ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Election) ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ರಾಜ್ಯದ ಪ್ರಮುಖ ಮೂರು ಪಕ್ಷಗಳು ಚುನಾವಣೆಯ ಸಿದ್ಧತೆಯಲ್ಲಿ ಮುಳುಗಿವೆ. ಕರ್ನಾಟಕ ಕಾಂಗ್ರೆಸ್ (Congress) ಪಕ್ಷದ ನಾಯಕರು ಕೂಡ ಪ್ರಜಾಧ್ವನಿ ಯಾತ್ರೆಯಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಶಾಕ್ ಎದುರಾಗಿದೆ. ಇಂದು ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ (Praja Dhwani Yatra) ಶಿವಮೊಗ್ಗದಲ್ಲಿ ನೆರವೇರಿದ್ದು, ಯಡಿಯೂರಪ್ಪ (BS Yediyurappa) ಭದ್ರಕೋಟೆ ಶಿವಮೊಗ್ಗದಲ್ಲಿ ಕಾಂಗ್ರೆಸ್ ಯಾತ್ರೆ ನಡೆಸಲು ಬಂದ ಡಿ.ಕೆ ಶಿವಕುಮಾರ್ಗೆ ದೊಡ್ಡ ಶಾಕ್ ಎದುರಾಗಿತ್ತು. ಫೆಬ್ರವರಿ 24ಕ್ಕೆ ವಿಚಾರಣೆಗೆ ದೆಹಲಿಗೆ (Delhi) ಬನ್ನಿ ಅಂತ ಜಾರಿ ನಿರ್ದೇಶನಾಲಯದಿಂದ (ED) ನೋಟಿಸ್. ಅಷ್ಟೇ ಅಲ್ಲ ಡಿಕೆ.ಶಿವಕುಮಾರ್ ಪುತ್ರಿ ಐಶ್ವರ್ಯಾಗೂ ಇನ್ನೊಂದೆಡೆ ಸಿಬಿಐ ನೋಟಿಸ್ ನೀಡಿದೆ.
ಡಿಕೆಶಿಗೆ ಇ.ಡಿ ನೋಟಿಸ್ ಕೊಟ್ಟಿದ್ಯಾಕೆ?
ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಡಿಕೆ ಶಿವಕುಮಾರ್, ನಿನ್ನೆ ನನ್ನ ಮಗಳಿಗೆ ನೋಟಿಸ್ ಬಂದಿದೆ. ಕಾಲೇಜ್ಗೆ ಲೇಟರ್ ಬಂದಿದೆ ಎಷ್ಟು ಫೀಸ್ ಕಟ್ಟಿದ್ದೀರಿ ಎಷ್ಟು ಪಾಸ್ ಮಾಡಿದ್ದೀರಿ ಅಂತ ಮಾಹಿತಿ ಕೊಡಿ ಅಂತ ನೋಟಿಸ್ ಕಳುಹಿಸಿದ್ದಾರೆ. ಕಟ್ಟಿರುವ ಸ್ಕೂಲ್ ಫೀಸ್ ಲೆಕ್ಕ ಕೊಡಿ ಅಂತ ಕೇಳ್ತಿದ್ದಾರೆ ಎಂದರೆ ನೀವೇ ಲೆಕ್ಕಾ ಮಾಡಿ.
ಇನ್ನೇನು ಕೇಳ್ತಿದ್ದಾರೆ ಅಂತ ನೀವೇ ಅಲೋಚನೆ ಮಾಡಿ. ಇ.ಡಿಗೆ ಹೋಗಿ ಉತ್ತರ ಕೊಟ್ಟು ಬಂದಿದ್ದೀನಿ. ಈತ ಮತ್ತೆ ನೋಟಿಸ್ ಕೊಟ್ಟು ಉತ್ತರ ಕೊಡಿ ಅಂತಿದ್ದಾರೆ. ಪ್ರಜಾಧ್ವನಿ ಯಾತ್ರೆ ಮಾಡಲೋ ಅಥವಾ ಇ.ಡಿಗೆ ಉತ್ತರ ಕೊಡಲೋ ಅಂತ ಯೋಚನೆ ಮಾಡ್ತಿದ್ದೀನಿ. ಎಲ್ಲಾ ಅವರಿಗೆ ಬಿಟ್ಟು ಬಿಡಿ ಎಂದು ನಿಸ್ಸಾಯಕತೆ ವ್ಯಕ್ತಪಡಿಸಿದರು.
ವರ್ಕ್ ಆಯ್ತಾ 'ಸಾಹುಕಾರ್' ಬಾಂಬ್?
ಜನವರಿ 30 ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ಡಿ.ಕೆ.ಶಿವಕುಮಾರ್ ವಿರುದ್ಧ ಆಡಿಯೋ ಬಾಂಬ್ ಹಾಕಿದ್ದರು. ವಿದೇಶದಲ್ಲಿ ಆಸ್ತಿಯಿದೆ ಅನ್ನೋ ಡಿಕೆ ಶಿವಕುಮಾರ್ ಅವರದ್ದು ಎನ್ನಲಾದ ಆಡಿಯೋ ಹಿಡ್ಕೊಂಡ್ ವಾರದಿಂದ ದೆಹಲಿಯಲ್ಲೇ ಠಿಕಾಣಿ ಹೂಡಿದ್ದರು. ಚುನಾವಣೆ ಸಮಯದಲ್ಲಿ ಡಿಕೆ ಶಿವಕುಮಾರ್ ಕಥೆ ಮುಗಿಸ್ತೀನಿ ಅಂದಿದ್ದ ರಮೇಶ್ ಸಿಬಿಐಗೆ ದೂರು ಕೊಟ್ಟಿದ್ದರು. ಇ.ಡಿ ಕಚೇರಿಗೂ ಹೋಗಿದ್ದರು. ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಇದೇ ಆಡಿಯೋ ಬಾಂಬ್ ಡಿಕೆ ಶಿವಕುಮಾರ್ಗೆ ಮುಳುವಾಯ್ತಾ ಅನ್ನೋ ಪ್ರಶ್ನೆಯಿದೆ. ಆದರೆ ಅದಕ್ಕೂ ಇದಕ್ಕೂ ಸಂಬಂಧವಿಲ್ಲ ಅಂತ ಬಿಜೆಪಿ ನಾಯಕರು ಹೇಳಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್, ಡಿಕೆ ಶಿವಕುಮಾರ್ಗೆ ಇ.ಡಿ ನೋಟಿಸ್ ನೀಡಿರುವುದಕ್ಕೂ ಚುನಾವಣೆ ಪ್ರಚಾರಕ್ಕೂ ಸಂಬಂಧವಿಲ್ಲ. ಇದು ಎರಡ್ಮೂರು ವರ್ಷದಿಂದ ನಡೆದುಕೊಂಡು ಬಂದಿದೆ. ನೋಟಿಸ್ ಕೊಡ್ತಾರೆ ಇವ್ರು ಡೆಲ್ಲಿಗೆ ಹೋಗಿ ಉತ್ತರ ಕೊಟ್ಟು ಬರುತ್ತಾರೆ. ಚುನಾವಣೆ ಸಮಯದಲ್ಲಿ ಇದನ್ನು ರಾಜಕೀಯ ಮಾಡೋಕೆ ನೋಡುತ್ತಾರೆ ಅಷ್ಟೇ ಎಂದರು.
2013-18ರ ಅವಧಿಯಲ್ಲಿ ಅಕ್ರಮ ಆಸ್ತಿಗಳಿಕೆ ಆರೋಪ ಡಿಕೆ ಶಿವಕುಮಾರ್ ಮೇಲಿದೆ. ಆದಾಯಕ್ಕಿಂತ 74 ಕೋಟಿ ರೂಪಾಯಿ ಹೆಚ್ಚು ಆಸ್ತಿ ಎಂದು ಸಿಬಿಐ ಎಫ್ಐಆರ್ನಲ್ಲಿ ಉಲ್ಲೇಖಿಸಿದೆ. 2013ರ ಚುನಾವಣೆ ಅಫಿಡೆವಿಟ್ನಲ್ಲಿ 33.92 ಕೋಟಿ ರೂಪಾಯಿ ಆಸ್ತಿ, 2018ರ ಚುನಾವಣೆ ಅಫಿಡೆವಿಟ್ನಲ್ಲಿ 128 ಕೋಟಿ ರೂಪಾಯಿ ಆಸ್ತಿ ಘೋಷಿಸಿದ್ದರು.
ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಹೆಸರಿನಲ್ಲೂ ನೂರಾರು ಕೋಟಿ ಆಸ್ತಿ ಪತ್ತೆ ಆಗಿತ್ತು. ಸಚಿವರಾಗಿದ್ದ ಅಧಿಕಾರ ದುರುಪಯೋಗಪಡಿಸಿಕೊಂಡು ಅಕ್ರಮವಾಗಿ ಆಸ್ತಿ ಗಳಿಸಿದ್ದಾರೆ. 44.93 % ಆಸ್ತಿ ಅಕ್ರಮವಾಗಿ ಗಳಿಸಿದ್ದು, ಅಂತ ಸಿಬಿಐ ಚಾರ್ಜ್ಶೀಟ್ ಉಲ್ಲೇಖಿಸಿದೆ. ಅಷ್ಟೇ ಅಲ್ಲ 2 ವರ್ಷಗಳಿಂದ ಡಿಕೆ ಶಿವಕುಮಾರ್ ಮತ್ತು ಆಪ್ತರ ಮೇಲೆ ಸಿಬಿಐ ಸರಣಿ ದಾಳಿ ಮಾಡ್ತಿದ್ದು, ಆಸ್ತಿಯನ್ನು ಕೃಷಿಯಿಂದ ಆಸ್ತ ಸಂಪಾದಿಸಿದ್ದು ಎಂದಿದ್ದರು.
ಇದನ್ನೂ ಓದಿ: Brahmin CM Controversy: ಬ್ರಾಹ್ಮಣದ ಬಗ್ಗೆ ನೀವು ಆಡಿದ ಮಾತಿನಿಂದ ಬೇಜಾರಾಗಿದೆ -ಹೆಚ್ಡಿಕೆಗೆ ಅರ್ಚಕ ನೇರ ಪ್ರಶ್ನೆ
ಡಿ.ಕೆ.ಶಿವಕುಮಾರ್ಗೆ ಪ್ರಜಾಧ್ವನಿ ಯಾತ್ರೆ ಸಮಯದಲ್ಲೇ ಇ.ಡಿ ನೋಟಿಸ್ ಕೊಟ್ಟಿದೆ. ಇನ್ನೊಂದ್ಕಡೆ ಪ್ರಜಾಧ್ವನಿ ಯಾತ್ರೆನೂ ಭರ್ಜರಿಯಾಗಿ ನಡೆಯುತ್ತಿದೆ. ಬರೀ ಡಿ.ಕೆ.ಶಿವಕುಮಾರ್ ಅಷ್ಟೇ ಅಲ್ಲ ಕಲಬುರಗಿಯ ಚಿತ್ತಾಪುರದಲ್ಲಿ ಸಿದ್ದರಾಮಯ್ಯ ಕೂಡ ಭರ್ಜರಿಯಾಗೆ ಪ್ರಜಾಧ್ವನಿ ಯಾತ್ರೆ ಮಾಡಿದ್ದಾರೆ.
ಇದೇ ವೇಳೆ ಬಿಜೆಪಿ ವಿರುದ್ಧ ಮಾಜಿ ಸಿಎಂ ವಾಗ್ದಾಳಿ ಮಾಡಿದ್ದು, ನಮ್ಮ ಸರ್ಕಾರದಲ್ಲಿ ನೋಟ್ ಪ್ರಿಂಟ್ ಮಿಷಿನ್ ಇಲ್ಲ. ಈ ಸರ್ಕಾರ ಜನರ ಆಶೀರ್ವಾದದಿಂದ ಬಂದಿಲ್ಲ ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿ ಶಾಸಕರನ್ನ ಖರೀದಿ ಮಾಡಿ ಸರ್ಕಾರ ಮಾಡಿದ್ದಾರೆ. ಇದು ನೈತಿಕ ಸರ್ಕಾರವಲ್ಲ, ಅನೈತಿಕ ಸರ್ಕಾರ. ಈ ಸರ್ಕಾರ ಅಲಿಬಾಬ ಮತ್ತು ಚಾಲಿಸ್ ಚೋರ್ ಸರ್ಕಾರ ವಾಗ್ದಾಳಿ ನಡೆಸಿದರು. ಇನ್ನು, ಡಿ.ಕೆ.ಶಿವಕುಮಾರ್ ದೆಹಲಿಗೆ ಹೋಗ್ತಾರಾ? ಇ.ಡಿ ವಿಚಾರಣೆ ಎದುರಿಸ್ತಾರಾ ಇಲ್ಲ ಸಮರ ಕೇಳ್ತಾರಾ ಅನ್ನೋದು ಸದ್ಯಕ್ಕಿರೋ ಕುತೂಹಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ