ಬೆಂಗಳೂರು (ಆ. 06): ಐ ಎಂ ಎ ಹಗರಣ ಸಂಬಂಧ ಮಾಜಿ ಸಚಿವ ರೋಷನ್ ಬೇಗ್ ಅವರ ಮನೆಗಳ ಮೇಲೆ ನಿನ್ನೆ ಬೆಳಗ್ಗೆ ರೇಡ್ ಮಾಡಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಡೀ ರಾತ್ರಿ ದಾಖಲೆಗಳನ್ನ ಪರಿಶೀಲನೆ ನಡೆಸಿದರು. ಇಂದು ಶುಕ್ರವಾರ ಬೆಳಗ್ಗೆವರೆಗೂ ಕೂಡ ಕಾರ್ಯಾಚರಣೆ ಮುಂದುವರಿಸಿದರು. ರೋಷನ್ ಬೇಗ್ ಅವರಿಗೆ ಸಂಬಂಧಿಸಿದ ನಾಲ್ಕು ಕಡೆಗಳಲ್ಲಿ ದಾಳಿ ನಡೆದಿದೆ. ಒಂದೊಂದು ಸ್ಥಳದಲ್ಲೂ ಐದಾರು ಅಧಿಕಾರಿಗಳ ತಂಡ ಈ ರೇಡ್ನಲ್ಲಿ ಭಾಗಿಯಾಗಿತ್ತು. ಫ್ರೇಜರ್ ಟೌನ್ ಮತ್ತು ಸಂಜಯ್ ನಗರದಲ್ಲಿರುವ ರೋಷನ್ ಬೇಗ್ ಅವರ ಮನೆಗಳು, ಭೂಪಸಂದ್ರ ಹಾಗೂ ಇಂದಿರಾ ನಗರದಲ್ಲಿರುವ ಮಗಳ ಮನೆಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರೇಡ್ ಮುಂದುವರಿಸಿದರು. ರೋಷನ್ ಬೇಗ್ ಅಳಿಯ ಸಮೀರ್ ಹಾಗೂ ಅವರ ಆಪ್ತ ಎಹ್ಸಾನ್ ಅವರಿಬ್ಬರನ್ನ ಇಡಿ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸಿತು. ರೋಷನ್ ಬೇಗ್ ನಿವಾಸದಲ್ಲಿ ಇಡಿ ಅಧಿಕಾರಿಗಳು ಮೂಲೆ ಮೂಲೆಯನ್ನ ಜಾಲಾಡಿ ದಾಖಲೆಗಳನ್ನ ಹೊರತೆಗೆಯುವ ಕೆಲಸ ಮಾಡಿದರು. ಅವರ ಪಿಎ ಯನ್ನ ವಶಕ್ಕೆ ಪಡೆದು ವಿಚಾರಣೆಯನ್ನೂ ನಡೆಸಿದರು. ನಿನ್ನೆ ಬೆಳ್ಳಂಬೆಳಗ್ಗೆ ಆರಂಭವಾದ ಈ ದಾಳಿ ಸುಮಾರು 27 ಗಂಟೆಗಳ ಕಾಲ ನಡೆದಿದೆ.
ಐಎಂಎ ವಂಚನೆ ಹಗರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಅವರ ಜೊತೆ ರೋಷನ್ ಬೇಗ್ ವ್ಯವಹಾರ ಹೊಂದಿದ್ದ ಆರೋಪ ಇದೆ. ಖಾನ್ ಅವರಿಂದ ಬೇಗ್ 400 ಕೋಟಿ ರೂ ಹಣ ಪಡೆದುಕೊಂಡಿರುವ ಆರೋಪ ಇದೆ. ಈ ಹಗರಣ ಸಂಬಂಧ ಮಾಜಿ ಸಚಿವರ ಬಂಧನವೂ ಆಗಿತ್ತು. ಆದರೆ, ಅನಾರೋಗ್ಯದ ಕಾರಣದಿಂದ ಅವರು ಜಾಮೀನು ಪಡೆದು ಹೊರಬಂದಿದ್ಧಾರೆ. ಇದೇ ವೇಳೆ, ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ರೋಷನ್ ಬೇಗ್ ಅವರ ಆಸ್ತಿ ಜಪ್ತಿ ಮಾಡುವಂತೆ ಸಕ್ಷಮ ಪ್ರಾಧಿಕಾರಕ್ಕೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದಿಂದ ದಾಳಿಗಳು ನಡೆದವು ಎನ್ನಲಾಗಿದೆ.
ಅತ್ತ, ನಿನ್ನೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಮನೆ ಮೇಲೂ ಐಟಿ ಮತ್ತು ಇಡಿ ತಂಡಗಳಿಂದ ರೇಡ್ ನಡೆದಿತ್ತು. ಕಂಟೋನ್ಮೆಂಟ್, ಫ್ರೇಜರ್ ಟೌನ್ ಸೇರಿ ವಿವಿಧೆಡೆ ಇರುವ ಜಮೀರ್ ಆಸ್ತಿ ಪಾಸ್ತಿಗಳ ಮೇಲೆ ದಾಳಿಯಾಗಿ ದಾಖಲೆಗಳ ಪರಿಶೀಲನೆ ನಡೆಯಿತು. ನಿನ್ನೆ ಬೆಳಗ್ಗೆಯಿಂದ ಹಿಡಿದು ಇಡೀ ರಾತ್ರಿಯವರೆಗೂ ಕಾರ್ಯಾಚರಣೆ ನಡೆದು ಇಂದು ಬೆಳಗ್ಗೆ ಅಂತ್ಯವಾಯಿತು. ಇದಾದ ಬಳಿಕ ನ್ಯೂಸ್18 ಕನ್ನಡಕ್ಕೆ ಪ್ರತಿಕ್ರಿಯಿಸಿದ ಜಮೀರ್ ಅಹ್ಮದ್ ಖಾನ್, ತಾನು ಭವ್ಯ ಬಂಗಲೆಯಂಥ ಮನೆಯನ್ನ ಕಟ್ಟಿದ್ದಕ್ಕೆ ಕೆಲವರು ಇಡಿಗೆ ದೂರು ಕೊಟ್ಟಿದ್ದರು. ಅದಕ್ಕೆ ಈ ದಾಳಿಲ ನಡೆದಿದೆ ಅಷ್ಟೇ. ತಾನು ಎಲ್ಲಾ ತೆರಿಗೆ ಪಾವತಿಸಿದ್ದೇನೆ. ಏನೂ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಎಲ್ಲವನ್ನೂ ಸಹಿಸಿಕೊಳ್ಳುತ್ತೇನೆ, ನನ್ನ ಸಮಯ ಬಂದೇ ಬರುತ್ತೆ: ಸಚಿವ ಸ್ಥಾನವೂ ಸಿಗದಿದ್ದಕ್ಕೆ ಬೆಲ್ಲದ್ ಬೇಸರ
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ