದರ್ಭದಲ್ಲಿ ಆಕೆಗೆ ಸಹಾಯ ಮಾಡುವುದಾಗಿ ಹಲವರು ಭರವಸೆಗಳನ್ನೇನೋ ನೀಡಿದ್ದರೂ, ಭರವಸೆ ಮಾತ್ರ ಭರವಸೆಯಾಗಿಯೇ ಉಳಿದಿತ್ತು.

ಈ ನಡುವೆ ವಿದ್ಯಾರ್ಥಿನಿಯ ಶಿಕ್ಷಣದ ತಯಾರಿಯನ್ನು ವೀಕ್ಷಿಸಲು ಬಂದ ಶಿಕ್ಷಣ ಅಧಿಕಾರಿ ಮತ್ತು ಶಿಕ್ಷಕರ ತಂಡ ಸುನಂದಾರ ಸಂಕಷ್ಟಕ್ಕೆ ಸ್ಪಂದಿಸಿದೆ. ಸುನಂದಾರ ಮಕ್ಕಳ ಶಿಕ್ಷಣದ ಇಂಗಿತದ ಜೊತೆಗೆ ಭವಿಷ್ಯದ ದಾರಿಯನ್ನೂ ಸುಭದ್ರಗೊಳಿಸಿದೆ.

ಇದನ್ನೂ ಓದಿ: Belagavi: ನಾಯಿ ಬರ್ತ್​ಡೇ ಆಚರಣೆ ವಿಡಿಯೋ ನೋಡಿ! 1 ಕ್ವಿಂಟಲ್ ಕೇಕ್, 5 ಸಾವಿರ ಜನರಿಗೆ ಭರ್ಜರಿ ಊಟ!

ನೀಡಿದ ಭರವಸೆಯನ್ನು ಒಂದೊಂದಾಗಿ ನೆರವೇರಿಸಿರುವ ಶಿಕ್ಷಣಾಧಿಕಾರಿ ಹಾಗು ಶಿಕ್ಷಕರ ಈ ಸ್ಪಂದನೆ ಹಾಗೂ ರೋಟರಿ ಕ್ಲಬ್ ಪದಾಧಿಕಾರಿಗಳ ನೆರವಿಗೆ ಭಾರೀ ಮೆಚ್ಚುಗೆಯೂ ವ್ಯಕ್ತವಾಗಿದೆ.
Published by:guruganesh bhat
First published: