ಇಡಿಯಿಂದ 2 ದಿನ ಲಕ್ಷ್ಮೀ ಹೆಬ್ಬಾಳ್ಕರ್​ ಸತತ ವಿಚಾರಣೆ; ಅಧಿಕಾರಿಗಳ ಪ್ರಶ್ನೆಗಳಿಗೆ ಕಾಂಗ್ರೆಸ್​ ಶಾಸಕಿ ಕಕ್ಕಾಬಿಕ್ಕಿ

ಎರಡು ದಿನಗಳ ಸತತ ವಿಚಾರಣೆ ನಡೆಸಿದ ಬಳಿಕ, ಅಗತ್ಯಬಿದ್ದರೆ ಮತ್ತೆ ವಿಚಾರಣೆಗೆ ಬರಬೇಕೆಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇದಕ್ಕೆ ಅವರು ಕೂಡ ಸಹಮತ ವ್ಯಕ್ತಪಡಿಸಿದ್ದಾರೆ.

HR Ramesh | news18-kannada
Updated:September 20, 2019, 9:25 PM IST
ಇಡಿಯಿಂದ 2 ದಿನ ಲಕ್ಷ್ಮೀ ಹೆಬ್ಬಾಳ್ಕರ್​ ಸತತ ವಿಚಾರಣೆ; ಅಧಿಕಾರಿಗಳ ಪ್ರಶ್ನೆಗಳಿಗೆ ಕಾಂಗ್ರೆಸ್​ ಶಾಸಕಿ ಕಕ್ಕಾಬಿಕ್ಕಿ
ಲಕ್ಷ್ಮೀ ಹೆಬ್ಬಾಳ್ಕರ್
  • Share this:
ನವದೆಹಲಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರೊಂದಿಗಿನ ಹಣಕಾಸು ವಹಿವಾಟು ಸಂಬಂಧ ಕಾಂಗ್ರೆಸ್​ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಇ.ಡಿ. ಅಧಿಕಾರಿಗಳು ಎರಡು ದಿನಗಳಿಂದ ಸತತ ವಿಚಾರಣೆಗೆ ಒಳಪಡಿಸಿದ್ದಾರೆ.  

ಲಕ್ಷ್ಮೀ ಅಕೌಂಟ್ ಗಳಿಗೆ ಡಿಕೆಶಿ ಖಾತೆಯಿಂದ ಹಣ ವರ್ಗಾವಣೆ ಆಗಿದೆಯಾ, ಅಥವಾ ಲಕ್ಷ್ಮೀ ಅಕೌಂಟಿನಿಂದ ಡಿಕೆಶಿ ಖಾತೆಗಳಿಗೆ ಹಣ ವರ್ಗಾವಣೆ ಆಗಿದೆಯಾ ಎಂಬ ಬಗ್ಗೆ ವಿಚಾರಣೆ ಮಾಡಲಾಗಿದೆ. ಇಡಿ ಅಧಿಕಾರಿಗಳಿಗೆ ಲಕ್ಷ್ಮೀ ಅವರು ತಮ್ಮ ಬ್ಯಾಂಕ್ ಖಾತೆಗಳ ಮಾಹಿತಿ ನೀಡಿದ್ದಾರೆ. ಇದರ ಜೊತೆಗೆ ಅಧಿಕಾರಿಗಳು ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ನೂರಾರು ಪ್ರಶ್ನೆಗಳನ್ನು ಕೇಳಿದ್ದಾರೆ.

ಡಿಕೆಶಿ-ಲಕ್ಷ್ಮೀ ಹೆಬ್ಬಾಳ್ಕರ್ ಫೋನ್ ಸಂಭಾಷಣೆ ಬಗ್ಗೆ ಅಧಿಕಾರಿಗಳು ಪ್ರಶ್ನೆ ಕೇಳಿದ್ದಾರೆ. ಇಡಿ‌ ಸಮನ್ಸ್ ವಿಚಾರಣೆ ವೇಳೆ ಡಿಕೆಶಿ ಲಕ್ಷ್ಮೀ ಜೊತೆ ಮಾತನಾಡಿದ್ದು, ಮಹತ್ವದ ಮಾಹಿತಿ ಹಂಚಿಕೊಂಡಿರಬಹುದೆಂಬ ಅನುಮಾನದಿಂದ ವಿಚಾರಣೆ ಮಾಡಲಾಗಿದೆ. ಈ ಪ್ರಶ್ನೆಗೆ ಅವರು ನಾವಿಬ್ಬರು ರಾಜಕಾರಣಿಗಳು, ರಾಜಕಾರಣ ಚರ್ಚಿಸಿದ್ದೇವೆ ಎಂದು ಉತ್ತರಿಸಿದ್ದಾರೆ.

ಇದನ್ನು ಓದಿ: ಡಿಕೆಶಿ ಅಕ್ರಮ ಹಣ ವರ್ಗಾವಣೆ ಪ್ರಕರಣ: ಲಕ್ಷ್ಮೀ ಹೆಬ್ಬಾಳ್ಕರ್​​ಗೆ ಭಾರೀ ಸಂಕಷ್ಟ; ಇನ್ನೂ ಎರಡು ದಿನ ಇಡಿ ವಿಚಾರಣೆ ಸಾಧ್ಯತೆ

ಡಿಕೆಶಿಯ ಬೇರೆ ಬೇರೆ ಉದ್ಯಮಗಳ ಬಗ್ಗೆ ಲಕ್ಷ್ಮೀ ಬಳಿ ಅಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ.  ಬೆಳಗಾವಿ ಜೆಲ್ಲೆಯಲ್ಲಿರುವ 300 ಎಕರೆ ಸೋಲಾರ್ ಪವರ್ ಪ್ಲಾಂಟ್ ಬಗ್ಗೆ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. ಇಷ್ಟು ದೊಡ್ಡ ಸೋಲಾರ್ ಪವರ್ ಪ್ಲಾಂಟ್ ಹಾಕಲು ಸಾಧ್ಯವಾಗಿದ್ದು ಹೇಗೆ?, ಡಿ.ಕೆ. ಶಿವಕುಮಾರ್ ಇಂಧನ ಸಚಿವರಾಗಿದ್ದಾಗಲೇ ಪವರ್ ಪ್ಲಾಂಟ್ ಹಾಕಿದ್ದು ಏಕೆ?, ಪವರ್ ಪ್ಲಾಂಟ್ ಹಾಕಲು ಡಿ.ಕೆ. ಶಿವಕುಮಾರ್ ಅವರಿಂದ ನೆರವು ಪಡೆದಿಲ್ಲವೇ?, ಪವರ್‌ ಪ್ಲಾಂಟ್‌ ಹೂಡಿಕೆಯ ಕೋಟ್ಯಂತರ ರೂ. ಹಣದ ಮೂಲ ಯಾವುದು? ಈ ಪವರ್ ಪ್ಲಾಂಟ್ ನಲ್ಲಿ ಡಿ.ಕೆ. ಶಿವಕುಮಾರ್ ಬಂಡವಾಳ ಹೂಡಿದ್ದಾರಾ? ಡಿಕೆಶಿ ಆಪ್ತರಾಗಿರುವ ನಿಮಗೆ ಅವರ ಬೇನಾಮಿ ಆಸ್ತಿಗಳ ವಿವರ ತಿಳಿದಿಲ್ಲವೇ? ನಿಮ್ಮ ಸಕ್ಕರೆ ಕಾರ್ಖಾನೆಯಲ್ಲಿ ಡಿ.ಕೆ. ಶಿವಕುಮಾರ್ ಬಂಡವಾಳ ಹೂಡಿದ್ದಾರಾ? ನೀವು ಬೆಂಗಳೂರಿನಲ್ಲಿ ಪ್ಲಾಟ್ ಖರೀದಿಸಲು ಡಿ.ಕೆ. ಶಿವಕುಮಾರ್ ಹಣ ನೀಡಿದ್ದಾರಾ? ದೆಹಲಿಯಲ್ಲಿ ಮನೆ ಖರೀದಿಸಲು ಡಿ.ಕೆ. ಶಿವಕುಮಾರ್ ಹಣ ನೀಡಿದ್ದಾರಾ? ಎಂಬ ಇಡಿ ಅಧಿಕಾರಿಗಳ ಪ್ರಶ್ನೆಗಳಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಕಕ್ಕಾಬಿಕ್ಕಿಯಾಗಿದ್ದಾರೆ.

ಎರಡು ದಿನಗಳ ಸತತ ವಿಚಾರಣೆ ನಡೆಸಿದ ಬಳಿಕ, ಅಗತ್ಯಬಿದ್ದರೆ ಮತ್ತೆ ವಿಚಾರಣೆಗೆ ಬರಬೇಕೆಂದು ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇದಕ್ಕೆ ಅವರು ಕೂಡ ಸಹಮತ ವ್ಯಕ್ತಪಡಿಸಿದ್ದಾರೆ.

ವಿಶೇಷ ವರದಿ: ಧರಣೀಶ್​ ಬೂಕನಕೆರೆ 
First published:September 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ