ಅಂತಾರಾಷ್ಟ್ರೀಯ ಮಾನ್ಯತೆಯ ಬ್ಲೂ ಫ್ಲಾಗ್​ ಗರಿಮೆ ಪಡೆಯಲು ಸಜ್ಜಾಗಿರುವ ಕಾಸರಕೋಡಿನ ಇಕೋ ಬೀಚ್

ಇನ್ನು ದೇಶದಲ್ಲಿ ಭ್ಲೂ ಫ್ಲಾಗ್ ಬೀಚ್‌ಗಾಗಿ ಆಯ್ಕೆಯಾದ ಬೀಚ್‌ಗಳಲ್ಲಿ ಕಾಸರಕೋಡಿನ ಇಕೋ ಬೀಚ್‌ ರಾಜ್ಯದ ಏಕೈಕ ಕಡಲ ತೀರವಾಗಿದೆ. 5.6 ಕಿಲೋ ಮೀಟರ್ ಉದ್ದವಿರುವ ಕಡಲತೀರದ 750 ಮೀಟರ್ ವ್ಯಾಪ್ತಿಯಲ್ಲಿ ಸದ್ಯ ಸುಮಾರು 8 ಕೋಟಿ ವೆಚ್ಛದಲ್ಲಿ ಈಗಾಗಲೇ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತಿದೆ

G Hareeshkumar | news18-kannada
Updated:March 7, 2020, 7:32 AM IST
ಅಂತಾರಾಷ್ಟ್ರೀಯ ಮಾನ್ಯತೆಯ ಬ್ಲೂ ಫ್ಲಾಗ್​ ಗರಿಮೆ ಪಡೆಯಲು ಸಜ್ಜಾಗಿರುವ ಕಾಸರಕೋಡಿನ ಇಕೋ ಬೀಚ್
ಕಾಸರಗೋಡನ ಇಕೋ ಬೀಚ್​
  • Share this:
ಕಾರವಾರ(ಮಾ. 07): ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕಾಸರಕೋಡಿನ ಇಕೋ ಬೀಚ್ ಈಗ ರಾಜ್ಯದ ಮೊದಲ ಬ್ಲೂ ಫ್ಲಾಗ್ ಬೀಚ್ ಎಂಬ ಹೆಗ್ಗಳಿಕೆ ಪಡೆಯಲು ಸಜ್ಜಾಗಿದೆ.

ಕಾಸರಕೋಡಿನಲ್ಲಿರುವ ಇಕೋ ಬೀಚ್ ಇದೀಗ ಅಂತರಾಷ್ಟ್ರೀಯ ಮಟ್ಟದ ಬೀಚ್‌ಗಳಂತೆ ಮೇಲ್ದರ್ಜೆಗೇರಿದೆ. ಕಡಲ ತೀರಕ್ಕೆ ಬರುವ ಪ್ರವಾಸಿಗರಿಗೆ ಕುಳಿತುಕೊಳ್ಳುವ ಆಸನದಿಂದ ಹಿಡಿದು ಕುಡಿಯುವ ನೀರು, ಮಕ್ಕಳ ಆಟಿಕೆಗಳು, ಜೀವರಕ್ಷಕ ಸಿಬ್ಬಂದಿ ಹಾಗೂ ಮುಖ್ಯವಾಗಿ ಕಡಲತೀರದ ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ಪ್ರತ್ಯೇಕ ಸಿಬ್ಬಂದಿ ಒಳಗೊಂಡು ವಿನೂತನ ಮಾದರಿಯಲ್ಲಿ ಸಿದ್ಧಗೊಳ್ಳುತ್ತಿದೆ.

ಇಕೋ ಬೀಚ್‌ಅನ್ನು ಅಂತರಾಷ್ಟ್ರೀಯ ಮಾನ್ಯತೆ ಹೊಂದಿರುವ ಬ್ಲೂ ಫ್ಲಾಗ್ ಕಡಲ ತೀರವನ್ನಾಗಿ ಮಾರ್ಪಾಡು ಮಾಡಲು ಎಲ್ಲ ತಯಾರಿಗಳು ನಡೆಯುತ್ತಿವೆ. ಬರುವ ಪ್ರವಾಸಿಗರಿಗೆ ಸ್ವಚ್ಛ ಕಡಲ ತೀರದ ಜೊತೆಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವುದರಿಂದ ದೇಶ, ವಿದೇಶಗಳ ಪ್ರವಾಸಿಗರನ್ನೂ ಇತ್ತ ಸೆಳೆಯುವಲ್ಲಿ ಅನುಕೂಲವಾಗಲಿದೆ.

ಈಗಾಗಲೇ ಶೇ.90 ರಷ್ಟು  ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡಿದ್ದು, ಡೆನ್ಮಾರ್ಕ್‌ನ ಪರಿಸರ ಶಿಕ್ಷಣ ಪ್ರತಿಷ್ಠಾನ ಪರಿಶೀಲನೆ ಬಳಿಕ ಬ್ಲೂ ಫ್ಲಾಗ್ ಪ್ರಮಾಣಪತ್ರ ನೀಡಲಿದೆ ಎಂದು ಜಿಲ್ಲಾಧಿಕಾರಿಗಳು ಹೇಳುತ್ತಾರೆ.

ರಾಜ್ಯದ ಮೊಟ್ಟ ಮೊದಲ ಬ್ಲೂ ಫ್ಲಾಗ್ ಬೀಚ್

ಇನ್ನು ದೇಶದಲ್ಲಿ ಭ್ಲೂ ಫ್ಲಾಗ್ ಬೀಚ್‌ಗಾಗಿ ಆಯ್ಕೆಯಾದ ಬೀಚ್‌ಗಳಲ್ಲಿ ಕಾಸರಕೋಡಿನ ಇಕೋ ಬೀಚ್‌ ರಾಜ್ಯದ ಏಕೈಕ ಕಡಲ ತೀರವಾಗಿದೆ. 5.6 ಕಿಲೋ ಮೀಟರ್ ಉದ್ದವಿರುವ ಕಡಲತೀರದ 750 ಮೀಟರ್ ವ್ಯಾಪ್ತಿಯಲ್ಲಿ ಸದ್ಯ ಸುಮಾರು 8 ಕೋಟಿ ವೆಚ್ಛದಲ್ಲಿ ಈಗಾಗಲೇ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತಿದೆ.

ಮುಖ್ಯವಾಗಿ ಕಡಲತೀರವನ್ನು ಪರಿಸರ ಸ್ನೇಹಿಯಾಗಿ ಸಿದ್ಧಪಡಿಸಬೇಕಿದ್ದು, ಕಡಲ ತೀರದ ಸ್ವಚ್ಛತೆಯ ಜೊತೆಗೆ ಪರಿಸರ ಸ್ನೇಹಿ ಚಟುವಟಿಕೆಗಳನ್ನು ಸಹ ಕಡಲ ತೀರದಲ್ಲಿ ಆಯೋಜನೆ ಮಾಡಬೇಕಾಗಿದೆ. ಬಳಿಕ ಕಡಲ ತೀರದಲ್ಲಿನ ಅಭಿವೃದ್ಧಿ ಕಾರ್ಯಗಳು ಹಾಗೂ ಬೀಚ್ ಸ್ಥಿತಿಯನ್ನು ಆಧರಿಸಿ ಬ್ಲೂ ಫ್ಲಾಗ್ ಪ್ರಮಾಣಪತ್ರ ನೀಡಲಾಗುತ್ತದೆ. ಬಳಿಕ ಕಡಲ ತೀರದ ನೀರಿನ ಗುಣಮಟ್ಟ, ಬೀಚ್ ಸ್ವಚ್ಛತೆ, ಮೂಲಭೂತ ಸೌಕರ್ಯಗಳು ಹಾಗೂ ಪ್ರವಾಸಿಗರ ಭದ್ರತೆಯನ್ನೂ ಸಹ ಕಡಲ ತೀರದಲ್ಲಿ ಕಾಯ್ದುಕೊಂಡಲ್ಲಿ ಮಾತ್ರ ಕಡಲ ತೀರದಲ್ಲಿ ಭ್ಲೂ ಫ್ಲಾಗ್ ಹಾಕಲು ಅವಕಾಶ ಇರುತ್ತದೆ.ಸದ್ಯ ಕಡಲ ತೀರದಲ್ಲಿ ಮಾಡಲಾಗಿರುವ ಅಭಿವೃದ್ಧಿ ಕಾರ್ಯಗಳಿಂದಾಗಿ ಕಡಲ ತೀರಕ್ಕೆ ಭೇಟಿ ನೀಡುವ ಪ್ರವಾಸಿಗರು ಫುಲ್ ಖುಷ್ ಆಗಿದ್ದು, ಕುಟುಂಬಸ್ಥರೊಂದಿಗೆ ಯಾವುದೇ ತೊಂದರೆ ಇಲ್ಲದೇ ಎಂಜಾಯ್ ಮಾಡುವುದಕ್ಕೆ ಈ ಕಡಲ ತೀರ ಹೇಳಿ ಮಾಡಿಸಿದ ಸ್ಥಳವಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ಬ್ಲೂ ಫ್ಲ್ಯಾಗ್ ಬೀಚ್ ಸರ್ಟಿಫಿಕೇಟ್

ಬೀಚ್ ಕಾಮಗಾರಿಗಳು ಇನ್ನೇನು ಪೂರ್ಣಗೊಳ್ಳಲಿದ್ದು, ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ. ಬಳಿಕ ಕಡಲ ತೀರದಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿ ಡೆನ್ಮಾರ್ಕ್‌ನ ಪರಿಸರ ಶಿಕ್ಷಣ ಪ್ರತಿಷ್ಠಾನ ಪ್ರಮಾಣಪತ್ರ ನೀಡಲಿದೆ. ಸದ್ಯ ಕಡಲ ತೀರದ ಅಭಿವೃದ್ಧಿ ಕಾರ್ಯಗಳನ್ನು ಖಾಸಗಿ ಸಂಸ್ಥೆಯೊಂದಕ್ಕೆ ವಹಿಸಿಕೊಡಲಾಗಿದ್ದು, ಬಳಿಕ ಸರ್ಕಾರದ ಸಹಯೋಗದೊಂದಿಗೆ ಬೀಚ್ ಕಾರ್ಯನಿರ್ವಹಿಸಲಿದೆ.

ಇದನ್ನೂ ಓದಿ : ಉತ್ತರ ಕನ್ನಡದ ಅವರ್ಸಾದಲ್ಲಿ ಮೃತ್ಯುಕೂಪವಾದ ರಾಷ್ಟ್ರೀಯ ಹೆದ್ದಾರಿ; ರಸ್ತೆಯಲ್ಲಿ ಸಂಚರಿಸಲು ಹೆದರುವ ಜನರು

ಒಟ್ಟಾರೇ ರಾಜ್ಯದ ಏಕೈಕ ಬ್ಲೂ ಫ್ಲ್ಯಾಗ್ ಹೊಂದಲಿರುವ ಬೀಚ್​  ಎನ್ನುವ ಹೆಗ್ಗಳಿಕೆ ಗಳಿಸಿಕೊಳ್ಳುವಲ್ಲಿ ಕಾಸರಗೋಡು ಕಡಲ ತೀರ ಕೆಲವೇ ಹೆಜ್ಜೆಗಳ ಅಂತರದಲ್ಲಿದ್ದು ಆದಷ್ಟು ಬೇಗ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಪ್ರವಾಸಿಗರಿಗೆ ಲಭ್ಯವಾಗಲಿದೆ.

(ವರದಿ : ದರ್ಶನ್ ನಾಯ್ಕ)
First published: March 7, 2020, 7:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading