Zameer Ahmed- 90 ಕೋಟಿ ಮೌಲ್ಯದ ನಿವೇಶನ ಕೇವಲ 9.38 ಕೋಟಿಗೆ ಮಾರಾಟ; ಇಡಿ ಕಣ್ಣಿಗೆ ಜಮೀರ್ ಬಿದ್ದದ್ದು ಹೀಗೆ

ರಿಚ್ಮಂಡ್ ಟೌನ್​ನ ಸೆರ್ಪೆಂಟೈನ್ ರಸ್ತೆಯಲ್ಲಿರುವ 15 ಸಾವಿರ ಚದರಡಿ ವಿಸ್ತೀರ್ಣದ ಆಸ್ತಿಯನ್ನು ಜಮೀರ್ ಅಹ್ಮದ್ ಕೇವಲ 9.38 ಕೋಟಿ ರೂಗೆ ಮನ್ಸೂರ್ ಖಾನ್​ಗೆ ಮಾರಾಟ ಮಾಡಿದ್ದರು. ಇದರಲ್ಲಿ ಇಡಿ ಮೂಗಿಗೆ ಹವಾಲ ವಾಸನೆ ಬಡಿದಿದೆ.

ಜಮೀರ್ ಅಹ್ಮದ್

ಜಮೀರ್ ಅಹ್ಮದ್

 • Share this:
  ಬೆಂಗಳೂರು, ಆ. 05: ಐಎಂಎ ಹಗರಣ ಸಂಬಂಧಿಸಿದಂತೆ ಇಂದು ಬೆಳ್ಳಂಬೆಳಗ್ಗೆಯೇ ಐಟಿ ಮತ್ತು ಇಡಿ ತನಿಖಾ ಸಂಸ್ಥೆಗಳು ಜಮೀರ್ ಅಹ್ಮದ್ ಖಾನ್ ಮತ್ತು ರೋಷನ್ ಬೇಗ್ ಅವರ ನಿವಾಸ ಸೇರಿದಂತೆ ದಾಳಿಗಳು ನಡೆದಿವೆ. ಜಮೀರ್ ಅಹ್ಮದ್ ಅವರಿಗೆ ಸೇರಿದ ಸ್ಥಳಗಳ ಮೇಲೆ ಐಟಿ ರೇಡ್ ನಡೆದ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳೂ ಕೂಡ ದಾಳಿ ಮಾಡಿದ್ದಾರೆ. ರಿಚ್ಮಂಡ್ ಟೌನ್​ನಲ್ಲಿರುವ ತಮ್ಮ ಆಸ್ತಿಯನ್ನು ಐಎಂಎ ಮಾಲೀಕ ಮನ್ಸೂರ್ ಖಾನ್ ಅವರಿಗೆ ಜಮೀರ್ ಮಾರಾಟ ಮಾಡಿದಾಗ ಅವ್ಯವಹಾರವಾಗಿದೆ ಎಂಬುದು ಇಡಿ ಸಂಶಯ. ಹೀಗಾಗಿ, ಜಮೀರ್ ಮನೆಯ ಮೇಲೆ ಇಡಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡುತ್ತಿದೆ.

  ರಿಚ್ಮಂಡ್ ಟೌನ್​ನಲ್ಲಿ ಜಮೀರ್ ಖಾನ್ ಅವರಿಗೆ ಸೇರಿದ 14,924 ಚದರಡಿ ನಿವೇಶನ ಇತ್ತು. ಐ ಮಾನಿಟರಿ ಅಡ್ವೈಸರಿ ಕಂಪನಿಯ ಮಾಲೀಕರಾಗಿದ್ದ ಮನ್ಸೂರ್ ಖಾನ್ ಅವರಿಗೆ ಈ ಆಸ್ತಿಯನ್ನು 9.38 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದರು. ಸರ್ಪೆಂಟೈನ್ ರಸ್ತೆಯಲ್ಲಿರುದ್ದ ಈ ಆಸ್ತಿಯ ಮಾರುಕಟ್ಟೆ ಮೌಲ್ಯ ಆಗ ಬರೋಬ್ಬರಿ 90 ಕೋಟಿ ರೂ ಇತ್ತು. ಇಷ್ಟು ದುಬಾರಿ ಆಸ್ತಿಯನ್ನು ಜಮೀರ್ ಅವರು ಕೇವಲ 9.38 ಕೋಟಿ ರೂ ಗೆ ಮಾರಾಟ ಮಾಡಿದ್ದು ಹೇಗೆ ಎಂಬ ದೊಡ್ಡ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಜಮೀರ್ ಅವರು ತೆರಿಗೆ ವಂಚನೆ ಸಲುವಾಗಿ ಕಡಿಮೆ ಮೊತ್ತದ ಮಾರಾಟವನ್ನು ತೋರಿಸಿರಬಹುದು ಎಂಬುದು ಐಟಿ ಮತ್ತು ಇಡಿ ಸಂಸ್ಥೆಗಳ ಅನುಮಾನ. ಮನ್ಸೂರ್ ಖಾನ್ ಅವರಿಂದ ಹವಾಲಾ ರೂಪದಲ್ಲಿ ಜಮೀರ್ ಅವರು 80 ಕೋಟಿ ರೂ ಹಣವನ್ನು ಪಡೆದುಕೊಂಡಿದ್ಧಾರೆ ಎಂದು ಜಾರಿ ನಿರ್ದೇಶನಾಲಯ ಭಾವಿಸಿದೆ.

  ಇನ್ನೊಂದು ವಿಷಯ ಎಂದರೆ, ರಿಚ್ಮಂಡ್ ಟೌನ್​ನಲ್ಲಿರುವ ಈ ಆಸ್ತಿಯ ವಿಚಾರವಾಗಿ 2014ರಲ್ಲಿ ಕೋರ್ಟ್​​ನಲ್ಲಿ ವ್ಯಾಜ್ಯ ನಡೆಯುತ್ತಿತ್ತು. ಆದರೂ ಕೂಡ ಜಮೀರ್ ಅವರು ಈ ಆಸ್ತಿಯನ್ನು ಮನ್ಸೂರ್ ಖಾನ್ ಅವರಿಗೆ ಮಾರಾಟ ಮಾಡಿದ್ದರು. ಇದು ಕೂಡ ಅಕ್ರಮ ವ್ಯವಹಾರವಾಗಿದೆ. ವ್ಯಾಜ್ಯ ಇದ್ದರೂ ಮಾರಾಟ ಮಾಡಿದ್ದು ತಪ್ಪು. ಹಾಗೆಯೇ, ಹವಾಲಾ ಮೂಲಕ ಜಮೀರ್ ಅವರು 80 ಕೋಟಿ ರೂ ಹಣವನ್ನು ಪಡೆದಿರುವುದು ಹೌದಾದರೆ ಆ ಹಣವನ್ನು ಎಲ್ಲೆಲ್ಲಿ ಹೂಡಿದ್ದಾರೆ ಎಂಬ ಮಾಹಿತಿಯನ್ನು ಇಡಿ ಅಧಿಕಾರಿಗಳು ಪಡೆಯಲು ಪ್ರಯತ್ನಿಸುತ್ತಿದ್ಧಾರೆ.

  ಇದನ್ನೂ ಓದಿ: Poornima Srinivas- ಪಕ್ಷ ಸಂಘಟಿಸಿ ದುಡಿದ ನನ್ನನ್ನ ಕಡೆಗಣಿಸಲಾಗಿದೆ: ಪೂರ್ಣಿಮಾ ಶ್ರೀನಿವಾಸ್ ಆಕ್ರೋಶ

  ಐಎಂಎ ಹಗರಣದ ತನಿಖೆ ನಡೆಸುವ ವೇಳೆ ಪ್ರಮುಖ ಆರೋಪಿ ಮನ್ಸೂರ್ ಖಾನ್ ತಾನು ಜಮೀರ್, ರೋಷನ್ ಬೇಗ್ ಮತ್ತಿತರರ ಜೊತೆ ವ್ಯವಹಾರ ಹೊಂದಿದ್ದ ವಿಚಾರವನ್ನು ಒಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಜಮೀರ್ ಮೇಲೆ ಐಟಿ ಮತ್ತು ಇಡಿ ಅಧಿಕಾರಿಗಳ ರೇಡ್ ನಡೆದಿದೆ. ಇನ್ನು, 2018ರ ವಿಧಾನಸಭಾ ಚುನಾವಣೆಯ ವೇಳೆ ಅಭ್ಯರ್ಥಿಯಾಗಿ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಜಮೀರ್ ತಪ್ಪು ಮಾಹಿತಿ ನಮೂದಿಸಿರುವ ಆರೋಪ ಕೇಳಿಬಂದಿತ್ತು. ಈ ಎಲ್ಲಾ ವಿಚಾರವಾಗಿ ಜಮೀರ್ ಮನೆ ಮೇಲೆ ಇಡಿ ದಾಳಿ ನಡೆದಿದೆ.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

  ಮಾಹಿತಿ ಕೃಪೆ: ದಶರಥ್ ಸಾವೂರ / ಮುನಿರಾಜು
  Published by:Vijayasarthy SN
  First published: